ಹಾಸನ: ಕಸಾಪ ವತಿಯಿಂದ ನಾಡೋಜ ದೇ. ಜವರೇಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

Update: 2016-05-31 11:40 GMT

ಹಾಸನ, ಮೇ 31: ನಿಧನರಾದ ಹಿರಿಯ ಸಾಹಿತಿ ಕುವೆಂಪುರವರ ಶಿಷ್ಯನಾಡೋಜ ದೇ. ಜವರೇಗೌಡರಿಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಿರಿಯ ಸಾಹಿತಿ ಜ.ಹೋ ನಾರಾಯಣಸ್ವಾಮಿ ಮಾತನಾಡುತ್ತಾ, ಕುವೆಂಪು ಅವರ ಚೇತನದಿಂದ ದೇ. ಜವರೇಗೌಡ ಬಂದವರು. ಗದ್ಯಕ್ಕೆ ಬಹಳ ಮಹತ್ವ ನೀಡಿದ್ದಾರೆ. ನಾಡಿನ ವಿಸ್ಮಯ ಶಕ್ತಿಯಾಗಿದ್ದರು. ಜಾತಿಯ ಭೂತದಿಂದ ದೂರವಾಗಿದ್ದ ಡಾ. ದೇಜಗೌ ಅವರು ವಿಶಾಲ ಮನೋಭಾವ ಹಾಗೂ ದೂರದೃಷ್ಟಿಯನ್ನು ಹೊಂದಿದ್ದರು. ಭಾರತೀಯ ಪರಂಪರೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಸಾಹಿತ್ಯವನ್ನು ವಿಸ್ತಾರಗೊಳಿಸಿದ್ದಾರೆ. ಕನ್ನಡದ ಬಗ್ಗೆ ಇದ್ದ ಕಳಕಳಿಯಿಂದ ಅವರಿಗೆ ಡಾಕ್ಟರೇಟ್, ಬಸವಶ್ರೀ, ರಾಜ್ಯ ಅಕಾಡೆಮಿ, ಕರ್ನಾಟಕ ರತ್ನ ಸೇರಿದಂತೆ ನಾನಾ ಪ್ರಶಸ್ತಿಗಳು ಅವರ ಮುಡಿಗೆ ಸೇರಿದ್ದವು ಎಂದರು. ಇವರಿಗೆ ಕುವೆಂಪು ಎಂದರೆ ಅಪಾರ ಭಕ್ತಿ ಇತ್ತು. ಅವರು ಭಾಷಣ ಮಾಡಿದರೆ ಕುವೆಂಪು ಅವರನ್ನು ನೆನಪಿಸಿಕೊಳ್ಳದೆ ಇರುತ್ತಿರಲಿಲ್ಲ ಎಂದು ಹೇಳಿದರು.

ಸಾಹಿತಿ ಚನೇಗೌಡ ಮಾತನಾಡಿ, ಕುವೆಂಪು ಅವರ ಕಟ್ಟಾ ಶಿಷ್ಯರಾಗಿ ಇದ್ದು, ಹಾಗೂ ಸಾಹಿತ್ಯದಲ್ಲೂ ಅಂತಹ ಶಕ್ತಿ ಹೊಂದಿದ್ದರು. ಕುವೆಂಪು ಅವರ ಆತ್ಮೀಯ ಮತ್ತು ಪರಮ ಶಿಷ್ಯ ಅವರ ವಿಚಾರಧಾರೆಗಳು, ವೈಚಾರಿಕ ಚಿಂತನೆಗಳು ಅವರನ್ನು ಅಪಾರವಾಗಿ ಆಕರ್ಷಿಸಿತು. ಅವರ ಸಾಹಿತ್ಯಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿದೆ ಎಂದು ಹೇಳಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮದನ್‌ಗೌಡ ಮಾತನಾಡಿ, ನಾಡೋಜ ದೇ. ಜವರೇಗೌಡರು ಮಹಾನ್ ವ್ಯಕ್ತಿ ಆಗಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗಿರಬೇಕು ಎಂದು ಸಾರುತ್ತಿದ್ದವರು. ಸರಳ ವ್ಯಕ್ತಿ ಆಗಿದ್ದು, ಯಾರೇ ಇವರ ಬಳಿ ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಹೇಳಿದರು. ಇವರ ಕಾಲಾವಧಿಯಲ್ಲಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಚಿತವಾದ ಸಾಹಿತ್ಯಗಳು ಮುಂದಿನ ಪೀಳಿಗೆಗೆ ಮತ್ತು ಅವರ ಅಧ್ಯಾಯನಕೆ ಸ್ಫೂರ್ತಿ ಆಗಲಿದೆ ಎಂದು ಸಲಹೆ ನೀಡಿದರು. ಇವರ ಅಕಾಲಿಕ ಅಗಲಿಕೆ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಆತಂಕವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ನಾಡಿನ ಹಿರಿಯ ಸಾಹಿತಿ ನಾಡೋಜ ದೇ. ಜವರೇಗೌಡರು ಸರಳ ಸಜ್ಜನರು ಆಗಿದ್ದರು. ಇಂತಹ ಮಹಾನ್ ಸಾಹಿತಿಗಳು ಇನ್ನು ಹೆಚ್ಚು ಹೆಚ್ಚು ನಾಡಿನಲ್ಲಿ ಹುಟ್ಟಿ ಬರಲಿ ಎಂದು ಹಾರೈಸಿದರು.

ಶ್ರದ್ಧಾಂಜಲಿ ಸಬೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗಂಜಲಗೂಡು ಗೋಪಾಲ್, ಜಿಲ್ಲಾ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಸತೀಶ್, ಕಸಾಪ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗರತ್ನ, ತಾಲೂಕು ಉಪಾಧ್ಯಕ್ಷ ಹರೀಶ್, ಗ್ಯಾರಂಟಿ ರಾಮಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News