ರೋಹಿತ್ ವೇಮುಲಾ ದಲಿತ ಎಂದಿದ್ದ ಜಿಲ್ಲಾಧಿಕಾರಿ ತಿಪ್ಪರಲಾಗ

Update: 2016-06-22 02:58 GMT

ಗುಂಟೂರು, ಜೂ.22: ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಜಾತಿ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ರೋಹಿತ್ ಜಾತಿ ಬಗ್ಗೆ ಗೊಂದಲ ಇದ್ದ ಹಿನ್ನೆಲೆಯಲ್ಲಿ ಹೊಸ ತನಿಖೆ ಮಾಡುವ ಅಗತ್ಯವಿದೆ ಎಂದು ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಾಂಡೆ ಹೇಳಿಕೆ ನೀಡಿದ್ದಾರೆ. ಹಿಂದೆ ಇದೇ ಜಿಲ್ಲಾಧಿಕಾರಿ ರೋಹಿತ್ ವೇಮುಲಾ ಅವರನ್ನು ದಲಿತ ಎಂದು ದೃಢೀಕರಿಸಿದ್ದರು.

ವೇಮುಲಾ ಅವರ ಜಾತಿ ಯಾವುದು ಎಂದು ಗುರುತಿಸಲು ಮತ್ತೆ ಹೊಸದಾಗಿ ತನಿಖೆ ಅಗತ್ಯ. ಈ ಹಿಂದಿನ ಎರಡು ವರದಿಗಳಲ್ಲಿ, ಗುಂಟೂರು ನಗರ ಮಂಡಲ ಕಂದಾಯ ಅಧಿಕಾರಿ ಹಾಗೂ ಗುರ್ಜಾಲ ಮಂಡಲ ಕಂದಾಯ ಅಧಿಕಾರಿ ಆತನ ಜಾತಿಯನ್ನು ವಿಭಿನ್ನವಾಗಿ ನಮೂದಿಸಿದ್ದಾರೆ. ಗುಂಟೂರು ವರದಿಯಲ್ಲಿ ಆತ ದಲಿತ ಎಂದು ಹೇಳಿದ್ದರೆ, ಗುರ್ಜಾಲ ವರದಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ರೋಹಿತ್ ವೇಮುಲಾ ಹುಟ್ಟಿದ್ದು ಗುಂಟೂರು ನಗರ ಪ್ರದೇಶದಲ್ಲಿ. ಆತನ ತಂದೆ ಗುರ್ಜಾಲದವರು. ಮೊದಲ ವರದಿಯಲ್ಲಿ ಮಾತ್ರ ಆತ ದಲಿತ ಎಂದು ಹೇಳಲಾಗಿದೆ. ಈ ವರದಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಹೋಗಿದೆ.

ಈ ಆತ್ಮಹತ್ಯೆಗೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಹೈದ್ರಾಬಾದ್ ಕೇಂದ್ರೀಯ ವಿವಿ ಕುಲಪತಿ ಅಪ್ಪಾರಾವ್ ಕಾರಣ ಎಂದು ಇಬ್ಬರ ವಿರುದ್ಧವೂ ದಲಿತ ದೌರ್ಜನ್ಯ ವಿರೋಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿರುವುದರಿಂದ ವೇಮುಲಾ ಅವರ ಜಾತಿಯನ್ನು ದೃಢಪಡಿಸಬೇಕಿದೆ.

ಗುಂಟೂರು ಜಿಲ್ಲಾಧಿಕಾರಿ ಇನ್ನೂ ಜಾತಿ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ಬಂಡಾರು ದತ್ತಾತ್ರೇಯ ಹಾಗೂ ರಾವ್ ವಿರುದ್ಧದ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News