×
Ad

ಆಸ್ಟ್ರೇಲಿಯಾ ವಿವಿ ಕ್ಯಾಂಪಸ್‍ಗಳಲ್ಲೂ ಫೆಲೆಸ್ತೀನ್ ಪರ ಪ್ರತಿಭಟನೆ

Update: 2024-05-03 22:12 IST

PC ; hindustantimes.com

ಸಿಡ್ನಿ: ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲೂ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಯುತ್ತಿದ್ದು ಶುಕ್ರವಾರ ಸಿಡ್ನಿ ವಿವಿಯಲ್ಲಿ ಫೆಲೆಸ್ತೀನ್ ಪರ ಹಾಗೂ ಇಸ್ರೇಲ್ ಪರ ಪ್ರತಿಭಟನಾಕಾರರ ನಡುವೆ ಗಲಾಟೆ ನಡೆದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ವರದಿಯಾಗಿದೆ.

ಅಮೆರಿಕದಾದ್ಯಂತ ವಿವಿಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ ಮುಂದುವರಿದಿರುವಂತೆಯೇ ಆಸ್ಟ್ರೇಲಿಯಾದ ಹಲವು ವಿವಿಗಳ ಕ್ಯಾಂಪಸ್‍ಲ್ಲಿ ವಿದ್ಯಾರ್ಥಿಗಳು ತಾತ್ಕಾಲಿಕ ಶಿಬಿರ ರಚಿಸಿಕೊಂಡು ಹಗಲು-ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸುತ್ತಿರುವ ಪ್ರತಿಭಟನಾಕಾರರು, ಇಸ್ರೇಲ್ ಜತೆಗಿನ ಎಲ್ಲಾ ಶೈಕ್ಷಣಿಕ ಸಂಬಂಧವನ್ನು ಕಡಿತಗೊಳಿಸುವಂತೆ, ಇಸ್ರೇಲ್‍ನ ಶಸ್ತ್ರಾಸ್ತ್ರ ಉತ್ಪಾದಕರ ಜತೆಗಿನ ಸಂಶೋಧನಾ ಸಹಭಾಗಿತ್ವವನ್ನು ರದ್ದುಗೊಳಿಸುವಂತೆ ವಿವಿ ಆಡಳಿತವನ್ನು ಆಗ್ರಹಿಸಿದ್ದಾರೆ.

ಆಸ್ಟ್ರೇಲಿಯಾದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯಾದ ಸಿಡ್ನಿ ವಿವಿಯಲ್ಲಿ ಶುಕ್ರವಾರ ಫೆಲೆಸ್ತೀನ್ ಪರ ಮತ್ತು ಇಸ್ರೇಲ್ ಪರ ಗುಂಪಿನ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿದೆ. ಆದರೆ ತಕ್ಷಣ ಮಧ್ಯಪ್ರವೇಶಿಸಿದ ಭದ್ರತಾ ಪಡೆ ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ಆಸ್ಟ್ರೇಲಿಯನ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್(ಎಬಿಸಿ) ವರದಿ ಮಾಡಿದೆ. `ಎರಡೂ ಗುಂಪಿನವರಿಗೆ ತಮ್ಮ ಅಭಿಪ್ರಾಯಗಳನ್ನು ಶಾಂತ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶವಿದೆ. ಆದರೆ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜತೆ ಕೆಲವು ಹೊರಗಿನ ವ್ಯಕ್ತಿಗಳು ಸೇರಿಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಹಿಂಸಾಚಾರಕ್ಕೆ ಮುಂದಾದರೆ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಿಡ್ನಿ ವಿವಿಯ ಉಪಕುಲಪತಿ ಮಾರ್ಕ್ ಸ್ಕಾಟ್ ಹೇಳಿದ್ದಾರೆ.

ಮೆಲ್ಬೋರ್ನ್, ಕ್ಯಾನ್‍ಬೆರಾ ಹಾಗೂ ಇತರ ಪ್ರಮುಖ ನಗರಗಳಲ್ಲೂ ಪ್ರತಿಭಟನೆ ನಡೆದಿದೆ. ಆಸ್ಟ್ರೇಲಿಯಾವು ದೀರ್ಘ ಕಾಲದಿಂದ ಇಸ್ರೇಲ್‍ನ ಮಿತ್ರದೇಶವಾಗಿದ್ದರೂ ಕಳೆದ ತಿಂಗಳು ಗಾಝಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಆಸ್ಟ್ರೇಲಿಯಾದ ನೆರವು ವಿತರಿಸುವ ಸಿಬ್ಬಂದಿ ಮೃತಪಟ್ಟ ಬಳಿಕ ಇಸ್ರೇಲ್ ವಿರುದ್ಧ ಅಸಮಾಧಾನ ಹೆಚ್ಚುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News