ಕನ್ನಡ ಮತ್ತು ಸರಕಾರಿ ಶಾಲೆಗಳು

Update: 2016-07-30 18:08 GMT

ಕನ್ನಡ ಶಿಕ್ಷಣ ಮಾಧ್ಯಮ ಮತ್ತು ಸರಕಾರಿ ಕನ್ನಡ ಶಾಲೆಗಳು ಈಗ ನಿತ್ಯ ಸುದ್ದಿಯಲ್ಲಿವೆ. ಶಿಕ್ಷಣ ಮಾಧ್ಯಮ ಪೋಷಕರ ಆಯ್ಕೆ, ಅದರಲ್ಲಿ ಸರಕಾರ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ದಿನದಿಂದಲೂ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕೆಂಬ ಬೇಡಿಕೆಯ ಸಮಾಧಿಯಾಗಿದ್ದು ಕನ್ನಡಕ್ಕೆ ಭವಿಷ್ಯ ಇಲ್ಲವೆನ್ನುವಂತಾಗಿದೆ. ಇನ್ನು ಕನ್ನಡ ಸರಕಾರಿ ಶಾಲೆಗಳನ್ನು ಮುಚ್ಚುವ ಸರಕಾರದ ನಿರ್ಧಾರ ಮತ್ತೊಂದು ಆಘಾತಕಾರಿ ಸುದ್ದಿಯಾಗಿತ್ತು. ಕನಡಿಗರ ಪುಣ್ಯ, ಸರಕಾರ ತನ್ನ ನಿರ್ಧಾರವನ್ನು ತಡೆಹಿಡಿದಿದೆ. ವಿದಾರ್ಥಿಗಳಿಲ್ಲ ಎಂಬ ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚುವ ಸರಕಾರದ ನಿರ್ಧಾರ ಸದ್ಯಕ್ಕೆ ಮುಂದೂಡಲ್ಪಟ್ಟಿದೆಯಾದರೂ ಕನ್ನಡ ಸರಕಾರಿ ಶಾಲೆಗಳು ಮುಂದೆಯೂ ಇರುತ್ತವೆ ಎನ್ನುವ ಭರವಸೆ ಏನೂ ಇಲ್ಲ. ಏಕೆಂದರೆ ಕರ್ನಾಟಕ ಸರಕಾರವೇ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಕನ್ನಡ ಮಾಧ್ಯಮದಲ್ಲಿ ಕಲಿಯುವ ಆಸೆಯುಳ್ಳವರನ್ನೂ ಇಂಗ್ಲಿಷ್ ಮಾಧ್ಯಮದ ಇಂದ್ರಧನುಷ್ಯಕ್ಕೆ ದೂಡುತ್ತಿರುವಾಗ ಕನ್ನಡಕ್ಕೆ ಭವಿಷ್ಯ ಎಲ್ಲಿದೆ?

ಹಾಗೆಂದು ಕನ್ನಡಿಗರು ಕೈಕಟ್ಟಿ ಕೂರುವಂತಿಲ್ಲ. ಕನ್ನಡವನ್ನು ಉಳಿಸಿ ಕೊಳ್ಳಲು ಶತಾಯಗತಾಯ ಹೋರಾಟ ನಡೆಸಬೇಕಾದ ಪರಿಸ್ಥಿತಿ ಈಗ ಉದ್ಭವಿಸಿದೆ. ಶಿಕ್ಷಣ ಮಾಧ್ಯಮವನ್ನು ಕಡ್ಡಾಯಮಾಡುವಂತಿಲ್ಲ ಎಂದು ನ್ಯಾಯಾಂಗ ತೀರ್ಪಿತ್ತಿದೆ. ಜನಸಾಮಾನ್ಯರಲ್ಲೂ ಇಂಗ್ಲಿಷ್ ಶಿಕ್ಷಣ ಮಾಧ್ಯಮದಿಂದಲೇ ತಮ್ಮ ಸಂತತಿಯ ಉದ್ಧಾರ ಎಂಬ ಮಿಥ್ಯಾಕಲ್ಪನೆಯೂ ಇದೆ. ಆದರೆ ಮಾತೃ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು, ಅದರಿಂದಲೇ ನವಪೀಳಿಗೆಯ ಭವಿಷ್ಯದ ಹಾದಿ ಸುಗಮ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಈ ಕೆಲವು ಪೂರ್ವ ನಿದರ್ಶನಗಳನ್ನು ನಾವು ತಳ್ಳಿಹಾಕಲಾಗದು. ಎರಡು ನಿದರ್ಶನಗಳನ್ನು ಮಾದರಿಯಾಗಿ ನಾವು ನೋಡಬಹುದು.

‘‘ನಾವು ನಮ್ಮ ತಾಯ್ನುಡಿಯ ಮೂಲಕ ಕಲಿತಿದ್ದರಿಂದಲೇ ಬುದ್ಧಿ ಚುರುಕಾಯಿತು’’ -ಇದು ವಿಶ್ವಕವಿ ರವೀಂದ್ರನಾಥ ಠಾಕೂರರು ಸ್ವತ: ಹೇಳಿರುವ ಮಾತು.

‘‘ನಾನು ಹನ್ನೆರಡನೆಯ ವಯಸ್ಸಿನ ತನಕ ಮಾತೃಭಾಷೆ ಗುಜರಾತಿ ಮೂಲಕವೇ ಜ್ಞಾನವನ್ನು ಗಳಿಸಿದೆ’’-ಎಂದು ಮಹಾತ್ಮ ಗಾಂಧಿಯವರು ಹೇಳಿದ್ದಾರೆ.

ಇನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ನಮ್ಮವರೇ ಆದ ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್.ಆರ್.ರಾವ್, ಆಧುನಿಕ ತಂತ್ರಜ್ಞಾನದ ಯಶಸ್ಸಿನ ಸಂಕೇತವಾದ ನಾರಾಯಣ ಮೂರ್ತಿ ಮೊದಲಾದವರ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಆಂಗ್ಲ ಶಿಕ್ಷಣ ಮಾಧ್ಯಮವೇ ಭವಿಷ್ಯದ ರೂವಾರಿ ಎಂಬುದು ಜನಸಾಮಾನ್ಯರ ತಲೆಯಲ್ಲಿ ತುಂಬಿರುವ ಮಿಥ್ಯಾಕಲ್ಪನೆ ಎಂಬುದಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆಗಳು ಬೇಕಿಲ್ಲ. ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸುವ ನಿಟ್ಟಿನಲ್ಲಿ ತಲೆದೋರಿರುವ ಸಂವಿಧಾನಾತ್ಮಕ ತೊಡಕುಗಳನ್ನು ನಿವಾರಿಕೊಳ್ಳುವುದರ ಜೊತೆಗೆ ಜನಮನದಲ್ಲಿರುವ ಮಿಥ್ಯಾಕಲ್ಪನೆಯನ್ನು ತೊಡೆದುಹಾಕುವ ಕೆಲಸವೂ ಅತ್ಯಗತ್ಯವಾಗಿ ಆಗಬೇಕಾಗಿದೆ. ಇದಕ್ಕೆ ಕಾನೂನಿನ್ವಯ ಒಂದು ಪರಿಹಾರ ಇಲ್ಲವೆ?

ರಾಷ್ಟ್ರವ್ಯಾಪಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂದು ಕೇಂದ್ರ ಸರಕಾರ ಶಾಸನ ಮಾಡಿದರೆ ಪರಿಹಾರ ಸಿಕ್ಕೀತು. ಹಾಗೆ ಮಾಡಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಸಂವಿಧಾನಕ್ಕೆ ತಿದ್ದುಪಡಿಮಾಡಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೋಳಿಸಬೇಕಾದ ಅಗತ್ಯವನ್ನು ಕೇಂದ್ರಕ್ಕೆ ರಾಜ್ಯ ಸರಕಾರ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನವೆಂಬರಿನಲ್ಲಿ ಉತ್ಸಾಹದ ಪ್ರತಿಕ್ರಿಯೆ ತೋರಿದ್ದುಂಟು. ಸಂವಿಧಾನ ತಿದ್ದುಪಡಿಗಾಗಿ ಎಲ್ಲ ರಾಜ್ಯಗಳೂ ಸಂಘಟಿತರಾಗಿ ಪ್ರಯತ್ನಿಸಬೇಕೆಂಬುದು ಅವರ ಅಭಿಮತವಾಗಿತ್ತು. ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸುವ ಅಗತ್ಯ ಕುರಿತು ಒಮ್ಮತದ ಅಭಿಪ್ರಾಯ ರೂಪಿಸುವ ಪ್ರಯತ್ನವಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಕುವೆಂಪು ಭಾಷಾ ಭಾರತಿ ವಿವಿಧ ರಾಜ್ಯಗಳ ಭಾಷಾ ತಜ್ಞರ ಸಮೇಳನವೊಂದನ್ನು ನಡೆಸಿತ್ತು. ಇದಕ್ಕೆ ಪೂರಕವಾಗಿ ಫೆಬ್ರವರಿಯಲ್ಲಿ ರಾಷ್ಟ್ರಾದ್ಯಂತ ‘ಮಾತೃಭಾಷಾ ದಿವಸ್’ ಆಚರಿಸಲಾಯಿತು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ಸಾಹಿತಿ ಕಲಾವಿದರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವುದೂ ಉಂಟು. ಆದರೆ ಇದಾವುದೂ ಇಲ್ಲಿಯವರೆಗೆ ಯಾವುದೇ ಫಲ ಕೊಟ್ಟಿಲ್ಲ.

ಏತನ್ಮಧ್ಯೆ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಮತ್ತು ಕನ್ನಡ ಕಲಿಕೆಗೆ ಕರ್ನಾಟಕ ಸರಕಾರದಿಂದಲೇ ಕಂಟಕ ತಲೆದೋರಿರುವುದು ಒಂದು ಆತಂಕಕಾರಿ ಬೆಳವಣಿಗೆ ಯಾಗಿದೆ.

ವಿದ್ಯಾರ್ಥಿಗಳು ಇಲ್ಲ ಎಂಬ ಕಾರಣ ಒಡ್ಡಿ ರಾಜ್ಯ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚಲು ಹೊರಟಿತ್ತು. ಆದರೆ ಸಾರ್ವಜನಿಕರು ಮತ್ತು ತಜ್ಞರ ಅಭಿಪ್ರಾಯಕ್ಕೆ ಮಣಿದು ಸರಕಾರ ಈ ತೀರ್ಮಾನವನ್ನು ಕೈಬಿಟ್ಟಿದೆ. ಆದರೂ ಕನ್ನಡ ಮಾಧ್ಯಮದಲ್ಲಿ ಕಲಿಕೆಗೆ ಕರ್ನಾಟಕ ಸರಕಾರದಿಂದ ಪ್ರೋತ್ಸಾಹ ದೊರೆಯುತ್ತಿಲ್ಲವೆಂಬ ಮಾತು ಈಗೀಗ ಕನ್ನಡಪರ ವಲಯಗಳಿಂದ ಹೆಚ್ಚಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಘಗಳ ಒಕ್ಕೂಟ ಸಂಯುಕ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ, ‘ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯತೆ ಮತ್ತು ಸವಾಲುಗಳು’ ವಿಚಾರ ಸಂಕಿರಣದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಕನ್ನಡ ಮತ್ತು ಕನ್ನಡ ಶಾಲೆಗಳ ಬಗೆಗಿನ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ‘‘ಸರಕಾರವೇ ಹಣಕೊಟ್ಟು ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪದ್ಧತಿಯೇ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ)’’ ಎಂದು ಸರಕಾರದ ಪರೋಕ್ಷ ಕನ್ನಡ ವಿರೋಧಿ ಕೆಲಸವನ್ನು ಬಯಲುಗೊಳಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ವಿಚಾರ ಸಂಕಿರಣದಲ್ಲಿ ಆಡಿರುವ ಕೆಲವು ಮಾತುಗಳು ಸರಕಾರ ಮತ್ತು ಸಮಸ್ತ ಕನ್ನಡಿಗರ ಕಣ್ಣು ತೆರೆಯಿಸಬೇಕಾಗಿದೆ. ‘‘ಆರ್‌ಟಿಇ ಕನ್ನಡ ಭಾಷೆಯನ್ನು ಹಂತಹಂತವಾಗಿ ನಿರ್ನಾಮ ಮಾಡುವಂಥ ಕಾಯ್ದೆಯಾಗಲಿದ್ದು ಈ ಅಪಾಯವನ್ನು ತಪ್ಪಿಸಲು ಏಕರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವತ್ತ ಹೆಚ್ಚಿನ ಒತ್ತಡ ಹೇರಬೇಕು’’ ಎಂಬ ರಾಮಚಂದ್ರಪ್ಪನವರ ಸಲಹೆ ಮನನೀಯವಾದುದು.

‘‘ಕನ್ನಡ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗದಿದ್ದಲ್ಲಿ ಕನ್ನಡದ ಅವಸಾನ ಖಚಿತ. ಶಾಲೆಯಲ್ಲಿ ಕಲಿಸದೇ ಮನೆಯಲ್ಲಿ ಅಮ್ಮ ಕಲಿಸಿದ ಕನ್ನಡ ಎಷ್ಟು ಕಾಲ ಉಳಿದೀತು? ಈ ಬಗ್ಗೆ ನಮ್ಮ ರಾಜಕೀಯ ನೇತಾರರು ಚಿಂತಿಸಿದಂತಿಲ್ಲ. ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ಇದು ಆಖೈರು ಸತ್ಯ. ಇದನ್ನು ನಮ್ಮ ತಂದೆತಾಯಿಯರು, ರಾಜಕಾರಣಿಗಳೂ ಸೇರಿದಂತೆ ಎಲ್ಲರೂ ಆರ್ಥ ಮಾಡಿಕೊಳ್ಳಬೇಕಾದ ಪರ್ವಕಾಲವನ್ನು ನಾವೀಗ ಎದುರಿಸುತ್ತಿದ್ದೇವೆ. ಸರಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ? ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲು ಏಕೆ ಹಿಂಜರಿಯುತ್ತಾರೆ? ಇಂಥದೊಂದು ತುರ್ತು ಪಾಲಕಪೋಷಕರಿಗೆ ಅರ್ಥವಾದಷ್ಟು ನಮ್ಮ ರಾಜಕಾರಣಿಗಳಿಗೆ ಅರ್ಥವಾದಂತಿಲ್ಲ. ಈ ಬಗ್ಗೆ ಅಧಿಕಾರ ಕೇಂದ್ರವಾದ ವಿಧಾನ ಸೌಧದದಲ್ಲಿ ಚರ್ಚೆಯೇ ಆದಂತಿಲ್ಲ’’ ಎಂಬ ಬರಗೂರರ ಮಾತಂತೂ ಕನ್ನಡ ಶಿಕ್ಷಣ ಮಾಧ್ಯಮದ ಬಗ್ಗ ಸರಕಾರಕ್ಕಿರುವ ದಿವ್ಯ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ.

ಕರ್ನಾಟಕ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸರಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಏಕೆ ಕಡಿಮೆಯಾಗುತ್ತಿದೆ? ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರಕಾರ ಪ್ರತಿ ವರ್ಷ ಆಯವ್ಯಯದಲ್ಲಿ ಶಿಕ್ಷಣಕ್ಕಾಗಿ ಎಷ್ಟು ಹಣ ನೀಡುತ್ತಿದೆ? ಅದರಲ್ಲಿ ಎಷ್ಟು ಹಣವನ್ನು ನ್ಯಾಯೋಚಿತವಾಗಿ ಶಿಕ್ಷಣದ ಅಭಿವೃದ್ಧ್ಧಿಗೆ ವೆಚ್ಚಮಾಡಲಾಗುತ್ತಿದೆ? ಇದಕ್ಕೆಲ್ಲ ಯಾರು ಉತ್ತರದಾಯಿ? ಹಳ್ಳಿಪಟ್ಟಣಗಳಲ್ಲಿ ಸರಕಾರಿ ಶಾಲೆಗಳಲ್ಲಿ ಇಂದಿಗೂ ಶೌಚ ಮೊದಲಾದ ಮೂಲಭೂತ ಸೌಕರ್ಯಗಳಿಲ್ಲ. ಅನೇಕ ಸರಕಾರಿ ಶಾಲಾಕಟ್ಟಡಗಳು ಜೀರ್ಣಾವಸ್ಥೆಯಲ್ಲಿವೆ. ಉಪಾಧ್ಯಾಯರ ಕೊರತೆಯಂತೂ ಇದ್ದೇ ಇದೆ. ಇಂಥ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಹೇಗೆ ತಾನೆ ನಿರೀಕ್ಷಿಸಲಾದೀತು? ಇದಕ್ಕೆಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳು ಹೊಣೆಗಾರರಲ್ಲವೆ?

ಸರಕಾರ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವುದಕ್ಕೆ ಹಾಗೂ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೂ ಮಿಗಿ ಲಾದ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲು ದೃಢ ಸಂಕಲ್ಪಮಾಡ ಬೇಕಾದ ಕಾಲ ಈಗ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕಟಿಬದ್ಧವಾಗಿ ನಿಲ್ಲಬೇಕು. ಇದಕ್ಕಾಗಿ ತಜ್ಞರ ಜೊತೆ ಸಮಾಲೋಚಿಸಿ ನಿರ್ದಿಷ್ಟವಾದ ಶಿಕ್ಷಣ ನೀತಿಯೊಂದನ್ನು ರೂಪಿಸಬೇಕು. ಪರಿಣಾಮಕಾರಿಯಾದ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇಲ್ಲವಾದಲ್ಲಿ ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಅನಾಥವಾಗಿರುವ ಕನ್ನಡ ರಾಜ್ಯಾದ್ಯಂತ ತಬ್ಬಲಿಯಾಗುವ ದಿನಗಳು ದೂರವಿರಲಾರವು.

ಭರತ ವಾಕ್ಯ:

ಜನ ಬಯಸುತ್ತಾರೆ, ಜನ ಕೇಳುತ್ತಿದ್ದಾರೆ ಎಂಬುದು ಇಂಗ್ಲಿಷ್ ಮಾಧ್ಯಮದ ಬಗ್ಗೆ ಪದೇಪದೇ ಕೇಳಿಬರುವ ಮಾತು. ಜನ ಕೇಳಿದ್ದನ್ನೆಲ್ಲ ಯಾರೂ ಕೊಡಲಾರರು. ಜನತೆಯ ಯೋಗಕ್ಷೇಮವನ್ನು ಯೋಗ್ಯ ಸರಕಾರ ನೋಡಿಕೊಳ್ಳಬೇಕು. ಜನರ ಆಲೋಚನೆಗಳು ದಾರಿತಪ್ಪಿದಾಗ ಅವರನ್ನು ಸರಿ ದಾರಿಗೆ ತರುವುದೂ ಸರಕಾರದ ಹೊಣೆ. ಕನ್ನಡದ ಮೂಲಕ ಶಿಕ್ಷಣಕೊಡುವುದು ಕರ್ನಾಟಕ ಸರಕಾರದ ಧೋರಣೆಯಾಗಬೇಕು.

ಕನ್ನಡಿಗರಿಗೆ ಕನ್ನಡವೇ ಗತಿ. ಅನ್ಯಥಾಶರಣಂ ನಾಸ್ತಿ. ಸಂಸ್ಕೃತವಲ್ಲ, ಇಂಗ್ಲಿಷಲ್ಲ, ಹಿಂದಿಯಲ್ಲ, ಕನ್ನಡ. ಆಚಾರ್ಯ ಬಿ.ಎಂ.ಶ್ರೀ.ಯವರ ಈ ಮಾತು ಎಲ್ಲ ಕಾಲಕ್ಕೂ ಸತ್ಯ. ಕನ್ನಡಿಗರು ಮತ್ತು ಕರ್ನಾಟಕ ಸರಕಾರ ಇದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News