ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟ: ಕಾಂಗ್ರೆಸ್-ಬಿಜೆಪಿಗೆ ಗೆಲುವು ಜೆಡಿಎಸ್‌ಗೆ ಮುಖಭಂಗ

Update: 2016-06-10 18:44 GMT

ಕಾಂಗ್ರೆಸ್- 4 ಬಿಜೆಪಿ- 2 ಜೆಡಿಎಸ್- 1 ಸ್ಥಾನ

ಬೆಂಗಳೂರು, ಜೂ.10: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದರೆ, ಜೆಡಿಎಸ್‌ಗೆ ಎರಡು ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನ ಮಾತ್ರ ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಹೊಂದಾಣಿಕೆ ಮುರಿದು ಬಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಡೆಸಿದ ರಹಸ್ಯ ರಣತಂತ್ರದ ಫಲವಾಗಿ ಜೆಡಿಎಸ್ ಭಾರೀ ಮುಖಭಂಗ ಅನುಭವಿಸುವಂತಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ಅಲ್ಲಂ ವೀರಭದ್ರಪ್ಪ(32), ಆರ್.ಬಿ. ತಿಮ್ಮಾಪುರ್ (33), ರಿಝ್ವಾನ್ ಅರ್ಶದ್(34), ವೀಣಾ ಅಚ್ಚಯ್ಯ(31), ಬಿಜೆಪಿ ಅಭ್ಯರ್ಥಿಗಳಾದ ವಿ.ಸೋಮಣ್ಣ (31), ಲೆಹರ್‌ಸಿಂಗ್(27) ಗೆಲುವು ಸಾಧಿಸಿದರು. ಜೆಡಿಎಸ್ ಮೊದಲ ಅಭ್ಯರ್ಥಿ ಕೆ.ವಿ.ನಾರಾಯಣಸ್ವಾಮಿ(30) ಗೆಲುವಿನ ನಗೆ ಬೀರಿದರೆ, ಎರಡನೆ ಅಭ್ಯರ್ಥಿ ಡಾ.ವೆಂಕಟಾಪತಿ ಕೇವಲ 5 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದಾರೆ.

ಜೆಡಿಎಸ್ ವಿಧಾನಸಭೆಯಲ್ಲಿ 40 ಶಾಸಕರ ಸಂಖ್ಯಾಬಲವನ್ನು ಹೊಂದಿದ್ದರೂ, ಪಕ್ಷದ ಇಬ್ಬರು ಅಭ್ಯರ್ಥಿಗಳ ಪರವಾಗಿ ಚಲಾವಣೆಯಾಗಿರುವುದು ಕೇವಲ 35 ಮತಗಳು ಮಾತ್ರ. ಇನ್ನುಳಿದಂತೆ ಐವರು ಶಾಸಕರಿಂದ ಅಡ್ಡಮತದಾನವಾಗಿರುವುದು ಸಾಬೀತಾಗಿದ್ದು, ಭಿನ್ನಮತೀಯ ಶಾಸಕರಿಂದಲೇ ಅಡ್ಡಮತದಾನವಾಗಿರುವ ಸಾಧ್ಯತೆಯಿದೆ.

 ವಿಧಾನಸಭೆಯಲ್ಲಿ 123 ಶಾಸಕರು, ಸ್ಪೀಕರ್ ಹಾಗೂ ನಾಮನಿರ್ದೇಶಿತ ಸದಸ್ಯೆ ಸೇರಿದಂತೆ ಒಟ್ಟು 125 ಮತಗಳನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದರೂ ನಾಲ್ವರು ಅಭ್ಯರ್ಥಿಗಳ ಪರವಾಗಿ ಚಲಾವಣೆಯಾಗಿರುವುದು 130 ಮತಗಳು. ಬಿಜೆಪಿಯು 44 ಶಾಸಕರನ್ನು ಹೊಂದಿದ್ದರೂ ಇಬ್ಬರು ಅಭ್ಯರ್ಥಿಗಳ ಪರವಾಗಿ 58 ಮತಗಳು ಚಲಾವಣೆಯಾಗುವ ಮೂಲಕ ಹೆಚ್ಚುವರಿಯಾಗಿ 14 ಮತಗಳನ್ನು ತನ್ನದಾಗಿಸಿಕೊಂಡಿದೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಭಿನ್ನಮತೀಯ ಶಾಸಕರಾದ ಝಮೀರ್ ಅಹ್ಮದ್‌ಖಾನ್, ಎನ್.ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಸೇರಿದಂತೆ ಎಲ್ಲ 225 ಶಾಸಕರು ಮತ ಚಲಾಯಿಸಿದರು. ಈ ಪೈಕಿ ಎರಡು ಮತಗಳು ತಿರಸ್ಕೃತಗೊಂಡಿವೆ.

ಬಿಜೆಪಿ ಶಾಸಕ ಸಿ.ಟಿ.ರವಿ ಮೊದಲಿಗೆ ಮತದಾನ ಮಾಡಿದರೆ, ‘ಮತಕ್ಕಾಗಿ ಲಂಚ’ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಕೊನೆಯವರಾಗಿ ತಮ್ಮ ಹಕ್ಕು ಚಲಾಯಿಸಿದರು.

ಕಾಂಗ್ರೆಸ್‌ಗೆ ಮತ ನೀಡಿದ ಜೆಡಿಎಸ್ ಶಾಸಕ ಝಮೀರ್ ಅಹ್ಮದ್

ಬೆಂಗಳೂರು, ಜೂ. 10: ‘ನಮ್ಮ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಸೇರಿದಂತೆ ಯಾರೊಬ್ಬರೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಎಂದು ನನಗೆ ಸೂಚಿಸಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ರಿಝ್ವೆನ್ ಅರ್ಶದ್‌ಗೆ ನನ್ನ ಮತ ನೀಡಿದ್ದೇನೆ’ ಎಂದು ಜೆಡಿಎಸ್ ಶಾಸಕ ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಮೇಲ್ಮನೆ ಚುನಾವಣೆ ಮತದಾನದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಉದ್ಭವಿಸಿರುವ ಭಿನ್ನಮತಕ್ಕೆ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರೇ ನೇರಹೊಣೆ ಎಂದು ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News