ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ಪರಿಪಕ್ವ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೀದರ್: 2006-07ನೇ ಸಾಲಿನಲ್ಲಿ ಈಗಾಗಲೇ ಭಾಗ್ಯಲಕ್ಷ್ಮೀ ಬಾಂಡ್ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳಿಗೆ ಈ ಯೋಜನೆಯ ಪರಿಪಕ್ವ ಮೊತ್ತದ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಇದರಿಂದಾಗಿ ಜಿಲ್ಲೆಯ ಆಯಾ ತಾಲ್ಲೂಕಿನ ಅರ್ಹ ಫಲಾನುಭವಿಗಳು ಕೂಡಲೇ ತಮ್ಮ ಅಂಗನವಾಡಿ ಕೇಂದ್ರ, ವಲಯದ ಮೇಲ್ವಿಚಾರಕಿಯರಿಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ಈ ಯೋಜನೆ ಅಡಿಯಲ್ಲಿ ಪರಿಪಕ್ವ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪರಿಪಕ್ವ ಮೊತ್ತಕ್ಕೆ ಭಾಗ್ಯಲಕ್ಷ್ಮೀ ಬಾಂಡ್, ಫಲಾನುಭವಿಯ ಜನನ ಪ್ರಮಾಣ ಪತ್ರ, ಪಡೀತರ ಚೀಟಿ, ಶಾಲಾ ದಾಖಲಾತಿ, ಬ್ಯಾಂಕ್ ಪಾಸ್ ಬುಕ್ ಹಾಗೂ ಇತರೇ ದಾಖಲಾತಿಗಳು ಸಲ್ಲಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಡಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಯೋಜನೆಯಡಿ ಜೂ.1, 2006 ರಿಂದ ಜು.31, 2008ರ ಅವಧಿಯಲ್ಲಿ (Project-1) ಜನಿಸಿ ನೋಂದಣಿಯಾಗಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10,000 ರೂ. ಠೇವಣಿ ಮೊತ್ತವನ್ನು ಪಾಲುದಾರ ಹಣಕಾಸು ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದಲ್ಲಿ ಹೂಡಲಾಗಿದ್ದು, ಈ ಯೋಜನೆಯ ಮಾರ್ಗಸೂಚಿ ಅನ್ವಯ ಆ ದಿನಾಂಕದ ನಂತರ ಜನಿಸಿ, ಯೋಜನೆಯಡಿ ನೋಂದಣಿಯಾಗಿ, 18 ವರ್ಷ ಪೂರ್ಣಗೊಂಡಿರುವ ಬಿಪಿಎಲ್ ಕುಟುಂಬದ ಮೊದಲ 2 ಹೆಣ್ಣು ಮಕ್ಕಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈಗಾಗಲೇ ಬೀದರ್ ಜಿಲ್ಲೆಯ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಈ ಯೋಜನೆಯ ಕಾರ್ಯ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.