ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ದುಬಾರಿ !

Update: 2016-06-22 05:48 GMT

ಹೊಸದಿಲ್ಲಿ, ಜೂ.22: ಖ್ಯಾತ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುವ ಉತ್ಪನ್ನಗಳು ಇತರ ಇ-ಕಾಮರ್ಸ್ ಸೈಟ್ ಗಳಾದ ಅಮೆಝಾನ್, ಸ್ನ್ಯಾಪ್ ಡೀಲ್ ಹಾಗೂ ಪೇಟಿಎಂಗೆ ಹೋಲಿಸಿದಾಗ ಇಂದಿನಿಂದ 15 ರಿಂದ 20 ಶೇ. ದುಬಾರಿಯಾಗಲಿದೆ. ಇದು ಆನ್‌ಲೈನ್ ಧರಣಿಯ ಎರಡನೆ ಹಂತದ ಪರಿಣಾಮವಾಗಿದೆ.

ಇ-ಕಾಮರ್ಸ್ ಸೈಟ್ ಹಾಗೂ ಆ್ಯಪ್ ಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ಯಮಿಗಳ ವೇದಿಕೆಯಾದ ಇ-ಸೆಲ್ಲರ್ ಸುರಕ್ಷಾ ಭಾರತದ ಅತ್ಯಂತ ದೊಡ್ಡ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟ ಮಾಡುವ ಉತ್ಪನ್ನಗಳ ಬೆಲೆಯೇರಿಸುವಂತೆ ತನ್ನ 1,574 ಸದಸ್ಯರಿಗೆ ಹೇಳಿದೆ. ಫ್ಲಿಪ್ ಕಾರ್ಟ್ ಇತ್ತೀಚೆಗೆ ತಾನು ಮಾರಾಟ ಮಾಡುವ ಉತ್ಪನ್ನಗಳ ವಾಪಸು ಪಡೆಯುವಿಕೆಯ ಅವಧಿಯನ್ನು 30 ದಿನಗಳಿಂದ 10 ದಿನಗಳಿಗೆ ಇಳಿಸಿದೆಯಲ್ಲದೆ ಮಾರಾಟಗಾರರ ಮೇಲೆ ವಿಧಿಸುವ ಕಮಿಷನ್ ದರಗಳನ್ನೂ 10 ಶೇ.ದಿಂದ 40 ಶೇ.ಕ್ಕೆ ಏರಿಸಿದೆ. ಉತ್ಪನ್ನವೊಂದನ್ನು ಖರೀದಿದಾರರು ಹಿಂದಿರುಗಿಸಿದರೆ ಅದರ ಶಿಪ್ಪಿಂಗ್ ದರವನ್ನು ಮಾರಾಟಗಾರರೇ ಭರಿಸಬೇಕೆಂಬ ನಿಯಮವನ್ನೂ ತಂದಿದೆ.

ಮೊದಲ ಹಂತದ ಪ್ರತಿಭಟನೆಯಲ್ಲಿ ಇ-ಸೆಲ್ಲರ್ ಸುರಕ್ಷಾ ಒಂದು ಮಿಲಿಯನ್ ಸ್ಟಾಕ್ ಇಡಲಾಗುವ ಘಟಕಗಳನ್ನು ಫ್ಲಿಪ್‌ಕಾರ್ಟ್‌ನಿಂದ ಹಿಂದಕ್ಕೆ ಪಡೆದುಕೊಂಡಿದೆ. ಆದರೆ, ಈ ಕ್ರಮ ಫ್ಲಿಪ್‌ಕಾರ್ಟ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾಗಿದ್ದು, ಸಂಸ್ಥೆ ತಾನು ನಷ್ಟದಲ್ಲಿರುವುದಾಗಿ ಹಾಗೂ ಲಾಭದಾಯಕವಾಗಿ ನಡೆಸಲು ಪ್ರಯತ್ನಿಸುತ್ತಿರುವುದಾಗಿಯೂ ಹೇಳಿಕೊಂಡಿತ್ತು.

ತರುವಾಯ ಅಮೆಝಾನ್ ತನ್ನ ಕಮಿಷನ್ ದರವನ್ನು 20 ಶೇ.ಕಡಿತಗೊಳಿಸಿದ್ದು ಇದು ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಗೆ ಒದಗಿಸಲು ಸಹಾಯ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News