ರೈಲು ಇಲ್ಲ !

Update: 2016-06-07 12:42 GMT

ಹೊಸದಿಲ್ಲಿ,ಜೂ.7: ಭಾರತೀಯ ರೈಲ್ವೆ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಆರ್)ವು ಜುಲೈ 11ರಿಂದ ಅನಿರ್ದಿಷ್ಟಾವಧಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಬಗ್ಗೆ ಜೂ.9ರಂದು ಇಲಾಖೆಗೆ ನೋಟೀಸನ್ನು ನೀಡಲು ಅದು ನಿರ್ಧರಿಸಿದೆ.

2015,ಡಿಸೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ನೌಕರರ ಬೇಡಿಕೆಗಳ ಪಟ್ಟಿಗೆ ಸರಕಾರದ ಪ್ರತಿಕ್ರಿಯೆಯು ತೀರ ನಿರಾಶಾದಾಯಕವಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ರಾಘವಯ್ಯ ತಿಳಿಸಿದರು. ಹೀಗಾಗಿ ಜು.11ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ರೈಲ್ವೆ,ರಕ್ಷಣೆ,ಅಂಚೆ,ಆದಾಯ ತೆರಿಗೆ,ಕೇಂದ್ರ ಕಸ್ಟಮ್ಸ್ ಮತ್ತು ಅಬಕಾರಿ ಸೇರಿದಂತೆ ಕೇಂದ್ರ ಸರಕಾರಿ ನೌಕರರ ಸಂಘಟನೆಗಳು ಸರ್ವಾನುಮತದಿಂದ ನಿರ್ಧರಿಸಿವೆ ಎಂದರು.

ಎನ್‌ಎಫ್‌ಐಆರ್ 13 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರನ್ನು ಪ್ರತಿನಿಧಿಸುತ್ತಿದೆ.
ಕನಿಷ್ಠ ವೇತನ ಹೆಚ್ಚಳ,ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಯೋಜನೆಯ ಮರು ಅನುಷ್ಠಾನ,ವಿವೇಕ್ ದೇಬ್ರಾಯ್ ವರದಿಯ ರದ್ದತಿ ಮತ್ತು ಉನ್ನತಾಧಿಕಾರ ಸಮಿತಿಯ ಧನಾತ್ಮಕ ಶಿಫಾರಸುಗಳ ಜಾರಿ,ಭಾರತೀಯ ರೈಲ್ವೆಯ ನಿರ್ಮಾಣ,ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರವು 2014,ಆ.22ರಂದು ಹೊರಡಿಸಿರುವ ಎಫ್‌ಡಿಐ ಅಧಿಸೂಚನೆಯ ಹಿಂದೆಗೆತ ಮತ್ತು ರೈಲ್ವೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ವಿದೇಶಿ ಮತ್ತು ದೇಶಿಯ ಕಂಪನಿಗಳೊಂದಿಗಿನ ಎಲ್ಲ ಒಪ್ಪಂದಗಳ ರದ್ದತಿ, ಕೇಂದ್ರ ಸಚಿವಾಲಯಕ್ಕೆ ಸರಿಸಮಾನವಾಗಿ ವೇತನ ಸ್ವರೂಪ ಮತ್ತು ಬಡ್ತಿ ಅವಕಾಶ, ಹಾಲಿ ಭತ್ತೆಗಳು ಮತ್ತು ಮುಂಗಡಗಳ ಮುಂದುವರಿಕೆ,2014-15ನೇ ಸಾಲಿಗೆ ಉತ್ಪಾದಕತೆ ಆಧಾರಿತ ಬೋನಸ್ ದರ ಪ್ರತಿ ತಿಂಗಳಿಗೆ 7,000 ರೂ.ಗೆ ನಿಗದಿ ಇತ್ಯಾದಿ ಬೇಡಿಕೆಗಳನ್ನು ಒಕ್ಕೂಟವು ಕೇಂದ್ರ ಸರಕಾರದ ಮುಂದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News