ವಿಧಾನಸಭೆಗೆ ನಾಮಪತ್ರ ಸಲ್ಲಿಸಿದ ಆಸ್ಕರ್ !

Update: 2016-05-31 04:26 GMT

ಬೆಂಗಳೂರು, ಮೇ 31: ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೋಮವಾರ ಆರಂಭಗೊಂಡಿದೆ. ಆದರೆ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ನಾಮಪತ್ರ ಸಲ್ಲಿಸಿದ್ದು ಮಾತ್ರ ವಿಧಾನಸಭೆಗೆ...!

ಆಸ್ಕರ್ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಇಂತಹ ಪ್ರಮಾದ ಮಾಡಿದ್ದಾರೆ. ಬಳಿಕ ಸಚಿವ ಆರ್.ವಿ.ದೇಶಪಾಂಡೆ ಈ ತಪ್ಪನ್ನು ಸರಿಪಡಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಾವು ಯಾವ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇವೆ ಎಂಬುದನ್ನು ಘೋಷಿಸಬೇಕು. ಅದರಂತೆ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆಸ್ಕರ್ ಫೆರ್ನಾಂಡಿಸ್, ತಾವು ವಿಧಾನಸಭೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದರು. ತತ್‌ಕ್ಷಣ ಸಚಿವ ಆರ್.ವಿ.ದೇಶಪಾಂಡೆ, ಈ ಲೋಪವನ್ನು ಆಸ್ಕರ್ ಫೆರ್ನಾಂಡಿಸ್‌ರ ಗಮನಕ್ಕೆ ತಂದರು. ಅದರಂತೆ ಬಳಿಕ ಆಸ್ಕರ್ ತಪ್ಪು ಸರಿಪಡಿಸಿಕೊಂಡು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುತ್ತಿರುವುದಾಗಿ ಹೇಳಿದರು.

ಫೋಟೊ ಮರೆತುಬಂದ ಜೈರಾಂ ರಮೇಶ್!


ಇದುವರೆಗೆ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಇದೇ ಮೊದಲ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದು, ಭಾವಚಿತ್ರ ಮರೆತು ಬಂದಿದ್ದರಿಂದ ಒಂದಷ್ಟು ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಲು ಕಾರಣರಾದರು.
ಜೈರಾಂ ರಮೇಶ್ ಅವರು ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ವಿಧಾನಸಭೆ ಕಾರ್ಯದರ್ಶಿಗಳ ಕೊಠಡಿಗೆ ಪ್ರವೇಶಿಸಿದಾಗ ಭಾವಚಿತ್ರ ಇಲ್ಲದೆ ಬಂದಿರುವುದು ತಿಳಿಯಿತು.
ಬಳಿಕ ಅಲ್ಲೇ ಭಾವಚಿತ್ರ ತೆಗೆದು ನಾಮಪತ್ರ ಸಲ್ಲಿಸಿದರು. ಈ ಗೊಂದಲ ಕಾರಣ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಒಂದು ಗಂಟೆ ವಿಳಂಬವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News