ಶಿವು ಕೈಹಿಡಿದ ಸುಭಾಷ್ ಪಾಳೇಕಾರ್‌ರ ಸಮಗ್ರ ಕೃಷಿ ಪದ್ಧತಿ
ಮಂಡ್ಯ: ಭತ್ತ, ಕಬ್ಬು, ರಾಗಿ, ಹಿಪ್ಪುನೇರಳೆಯಂತಹ ಸಾಂಪ್ರದಾಯಿಕ ಬೇಸಾಯ ಪದ್ಧತಿಗೆ ಜೋತುಬಿದ್ದಿದ್ದ ಜಿಲ್ಲೆಯ ಹಲವು ಕೃಷಿಕರು ಪರ್ಯಾಯ ಕೃಷಿಯತ್ತ ಹೊರಳಿದ್ದಾರೆ. ಕಡಿಮೆ ಹಿಡುವಳಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅನೇಕ ಯುವಕರು ಕೃಷಿಯಲ್ಲೂ ಲಾಭ ಕಂಡುಕೊಂಡು ಇತರರಿಗೆ ಮಾದರಿಯಾಗುತ್ತಿದ್ದಾರೆ. ಇಂತಹವರ ಪೈಕಿ ಮದ್ದೂರು ತಾಲೂಕು ಬನ್ನಹಳ್ಳಿ ಗ್ರಾಮದ ದಿವಂಗತ ನಂಜುಂಡೇಗೌಡ ಅವರ ಪುತ್ರ ಶಿವು ಒಬ್ಬರು. ಇವರು ಸುಭಾಷ್ ಪಾಳೇಕಾರ್ ಅವರ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಕೈಗೊಂಡು ವಾರ್ಷಿಕ ಕನಿಷ್ಠ 5 ಲಕ್ಷ ರೂ. ಸಂಪಾದಿಸುತ್ತಿದ್ದಾರೆ.
ಶಿವು ಅವರ ಪಿತ್ರಾರ್ಜಿತವಾದ 2.15 ಎಕರೆ ಖುಷ್ಕಿ ಜಮೀನಿನ ಬಹುಭಾಗವು ವಿವಿಧ ಜಾತಿ ಹಣ್ಣಿನ ಮರಗಳಿಂದ ಕಂಗೊಳಿಸುತ್ತಿದೆ. ಹಲಸು, ಮಾವು, ಬೆಣ್ಣೆ ಹಣ್ಣು, ರಾಮಫಲ, ಸೀತಾಫಲ, ಲಕ್ಷ್ಮಣಫಲ ಮತ್ತು ಹನುಮಫಲ, ಡ್ರ್ಯಾಗನ್ ಫ್ರೂಟ್, ಇತರ ಹಣ್ಣಿನ ಮರಗಳಿವೆ. ಇದಲ್ಲದೆ ಶ್ರೀಗಂಧದ ಮರ 40, ಟೀಕ್ 35, ಹೊನ್ನೆ ಮರ 2, ಬೀಟೆ ಮರ 2, ರಕ್ತ ಚಂದನ 2, 40 ತೆಂಗಿನ ಮರಗಳನ್ನು ಬೆಳೆಸಿ ತೋಟಗಾರಿಕೆ ಬೆಳೆ ಜತೆಗೆ ಅರಣ್ಯ ಕೃಷಿಯನ್ನೂ ಅಳವಡಿಸಿಕೊಂಡಿದ್ದಾರೆ. ಈ ಮರಗಳಿಗೆ ಕಾಳು ಮೆಣಸು ಗಿಡ ಹಬ್ಬಿಸಿದ್ದಾರೆ. ಭೂಮಿಯ ಸ್ವಲ್ಪ ಭಾಗದಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದಾರೆ. ಮರಗಡ್ಡಿ ಪದ್ಧತಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಹಿಪ್ಪುನೇರಳೆ ಕಡ್ಡಿ ನಡುವಿನ ಜಾಗದಲ್ಲಿ ಬಿತ್ತಿರುವ ಉದ್ದು, ಹೆಸರು, ಸಾಸಿವೆ, ಕಡಲೆ ಮುಂತಾದ ದ್ವಿದಳ ಧಾನ್ಯ ಬೆಳೆಗಳೂ ಲಾಭ ತಂದುಕೊಡುತ್ತಿವೆ.
ಶಿವು ಸಾಂಪ್ರದಾಯಿಕ ಕೃಷಿಯನ್ನೂ ಮುಂದುವರಿಸಿದ್ದಾರೆ. ಜಮೀನನ್ನು ವಿಭಾಗ ಮಾಡಿಕೊಂಡು ಪಟದ ಕಬ್ಬು, ರಾಗಿ, ಸಿರಿಧಾನ್ಯ, ಭತ್ತ ಬೆಳೆದುಕೊಳ್ಳುತ್ತಾರೆ. ಗೆಣಸು, ಬಳ್ಳಿ ಆಲೂಗೆಡ್ಡೆ, ಟೊಮೆಟೊ, ಬದನೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಮತ್ತು ಸೊಪ್ಪು ಬೆಳೆಯುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಹಸುಗಳನ್ನೂ ಸಾಕಿರುವುದರಿಂದ ರಾಸುಗಳಿಗೆ ಸೀಮೆ ಹುಲ್ಲು, ಜೋಳ ಬೆಳೆದುಕೊಳ್ಳುತ್ತಾರೆ. ಸುಮಾರು 100 ನಾಟಿಕೋಳಿಗಳನ್ನು ಸಾಕುತ್ತಿದ್ದು, ದಿನಕ್ಕೆ 50ರಿಂದ 60 ಮೊಟ್ಟೆಗಳು ಬರುತ್ತಿದೆ. ನಾಟಿ ಕೋಳಿಗೆ ಬೇಡಿಕೆ ಇರುವುದರಿಂದ ಕೆ.ಜಿ.ಗೆ ಕನಿಷ್ಠ 500 ರೂ.ಗೆ ಮಾರಾಟ ಮಾಡುತ್ತಾರೆ. ಒಂದು ನಾಟಿಕೋಳಿಯ ಮೊಟ್ಟೆಗೆ 15 ರೂ. ಬೆಲೆ ಇದೆ.
ಶಿವು ತಾವು ಬೆಳೆದ ಹಣ್ಣು, ತರಕಾರಿ, ಸೊಪ್ಪು ಮತ್ತು ನಾಟಿಹಸುವಿನ ಬೆಣ್ಣೆ, ತುಪ್ಪವನ್ನು ಪ್ರತಿ ರವಿವಾರ ಮಂಡ್ಯದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುವ ರೈತ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇವರ ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆಯಂತೆ. ಮಳೆ ಆಧಾರಿತ ಪ್ರದೇಶವಾದ್ದರಿಂದ ಎರಡು ಕೊಳವೆಬಾವಿ ಕೊರೆಸಿದ್ದಾರೆ. ಸಾಕಷ್ಟು ನೀರು ಬರುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದಾಗಿ ನೀರಿನ ಕೊರತೆ ಇಲ್ಲವಂತೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳು, ತಾಂತ್ರಿಕ ನೆರವನ್ನು ಶಿವು ಅವರಿಗೆ ಒದಗಿಸುತ್ತಿದ್ದಾರೆ. ಜಪಾನ್ ದೇಶದವರೂ ಸೇರಿದಂತೆ ಹಲವು ಕೃಷಿ ವಿಜ್ಞಾನಿಗಳು ಶಿವು ಕೃಷಿ ತಾಟಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಸಂಘಸಂಸ್ಥೆಗಳ ಸನ್ಮಾನಕ್ಕೆ ಶಿವು ಭಾಜನರಾಗಿದ್ದಾರೆ. ಇವರ ಕೃಷಿಯಿಂದ ಪ್ರೇರಿತರಾಗಿ ಅಕ್ಕಪಕ್ಕದ ಗ್ರಾಮಗಳ ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ.
ಬಳಿರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಕುರಿತ ಕಾರ್ಯಾಗಾರದಿಂದ ಸಮಗ್ರ, ನೈಸರ್ಗಿಕ ಕೃಷಿ ಮಾಡ ಬೇಕೆಂಬ ನಿರ್ಧಾರ ಮಾಡಿದೆ. ಶ್ರಮ ಸಾರ್ಥಕವಾಗಿದೆ. ನನ್ನ ಈ ಶ್ರಮದಲ್ಲಿ ತಾಯಿ ಗಂಗಮ್ಮ, ಪತ್ನಿ ಮಂಜುಳಾ ಹೆಗಲು ಕೊಟ್ಟಿದ್ದಾರೆ. ಶಾಲೆಗೆ ರಜೆ ವೇಳೆ ಮಕ್ಕಳಾದ ಚೈತ್ರಾ, ಪ್ರೇಮ್ ಕೂಡಾ ನೆರವಾಗುತ್ತಾ ಬೇಸಾಯ ಕ್ರಮವನ್ನೂ ಅರಿಯುತ್ತಿದ್ದಾರೆ. ತೋಟದಲ್ಲೇ ಸಿಗುವ ತ್ಯಾಜ್ಯವೇ ಗೊಬ್ಬರವಾಗುತ್ತದೆ. ಸೆಗಣಿ, ಮೂತ್ರದಿಂದ ಜೀವಾಮೃತ ತಯಾರಿಸಿ ಬೆಳೆಗೆ ನೀಡುತ್ತೇನೆ. ಯಾವುದೇ ರಾಸಾಯನಿಕ ಬಳಕೆ ಇಲ್ಲದ ಕಾರಣ ನಾನು ಬೆಳೆದ ಬೆಳೆಗಳಿಗೆ ಉತ್ತಮ ಬೇಡಿಕೆ ಇದೆ.
-ಶಿವು, ಪ್ರಗತಿಪರ ರೈತ