×
Ad

ಹಾರ್ನ್‌ಬಿಲ್ ಹಕ್ಕಿಯ ‘ಕೌತುಕ’ ಬದುಕು!

ಮಂಗಟ್ಟೆಯ ಕುತೂಹಲಕಾರಿ ಜಗತ್ತು ಪರಿಚಯಿಸುವ ‘ಕೌತುಕ’

Update: 2025-12-08 07:41 IST

ಉಡುಪಿ: ಪಕ್ಷಿ ಪ್ರಪಂಚದಲ್ಲಿ ಹಾರ್ನ್‌ಬಿಲ್(ಮಂಗಟ್ಟೆ) ಹಕ್ಕಿಯ ಬದುಕು ಸಾಕಷ್ಟು ಕುತೂಹಲಕಾರಿಯಾಗಿದೆ. ಈ ಅಪರೂಪದ ಮಂಗಟ್ಟೆ ಹಕ್ಕಿಯ ವಿಶಿಷ್ಟ ಬದುಕನ್ನು ಆಧರಿಸಿ ಕಿರುಚಿತ್ರವನ್ನು ತಯಾರಿಸಲಾಗಿದೆ. ಕಟ್ಟುಕತೆ ಕ್ರಿಯೇಶನ್ಸ್ ಬಳಗ ಹೊರತಂದಿರುವ ‘ಕೌತುಕ’ ಕಿರುಚಿತ್ರವು ಈ ಪಕ್ಷಿಯ ಬಗ್ಗೆ ಬೆಳಕು ಚೆಲ್ಲುತ್ತದೆ.

ಕೇರಳದಲ್ಲಿ ಮಂಗಟ್ಟೆ ಹಕ್ಕಿಯನ್ನು ಕಾಪಾಡಿದ ಮತ್ತು ಕರ್ನಾಟಕದ ದಾಂಡೇಲಿಯಲ್ಲಿ ಅವುಗಳ ಬಗ್ಗೆ ಜಾಗೃತಿ ಮೂಡಿಸಿದ ನೈಜ ಘಟನೆಗಳನ್ನು ಆಧರಿಸಿ ಪ್ರಶಾಂತ್ ಸಾಗರ್ 56 ನಿಮಿಷಗಳ ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರು ಈ ಕಿರುಚಿತ್ರದ ಮೂಲಕ ಮಂಗಟ್ಟೆ ಹಕ್ಕಿಯ ವಿಶಿಷ್ಟ ಪ್ರಪಂಚವನ್ನು ಪರಿಚಯಿಸುವುದರ ಜೊತೆಗೆ ಅದರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಮಂಗಟ್ಟೆಗಳ ಕೌತುಕ ಬದುಕು :

ಕರ್ನಾಟಕದ ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ನಾಲ್ಕು ಜಾತಿಯ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತವೆ. ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, ಮಲಬಾರ್ ಗ್ರೇ ಹಾರ್ನ್‌ಬಿಲ್(ಬೂದುಮಲೆ ಮಂಗಟ್ಟೆ), ಮಲಬಾರ್ ಪೈಡ್ ಹಾರ್ನ್‌ಬಿಲ್(ಮಲೆದಾಸ ಮಂಗಟ್ಟೆ), ಇಂಡಿಯನ್ ಗ್ರೇ ಹಾರ್ನ್‌ಬಿರ್ಲ್(ಬೂದು ಮಂಗಟ್ಟೆ ಹಕ್ಕಿ/ಓಂಗೆಲೆ). ಇದರಲ್ಲಿ ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಕರ್ನಾಟಕದ ದಾಂಡೇಲಿಯಲ್ಲಿ ಮಾತ್ರ ಕಂಡುಬರುತ್ತದೆ.

ಉಡುಪಿ ಜಿಲ್ಲೆಯ ಸೋಮೇಶ್ವರ ಅಭಯಾರಣ್ಯದ ಸೀತಾನದಿ ಬಳಿ ಕಾಣಿಸಿಕೊಂಡಿರುವ ಬಗ್ಗೆಯೂ ವರದಿಯಾಗಿದೆ. ಈ ಹಕ್ಕಿ ಜೋಡಿಯಾಗಿ ಅಥವಾ ಗುಂಪಾಗಿ ಎತ್ತರದ ಮರಗಳಲ್ಲಿ ಕಂಡುಬರುತ್ತದೆ. ಹಣ್ಣುಗಳು, ಕೀಟಗಳು, ಸಣ್ಣ ಪ್ರಾಣಿಗಳು ಇದರ ಆಹಾರವಾಗಿದೆ. ಮರದ ಪೊಟರೆಯಲ್ಲಿ ಗೂಡು ಕಟ್ಟುವ ಇವು ಜನವರಿಯಿಂದ ಎಪ್ರಿಲ್‌ವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.

ಸಾಮಾನ್ಯವಾಗಿ ಹಕ್ಕಿಗಳು ಒಂದೊಂದು ಋತುಮಾನದಲ್ಲಿ ಒಂದೊಂದು ಗಂಡು ಹೆಣ್ಣುಗಳೊಡನೆ ಸೇರಿದರೆ, ಮಂಗಟ್ಟೆ ಹಕ್ಕಿ ಇತರ ಪಕ್ಷಿಗಳಿಗಿಂತ ಭಿನ್ನವಾಗಿದೆ. ಮಂಗಟ್ಟೆ ಹಕ್ಕಿಗಳು ಗಂಡು-ಹೆಣ್ಣು ಒಮ್ಮೆ ಜೊತೆಯಾದರೆ ಜೀವನಪೂರ್ತಿ ಪತಿ-ಪತ್ನಿಯರಂತೆ ಒಟ್ಟಿಗೆ ಬದುಕುತ್ತವೆ. ಹೆಣ್ಣು ಮಂಗಟ್ಟೆ ಮೊಟ್ಟೆ ಇಡುವ ಸಂದರ್ಭದಲ್ಲಿ ಮರದ ಪೊಟರೆಯೊಳಗೆ ಪ್ರವೇಶಿಸಿ ಪೊಟರೆಯ ಬಾಯನ್ನು ಕೊಕ್ಕು ಚಾಚುವಷ್ಟು ಮಾತ್ರ ಜಾಗಬಿಟ್ಟು ಉಳಿದ ಭಾಗವನ್ನು ಮಣ್ಣಿಂದ ಮುಚ್ಚಿಬಿಡುತ್ತವೆ. ಹೆಣ್ಣು ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿ ಹೊರ ಬರುವವರೆಗೆ ಮೂರು ತಿಂಗಳ ಕಾಲ ಗಂಡು ಹಕ್ಕಿಯೇ ಹಣ್ಣುಗಳನ್ನು ತಂದು ಹೆಣ್ಣು ಮತ್ತು ಮರಿಗಳಿಗೆ ಗುಟುಕು ನೀಡಿ ಸಲಹುತ್ತದೆ. ಮರಿಯಾದ ನಂತರ ಗೂಡಿನ ಬಾಯನ್ನು ಹರಿದು ಹೆಣ್ಣು ಹಕ್ಕಿ ಹೊರಬರುತ್ತದೆ. ಎಲ್ಲ ಮಂಗಟ್ಟೆಗಳ ಸಂತಾನೋತ್ಪತ್ತಿಯೂ ಇದೇ ರೀತಿಯಾಗಿರುತ್ತದೆ.

ಒಂದು ವೇಳೆ ಈ ಮೂರು ತಿಂಗಳ ಸಮಯದಲ್ಲಿ ಹೊರಗೆ ಇರುವ ಗಂಡುಹಕ್ಕಿ ಏನಾದರೂ ಸಂಭವಿಸಿ ಅಸುನೀಗಿದರೆ ಹೆಣ್ಣು ಮತ್ತು ಮರಿಗಳೂ ಕೂಡ ಹಸಿವಿನಿಂದ ಗೂಡಿನಲ್ಲೇ ಸಾಯುತ್ತವೆ. ಆದುದರಿಂದ ಆ ಮೂರು ತಿಂಗಳಲ್ಲಿ ಒಂದು ಗಂಡು ಹಕ್ಕಿಯ ಜೀವ ನಾಲ್ಕು ಮಂಗಟ್ಟೆ ಹಕ್ಕಿಯ ಜೀವಕ್ಕೆ ಸಮನಾಗಿರುತ್ತದೆ. ಅಲ್ಲದೆ ಮಂಗಟ್ಟೆ ಪಕ್ಷಿಗಳು ಹಣ್ಣುಗಳನ್ನು ತಿಂದು ಉಗುಳುವ ಬೀಜ ಮತ್ತು ಹಿಕ್ಕೆಯ ಮೂಲಕ ಕಾಡನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ನೈಜ ಘಟನೆಗಳೇ ಪ್ರೇರಣೆ :

2018ರ ಎಪ್ರಿಲ್‌ನಲ್ಲಿ ಕೇರಳದಲ್ಲಿ ಒಂದು ಗಂಡು ಮಂಗಟ್ಟೆ ಹಕ್ಕಿ ರಸ್ತೆ ಅಪಘಾತದಲ್ಲಿ ಸತ್ತು ಹೋಗುತ್ತದೆ. ಅದರ ಕೊಕ್ಕಲ್ಲಿ ಹಣ್ಣುಗಳಿರುವುದನ್ನು ಗಮನಿಸಿದ ಅಲ್ಲಿನ ಸ್ಥಳಿಯ ನೈಸರ್ಗಿಕವಾದಿ ಬೈಜು ಕೆ.ವಾಸುದೇವನ್, ಈ ಹಕ್ಕಿ ಗೂಡಿಗೆ ಹಣ್ಣು ತೆಗೆದುಕೊಂಡು ಹೋಗುತ್ತಿರುವಾಗಲೇ ಸತ್ತಿರಬೇಕೆಂದು ತಿಳಿದುಕೊಳ್ಳುತ್ತಾರೆ.

ನಂತರ ಅವರೇ ಸುತ್ತಮುತ್ತಲಿನ ಎಲ್ಲ ಮರಗಳನ್ನು ಹುಡುಕಿ ಮಂಗಟ್ಟೆಯ ಗೂಡನ್ನು ಪತ್ತೆ ಹಚ್ಚುತ್ತಾರೆ ಮತ್ತು ತಿಂಗಳುಗಳವರೆಗೆ ಗೂಡಿನೊಳಗೆ ಇದ್ದ ಹೆಣ್ಣು ಹಕ್ಕಿಗೆ ಹಣ್ಣು ನೀಡಿ ಹೆಣ್ಣು ಪಕ್ಷಿ ಮತ್ತು ಅದರ ಮರಿಯನ್ನು ಕಾಪಾಡುತ್ತಾರೆ.

ಮಂಗಟ್ಟೆ ಪಕ್ಷಿಗಳನ್ನು ಬೇಟೆಯಾಡುವುದನ್ನು ತಡೆಗಟ್ಟಲು 2006ರಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮನೋಜ್ ಕುಮಾರ್, ಅರಣ್ಯ ಇಲಾಖೆಯ ವತಿಯಿಂದ ಪ್ರತೀ ಹಳ್ಳಿಗಳಿಗೆ, ಶಾಲೆಗಳಿಗೆ ತೆರಳಿ, ಈ ಹಕ್ಕಿಯ ಕುರಿತು ಬೀದಿನಾಟಕ ಪ್ರದರ್ಶನ ಮಾಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದರ ಪರಿಣಾಮ 2010ರಲ್ಲಿ ದಾಂಡೇಲಿಯನ್ನು ‘ಮಂಗಟ್ಟೆ ಸಂರಕ್ಷಿತ ಪ್ರದೇಶ’ ಎಂದು ಘೋಷಣೆ ಮಾಡಲಾಯಿತು.

ಈ ಎರಡು ನೈಜ ಘಟನೆಗಳನ್ನು ಇಟ್ಟುಕೊಂಡು, ದಾಂಡೇಲಿ ಪ್ರದೇಶದ ಕುಣುಬಿ ಬುಡಕಟ್ಟು ಜನಾಂಗದ ಪ್ರಾಥಮಿಕ ಶಾಲೆಯ ಹುಡುಗ ಶಾಲೆಯಲ್ಲಿ ಅರಣ್ಯ ಇಲಾಖೆಯಿಂದ ಮಾಡಿಸಿದ ಬೀದಿನಾಟಕದಿಂದ ಪ್ರಭಾವಿತನಾಗಿ, ಮಂಗಟ್ಟೆ ಹಕ್ಕಿಯ ಜೀವನದ ಬಗ್ಗೆ ತಿಳಿದುಕೊಳ್ಳುತ್ತಾನೆ.

ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಗಂಡು ಹಕ್ಕಿ ಅಪಘಾತವಾಗಿ ಮೃತಪಟ್ಟಾಗ ಅದರ ಗೂಡು ಹುಡುಕಿ ಗುಟುಕು ನೀಡಿ ಹೆಣ್ಣು ಹಕ್ಕಿ ಮತ್ತು ಮರಿಯನ್ನು ಆ ವಿದ್ಯಾರ್ಥಿ ಕಾಪಾಡುತ್ತಾನೆ. ಇದು ‘ಕೌತುಕ’ ಕಿರುಚಿತ್ರದ ಕತೆ ಎಂದು ನಿರ್ದೇಶಕ ಪ್ರಶಾಂತ್ ಸಾಗರ್ ತಿಳಿಸಿದ್ದಾರೆ.


ನೂರಾರು ಶಾಲೆಗಳಲ್ಲಿ ಪ್ರದರ್ಶನ

ಎರಡು ವರ್ಷಗಳ ಪಾಜೆಕ್ಟ್ ಆಗಿರುವ ಕೌತುಕ ಕಿರುಚಿತ್ರವನ್ನು ಪಕ್ಷಿತಜ್ಞ ಸಲೀಂ ಅಲಿಯವರ ಹುಟ್ಟುಹಬ್ಬದ ದಿನವಾದ ನವೆಂಬರ್ 12ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆ ಬಳಿಕ ರಾಜ್ಯದ ವಿವಿಧ ಶಾಲೆಗಳ ಶಿಕ್ಷಕರೇ ಸ್ವಯಂಪ್ರೇರಿತರಾಗಿ ತಮ್ಮ ವಿದ್ಯಾರ್ಥಿಗಳಿಗೆ ಈ ಚಿತ್ರವವನ್ನು ತೋರಿಸುತ್ತಿದ್ದಾರೆ. ಹೀಗೆ ನೂರಾರು ಶಾಲೆಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಉಡುಪಿ ಜಿಲ್ಲೆಯ ಐದು ಶಾಲೆಗಳಲ್ಲಿ ಪ್ರದರ್ಶನ ಮಾಡಿ ಸಂವಾದ ನಡೆಸಲಾಗಿದೆ.

‘ನಾನು ಈ ಹಿಂದೆ ಮಲಬಾರ್ ಪಿಟ್ ವೈಪರ್ ಹಾವಿನ ಬಗ್ಗೆ ಡಾಕ್ಯುಮೆಂಟರಿ ತಯಾರಿಸಿದ್ದೇನೆ. ಅದೇ ರೀತಿ ನಾ ಡಿಸೋಜರ ಸಣ್ಣ ಕತೆ ಆಧಾರಿಸಿ ‘ಶರಾವತಿ’ ಎಂಬ ಕಿರುಚಿತ್ರವನ್ನು ಮಾಡಿದ್ದೇನೆ. ಇದೀಗ ಈ ಮಂಗಟ್ಟೆಯ ಹಕ್ಕಿಯ ಕುರಿತು ಕಿರುಚಿತ್ರ ತಯಾರಿಸಿದ್ದೇನೆ. ಈ ಹಕ್ಕಿಯ ಬಗ್ಗೆ ಅಧ್ಯಯನ ಮಾಡಿಯೇ ಈ ಚಿತ್ರ ನಿರ್ಮಿಸಲಾಗಿದೆ. ಹಾರ್ನ್‌ಬಿಲ್‌ನ್ನು ಅರಣ್ಯ ಇಲಾಖೆಯ ಅನುಮತಿ ಪಡೆದೇ ದಾಂಡೇಲಿ ಯಲ್ಲಿ ಶೂಟ್ ಮಾಡಲಾಗಿದೆ. ಚಿತ್ರವನ್ನು ಪೂರ್ತಿ ದಾಂಡೇಲಿ ಮತ್ತು ಜೋಯ್ಡ ತಾಲೂಕಿನಲ್ಲಿ ಚಿತ್ರೀಕರಿಸಲಾಗಿದೆ’ ಎನ್ನುತ್ತಾರೆ ಪ್ರಶಾಂತ್ ಸಾಗರ್ ಡಿ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ

contributor

Similar News