ಜೀತದಿಂದ ದಲಿತ ಗ್ರಾಮಪಂಚಾಯತ್ ಅಧ್ಯಕ್ಷೆಗೆ ಮುಕ್ತಿ

Update: 2016-07-30 02:59 GMT

ಮಡಿಕೇರಿ, ಜು.30: ದಲಿತರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಪಂಚಾಯತ್ ಸದಸ್ಯೆಯೊಬ್ಬರು ಆಯ್ಕೆಯಾಗಿ ಒಂದು ವರ್ಷವಾದರೂ ಇನ್ನೂ ತಮ್ಮ ಉದ್ಯೋಗದಾತರ ಬಳಿ ಜೀತ ಮುಂದುವರಿಸಿರುವ ಕರಾಳ ಅಧ್ಯಾಯ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕವಷ್ಟೇ, ಜೀತದ ಸಂಕೋಲೆ ಮುರಿದುಕೊಂಡು, ಜೀತಮುಕ್ತಿ ಪಡೆದಿದ್ದಾರೆ.

ಎರವರ ಸಮುದಾಯಕ್ಕೆ ಸೇರಿದ ಎಸ್.ಈಶ್ವರಿ. ಅವರ ಪತಿ ಸಂತೋಷ್ ಹಾಗೂ ಇಬ್ಬರು ಮಕ್ಕಳು, ಕಾಂಗ್ರೆಸ್ ಮುಖಂಡ ಕೆ.ಎಸ್.ಗೋಪಾಲಕೃಷ್ಣ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೆಲಸಕ್ಕಿದ್ದ ಅಂಶ ಇದೀಗ ಬಹಿರಂಗವಾಗಿದೆ. ಗೋಪಾಲಕೃಷ್ಣ ಅವರು ವಿರಾಜಪೇಟೆ ತಾಲೂಕಿನ ಕನ್ನಾಂಗಾಲ ಎಂಬಲ್ಲಿ ಎಸ್ಟೇಟ್ ಕೂಡಾ ಹೊಂದಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಮಹಿಳೆ ಇದೀಗ, ಗೋಪಾಲಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆದರಿಕೆ ಹಾಕಿರುವುದು ಹಾಗೂ ಪರಿಶಿಷ್ಟ ಜಾತಿ/ ಪಂಗಡ ಸಮುದಾಯವನ್ನು ಅಮಾನಿಸಿರುವ ಬಗ್ಗೆ ದೂರು ನೀಡಲಾಗಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ ಹಾಗೂ, ಎಸ್ಸಿ/ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈಶ್ವರಿ ಕುಟುಂಬ 125 ರೂಪಾಯಿ ದಿನ ಸಂಬಳಕ್ಕೆ ಗೋಪಾಲಕೃಷ್ಣ ಅವರಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತು. ಮಕ್ಕಳು ಶಾಲೆಗೆ ಹೋಗಲು ಕೂಡಾ ಅವಕಾಶ ನೀಡದೇ, ಎಸ್ಟೇಟ್‌ನ ಒಂದು ಪುಟ್ಟ ಗುಡಿಸಲಿನಲ್ಲೇ ಉಳಿಸಿಕೊಂಡಿದ್ದರು ಎಂದು ಆಪಾದಿಸಲಾಗಿದೆ. ಇಂಥ ವಾತಾವರಣದಲ್ಲೂ ಈಶ್ವರಿ 2015ರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಗೋಪಾಲಕೃಷ್ಣ ಕೂಡಾ ಪಂಚಾಯತ್ ಸದಸ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News