ಒಂದೇ ರಾಕೆಟ್‌ನಲ್ಲಿ 22 ಉಪಗ್ರಹಗಳನ್ನು ಉಡಾಯಿಸಲಿರುವ ಇಸ್ರೊ

Update: 2016-06-15 18:32 GMT

ಲಂಡನ್, ಜೂ. 15: ಬಿಲಿಯಾಧಿಪತಿಗಳಾದ ಎಲಾನ್ ಮಸ್ಕ್ ಮತ್ತು ಜೆಫ್ ಬೆಝಾಸ್ ನಡೆಸುತ್ತಿರುವ ವಾಣಿಜ್ಯ ಬಾಹ್ಯಾಕಾಶ ಹಾರಾಟ ಕಂಪೆನಿಗಳು ಒಡ್ಡಿರುವ ಸ್ಪರ್ಧೆಗೆ ಸವಾಲೊಡ್ಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಒಂದೇ ರಾಕೆಟ್‌ನಲ್ಲಿ ದಾಖಲೆಯ 22 ಉಪಗ್ರಹಗಳ ಹಾರಾಟಕ್ಕೆ ಸಿದ್ಧತೆ ನಡೆಸಿದೆ.

ಅಮೆರಿಕ, ಭಾರತ, ಕೆನಡ ಮತ್ತು ಜರ್ಮನಿಯ ಉಪಗ್ರಹಗಳನ್ನು ಹೊತ್ತ ರಾಕೆಟ್ ಜೂನ್ 20ರಂದು ಶ್ರೀಹರಿಕೋಟದ ಬ್ಯಾರಿಯರ್ ದ್ವೀಪದಿಂದ ಉಡಾವಣೆಗೊಳ್ಳಲಿದೆ. ಹೆಚ್ಚಿನ ಉಪಗ್ರಹಗಳು ಭೂಮಿಯ ವಾತಾವರಣದ ಮೇಲೆ ನಿಗಾ ಇಟ್ಟರೆ, ಭಾರತದ ವಿಶ್ವವಿದ್ಯಾನಿಲಯವೊಂದರ ಉಪಗ್ರಹವು ಹವ್ಯಾಸಿ ರೇಡಿಯೊ ಆಪರೇಟರ್‌ಗಳಿಗೆ ಸೇವೆಯನ್ನು ಒದಗಿಸಲಿದೆ.

ಉಪಗ್ರಹ ಉಡಾವಣೆಯಲ್ಲಿನ ಹೆಚ್ಚಳವು ಮಸ್ಕ್ ಮತ್ತು ಬೆಝಾಸ್ ಮುಂತಾದ ಖಾಸಗಿ ವಾಣಿಜ್ಯ ಬಾಹ್ಯಾಕಾಶ ಕಂಪೆನಿಗಳ ಉದಯಕ್ಕೆ ಅವಕಾಶ ಕಲ್ಪಿಸಿದೆ. ಈ ಕಂಪೆನಿಗಳು ವೆಚ್ಚ ಕಡಿಮೆ ಮಾಡುವುದಕ್ಕಾಗಿ ಮರು ಬಳಕೆ ಮಾಡಬಹುದಾದ ರಾಕೆಟ್‌ಗಳ ಯಶಸ್ವಿ ಪರೀಕ್ಷೆ ನಡೆಸಿವೆ.

ಇದಕ್ಕೆ ಸ್ಪರ್ಧೆ ನೀಡಲು ಭಾರತವು ತನ್ನ ಕಡಿಮೆ ವೆಚ್ಚದ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದೆ ಹಾಗೂ ಮಂಗಳ ಗ್ರಹದ ಕಕ್ಷೆಗೆ ಶೋಧಕ ನೌಕೆಯನ್ನು ಕಳುಹಿಸಿದ ಹಾಗೂ ಬಾಹ್ಯಾಕಾಶ ನೌಕೆಯ ಪ್ರತಿಕೃತಿಗಳನ್ನು ನಿರ್ಮಿಸಿದ ತನ್ನ ಪರಿಣತಿಯನ್ನು ಮುಂದಿಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News