×
Ad

ಉತ್ತಮ ಸಂವಹನಕ್ಕೆ ಇಲ್ಲಿವೆ ಹತ್ತು ಅತ್ಯುತ್ತಮ ಸಲಹೆಗಳು

Update: 2016-07-30 11:00 IST

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಕೇಳಿದ್ದೀರಲ್ಲ? ಆದರೆ ತಂತ್ರಜ್ಞಾನ ಅಭಿವೃದ್ಧಿ, ಚಾಟಿಂಗ್ ಆಪ್‌ಗಳ ಸರಣಿಯಂಥ ಅಂಶಗಳು ಸಹಜವಾಗಿಯೇ ನಮ್ಮ ಸಂವಹನ ಸಾಮರ್ಥ್ಯವನ್ನು ಕುಂದಿಸುತ್ತವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಮಾತಿಗಿಂತ ಟೆಕ್ಸ್ಟ್ ಮೆಸೇಜ್ ಅಥವಾ ಬ್ಲಾಗ್‌ಗಳಲ್ಲೇ ತಮ್ಮನ್ನು ಉತ್ತಮವಾಗಿ ಬಣ್ಣಿಸಿಕೊಳ್ಳುವ ಯುಗ ಇದು. ಬಹುಶಃ ನಾವು ಮಾತನಾಡುವುದು ಇನ್ನೊಬ್ಬರಿಗೆ ಉತ್ತರ ನೀಡಲು ಮಾತ್ರ! ಇಷ್ಟೇ ಅಲ್ಲ ಕೇಳಿಸಿಕೊಳ್ಳುವುದು ಕೂಡಾ ಹೊರೆ ಎಂಬ ಪರಿಸ್ಥಿತಿ. ಸಂವಹನವನ್ನು ಸಂಕ್ಷಿಪ್ತವಾಗಿ ಮುಗಿಸಲು ಬಯಸುವವರೇ ಅಧಿಕ. ನಮ್ಮ ಮಾತಿನ ಕಲೆ ನಿಧಾನವಾಗಿ ನಶಿಸಿಹೋಗುತ್ತಿದೆ. ಹಾಗಾದರೆ ಉತ್ತಮ ಸಂವಹನಕ್ಕೆ ಏನು ಮಾಡಬೇಕು? ಇಲ್ಲಿವೆ ನೋಡಿ, ಹತ್ತು ಉಪಯುಕ್ತ ಸಲಹೆಗಳು.

ಪ್ರಸ್ತುತವಾಗಿರಿ:

ಅನಗತ್ಯ ಅಂಶಗಳು ಬೇಡ. ನಿಮ್ಮ ಮಾತುಗಾರಿಕೆಯಲ್ಲಿ ನೀವು ಪ್ರಸ್ತುತವಾಗಿದ್ದಷ್ಟೂ, ನಿಮ್ಮ ಮಾತು ಕೇಳಲು ಸಹ್ಯವಾಗಿರುತ್ತದೆ. ನಿಮ್ಮ ಮಾತು ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವಂತಿರಲಿ. ಆ ಕ್ಷಣಕ್ಕೆ ಯಾವುದು ಪ್ರಸ್ತುತವೋ ಅಷ್ಟೇ ಇರಲಿ.

ಕೇಳಲು ಕಲಿಯಿರಿ:

ನಿಮಗೆ ಮಾತ್ರ ಎಲ್ಲ ತಿಳಿದಿದೆ ಎಂಬ ಮನೋಭಾವ ಬೇಡ. ಬೇರೆಯವರು ಹೇಳುವುದನ್ನು ಕೂಡಾ ಗಮನವಿಟ್ಟು ಕೇಳುವ ವ್ಯವಧಾನ ಇರಲಿ.

ಮುಕ್ತ ಪ್ರಶ್ನೆಗಳಿರಲಿ:

ಸಂವಾದ ಮುಂದುವರಿಸಲು ಪ್ರಶ್ನೋತ್ತರ ಸರಣಿ ಉತ್ತಮ ಮಾರ್ಗ. ಉದಾಹರಣೆಗೆ ನಿಮಗೆ ಸಿಟ್ಟು ಬಂತೇ ಎಂದು ಕೇಳಬೇಡಿ. ಬದಲಾಗಿ ತಕ್ಷಣಕ್ಕೆ ನಿಮಗೆ ಹೇಗನಿಸುತ್ತದೆ? ಎಂಬಂಥ ಪ್ರಶ್ನೆ ಕೇಳಿ. ಆಗ ಹೌದು ಅಥವಾ ಇಲ್ಲ ಎನ್ನುವುದಕ್ಕಿಂತ ಬದಲಾಗಿ ವಿವರಣಾತ್ಮಕ ಉತ್ತರ ಬರುತ್ತದೆ. ಆಗ ನೀವು ಎದುರು ವ್ಯಕ್ತಿಯ ಜತೆ ಉತ್ತಮ ಸಂಪರ್ಕ ಸಾಧಿಸಬಹುದು.

ಓಘ ಸರಾಗವಾಗಿರಲಿ:

ನಿಮ್ಮ ಮನಸ್ಸಿನಲ್ಲಿ ಸಂದೇಹ ಮೂಡಿದರೆ, ಕೇಳುವುದನ್ನು ನಿಲ್ಲಿಸಿ ಸುಮ್ಮನಾಗಬೇಡಿ. ಮಾತಿನ ಓಘ ಮುಂದುವರಿಯಲಿ. ಪ್ರಶ್ನೆ ಮತ್ತೆ ನಿಮಗೆ ಹಿಂದೆ ಬರುತ್ತದೆ.

ಎಲ್ಲವೂ ಗೊತ್ತಿದೆ ಎಂಬ ಭಾವನೆ ಬೇಡ:

ಹಲವು ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಾರದು. ಅದನ್ನು ಒಪ್ಪಿಕೊಂಡರೆ ತೊಂದರೆಯೇನೂ ಇಲ್ಲ. ಗೊತ್ತಿಲ್ಲ ಎಂದರೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಹೇಳಿ.

ಅನುಭವ ಹೋಲಿಕೆ ಬೇಡ:

ನಿಮಗೆ ಆಗಿರುವ ಕೆಟ್ಟ ಅನುಭವವೊಂದರ ಬಗ್ಗೆ ಹೇಳಿದರೆ, ನೀವು ಕೂಡಾ ನಿಮ್ಮ ಅದೇ ಬೇಸರದ ಕಥೆ ಹೇಳುವುದು ಬೇಡ. ಅದು ಆತನಿಗೆ ಅನಗತ್ಯ. ಪುನರಾವರ್ತನೆಯಂತೂ ಬೇಡವೇ ಬೇಡ.

ಸಣ್ಣ ಪುಟ್ಟ ವಿಷಯ ಬಿಟ್ಟುಬಿಡಿ:

ನೇರವಾಗಿ ವಿಷಯಕ್ಕೆ ಬನ್ನಿ. ತೀರಾ ಚಿಕ್ಕಪುಟ್ಟ ಘಟನೆಗಳನ್ನೂ ವಿವರಿಸುವ ಸಾಹಸ ಬೇಡ.

ಕೇಳಿ:

ಇದು ತೀರಾ ಮುಖ್ಯ. ಕಲಿಯಲು ಕೇಳಿ. ಪ್ರತಿಕ್ರಿಯಿಸುವ ಸಲುವಾಗಿ ಅಲ್ಲ.

ಸಂಕ್ಷಿಪ್ತವಾಗಿರಲಿ:

ಎಲ್ಲಕ್ಕಿಂತ ಪ್ರಮುಖ ಎಂದರೆ ನಿಮ್ಮ ಮಾತು ಚುಟುಕಾಗಿರಲಿ. ಮತ್ತೊಬ್ಬರಿಗೆ ಬೋರ್ ಹೊಡೆಸುವಂತೆ ಬೇಡ. ಮಿನಿಸ್ಕರ್ಟ್‌ನಂತೆ ಏನು ಬಿಚ್ಚಿಡಬೇಕೋ ಅದನ್ನು ಬಿಚ್ಚಿಡಬೇಕು; ಏನು ಮುಚ್ಚಿಡಬೇಕೋ ಅದನ್ನು ಮುಚ್ಚಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News