ಭದ್ರತಾ ವೈಫಲ್ಯ: ನಕಲಿ ಟಿಕೆಟ್ ತೋರಿಸಿ ದೆಹಲಿ ವಿಮಾನ ನಿಲ್ದಾಣದೊಳಗೆ 10 ದಿನ ಕಳೆದ ವ್ಯಕ್ತಿ

Update: 2016-06-02 04:12 GMT

ಹೊಸದಿಲ್ಲಿ, ಜೂ.2: ಪ್ರಜಾಪ್ರಭುತ್ವ ದಿನಾಚರಣೆಗೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಂಭೀರ ಭದ್ರತಾಲೋಪವೊಂದು ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್ ಪ್ರವೇಶಿಸಿದ ವ್ಯಕ್ತಿಯೊಬ್ಬ, ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ, ಹತ್ತು ದಿನಗಳ ಕಾಲ ವಿಮಾನ ನಿಲ್ದಾಣದೊಳಗೇ ಕಳೆದ ವಿಚಾರ ಇದೀಗ ಬಹಿರಂಗವಾಗಿದೆ.
ಹೈದರಾಬಾದ್ ಮೂಲದ ಮಹ್ಮದ್ ಅಬ್ದುಲ್ಲಾ ಎಂಬ ವ್ಯಕ್ತಿ ಗುರಗಾಂವ್‌ನಲ್ಲಿ ಉದ್ಯೋಗ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಂತಿಮವಾಗಿ ಈತನನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಪತ್ತೆ ಮಾಡಿ, ಸಿಐಎಸ್‌ಎಫ್ ಗಮನಕ್ಕೆ ತಂದಿದ್ದಾರೆ. ಆತನನನ್ನು ಜನವರಿ 20ರಂದು ಪೊಲೀಸ್ ವಶಕ್ಕೆ ನೀಡಲಾಗಿತ್ತು.
ಇದು ಭಾರತದ ಯಾವುದೇ ವಿಮಾನ ನಿಲ್ದಾಣದಲ್ಲಿ ನಡೆದ ಇಂಥ ಪ್ರಪ್ರಥಮ ಘಟನೆಯಾಗಿದೆ. "ಒಂದು ಬಾರಿ ನನ್ನನ್ನು ನಿಲ್ದಾಣದಿಂದ ಹೊರ ಹಾಕಲಾಗಿತ್ತು. ಆದರೆ ನಾನು ಮತ್ತೆ ನಕಲಿ ಟಿಕೆಟ್ ತೋರಿಸಿ, ಒಳ ಸೇರಿಕೊಂಡಿದ್ದೆ ಎಂದು ಮಹ್ಮದ್ ಹೇಳಿದ್ದಾಗಿ ಸಿಐಎಸ್‌ಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜನವರಿ 11ರಂದು ಅಬ್ದುಲ್ಲಾ ಅವರ ಟಿಕೆಟನ್ನು ಇತಿಹಾದ್ ಎಂಬುವವರು ಪರಿಶೀಲಿಸಿದಾಗ ಅದು ನಕಲಿ ಎಂದು ಗಮನಕ್ಕೆ ಬಂದು, ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಆತ ಈ ಟಿಕೆಟ್‌ನ ಮತ್ತೊಂದು ಪ್ರಿಂಟ್ ಔಟ್ ತೆಗೆದುಕೊಂಡು, ಇನ್ನೊಂದು ಗೇಟ್ ಮೂಲಕ ಒಳಪ್ರವೇಶಿಸಿದ್ದ. ಆ ಬಳಿಕ 10 ದಿನ ಕಾಲ ನಿಲ್ದಾಣದಲ್ಲೇ ಕಳೆದಿದ್ದ. ಇದರಿಂದ ಅನುಮಾನಗೊಂಡ ಹೌಸ್‌ಕೀಪಿಂಗ್ ಸಿಬ್ಬಂದಿ ಸಿಐಎಸ್‌ಎಫ್ ಗಮನಕ್ಕೆ ತಂದಿದ್ದರು. ಆತನನ್ನು ಹೊರಗೆ ಕಳುಹಿಸಿ, ಗುಪ್ತಚರ ವಿಭಾಗ ಮತ್ತು ಸಂಬಂಧಿತ ಇತರ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಆತನನ್ನು ವಿಚಾರಣೆಗೆ ಗುರಿಪಡಿಸಿದಾಗ, ಯುಎಇಗೆ ಹಣ ಕಳುಹಿಸಲು ತಾನು ಕಾಯುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾನೆ.

ಆರೋಪಿ ವಿರುದ್ಧ ಅಕ್ರಮ ಪ್ರವೇಶ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ನಕಲಿ ಟಿಕೆಟ್ ಬಳಸಿ ಪ್ರವೇಶಿಸಿದ ಒಟ್ಟು 50 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News