ಭಾರತವನ್ನು ಉತ್ತರ ಕೊರಿಯಾಕ್ಕೆ ಹೋಲಿಸಿದ ಅನುರಾಗ್ ಕಶ್ಯಪ್

Update: 2016-06-07 05:28 GMT

ಹೊಸದಿಲ್ಲಿ, ಜೂ.7: ಉಡ್ತಾ ಪಂಜಾಬ್ ಚಿತ್ರದ ನಿರ್ಮಾಪಕ ಅನುರಾಗ್ ಕಶ್ಯಪ್ ತಾಳ್ಮೆ ಕಳೆದುಕೊಂಡು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ವಿರುದ್ಧ ಗುಡುಗಿದ್ದಾರೆ. ಚಿತ್ರದಲ್ಲಿರುವ 89 ಕಟ್‌ಗಳಲ್ಲದೇ ಪಂಜಾಬ್ ಎಂಬ ಉಲ್ಲೇಖವನ್ನು ಚಿತ್ರದಿಂದ ಕಿತ್ತುಹಾಕುವಂತೆ ಸೂಚಿಸಿರುವ ಸಿಬಿಎಫ್‌ಸಿ ವಿರುದ್ಧದ ಕ್ರೋಧಾಗ್ನಿಗೆ ಸೋಮವಾರ ರಾತ್ರಿ ಟ್ವಿಟರ್ ಅಸ್ತ್ರ ಬಳಸಿದ್ದಾರೆ. ತಮ್ಮ ಸರಣಿ ಟ್ವೀಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೂ ಟ್ಯಾಗ್ ಮಾಡಿದ್ದಾರೆ.

ನಾನು ಉತ್ತರ ಕೊರಿಯಾದಲ್ಲಿ ವಾಸಿಸುತ್ತಿದ್ದೇನೆಯೇ ಎಂಬ ಅಚ್ಚರಿ ಸದಾ ನನ್ನಲ್ಲಿ ಮೂಡುತ್ತಿದೆ ಎಂದು ಅನುರಾಗ್ ಟ್ವೀಟ್ ಮಾಡಿದ ಬಳಿಕ ಜೋಸೆಪ್ ಕಾ ಮುಕದಾಮ ಎನ್ನುವುದು ಖ್ಯಾತ ಝೆಕ್ ಭಾಷೆಯ ಯಾವ ಕಾದಂಬರಿಯ ಅವತರಣಿಕೆ? ನಾವು ಅಲ್ಲಿಗೆ ಮರಳುತ್ತಿದ್ದೇವೆ. ಎಂದು ಟ್ವೀಟಿಸಿದ್ದರು.

ಉಡ್ತಾ ಪಂಜಾಬ್‌ನಷ್ಟು ಪ್ರಾಮಾಣಿಕ ಚಿತ್ರ ಬೇರೊಂದಿಲ್ಲ. ಯಾರೇ ವ್ಯಕ್ತಿ ಅಥವಾ ಪಕ್ಷ ಅದನ್ನು ವಿರೋಧಿಸುತ್ತಾರೆ ಎಂದಾದರೆ, ಅವರು ಮಾದಕ ವಸ್ತುಗಳ ಉತ್ತೇಜನದ ಕೀಳರಿಮೆಯಿಂದ ಬಳಲುತ್ತಿದ್ದಾರೆ ಎಂಬ ಅರ್ಥ ಎಂದು ಹೇಳಿದ್ದರು.

ಸಿಬಿಎಫ್‌ಸಿ ಸದಸ್ಯ ಅಶೋಕ್ ಕಂಡೊತ್ ಕೂಡಾ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿ ಪತ್ರ ಬರೆದಿದ್ದು, ಉಡ್ತಾ ಪಂಜಾಬ್‌ನಿಂದ ಪಂಜಾಬ್ ಎಂಬ ಉಲ್ಲೇಖ ತೆಗೆದು ಹಾಕಬೇಕು ಎಂಬ ಮಂಡಳಿ ನಿರ್ಧಾರದ ಹಿಂದಿನ ವಿವೇಚನೆಯನ್ನು ನಾನು ಪ್ರಶ್ನಿಸುತ್ತೇನೆ. ಈ ಚಿತ್ರ ಬಿಡುಗಡೆಯಿಂದ ಏನಾಗುತ್ತದೆ? ಮಿಸ್ಟರ್ ಇಂಡಿಯಾ, ಮುಂಬೈ ಮೇರಿ ಜಾನ್, ದಿಲ್ಲಿ ಕಾ ತುಂಗ್, ಉಡ್ತಾ ಪಂಜಾಬ್. ನಿಹಲಾನಿ ಅವರ ಸಿದ್ಧಾಂತದಂತೆ ನಿರ್ದಿಷ್ಟ ವಿಷಯವಸ್ತು ಒಳಗೊಂಡ ಉತ್ತಮ ಚಿತ್ರಗಳು ಬಿಡುಗಡೆಯಾಗುವುದೇ ಇಲ್ಲ. ಉದಾಹರಣೆಗೆ ಸಲಾಂ ಬಾಂಬೆ(ವೇಶ್ಯಾವಾಟಿಕೆ), ಬಾಂಬೆ (ಗಲಭೆ), ನ್ಯೂಡೆಲ್ಲಿ ಟೈಮ್ಸ್ (ಭ್ರಷ್ಟಾಚಾರ) ಚಿತ್ರಗಳು ಎಂದು ವಿವರಿಸಿದ್ದಾರೆ.

89 ಕಟ್‌ಗಳನ್ನು ಮಾಡಿದರೆ, ಚಿತ್ರದ ಆಶಯಕ್ಕೇ ಧಕ್ಕೆ ಉಂಟಾಗುತ್ತದೆ. ಇಷ್ಟೊಂದು ಕಟ್‌ಗಳಿಗೆ ಆದೇಶ ನೀಡಿ, ಚಿತ್ರಹತ್ಯೆ ಮಾಡುವಂತಿಲ್ಲ. ಒಂದು ಸ್ಥಳದ ಹೆಸರೂ ಬಳಸಿಕೊಳ್ಳುವಂತಿಲ್ಲವೇ ಎಂದು ಜನ ಅಣಕವಾಡುವಂತಾಗಿದೆ. ಇದು ನಮ್ಮ ಅಧ್ಯಕ್ಷರೇ ತೆಗೆದುಕೊಂಡ ನಿರ್ಧಾರ. ಪಂಜಾಬ್ ಎಂಬ ಹೆಸರು ಕಿತ್ತುಹಾಕುವಂತೆ ನೀಡಿದ ಆದೇಶ, ಖಂಡನೀಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಣಕ ಎಂದು ಪಂಡಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News