ಶರದ್‌ ಪವಾರ್ ಕುರಿತು ಪ್ರಧಾನಿ ಮೋದಿಯವರ ‘ಅಲೆದಾಡುತ್ತಿರುವ ಆತ್ಮ’ ಹೇಳಿಕೆ : ಅಜಿತ್‌ ಪವಾರ್ ಜಾಣಮೌನ

Update: 2024-05-02 15:53 GMT

 ಶರದ್‌ ಪವಾರ್  , ನರೇಂದ್ರ ಮೋದಿ | PC : ANI 

ಬಾರಾಮತಿ (ಮಹಾರಾಷ್ಟ್ರ: ಬಾರಾಮತಿ ಲೋಕಸಭಾ ಕ್ಷೇತ್ರದ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಪ್ರಚಾರದ ಸಂದರ್ಭದಲ್ಲಿ ಪವಾರ್ ಕುಟುಂಬವನ್ನು ಕೇಂದ್ರವಾಗಿಸಿಕೊಂಡು ವಾಗ್ದಾಳಿ ತೀವ್ರಗೊಂಡಿದೆ.

ಬುಧವಾರ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರು ಈ ವಾರ ಪುಣೆ ಲೋಕಸಭಾ ಕ್ಷೇತ್ರದಲ್ಲಿ ನಡೆದಿದ್ದ ಚುನಾವಣಾ ರ‍್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ದೊಡ್ಡಪ್ಪ ಶರದ್‌ ಪವಾರ್ ಅವರನ್ನು ಅಪಹಾಸ್ಯ ಮಾಡಿದ್ದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ.

ಈ ವಾರದ ಆರಂಭದಲ್ಲಿ ಪುಣೆಯಲ್ಲಿ ತನ್ನ ರ‍್ಯಾಲಿ ಸಂದರ್ಭದಲ್ಲಿ ಮೋದಿ 83ರ ಹರೆಯದ ಶರದ್‌ ಪವಾರ್ ಅವರನ್ನು ಮಹಾರಾಷ್ಟ್ರದಲ್ಲಿ ದೀರ್ಘಕಾಲೀನ ರಾಜಕೀಯ ಅಸ್ಥಿರತೆಗೆ ಕಾರಣರಾದ ‘ಅಲೆದಾಡುತ್ತಿರುವ, ಪ್ರಕ್ಷುಬ್ಧ ಆತ್ಮ’ ಎಂದು ವ್ಯಂಗ್ಯವಾಡಿದ್ದರು.

ಕಳೆದ ವರ್ಷ ಶರದ್‌ ಪವಾರ್ ಸ್ಥಾಪಿಸಿದ್ದ ಎನ್ಸಿಪಿಯನ್ನು ವಿಭಜಿಸಿದ್ದ ಅಜಿತ್‌, ಮೋದಿ ಹೇಳಿಕೆಗಳ ಕುರಿತು ಜಾಣಮೌನವನ್ನು ಆಯ್ಕೆ ಮಾಡಿಕೊಂಡರು. ಮೋದಿಯವರು ಯಾರನ್ನು ಉಲ್ಲೇಖಿಸಿ ಆ ಮಾತನ್ನು ಹೇಳಿದ್ದರು ಎನ್ನುವುದು ತನಗೆ ಗೊತ್ತಿಲ್ಲ ಎಂದರು.

‘ನಾನು ಹಿಂದೆ ಶರದ್‌ ಪವಾರ್ ಅವರನ್ನು ‘ದೇವರು’ ಎಂದು ಗೌರವಿಸುತ್ತಿದ್ದೆ. ಆದರೆ ನಾವೀಗ ವಿಭಿನ್ನ ಪಥಗಳಲ್ಲಿ ಸಾಗುತ್ತಿದ್ದೇವೆ’ ಎಂದ ಅವರು,‘ಪ್ರಧಾನಿ ಈ ಟೀಕೆಗಳನ್ನು ಮಾಡಿದಾಗ ನಾನು ಅಲ್ಲಿಯೇ ಉಪಸ್ಥಿತನಿದ್ದೆ. ಅವರು ಯಾರನ್ನು ಉಲ್ಲೇಖಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಚುನಾವಣಾ ರ‍್ಯಾಲಿಯಲ್ಲಿ ನಮ್ಮ ಮುಂದಿನ ಭೇಟಿ ಸಂದರ್ಭ ನಾನು ಮೋದಿಯವರನ್ನು ಈ ಬಗ್ಗೆ ಕೇಳುತ್ತೇನೆ. ಅಂತಹ ಉನ್ನತ ಮಟ್ಟದ ನಾಯಕನ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News