ಮುಖ್ಯಮಂತ್ರಿ ಆಪ್ತ ಕೆ.ಮರೀಗೌಡ ಪತ್ತೆಗೆ ಪೊಲೀಸ್ ತಂಡ ರಚನೆ

Update: 2016-07-25 18:54 GMT

ಬೆಂಗಳೂರು, ಜು.25: ಮೈಸೂರು ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆಪ್ತ ಮರೀಗೌಡ ಅವರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಸರಕಾರಿ ಅಭಿಯೋಜಕ ಚೇತನ್ ದೇಸಾಯಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸಿಎಂ ಆಪ್ತ ಮರೀಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ. ಸರಕಾರಿ ಅಭಿಯೋಜಕರಿಗೆ ಆರೋಪಿಯನ್ನು ಹುಡುಕುತ್ತಿದ್ದೀರಾ ಎಂದು ಪ್ರಶ್ನಿಸಿತು. ಈ ಪ್ರಶ್ನೆಗೆ ಉತ್ತರಿಸಿದ ವಕೀಲರು ಆರೋಪಿ ಯ ಪತ್ತೆಗೆ ಪೊಲೀಸರು ಕೇರಳ, ಆಂಧ್ರಪ್ರದೇಶ, ತಮಿಳು ನಾಡಿಗೆ ತೆರಳಿದ್ದಾರೆ ಎಂದು ಹೇಳಿದರು.

   ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಿ.ಎಚ್. ಜಾಧವ್, ನಮ್ಮ ಕಕ್ಷಿದಾರ ಮರೀಗೌಡ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗನಾಗಿದ್ದರಿಂದ ಅವರ ವಿರುದ್ಧ 2007ರಲ್ಲಿ ಹಲವು ಕೇಸುಗಳು ದಾಖಲಾಗಿದ್ದವು. ಆದರೆ, ನಂತರ ಸರಕಾರವೇ ಅವರ ವಿರುದ್ಧ ದಾಖಲಾಗಿದ್ದ ಕೇಸು ಗಳನ್ನು ವಾಪಸ್ ಪಡೆದಿತ್ತು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

  ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು 2007ರಲ್ಲಿ ಮರಿಗೌಡ ವಿರುದ್ಧ ದಾಖಲಾಗಿದ್ದ ಕೇಸುಗಳನ್ನು ಹಿಂಪಡೆದಿರುವ ಬಗ್ಗೆ ದಾಖಲೆ ಸಲ್ಲಿಸಬೇಕೆಂದು ಸೂಚನೆ ನೀಡಿ, ಅರ್ಜಿ ವಿಚಾರಣೆಯನ್ನು ಜು.28ಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ:  ಕೆ.ಮರೀಗೌಡ ಅವರು ತಮಗೆ ಧಮ್ಕಿ ಹಾಗೂ ಬೆದರಿಕೆ ಹಾಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಮೈಸೂರಿನ ಜಿಲ್ಲಾಧಿಕಾರಿ ಶಿಖಾ ಅವರು ನಜರಬಾದ್ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದರು.

ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರಿಂದ ಬಂಧನ ಭೀತಿಯಿಂದ ಮರೀಗೌಡ ನಿರೀಕ್ಷಣಾ ಜಾಮೀನು ಕೋರಿ ಮೈಸೂರು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಜುಲೈ 12ರಂದು ಅಧೀನ ನ್ಯಾಯಾಲಯ ನೀರಿಕ್ಷಣಾ ಜಾಮೀನು ನಿರಾಕರಿಸಿತ್ತು. ಇದರಿಂದ ಮರಿಗೌಡ ಹೈಕೋರ್ಟ್ ಮೊರೆ ಹೋಗಿದ್ದು, ತಾವು ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಒಡ್ಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿಲ್ಲ. ಇದೊಂದು ರಾಜಕೀಯ ಪ್ರೇರಿತವಾದ ದೂರಾಗಿದೆ. ಅಲ್ಲದೆ, ತಮ್ಮ ಮೇಲಿರುವುದು ಗಂಭೀರ ಅಥವಾ ಬಂಧಿಸಿ ತನಿಖೆ ನಡೆಸುವಂತಹ ಆರೋಪಗಳಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿಯಲ್ಲಿ ಮರೀಗೌಡ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News