ರಫ್ತು ನಿಷೇಧ ತೆರವು: ಲಾಸಲಗಾಂವ್‌ನ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳಲ್ಲಿ ಏರಿಕೆ

Update: 2024-05-04 16:49 GMT

ಸಾಂದರ್ಭಿಕ ಚಿತ್ರ (PTI)

ನಾಸಿಕ್ (ಮಹಾರಾಷ್ಟ್ರ): ಕೇಂದ್ರ ಸರಕಾರವು ಶನಿವಾರ ರಫ್ತು ನಿಷೇಧವನ್ನು ತೆರವುಗೊಳಿಸಿದ ಬಳಿಕ ಭಾರತದಲ್ಲಿ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆ ಎನ್ನಲಾಗಿರುವ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಸಾಲಗಾಂವ್‌ನ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಪ್ರತಿ ಕ್ವಿಂಟಲ್‌ಗೆ ಸರಾಸರಿ 200 ರೂ.ಗಳಷ್ಟು ಏರಿಕೆಯಾಗಿವೆ.

ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ನಡುವೆಯೇ ಕೇಂದ್ರ ಸರಕಾರವು ಶನಿವಾರ ಈರುಳ್ಳಿ ರಫ್ತು ನಿಷೇಧವನ್ನು ತೆರವುಗೊಳಿಸಿದೆಯಾದರೂ,ಪ್ರತಿ ಟನ್‌ಗೆ 550 ಅಮೆರಿಕನ್ ಡಾಲರ್‌ಗಳ ಕನಿಷ್ಠ ರಫ್ತು ಬೆಲೆಯನ್ನು ನಿಗದಿಗೊಳಿಸಿದೆ. ಶುಕ್ರವಾರ ರಾತ್ರಿ ಸರಕಾರವು ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕವನ್ನು ಹೇರಿತ್ತು. ಸುಂಕ ಸೇರಿದರೆ ಕನಿಷ್ಠ ರಫ್ತು ಬೆಲೆ ಪ್ರತಿಟನ್‌ಗೆ 770 ಡಾ.(ಪ್ರತಿ ಕೆಜಿಗೆ ಸುಮಾರು 64 ರೂ.) ಆಗಲಿದೆ.

ಮಾರುಕಟ್ಟೆಯಲ್ಲಿ ಬೆಲೆಗಳು ಸ್ವಲ್ಪ ಏರಿಕೆಯಾಗಿವೆ. ಸರಾಸರಿ ಬೆಲೆಗಳು ಪ್ರತಿ ಕ್ವಿಂಟಲ್‌ಗೆ ಸುಮಾರು 200 ರೂ.ಗಳಷ್ಟು ಹೆಚ್ಚಾಗಿವೆ. ಸರಕಾರದ ನಿರ್ಧಾರದಿಂದ ರೈತರಿಗೆ ಲಾಭವಾಗಲಿದೆ,ಆದರೆ ಸೋಮವಾರ ಮಾರುಕಟ್ಟೆ ಪುನರಾರಂಭಗೊಂಡ ಬಳಿಕ ನಿಜವಾದ ಪರಿಣಾಮ ತಿಳಿಯಲಿದೆ ಎಂದು ಎಪಿಎಂಸಿ ಅಧ್ಯಕ್ಷ ಬಾಳಾಸಾಹೇಬ ಕ್ಷೀರಸಾಗರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಶನಿವಾರ ಎಪಿಎಂಸಿಗೆ ಸುಮಾರು 200 ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ಗುಣಮಟ್ಟವನ್ನು ಅವಲಂಬಿಸಿ ಪ್ರತಿ ಕ್ವಿಂಟಲ್‌ಗೆ 801,2100 ಮತ್ತು 2551 ರೂ.ಬೆಲೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿದವು.

ರಫ್ತು ನಿಷೇಧವನ್ನು ಹಿಂದೆಗೆದುಕೊಂಡಿದ್ದು ಉತ್ತಮ ನಿರ್ಧಾರ,ಆದರೆ ಇದು ಕನಿಷ್ಠ ಒಂದು ವರ್ಷ ಜಾರಿಯಲ್ಲಿರಬೇಕು ಎಂದು ಮಾರುಕಟ್ಟೆಯಲ್ಲಿ ರೈತರೋರ್ವರು ಸುದ್ದಿಗಾರರಿಗೆ ತಿಳಿಸಿದರು.

ರಫ್ತು ಸುಂಕ ಈರುಳ್ಳಿ ಬೆಳೆಗಾರರ ಲಾಭಗಳನ್ನು ತಿಂದು ಹಾಕುತ್ತದೆ ಎಂದು ಹೇಳಿದ ಇನ್ನೋರ್ವ ರೈತ,ರಫ್ತು ನಿಷೇಧದಿಂದ ನಾವು ಅನುಭವಿಸಿದ್ದ ನಷ್ಟವನ್ನು ಯಾರು ನೀಡುತ್ತಾರೆ ಎಂದು ಪ್ರಶ್ನಿಸಿದರು.

2023,ಡಿ.8ರಂದು ಸರಕಾರವು ಉತ್ಪಾದನೆ ಕುಸಿತ ಸಾಧ್ಯತೆಯ ಕಳವಳಗಳ ನಡುವೆ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸಲು ಈರುಳ್ಳಿ ರಫ್ತನ್ನು ನಿಷೇಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News