ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಧರಣಿ

Update: 2016-07-25 18:49 GMT

ಬೆಂಗಳೂರು, ಜು.25: ಗುಜರಾತ್‌ನ ಊನಾ ಹಾಗೂ ಚಿಕ್ಕಮಗಳೂರಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದ ಪುರಭವನ ಮುಂಭಾಗ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಧರಣಿ ನಡೆಸಿದರು.

ದೇಶದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್‌ಸ್ಮಾರಕವನ್ನು ಕೆಡವಿ ಹಾಕಲಾಯಿತು. ಮತ್ತೊಂದು ಕಡೆ ಸಂಘ ಪರಿವಾರದ ಹಿಂಬಾಲಕರು ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದಲಿತರ ಮೇಲೆ ಗುಜರಾತ್‌ನಲ್ಲಿ ಮಾತ್ರವಲ್ಲದೆ, ಇತ್ತೀಚಿಗೆ ಹರ್ಯಾಣ, ಕರ್ನಾಟಕದ ಕರಾವಳಿಯಲ್ಲಿಯೂ ಹಲ್ಲೆಗಳು ನಡೆದಿವೆ. ಗೋ ಪ್ರೇಮದ ಹೆಸರಿನಲ್ಲಿ ಉತ್ತರ ಪ್ರದೇಶದ ದಾದ್ರಿ ಯಲ್ಲಿ ಅಖ್ಲಾಕ್ ಎಂಬವರನ್ನು ಕೊಲೆ ಮಾಡಿದ್ದರೂ ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸುವ ಬದಲಿಗೆ ಕೊಲೆಯಾದ ವ್ಯಕ್ತಿಯ ಕುಟುಂಬದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ದಲಿತ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದರೂ ಸರಕಾರಗಳು ವೌನ ವಹಿಸಿವೆ. ಮತ್ತೊಂದು ಕಡೆ ಬಲವಂತವಾಗಿ ಧಾರ್ಮಿಕ ಭಾವನೆಗಳ ಮೇಲೆ ದಾಳಿ ಮಾಡಿ ಜಾತ್ಯತೀತ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಮುಂದಾಗುತ್ತಿದ್ದಾರೆ. ಅದಕ್ಕಾಗಿ ದಲಿತ, ಅಲ್ಪಸಂಖ್ಯಾತ, ಹಿಂದು ಳಿದವರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ದೂರಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಅಬ್ದುಲ್ ಮಜೀದ್ ಮಾತನಾಡಿ, ಗುಜರಾತ್ ಹಾಗೂ ಚಿಕ್ಕಮಗಳೂರಿನಲ್ಲಿ ದಲಿತರ ಮೇಲೆ ಸಂಘಪರಿವಾರದ ಹಿಂಬಾಲಕರು ಗೋ ರಕ್ಷಣೆ ಹೆಸರಿನಲ್ಲಿ ನಡೆಸಿದ ಹಲ್ಲೆ ಭಾರತ ಜಗತ್ತಿನ ಮುಂದೆ ತಲೆತಗ್ಗಿಸುವಂತಾಗಿದ್ದು, ಇವೆರಡೂ ಸಂವಿಧಾನ ವಿರೋಧಿ ಘಟನೆಗಳು ಎಂದರು.

ದೇಶದ ದಲಿತ ಮಹಿಳಾ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಯನ್ನು ಬಿಜೆಪಿ ಮುಖಂಡ ವೇಶ್ಯೆಗೆ ಹೋಲಿಸಿರು ವುದು ದೇಶದ ಮಹಿಳೆಯರಿಗೆ ಮಾಡಿರುವ ಅವಮಾನ ಎಂದ ಅವರು, ದೇಶದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸರಿಯಾದ ಕಾನೂನು ರಕ್ಷಣೆ ಸಿಗುತ್ತಿಲ್ಲ. ಆಡಳಿತ ನಡೆಸುತ್ತಿರುವ ಸರಕಾರಗಳು ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆದುದರಿಂದ ದಲಿತರ ಮೇಲೆ ದೌರ್ಜನ್ಯ ಮಾಡಿದ ಪ್ರಕರಣ ಗಳನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಾಯಾವತಿಯನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ದಯಾಶಂಕರ್‌ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಪಾಶಾ, ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಕಾರ್ಯದರ್ಶಿ ಅಬ್ದುಲ್ ಲತೀಫ್, ಅಫ್ಸರ್, ಕೇಂದ್ರ ಸಮಿತಿ ಸದಸ್ಯ ಮಾರಸಂದ್ರ ಮುನಿಯಪ್ಪ ಹಾಗೂ ಇನ್ನಿತರರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News