"ವಿಚಿತ್ರ ಹಾಗೂ ಆತಂಕಕಾರಿ": ಮತದಾನ ಮಾಹಿತಿ ವ್ಯತ್ಯಯ, ವಿಳಂಬಕ್ಕೆ ವಿಪಕ್ಷ ಆಕ್ಷೇಪ

Update: 2024-05-01 09:18 GMT

PC : scroll.in

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಿಡುಗಡೆ ಮಾಡದೇ ಇರುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಮತದಾನದ ದಿನಾಂಕ ವರದಿ ಮಾಡಲಾದ ಅಂಕಿ ಸಂಖ್ಯೆಗಳಿಗೆ ಹೋಲಿಸಿದರೆ, ಅಂಕಿ ಅಂಶಗಳಲ್ಲಿ ಭಾರಿ ವ್ಯತ್ಯಯ ಇದೆ ಎನ್ನಲಾಗಿದ್ದು, ಇದು ಆತಂಕಕಾರಿ ಎಂದು ಹೇಳಿವೆ.

ಮೊದಲ ಹಂತದ ಮತದಾನದಲ್ಲಿ ಶೇಕಡ 66.14 ಮತ್ತು ಎರಡನೇ ಹಂತದ ಮತದಾನದಲ್ಲಿ ಶೇಕಡ 66.71ರಷ್ಟು ಮತದಾನವಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ಪ್ರಕಟಿಸಿದೆ. ಆದರೆ ಇದುವರೆಗೂ ಆಯೋಗ ಕ್ಷೇತ್ರವಾರು ಒಟ್ಟು ಮತದಾರರ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಆಕ್ಷೇಪಿಸಿವೆ.

ಅಂತಿಮ ಅಂಕಿ ಅಂಶಗಳು ಚುನಾವಣಾ ಆಯೋಗ ಈ ಮೊದಲು ಪ್ರಕಟಿಸಿದ ತಾತ್ಕಾಲಿಕ ಮತದಾನದ ಅಂದಾಜಿಗೆ ಹೋಲಿಸಿದರೆ ಅಧಿಕ ಇವೆ. ಮೊದಲ ಹಂತದ ಚುನಾವಣೆ ನಡೆದ 10 ದಿನಗಳ ಬಳಿಕ ಮತ್ತು ಎರಡನೇ ಹಂತದ ಚುನಾವಣೆ ನಡೆದ ನಾಲ್ಕು ದಿನಗಳ ಬಳಿಕ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ ಎಂದು ಹೇಳಿವೆ.

ಎರಡನೇ ಹಂತದ ಅಂತಿಮ ಮತದಾನ ಅಂಕಿ ಅಂಶಗಳಲ್ಲಿ, ಚುನಾವಣಾ ಆಯೋಗ ಕ್ಷಣಕ್ಷಣದ ಮಾಹಿತಿ ಸಂಗ್ರಹಿಸಿ ನಾಲ್ಕು ದಿನಗಳ ಹಿಂದೆ ನೀಡಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, ಶೇಕಡ 5.75ರಷ್ಟು ಅಧಿಕ ಮತದಾನ ಆಗಿರುವುದನ್ನು ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಒಬ್ರಿಯಾನ್ ಪ್ರಶ್ನಿಸಿದ್ದಾರೆ. ಸಿಪಿಐಎಂ ಮುಖಂಡ ಸೀತಾರಾಂ ಯಚೂರಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿ ಲೋಕಸಭಾ ಕ್ಷೇತ್ರಗಳ ನಿಖರ ಮತದಾರರ ಸಂಖ್ಯೆಯನ್ನು ಏಕೆ ಇನ್ನೂ ಬಹಿರಂಗಪಡಿಸಿಲ್ಲ? ಅಂಕಿ ಸಂಖ್ಯೆಗಳು ದೊರಕದಿದ್ದರೆ ಶೇಕಡಾವಾರು ಅಂಕಿ ಅಂಶಗಳು ಅರ್ಥಹೀನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮತ ಎಣಿಕೆಯ ಯಾವುದೇ ಹಂತದಲ್ಲಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಪರಿವರ್ತಿಸಲು ಅವಕಾಶ ಇರುವುದರಿಂದ ಫಲಿತಾಂಶವನ್ನು ತಿರುಚುವ ಸಂದೇಹಗಳು ಬಲವಾಗುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News