ನಿರಪರಾಧಿಗೆ ಶಿಕ್ಷೆ ಆಗಲು ಬಿಡುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-07-15 13:46 GMT

 ಬೆಂಗಳೂರು, ಜು. 15: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪಾತ್ರವೇನು ಇಲ್ಲ. ಆದರೂ, ವಿಪಕ್ಷಗಳು ಪೂರ್ವಗ್ರಹ ಪೀಡಿತರಾಗಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.

ಶುಕ್ರವಾರ ಇಲ್ಲಿನ ಹೆಣ್ಣೂರು ಕೆರೆ ಅಂಗಳದಲ್ಲಿನ ಕೋಟಿ ವೃಕ್ಷ ಆಂದೋಲನ ಮತ್ತು ವನಮಹೋತ್ಸವ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಚಿವ ಜಾರ್ಜ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು. ಯಾವುದೇ ಕಾರಣಕ್ಕೂ ನಿರಪರಾಧಿ ಜಾರ್ಜ್ ಅವರಿಗೆ ಶಿಕ್ಷೆಯಾಗಲು ಬಿಡುವುದಿಲ್ಲ ಎಂದು ಘೋಷಿಸಿದರು.

ಶೇ.99ರಷ್ಟು ಮಂದಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಓರ್ವ ನಿರಾಪರಾಧಿಗೆ ಶಿಕ್ಷೆ ಆಗಬಾರದೆಂಬುದು ನಮ್ಮ ನ್ಯಾಯಾಂಗದ ಕಾನೂನು. ಶಾಸನ ರಚನೆ ಜವಾಬ್ದಾರಿ ಹೊತ್ತ ವಿಪಕ್ಷ ಶಾಸಕರಿಗೆ ಈ ವಿಷಯದ ಅರಿವಿಲ್ಲ ಎಂಬುದು ನಿಜಕ್ಕೂ ವಿಷಾದನೀಯ ಎಂದರು.

ಸಚಿವ ಜಾರ್ಜ್ ಯಾವುದೇ ತಪ್ಪು ಮಾಡಿಲ್ಲ. ಅವರು ನಿರಪರಾಧಿ. ವಿಪಕ್ಷಗಳ ಆರೋಪ ನಿರಾಧಾರ. ವಿಪಕ್ಷಗಳ ವಾದವನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪು ಮಾಡಿದವರು ನೀರು ಕುಡಿಯಲೇಬೇಕು. ನಾವು ಯಾರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಸಚಿವರು, ಜನಸಾಮಾನ್ಯರೂ ಯಾರೇ ಇರಲಿ. ಎಲ್ಲರೂ ಕಾನೂನು ದೃಷ್ಟಿಯಲ್ಲಿ ಒಂದೇ ಎಂದು ಹೇಳಿದರು.

ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ ಅಮಾಯಕನಿಗೆ ಶಿಕ್ಷೆಯಾಗಲು ಬಿಡಬೇಕೇ? ಎಂದು ಪ್ರಶ್ನಿಸಿದ ಅವರು, ಅಮಾಯಕರಿಗೆ ರಕ್ಷಣೆ ರಾಜ್ಯ ಸರಕಾರದ ಜವಾಬ್ದಾರಿ ಅಲ್ಲವೇ ಎಂದು ಸಮರ್ಥಿಸಿಕೊಂಡರು.

ಸಚಿವ ಜಾರ್ಜ್ ಅವರ ರಾಜೀನಾಮೆಯನ್ನು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿವೆ. ನೀವೆಲ್ಲರೂ ಜಾರ್ಜ್ ರಾಜೀನಾಮೆ ನೀಡಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭಿಕರನ್ನು ಪ್ರಶ್ನಿಸಿದರು. ಜನರಿಂದ ಇಲ್ಲ ಎಂಬ ಉತ್ತರ ಏರಿದ ಧ್ವನಿಯಲ್ಲಿ ಬಂತು. ಹಾಗಾದರೆ ರಾಜ್ಯ ಸರಕಾರದ ನಿಲುವು ಸರಿಯಾಗಿದೆ ಅಲ್ಲವೇ ಎಂದು ತಿಳಿಸಿದರು.

ಬಸವಲಿಂಗಪ್ಪ ಹೆಸರು: ನೂತನವಾಗಿ ಉದ್ಘಾಟನೆಯಾದ ಉದ್ಯಾನವನಕ್ಕೆ ಮಾಜಿ ಸಚಿವ ಬಸವಲಿಂಗಪ್ಪ ಸಸ್ಯೋದ್ಯಾನವನ ಎಂದು ನಾಮಕರಣ ಮಾಡಲು ಉದ್ದೇಶಿಸಲಾಗಿದೆ. ಈ ಹಿಂದೆ ಅರಣ್ಯ ಸಚಿವರಾಗಿದ್ದ ಬಸವಲಿಂಗಪ್ಪ ಈ ಪ್ರದೇಶವನ್ನು ರಕ್ಷಣೆ ಮಾಡಿದ್ದರು. ಅದಕ್ಕಾಗಿ ಅವರ ಹೆಸರನ್ನೇ ಉದ್ಯಾನವನಕ್ಕೆ ಇಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News