ಕನ್ನಡಿಗನಿಗೆ ಮ್ಯಾಗ್ಸೇಸೆ: ಸಂಭ್ರಮದ ಜೊತೆಗೆ ವಿಷಾದ

Update: 2016-07-28 18:18 GMT

 ಮ್ಯಾಗ್ಸೇಸೆ ಪ್ರಶಸ್ತಿಯ ಕುರಿತಂತೆ ಹತ್ತು ಹಲವು ವಿವಾದಗಳಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೊಂದು ಪ್ರತಿಷ್ಠೆಯ ಪ್ರಶಸ್ತಿಯಾಗಿ ಪರಿಗಣನೆಯಾಗುತ್ತದೆ. ಈ ಪ್ರಶಸ್ತಿ ಪಡೆದವರಲ್ಲಿ ಹಲವು ಸಾಮಾಜಿಕ ಹೋರಾಟಗಾರರು, ಚಿಂತಕರು ಸೇರಿರುವುದರಿಂದ ಮತ್ತು ಅವರೆಲ್ಲ ದೇಶ ವಿದೇಶಗಳಲ್ಲಿ ಭಾರೀ ಗೌರವವನ್ನು ಪಡೆದುಕೊಳ್ಳುತ್ತಿರುವುದರಿಂದ ಕರ್ನಾಟಕದ ವ್ಯಕ್ತಿಗೂ ಈ ಪ್ರಶಸ್ತಿ ಬಂದಿದೆಯೆನ್ನುವುದು ಹೆಮ್ಮೆಯ ವಿಷಯವೇ ಸರಿ. ಕರ್ನಾಟಕದ ಕೋಲಾರ ಮೂಲದ ಸಫಾಯಿ ಕರ್ಮಚಾರಿಗಳ ಪರ ಹೋರಾಟಗಾರ ಬೆಜವಾಡ ವಿಲ್ಸನ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಆದರೆ ಈ ಪ್ರಶಸ್ತಿ ಸಂದುದಕ್ಕಾಗಿ ನಾವು ಪೂರ್ಣವಾಗಿ ಸಂಭ್ರಮಿಸುವಂತಹ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಈ ಪ್ರಶಸ್ತಿಯ ಹಿಂದೆ ಖೇದಕರ ಸಂಗತಿಯೊಂದು ತಳಕು ಹಾಕಿಕೊಂಡಿದೆ.

ಕನ್ನಡಿಗರಾದ ವಿಲ್ಸನ್ ಅವರು ಮಲಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಒಂದೆಡೆ ರಾಜ್ಯದಲ್ಲಿ ಮಲಹೊರುವ ಪದ್ಧತಿ ಸಂಪೂರ್ಣ ನಿವಾರಣೆಯಾಗಿದೆ ಎಂದು ಸರಕಾರ ಘೋಷಿಸುತ್ತಿರುವಾಗ ‘ಇಲ್ಲ, ಈ ರಾಜ್ಯದಲ್ಲಿ ಅದು ಜೀವಂತವಾಗಿದೆ ಎನ್ನುವುದನ್ನು ಸರಕಾರಕ್ಕೆ, ಸಮಾಜಕ್ಕೆ ತೋರಿಸಿಕೊಟ್ಟವರು ಮತ್ತು ಅದರ ವಿರುದ್ಧ ಸಮರ ಸಾರಿದವರು ವಿಲ್ಸನ್. ಈ ಕಾರಣಕ್ಕಾಗಿ ಇವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ದೊರಕಿದ್ದೇನೋ ಸಂಭ್ರಮದ ವಿಷಯ, ಆದರೆ ಈ ರಾಜ್ಯದಲ್ಲಿ ಮಲಹೊರುವ ಪದ್ಧತಿ ಜೀವಂತವಿದೆ ಎನ್ನುವುದು ಮಾತ್ರ ವಿಷಾದನೀಯ ಸಂಗತಿಯಾಗಿದೆ. ನಾಗರಿಕರೆಂದು ಕರೆಸಿಕೊಂಡಿರುವ ನಮಗೆ ಈ ಕುರಿತಂತೆ ಯಾವುದೇ ನಾಚಿಕೆಯಿಲ್ಲ. ಹಲವರು ಈ ಮಲಹೊರುವ ಪದ್ಧತಿಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಸಮರ್ಥಿಸುತ್ತಿರುವುದರಿಂದಲೇ ಈ ಪದ್ಧತಿ ಅಸ್ತಿತ್ವದಲ್ಲಿ ಉಳಿದುಕೊಂಡು ಬಂದಿದೆ. ಇದರ ವಿರುದ್ಧ ಹೋರಾಟ ನಡೆಸಿದ ಕನ್ನಡಿಗ ವಿಲ್ಸನ್ ಅತ್ಯುನ್ನತ ಪ್ರಶಸ್ತಿಗಳಿಗೆ ಖಂಡಿತ ಅರ್ಹ. ಆದರೆ ಈ ಪದ್ಧತಿ ಮಾತ್ರ ದೇಶದ ಪ್ರತಿಷ್ಠೆಯನ್ನು ವಿಶ್ವದ ಮುಂದೆ ತಗ್ಗಿಸುವಂತೆ ಮಾಡಿದೆ.

ಒಂದು ರೀತಿಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಈ ಕೆಟ್ಟ ಆಚರಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿದೆ ಎನ್ನಬಹುದು. ವಿಷಾದನೀಯ ಸಂಗತಿಯೆಂದರೆ, ಒಂದು ಕಾಲದಲ್ಲಿ ಕೋಲಾರ ಚಿನ್ನದ ಗಣಿಗೆ ಸುದ್ದಿಯಾಗಿದ್ದರೆ ಇಂದು ಮಲಹೊರುವವರಿಗಾಗಿ ಕುಖ್ಯಾತಿಯನ್ನು ಪಡೆದಿದೆ. ಜಿಲ್ಲಾಡಳಿತ, ಅಂತಹ ಪದ್ಧತಿಯೇ ಇಲ್ಲ ಎಂದು ಘೋಷಣೆ ಮಾಡುತ್ತಲೇ ಬಂದಿದೆಯಾದರೂ ಮಲದ ಗುಂಡಿಯನ್ನು ಕೈಯಿಂದ ಸ್ವಚ್ಛ ಮಾಡುವ ಘಟನೆ ಪದೇ ಪದೇ ವರದಿಯಾಗುತ್ತಲೇ ಇವೆ. ಅಷ್ಟೇ ಅಲ್ಲ, ಮಲದಗುಂಡಿಯನ್ನು ಸ್ವಚ್ಛಗೊಳಿಸಲು ಹೋಗಿ ಹುತಾತ್ಮರಾದ ಘಟನೆಗಳೂ ವರದಿಯಾಗುತ್ತಿವೆ. ಚಿನ್ನದ ಗಣಿಯನ್ನು ಆಶ್ರಯಿಸಿದ ಬಹಳಷ್ಟು ದಲಿತರು ಇಂದು ಬೇರೆ ಗತಿಯಿಲ್ಲದೆ ಈ ಕೆಲಸಕ್ಕೆ ಇಳಿಯುತ್ತಿದ್ದಾರೆ. ಕಳೆದ ವರ್ಷದ ಒಂದು ಅಧ್ಯಯನದ ಪ್ರಕಾರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ 15 ಸಾವಿರಕ್ಕೂ ಅಧಿಕ ಮಲಹೊರುವ ಕಾರ್ಮಿಕರಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ಸರಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಹೆಚ್ಚೆಂದರೆ 300 ಮಂದಿ ಮಲಹೊರುವ ಬದುಕನ್ನು ಆಯ್ದುಕೊಂಡಿದ್ದಾರೆ. ಎಲ್ಲಿಯವರೆಗೆ, ಇಂತಹದೊಂದು ನೀಚ ಪದ್ಧತಿ ಇದೆಯೆನ್ನುವುದನ್ನು ಸರಕಾರ ಪ್ರಾಮಾಣಿಕವಾಗಿ ಒಪ್ಪುವುದಿಲ್ಲವೋ ಅಲ್ಲಿಯವರೆಗೆ ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಕೆಲವು ಸುಶಿಕ್ಷಿತ ಅಧಿಕಾರಿಗಳಿಗೇ ಈ ಪದ್ಧತಿ ಸಂಪೂರ್ಣ ನಿರ್ಮೂಲನೆಯಾಗುವುದು ಬೇಕಾಗಿಲ್ಲ.

ಯಾಕೆಂದರೆ ಅಗತ್ಯಬಿದ್ದರೆ ಅವರೇ ಈ ಕಾರ್ಮಿಕರನ್ನು ಬಳಸಲು ಹಿಂಜರಿಯುವುದಿಲ್ಲ. ಯಾವಾಗ ಕಾರ್ಮಿಕರು ಈ ಗುಂಡಿಯಲ್ಲಿ ಉಸಿರುಗಟ್ಟಿ ಸಾಯುತ್ತಾರೆಯೋ ಆಗಷ್ಟೇ ಇವರು ಸುದ್ದಿಯಾಗುತ್ತಾರೆ. ಇಲ್ಲದಿದ್ದರೆ ತೆರೆಮರೆಯಲ್ಲಿ ನಡೆಯುತ್ತಿರುವ ಈ ಕಾರ್ಯ ಯಾರ ಗಮನಕ್ಕೂ ಬರುವುದಿಲ್ಲ. ಭಾರತ ದೇಶ ಸ್ವಚ್ಛತಾ ಆಂದೋಲನಕ್ಕೆ ಇಳಿದಿದೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಅದಕ್ಕಾಗಿಯೇ ವಿಶೇಷ ತೆರಿಗೆಯನ್ನು ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಆದರೆ ಇಂದಿಗೂ ಈ ದೇಶದಲ್ಲಿ ಬಯಲು ಶೌಚಾಲಯಕ್ಕೆ ಕೊನೆ ಬಿದ್ದಿಲ್ಲ. ಮಾತ್ರವಲ್ಲ, ಇಂದಿಗೂ 5 ಲಕ್ಷಕ್ಕೂ ಅಧಿಕ ಒಣ ತೆರೆದ ಶೌಚಾಲಯಗಳು ದೇಶಾದ್ಯಂತ ಅಸ್ತಿತ್ವದಲ್ಲಿವೆ. ಇದನ್ನು ಸಂಪೂರ್ಣ ಅಳಿಸುವುದಕ್ಕೆ ಸರಕಾರಕ್ಕೆ ಕಷ್ಟವಾಗುತ್ತಿದೆ. ಕೆಲವು ರಾಜ್ಯಗಳಲ್ಲಂತೂ ಮಲವನ್ನು ಶುಚೀಕರಿಸುವುದು ದಲಿತರ ಹೊಣೆಗಾರಿಕೆ ಎಂಬ ಮನಸ್ಥಿತಿ ಇದೆ. ಅವರನ್ನು ಆ ಕೆಲಸಕ್ಕೇ ಸೀಮಿತಗೊಳಿಸಲೋಸುಗ ಆಧುನಿಕ ಶೌಚಾಲಯಗಳ ಕಡೆಗೆ ಆ ರಾಜ್ಯಗಳು ಗಮನ ಹರಿಸುತ್ತಿಲ್ಲ. ಈ ದೇಶದಲ್ಲಿರುವ ಒಟ್ಟು ಮಲಹೊರುವವರಲ್ಲಿ ಶೇ.80ರಷ್ಟು ಬರೇ ಉತ್ತರ ಪ್ರದೇಶದಲ್ಲೇ ಇದ್ದಾರೆ. ಮಾಯಾವತಿಯ ಕಾಲದಲ್ಲಾದರೂ ಉತ್ತರ ಪ್ರದೇಶದಲ್ಲಿ ಈ ಪದ್ಧತಿ ಸಂಪೂರ್ಣ ಅಳಿದು ಹೋಗಬೇಕಾಗಿತ್ತು. ಆದರೆ ಅವರ ಪ್ರಯತ್ನವೂ ಫಲಿಸಲಿಲ್ಲ.

ಇಂದು ಉತ್ತರ ಪ್ರದೇಶದಲ್ಲೇ ಸುಮಾರು 10 ಲಕ್ಷದಷ್ಟು ಕರ್ಮಚಾರಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ಯಾಕೆ ಅತೀ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎನ್ನುವುದನ್ನೂ ಈ ಹಿನ್ನೆಲೆಯಲ್ಲೇ ನಾವು ವಿಶ್ಲೇಷಿಸಬಹುದಾಗಿದೆ. ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿವಾರಿಸಲು ಭಾರತ ಯಾಕೆ ವಿಫಲವಾಗಿದೆಯೆಂದರೆ, ಈ ಪದ್ಧತಿ ಜಾತಿಯೊಂದಿಗೆ ನೇರ ಸಂಬಂಧವನ್ನು ತಳಕು ಹಾಕಿಕೊಂಡಿರುವುದು. ಈ ದೇಶದಲ್ಲಿ ಎಲ್ಲಿಯವರೆಗೆ ದಲಿತರು ಸಂಪೂರ್ಣ ಸಾಕ್ಷರರಾಗಿ, ಘನತೆಯ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಪದ್ಧತಿಯೂ ಅವರಿಗಾಗಿ ಸದಾ ಮೀಸಲಾಗಿರುತ್ತದೆ. ಇಂದು ದಲಿತರು ಹೊರತು ಪಡಿಸಿದಂತೆ ಈ ಕೆಲಸವನ್ನು ಯಾರೂ ನಿರ್ವಹಿಸಲು ಮುಂದಾಗುವುದಿಲ್ಲ. ದಲಿತರಾದರೂ ಈ ಕೆಲಸವನ್ನು ಯಾಕೆ ನಿರ್ವಹಿಸುತ್ತಾರೆ? ನಮ್ಮ ಮಲವನ್ನು ನಾವೇ ಮುಟ್ಟಲು ಅಸಹ್ಯ ಪಡುತ್ತೇವೆ. ಹೀಗಿರುವಾಗ, ಇನ್ನೊಬ್ಬರ ಮಲ ಬಳಿಯುವ ಕೆಲಸವನ್ನು ದಲಿತರು ತಮ್ಮ ಬದುಕಿಗಾಗಿ ನಿರ್ವಹಿಸುತ್ತಾರೆ ಎಂದರೆ ಸಾಮಾಜಿಕವಾಗಿ ಅವರ ಬದುಕು ಎಷ್ಟು ನಿಕೃಷ್ಟವಾಗಿದೆ ಎನ್ನುವುದನ್ನು ನಾವು ಗ್ರಹಿಸಬೇಕಾಗಿದೆ. ಅಂದರೆ ಕೇವಲ ಶೌಚಾಲಯಗಳನ್ನು ಹೆಚ್ಚಿಸುವುದರಿಂದ ಈ ಪದ್ಧತಿ ನಿವಾರಣೆಯಾಗುವುದಿಲ್ಲ. 

ದಲಿತರ ಸಾಮಾಜಿಕ, ಆರ್ಥಿಕ ಬದುಕನ್ನು ಮೇಲೆತ್ತಿದಾಕ್ಷಣ ಈ ಪದ್ಧತಿ ಸಮಾಜದಿಂದ ಅಳಿದು ಹೋಗುತ್ತದೆ. ಯಾಕೆಂದರೆ ಅದೆಷ್ಟೇ ದುಡ್ಡು ಕೊಡುತ್ತೇವೆ ಎಂದರೂ ಮೇಲ್ಜಾತಿಯ ಜನರು ಈ ಕೆಲಸವನ್ನು ನಿರ್ವಹಿಸಲು ಒಪ್ಪುವುದಿಲ್ಲ. ಈ ಕೆಲಸಕ್ಕೆ ಜನರೇ ಇಲ್ಲ ಎಂದಾಕ್ಷಣ, ಜನರು ಒಣ ಬಯಲು ಶೌಚಾಲಯವನ್ನು ಕೊನೆಗೊಳಿಸಿ, ಆಧುನಿಕ ಶೌಚಾಲಯಗಳ ಕಡೆಗೆ ಹೊರಳುತ್ತಾರೆ. ಆದುದರಿಂದ, ಮಲಹೊರುವ ಪದ್ಧತಿಯನ್ನು ಜಾತಿ ಪದ್ಧತಿಯ ಇನ್ನೊಂದು ವಿಕಾರ ರೂಪ ಎಂದು ಅರ್ಥ ಮಾಡಿಕೊಂಡು ಅದರ ವಿರುದ್ಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News