ಕೊಡಗಿನ 36 ಸರಕಾರಿ ಶಾಲೆಗಳಿಗೆ ಬೀಗ ಭಾಗ್ಯ

Update: 2016-06-12 17:59 GMT

ಮಡಿಕೇರಿ, ಜೂ.12: ಖಾಸಗಿ ಶಾಲೆಗಳೆಡೆಗಿನ ವ್ಯಾಮೋಹ, ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳ ಓದಿಗೆ ನೀಡಿರುವ ಅವಕಾಶ ಸೇರಿದಂತೆ ಹತ್ತು ಹಲವು ಕಾರಣಗಳಿಂದ ಸರಕಾರಿ ಪ್ರಾಥ ಮಿಕ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಕುಸಿ ಯುತ್ತಿದೆ. ಇದರ ಬೆನ್ನಲ್ಲೆ ಇದೀಗ ಕೊಡಗು ಜಿಲ್ಲೆಯಲ್ಲಿ ಹತ್ತು ಮಕ್ಕಳಿಗಿಂತಲೂ ಕಡಿಮೆ ಇರುವ 36 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಸರಕಾರ ಮುಂದಾಗಿದೆ.

ಕಳೆದ ಶೈಕ್ಷಣಿಕ ಸಾಲಿನ ಹಾಜರಾತಿಯನ್ನು ಪರಿಗಣಿಸಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 18 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಡಿಕೇರಿ ತಾಲೂಕಿನ 10 ಕಿರಿಯ ಪ್ರಾಥಮಿಕ ಮತ್ತು 2 ಹಿರಿಯ ಪ್ರಾಥಮಿಕ ಶಾಲೆ, ವೀರಾಜಪೇಟೆ ತಾಲೂಕಿನ 6 ಕಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರಸಕ್ತ ಸಾಲಿನಿಂದಲೇ ಬೀಗ ಹಾಕಲು ನಿರ್ಧರಿಸಲಾಗಿದೆ.

 ಜಿಲ್ಲಾ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಹತ್ತು ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈಗಾಗಲೇ ಕೊಡಗು ಡಿಡಿಪಿಐ ಕಚೇರಿಗೆ ಸುತ್ತೋಲೆಯನ್ನು ನೀಡಿದೆ. ಅದರಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಯನ್ನು ಹೊಂದಿರುವ ಎಲ್ಲಾ ಶಾಲೆಗಳನ್ನು 31ಕ್ಕಿಂತಲೂ ಹೆಚ್ಚು ಮಕ್ಕಳ ದಾಖಲೆಯನ್ನು ಹೊಂದಿರುವ ಹತ್ತಿರದ ಸರಕಾರಿ ಪ್ರಾಥಮಿಕ ಶಾಲೆಗೆ ವಿಲೀನಗೊಳಿಸಿ, ಸದರಿ ಶಾಲೆಯ ಎಲ್ಲಾ ಮಕ್ಕಳಿಗೆ 1ಕಿ.ಮೀ. ವ್ಯಾಪ್ತಿಯ ಹತ್ತಿರದ ಇತರ ಸರಕಾರಿ ಶಾಲೆಗಳು ಅಥವಾ ಅನುದಾನಿತ ಶಾಲೆಗಳು ಅಥವಾ ಅನುದಾನ ರಹಿತ ಶಾಲೆಗಳ ಆರ್‌ಟಿಇ ಸೀಟುಗಳಿಗೆ ಸ್ಥಳಾಂತ ರಿಸತಕ್ಕದ್ದು. ಅದು ಸಾಧ್ಯವಾಗದೆ ಇದ್ದಲ್ಲಿ ಇತರ ಹತ್ತಿರದ ಸರಕಾರಿ ಶಾಲೆಗಳಿಗೆ ಸ್ಥಳಾಂತರಿಸಿ, ಆ ಎಲ್ಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಪಷ್ಟ ಸೂಚನೆಯನ್ನು ನೀಡಿ, ಈ ಸಂಬಂಧ ತಗಲುವ ವೆಚ್ಚದ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು.

ಶಿಕ್ಷಣ ಹಕ್ಕು ಕಾಯ್ದೆಯಡಿ ಕೊಡಗು ಜಿಲ್ಲೆಯ ಖಾಸಗಿ ಶಾಲೆಗಳಲ್ಲಿನ 694 ಸೀಟ್‌ಗಳಲ್ಲಿ ಈಗಾಗಲೆ ಅಂದಾಜು 400 ಸೀಟ್‌ಗಳಿಗೆ ಬಡ ಮಕ್ಕಳು ದಾಖಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಉಳಿದ ಸೀಟ್ ಭರ್ತಿ ಯಾಗುವ ಸಾಧ್ಯತೆ ಇದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ಭರ್ತಿಯಾಗುತ್ತಿರುವುದು ಸರಕಾರಿ ಶಾಲೆಗಳು ಶಾಶ್ವತವಾಗಿ ಮುಚ್ಚಲು ಕಾರಣವಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯ 36 ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದಲೆ ಬೀಗ ಬೀಳಲಿದೆ.

ಸರಕಾರದ ನಿಯಮಗಳ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಯ 25 ಮಕ್ಕಳಿಗೆ 2 ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ 4 ಶಿಕ್ಷಕರು ಇರಬೇಕು. ಇದೀಗ ಒಂದಕ್ಕಿಂತ ಹೆಚ್ಚಿನ ಶಿಕ್ಷಕರೆಲ್ಲ ಹೆಚ್ಚುವರಿ ಶಿಕ್ಷಕರಾಗಿ ಪರಿಗಣಿಸಲ್ಪಡುತ್ತಾರೆ ಮತ್ತು ಇವರ ಸ್ಥಾನಕ್ಕೆ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶವನ್ನು ಕಲ್ಪಿಸ ಲಾಗಿದೆ. ಸರಕಾರದ ಈ ಹೊಸ ನಿಯಮದಂತೆ ಮಡಿಕೇರಿ ತಾಲೂಕಿನಲ್ಲಿ 7 ಶಿಕ್ಷಕರು, ಸೋಮವಾರಪೇಟೆ ತಾಲೂಕಿನಲ್ಲಿ 8 ಮತ್ತು ವೀರಾಜಪೇಟೆ ತಾಲೂಕಿನಲ್ಲಿ 3 ಶಿಕ್ಷಕರು ಹೆಚ್ಚುವರಿ ಶಿಕ್ಷಕರಾಗಿ ಪರಿಗಣಿಸಲ್ಪಡುತ್ತಾರೆ. 269 ಮಕ್ಕಳಿಗೆ ಪರ್ಯಾಯ ವ್ಯವಸ್ಥೆ :

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಡಬಹುದಾದ ಶಾಲೆಗಳ 269 ಮಕ್ಕಳಿಗೆ ಸಮೀಪದ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಮುಚ್ಚಲ್ಪಡುವ ಶಾಲೆಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಶಾಲೆಗಳು ಇಲ್ಲದಿದ್ದಲ್ಲಿ ಸಮೀಪದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ತಲಾ 1 ಸಾವಿರ ರೂ.ಗಳಂತೆ ಸಾರಿಗೆ ವೆಚ್ಚದ ಮಾಹಿತಿಯನ್ನು ಒಳಗೊಂಡ ವಿವರಗಳ ಪ್ರಸ್ತಾವನೆಯನ್ನು ಈಗಾಗಲೆ ಆಯುಕ್ತರ ಕಚೇರಿಗೆ ಕಳುಹಿಸಲಾಗಿದೆ.

ಮುಚ್ಚಲ್ಪಡುವ ಶಾಲೆಗಳಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 49 ಶಿಕ್ಷಕರಿಗೆ ಕೌನ್ಸ್ಸೆಲಿಂಗ್ ಮೂಲಕ ಆಯಾ ತಾಲೂಕುಗಳಲ್ಲಿನ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯುಕ್ತಿಗೊಳಿಸಲಾಗುತ್ತದೆ.

ಮುಚ್ಚಲ್ಪಡುವ ಶಾಲೆಗಳು: ಸೋಮವಾರಪೇಟೆ: ತಾಲೂಕಿನ ಅಗಳಿ, ಜನಾರ್ಧನಹಳ್ಳಿ, ಅರೆಯೂರು, ಹಿರಿಕರ, ಸಂಪಿಗೆದಾಳು, ಹಿತ್ಲಕೇರಿ, ಮುಳ್ಳೂರು ಕಾಲೋನಿ, ಮಣಜೂರು, ಕೆಳಕೊಡ್ಲಿ, ಮೂವತ್ತೊಕ್ಲು, ಅತ್ತೂರು, ದೊಡ್ಡಕೊಳತ್ತೂರು, ಅಬ್ಬಿಮಠ್ ಬಾಚಳ್ಳಿ, ಕುಂದಳ್ಳಿ, ಕುಮಾರಳ್ಳಿ, ನಗರಳ್ಳಿ, ದೊಡ್ಡತೋಳೂರು ಮತ್ತು ಕಿಬ್ಬೆಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಡಲಿವೆ.

ಮಡಿಕೇರಿ: ತಾಲೂಕಿನ ಕೊಪ್ಪದಬಾಣೆ, ತಲಕಾವೇರಿ, ಐವತ್ತೊಕ್ಲು, ಅರುವತ್ತೊಕ್ಲು, ಹೆರವನಾಡು, ಅವಂದೂರು, ಭಗವತಿನಗರ, ಮುತ್ತಾರ್ಮುಡಿ, ಅರೆಕಲ್ಲು ಮತ್ತು ಕಲ್ಲಳ್ಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಲೂರು ಮತ್ತು ಹಮ್ಮಿಯಾಲದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗಳು ಮುಚ್ಚಲಿವೆ.

ವೀರಾಜಪೇಟೆ: ತಾಲೂಕಿನ ಮೂರ್ಕಲ್ಲು, ಗೋಣಿಗದ್ದೆ ಆಶ್ರಮ ಶಾಲೆ, ಮಾಕುಟ್ಟ, ಕದನೂರು, ಮಾರ್ಗೊಲ್ಲಿ ಮತ್ತು ಇಂಜಿಲಗೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬೀಗ ಬೀಳಲಿದೆ. ಹಿರಿಯ ಪ್ರಾಥಮಿಕ ಶಾಲೆಗಳ 30 ಮಕ್ಕಳ ದಾಖಲಾತಿಗೆ ಅನ್ವಯವಾಗುವಂತೆ ಒಂದಕ್ಕಿಂತ ಹೆಚ್ಚಿನ ಶಿಕ್ಷಕರನ್ನೆಲ್ಲ ಹೆಚ್ಚುವರಿ ಶಿಕ್ಷಕರನ್ನಾಗಿ ಪರಿಗಣಿಸಿ, ಅವರನ್ನು ಅಗತ್ಯವಿರುವ ಶಾಲೆಗಳಿಗೆ ಮರು ನಿಯುಕ್ತಗೊಳಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News