ಇಂದು ಝಾಕಿರ್ ನಾಯ್ಕ್, ನಾಳೆ ನಾನು

Update: 2016-07-09 06:41 GMT

"ನಿಮ್ಮ ಸರದಿಗಾಗಿ ಕಾಯುತ್ತಾ  ಮೂರ್ಖರಾಗಬೇಡಿ"

"ಅವರು ಮೊದಲು ಯಹೂದಿಗಳನ್ನು ಹುಡುಕುತ್ತಾ ಬಂದರು. ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕ್ರೈಸ್ತರನ್ನು ಹುಡುಕಿಕೊಂಡು ಬಂದರು. ಆವಾಗಲೂ ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಕ್ರೈಸ್ತನಾಗಿರಲಿಲ್ಲ.

ಬಳಿಕ ಅವರು ಕಮ್ಯೂನಿಸ್ಟರನ್ನು ಹುಡುಕುತ್ತಾ ಬಂದರು. ಆವಾಗಲೂ ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಕಮ್ಯುನಿಸ್ಟ್ ಅಲ್ಲ.

ಕೊನೆಗೆ ಅವರು ನನ್ನನ್ನೇ ಹುಡುಕುತ್ತಾ ಬಂದರು. ಅಂದು ನನ್ನ ಪರವಾಗಿ ನಿಲ್ಲಲು ಯಾರೂ ಇರಲಿಲ್ಲ"

ಐಎಸ್ ಐಎಸ್ ಉಗ್ರಗಾಮಿಗಳೊಂದಿಗೆ ಡಾ. ಝಾಕಿರ್ ನಾಯ್ಕ್ ರವರ ಸಂಪರ್ಕ ಕಲ್ಪಿಸಲು ಅಕ್ಷರ ಭಯೋತ್ಪಾದಕರು ವಿಫಲ ಯತ್ನ ನಡೆಸುತ್ತಿರುವುದನ್ನು ನೋಡಿ ಖುಷಿಪಡುತ್ತಿರುವ ಕೆಲವು ವಿಘ್ನ ಸಂತೋಷಿಗಳನ್ನು ಕಂಡು ಪಾಸ್ಟರ್ ನಿಯೊಮೊಲ್ಲರ್ ಶತಮಾನಗಳ ಹಿಂದೆ ಹೇಳಿರುವ ಮೇಲಿನ ಮಾತುಗಳು ಯಾಕೋ ನೆನಪಾಯಿತು!

ಈ ಹಿಂದೆಯೂ ಇಂತಹ ಅನುಭವಗಳು ಆಗಿರುವುದಿದೆ. ನಿಮಗೆ ನೆನಪಿರಬಹುದು, ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರನ್ನು ಪತ್ರಿಕೆಯೊಂದು ಕೆಟ್ಟ ಪದಗಳನ್ನು ಬಳಸಿ, ಏಕವಚನದಲ್ಲಿ ಪ್ರಕಟಿಸಿದ ವರದಿ. ಅಂದೂ ಕೆಲವು ಮಂದಿ ಖುಷಿಪಟ್ಟಿದ್ದರು."ಮುಸ್ಲಿಮ್ ಲೇಖಕರ ಸಂಘ"ವು ಪತ್ರಿಕೆಯ ಸಂಪಾದಕರನ್ನು ಭೇಟಿ ಮಾಡಿ ತಪ್ಪೊಪ್ಪಿಗೆ ಪ್ರಕಟಿಸಲು ಒತ್ತಾಯಿಸಿತ್ತು. ಮರುದಿನ ಪತ್ರಿಕೆಯು ಎ.ಪಿ.ಉಸ್ತಾದ್ ರವರ ಪ್ರತಿಕ್ರಿಯೆ ಮತ್ತು ವರದಿಗೆ ವಿಷಾದ ವ್ಯಕ್ತಪಡಿಸಿತ್ತು.

ಅಂದು ನನಗೆ ಫೋನಾಯಿಸಿದ, ಸಂದೇಶ ಕಳುಹಿಸಿದ ಕೆಲವು ಮಿತ್ರರು "ನೀನೀಗ ಎ.ಪಿ.ಯಾ?" ಎಂಬುದಾಗಿ ಕೆಣಕಿದ್ದರು. "ಇಲ್ಲ, ಇಂದು ಎ.ಪಿ., ನಾಳೆ ನಾನು" ಎಂದು ಮಾತ್ರ ಅವರಿಗೆ ಉತ್ತರಿಸಿದ್ದೆ.

ಒಂದು ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದರೆ ಆ ಸಮುದಾಯ ಜೀವಂತವಾಗಿದೆ ಎಂದರ್ಥ.  ಎ.ಪಿ.ಉಸ್ತಾದರ ಬಗ್ಗೆ ನನಗೂ ಭಿನ್ನಾಭಿಪ್ರಾಯಗಳಿವೆ. ಆದರೆ, ಆ ಭಿನ್ನಾಭಿಪ್ರಾಯಗಳು ಅವರನ್ನ ಯಾರೋ ಅವಮಾನಿಸಿದಾಗ ಮೌನವಾಗಿರುವುದಕ್ಕೆ/ಖುಷಿಪಡುವುದಕ್ಕೆ ನಮ್ಮನ್ನ ಪ್ರೇರೇಪಿಸಬಾರದು ಎಂಬುದು ನನ್ನ ನಿಲುವು.

"ಇಸ್ಲಾಮ್ ವಿರೋಧಿಗಳ ಪೂರ್ವ ನಿಯೋಜಿತ ಜಾಗತಿಕ ಸಂಚಿನ ಭಾಗವಾಗಿ ಇಂದು ಝಾಕಿರ್ ನಾಯ್ಕರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ದಯವಿಟ್ಟು ಪ್ರತಿಭಟಿಸಿ" ಎಂಬುದಾಗಿ ಮಿತ್ರರನೇಕರಿಗೆ ನಾನು ಕಳುಹಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕೆಲವು ಮಿತ್ರರು "ನೀನು ಸಲಫಿಯಾ?" ಎಂದು  ಮತ್ತೆ ಕೆಣಕಿದ್ದಾರೆ. "ಇಲ್ಲ, ಇಂದು ಝಾಕಿರ್ ನಾಯ್ಕ್, ನಾಳೆ ನಾನು" ಎಂದು ಮಾತ್ರ ಅವರಿಗೆ ಉತ್ತರಿಸಿದ್ದೇನೆ.

ಝಾಕಿರ್ ನಾಯ್ಕರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯಗಳಿವೆ. ಯಾಕೋ ಅವರು ನನಗಿನ್ನೂ ಇಷ್ಟವಾಗಲೇ ಇಲ್ಲ. ಅವರ ಮಾತಾಂತರ ಕಾರ್ಯಕ್ರಮಗಳು ಅಪ್ಪಟ ಡ್ರಾಮಾದಂತೆ/ಇಸ್ಲಾಮಿನ ವರ್ಚಸ್ಸಿಗೆ ಹಾನಿ ಮಾಡುವಂತೆ ನನಗನಿಸುವುದಿದೆ. ಆದರೂ, ಇಂದು ನಾನು ಅವರ ಪರ!

ನನ್ನ ಮಿತ್ರರಿಗೆ ಹೇಳಬೇಕಾಗಿರುವುದು ಇಷ್ಟೇ. ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಒಂದಾಗಿರೋಣ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಜಗಳಾಡುತ್ತಾ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಇನ್ನಷ್ಟು ಬಲಿಷ್ಠರಾಗೋಣ.

ಉಮರ್ ಯು. ಹೆಚ್.
ಅಧ್ಯಕ್ಷರು, ಮುಸ್ಲಿಂ ಲೇಖಕರ ಸಂಘ, ಮಂಗಳೂರು

Writer - ಉಮರ್ ಯು. ಎಚ್.

contributor

Editor - ಉಮರ್ ಯು. ಎಚ್.

contributor

Similar News