ಗುಜರಾತ್ ನಲ್ಲಿ ದಲಿತರಿಗೆ ಸಿಕ್ಕಿದ ನ್ಯಾಯ ಇದು

Update: 2016-07-23 08:14 GMT

ಅಹ್ಮದಾಬಾದ್, ಜು.23: ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ದಲಿತ ಯುವಕರ ಮೇಲೆ ಸವರ್ಣೀಯರು ನಡೆಸಿದ ಅಮಾನುಷ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ನಡುವೆ ಇಂಡಿಯಾ ಸ್ಪೆಂಡ್ ನಡೆಸಿದ ಅಧ್ಯಯನವೊಂದು ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಮೇಲೆ ನಡೆದ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲ್ಪಟ್ಟ ಪ್ರಕರಣಗಳು ರಾಷ್ಟ್ರೀಯ ಸರಾಸರಿಗಿಂತ ಆರು ಬಾರಿಯಷ್ಟು ಕಡಿಮೆಯಿದೆಯೆಂದು ತಿಳಿದು ಬಂದಿದೆ.

2014ರಲ್ಲಿ ದೊರೆತ ಅಂಕಿ ಅಂಶಗಳ ಪ್ರಕಾರ ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಕೇವಲ 3.4 ಶೇ. ಪ್ರಕರಣಗಳಲ್ಲಿ ಆರೋಪ ಸಾಬೀತುಗೊಂಡು ಶಿಕ್ಷೆಯಾಗಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ 28.8 ಶೇ. ಆಗಿದೆ. ಅಂದರೆ ಪ್ರತಿ ಎಂಟು ಪ್ರಕರಣಗಳಲ್ಲಿ ಒಂದರಲ್ಲಿ ಆರೋಪಿಗಳ ಅಪರಾಧ ಸಾಬೀತಾಗಿ ಅವರಿಗೆ ಶಿಕ್ಷೆಯಾಗಿದೆ.

ಗುಜರಾತ್ ನಲ್ಲಿ 2014 ರಲ್ಲಿ ಅಂತ್ಯಗೊಂಡ ಒಂದು ದಶಕದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ 5 ಶೇ. ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ 4.3 ಶೇ. ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕ್ರಮವಾಗಿ 29.2 ಶೇ. ಹಾಗೂ 25.6 ಶೇ. ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ, ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಅಂಕಿಸಂಖ್ಯೆಗಳು ತಿಳಿಸುತ್ತವೆ.

ಗುಜರಾತ್ ವಿಷಯ ಹೇಳುವುದಾದರೆ ಪ್ರತಿ 100 ಪ್ರಕರಣಗಳಲ್ಲಿ 5 ಪ್ರಕರಣಗಳಲ್ಲಿ ಆರೋಪಿಗಳಿಗೆ ಖುಲಾಸೆಯಾಗುತ್ತದೆ. ಕಳೆದ 10 ವರ್ಷಗಳ ಅವಧಿಯಲ್ಲಿ  ಗುಜರಾತಿನಲ್ಲಿ 2011ರಲಿ ್ಲಪರಿಶಿಷ್ಟರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಅತಿ ಕಡಿಮೆ ಅಂದರೆ 2.1 ಶೇ. ಶಿಕ್ಷೆಯ ಪ್ರಮಾಣ ದಾಖಲಾಗಿದ್ದರೆ, 2005ರಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳಲ್ಲಿ 1.1 ಶೇ. ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.

ಹೀಗೆ ಒಂದು ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಬಹುಸಂಖ್ಯಾತ ಮಂದಿ ದೋಷಮುಕ್ತಗೊಂಡರೆ, ಅಪರಾಧಿಗಳು ಒಳ್ಳೆಯ ವಕೀಲರ ಮುಖಾಂತರ ಖುಲಾಸೆಗೊಳ್ಳಬಹುದೆಂದು ಅಂದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಕಮಲೇಶ್ ಕುಮಾರ್ ಮಿಶ್ರಾ ಹೇಳುತ್ತಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಕೂಡ ಪರಿಶಿಷ್ಟರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಕೇವಲ 5 ಶೇ. ಪ್ರಕರಣಗಳಲ್ಲಿ ಶಿಕ್ಷೆಯಾಗಿದೆಯಾದರೆ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News