ದ್ವೇಷ ಭಾಷಣಗಳ ಬದಲು, ಸಾಧನೆಗಳ ಆಧಾರದಲ್ಲಿ ಮತ ಕೇಳಿ | ಪ್ರಧಾನಿ ಮೋದಿಗೆ ಖರ್ಗೆ ಪತ್ರ

Update: 2024-05-02 15:47 GMT

ಮಲ್ಲಿಕಾರ್ಜುನ ಖರ್ಗೆ , ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗುರುವಾರ ತೀವ್ರ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಚುನಾವಣೆಗಳು ಮುಗಿದ ಬಳಿಕ ದೇಶದ ಜನತೆ ಮೋದಿಯವರನ್ನು, ಅನಿವಾರ್ಯ ಸೋಲಿನಿಂದ ಪಾರಾಗಲು ವಿಭಜನವಾದಿ ಹಾಗೂ ಕೋಮುವಾದಿ ಮತ್ತು ಸುಳ್ಳುಗಳಿಂದ ತುಂಬಿದ ಭಾಷಣಗಳಿಗಾಗಿ ಮಾತ್ರವೇ ನೆನಪಿಸಿಕೊಳ್ಳಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುವ ಬದಲು ಪ್ರಧಾನಿಯವರು ಕಳೆದ ಹತ್ತು ವರ್ಷಗಳಲ್ಲಿ ತನ್ನ ಸರಕಾರದ ಸಾಧನೆಗಳ ಆಧಾರದಲ್ಲಿ ಮತಗಳನ್ನು ಕೇಳಬೇಕಾಗಿದೆ ಎಂದು ಅವರು ನರೇಂದ್ರ ಮೋದಿಯವರಿಗೆ ಗುರುವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಎರಡನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಧಾನಿ ಬರೆದ ಪತ್ರವೊಂದರಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಹಾಗೂ ಆರೋಪಗಳನ್ನು ಮಾಡಿರುವುದನ್ನು ಖರ್ಗೆ ಅವರು ಮೋದಿ ಅವರಿಗೆ ಬರೆದ ಪತ್ರದಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಸಮುದಾಯಗಳಿಂದ ಮೀಸಲಾತಿಯನ್ನು ಕಸಿದು, ಅವುಗಳನ್ನು ತಮ್ಮ ವೋಟ್‌ಬ್ಯಾಂಕ್‌ಗೆ ನೀಡುವ ಕಾಂಗ್ರೆಸ್ ಪಕ್ಷದ ದುರುದ್ದೇಶದ ಬಗ್ಗೆ ಮತದಾರರಲ್ಲಿ ಜಾಗೃತಿಯನ್ನು ಹರಡಬೇಕೆಂದು ಮೋದಿ ಅವರು ಎನ್‌ಡಿಎ ಅಭ್ಯರ್ಥಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಧರ್ಮಾಧಾರಿತ ಮೀಸಲಾತಿಯು ಅಸಂವಿಧಾನಿಕವಾಗಿದ್ದರೂ, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿಭಜನವಾದಿ ಹಾಗೂ ತಾರತಮ್ಯವಾದಿ ಉದ್ದೇಶಗಳನ್ನು ಹೊಂದಿರುವುದಾಗಿ ಮೋದಿ, ಎನ್‌ಡಿಎ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಬರೆದ ಪತ್ರದಲ್ಲಿ ತಿಳಿಸಿದ್ದರು.

ಇಂದು ಖರ್ಗೆ ಅವರು ಮೋದಿಗೆ ಪತ್ರ ಬರೆದು, ‘‘ ಮತದಾರರ ಜೊತೆ ಯಾವುದೆಲ್ಲಾ ವಿಷಯಗಳ ಬಗ್ಗೆ ಸಂವಹನ ನಡೆಸಬೇಕೆಂಬ ಬಗ್ಗೆ ನೀವು ಬರೆದ ಪತ್ರವನ್ನು ನಾನು ನೋಡಿದ್ದೇನೆ. ಈ ಪತ್ರದ ಧಾಟಿ ಹಾಗೂ ವಿಷಯವನ್ನು ನೋಡಿದಾಗ, ನಿಮ್ಮಲ್ಲಿ ಸಾಕಷ್ಟು ಹತಾಶೆ ಹಾಗೂ ಚಿಂತೆ ಮೂಡಿದ್ದು, ಇವು ಪ್ರಧಾನಿಯ ಹುದ್ದೆಗೆ ಭೂಷಣವಲ್ಲದಂತಹ ಭಾಷೆಯನ್ನು ನೀವು ಬಳಸುವಂತೆ ಮಾಡಿದೆ ’’ ಎಂದು ಹೇಳಿದ್ದಾರೆ.

‘‘ ನಿಮ್ಮ ಭಾಷೆಗಳಲ್ಲಿ ನೀವು ಹೇಳುವಂತಹ ಸುಳ್ಳುಗಳು ನೀವು ಉದ್ದೇಶಿಸಿದಂತಹ ಪರಿಣಾಮವನ್ನು ಬೀರದೆ ಇರುವುದು ನೀವು ಬರೆದ ಪತ್ರದಿಂದ ತಿಳಿದುಬರುತ್ತದೆ. ಈಗ ನೀವು ನಿಮ್ಮ ಸುಳ್ಳುಗಳನ್ನು ನಿಮ್ಮ ಅಭ್ಯರ್ಥಿಗಳು ಹೆಚ್ಚಿಸಬೇಕೆಂದು ನೀವು ಬಯಸಿದ್ದೀರಿ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೂ ಅದು ನಿಜವಾಗಲಾರದು’’ ಎಂದು ಖರ್ಗೆ ಅವರು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬರೆದಿರುವುದನ್ನು ಹಾಗೂ ಅದು ನೀಡಿರುವ ಭರವಸೆಗಳನ್ನು ಓದುವಷ್ಟು ಮತದಾರರು ಬುದ್ಧಿವಂತರಾಗಿದ್ದಾರೆ. ನಮ್ಮ ಗ್ಯಾರಂಟಿಗಳು ಸರಳ ಹಾಗೂ ಸ್ಪಷ್ಟ. ಅವುಗಳ ಬಗ್ಗೆ ಜನರಿಗೆ ಹೆಚ್ಚು ವಿವರಣೆಗಳನ್ನು ನಾವು ನೀಡಬೇಕಾಗಿಲ್ಲ. ನಿಮ್ಮ ಲಾಭಕ್ಕಾಗಿ ನಾವು ಅವುಗಳನ್ನು ಈ ಪತ್ರದಲ್ಲಿ ಪುನರುಚ್ಚರಿಸುತ್ತಿದ್ದೇನೆ ಎಂದು ಬರೆದಿದ್ದಾರೆ .

ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆಯೆಂದು ನೀವು ಹಾಗೂ ನಿಮ್ಮ ಗೃಹ ಸಚಿವರು ಹೇಳುತ್ತಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾವು ನೋಡಿದ್ದೇನೆಂದರೆ ನೀವು ಹಾಗೂ ನಿಮ್ಮ ಸಚಿವರು ಚೀನಿಯರ ತುಷ್ಟೀಕರಣದಲ್ಲಿ ತೊಡಗಿರುವುದು. ಇಂದಿಗೂ ಕೂಡಾ ನೀವು ಚೀನಿಯರನ್ನು ನುಸುಳುಕೋರರು ಎಂದು ಕರೆಯಲು ಒಪ್ಪುವುದಿಲ್ಲ. 2020ರ ಜೂನ್ 19ರಲ್ಲಿಯೂ ಕೂಡಾ ಯಾವುದೇ ಒಳನುಸುಳುವಿಕೆ ನಡೆದಿಲ್ಲವೆಂದು ನೀವು ಹೇಳುವ ಮೂಲಕ ಗಲ್ವಾನ್‌ನಲ್ಲಿ 20 ಭಾರತೀಯ ಸೈನಿಕರ ಬಲಿದಾನವನ್ನು ಅಪಮಾನಿಸಿದ್ದೀರಿ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News