ಹಾವೇರಿ ಗೃಹಿಣಿಗೆ ಎಚ್‌ಐವಿ ಎಂದು ಕಾಡಿದ ಖಾಸಗಿ ಲ್ಯಾಬ್ ಎಡವಟ್ಟು

Update: 2016-07-15 03:21 GMT

ಹುಬ್ಬಳ್ಳಿ, ಜು.15: ಮಾಮೂಲಿ ರಕ್ತಪರೀಕ್ಷೆಗೆ ಆಗಮಿಸಿದ ಸುಮಾರು 25ರ ಆಸುಪಾಸಿನ ಮಹಿಳೆಯೊಬ್ಬರಿಗೆ ಎಚ್‌ಐವಿ ಪಾಸಿಟಿವ್ ಇದೆ ಎಂದು ಹಾವೇರಿಯ ಖಾಸಗಿ ರಕ್ತ ತಪಾಸಣಾ ಕೇಂದ್ರವೊಂದು ವರದಿ ನೀಡಿದ್ದರಿಂದ ಮಹಿಳೆ ಆಘಾತಗೊಂಡ ಘಟನೆ ನಡೆದಿದೆ.

ಮೂರು ದಿನಗಳ ಕಾಲ ಅಧೀರಳಾಗಿ ಖಿನ್ನತೆ ಎದುರಿಸುತ್ತಿದ್ದ ಕುಲ್ಸುಂಬಿ ಆತ್ಮಹತ್ಯೆ ಬಗ್ಗೆಯೂ ಯೋಚಿಸಿದ್ದರು. ಐದು ಎಳೆಯ ಮಕ್ಕಳು ಹಾಗೂ ಪತಿಯ ಭವಿಷ್ಯವನ್ನು ನೆನೆದು ಚಿಂತಾಕ್ರಾಂತಳಾಗಿದ್ದರು. ಪತಿ ಹೆಂಚಿನ ಕಾರ್ಖಾನೆಯೊಂದರಲ್ಲಿ ಅಲ್ಪವೇತನಕ್ಕೆ ದುಡಿಯುತ್ತಿದ್ದರು.

ಮೂರು ದಿನಗಳ ಬಳಿಕ ಮತ್ತೊಂದು ಪರೀಕ್ಷೆ ಮಾಡಿಸಿದ ಬಳಿಕ ಸೈಯದ್ ಇಕ್ಬಾಲ್ ಅಹ್ಮದ್ ಜಮಾದಾರ ಅವರ ಕುಟುಂಬ ನಿರಾಳವಾಯಿತು. ಈ ತಪಾಸಣೆಯಲ್ಲಿ ಆಕೆಗೆ ಎಚ್‌ಐವಿ ಸೋಂಕು ಇಲ್ಲದಿರುವುದು ದೃಢಪಟ್ಟಿತು.

ಕೈಯಲ್ಲಿ ಒಂದು ಗಡ್ಡೆ ಬೆಳೆದ ಹಿನ್ನೆಲೆಯಲ್ಲಿ ಸರಕಾರಿ ವೈದ್ಯರು ರಕ್ತ ತಪಾಸಣೆಗೆ ಸೂಚಿಸಿದ್ದರು. ವಿಟಮಿನ್ ಕೊರತೆ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ತಪಾಸಣೆಗೆ ಸೂಚಿಸಿದ್ದರು. ದಂಪತಿ ತಪಾಸಣೆಗೆ ಹಾವೇರಿಗೆ ತೆರಳಿದರು. ಪ್ರಯೋಗಾಲಯದ ಎಡವಟ್ಟಿನಿಂದ ದಿಗ್ಭ್ರಮೆಗೊಂಡ ದಂಪತಿ ಮತ್ತೊಂದು ರಕ್ತ ತಪಾಸಣಾ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿದ ಬಳಿಕ ನಿರಾಳವಾದರು.

ಮತ್ತೊಂದು ತಪಾಸಣೆ ಮಾಡಿಸೋಣ ಎಂದು ಪತ್ನಿಯ ಮನವೊಲಿಸಲು ಕಷ್ಟವಾಯಿತು. ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು. ಎಚ್‌ಐವಿ ಕಳಂಕದೊಂದಿಗೆ ಬದುಕಲಾರೆ ಎಂದು ಹೇಳುತ್ತಿದ್ದ ಆಕೆಯನ್ನು ಸಮಾಧಾನಿಸಲು ಕಷ್ಟವಾಯಿತು ಎಂದು ಸೈಯದ್ ವಿವರಿಸಿದರು.

ಕುಟುಂಬದ ಸ್ನೇಹಿತರಾಗಿದ್ದ ಖಾದರ್ ಅವರ ಸಲಹೆ ಪಡೆಯಲು ಮುಂದಾದಾಗ ಅವರು ಮತ್ತೊಮ್ಮೆ ತಪಾಸಣೆ ಮಾಡುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News