ಶೋಕಸಾಗರದ ನಡುವೆ ರಾಕೇಶ್ ಅಂತ್ಯಕ್ರಿಯೆ

Update: 2016-08-01 18:39 GMT

ಮೈಸೂರು, ಆ.1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೇಷ್ಠಪುತ್ರ, ಬೆಲ್ಜಿಯಂ ಪ್ರವಾಸದಲ್ಲಿದ್ದಾಗ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆ ಕುರುಬ ಸಮುದಾಯದ ಹಾಲುಮತ ಸಂಪ್ರದಾಯದಂತೆ ಇಲ್ಲಿನ ಟಿ.ಕಾಟೂರು ತೋಟದಲ್ಲಿ ಸಹಸ್ರಾರು ಅಭಿಮಾನಿಗಳ ಕಂಬನಿಗಳ ನಡುವೆ ನೆರವೇರಿತು.

ಇದಕ್ಕು ಮುನ್ನ ರಾಕೇಶ್ ಅವರ ಪಾರ್ಥಿವ ಶರೀರವನ್ನು ಬೆಲ್ಜಿಯಂನಿಂದ ವಿಶೇಷ ವಿಮಾನದಲ್ಲಿ ಇಂದು ಬೆಳಗ್ಗೆ 9:15ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಮತ್ತೊಂದು ವಿಶೇಷ ವಿಮಾನದಲ್ಲಿ ಬೆಳಗ್ಗೆ 10:45ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತರಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಮತ್ತು ಕುಟುಂಬದ ಸದಸ್ಯರೂ ಸಹ ಪಾರ್ಥಿವ ಶರೀರದೊಂದಿಗೆ ಆಗಮಿಸಿದರು.

ತದನಂತರ ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಧ್ಯಾಹ್ನ 12:45ಕ್ಕೆ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮೈಸೂರು ಸುತ್ತಮುತ್ತಲಿನ ಊರುಗಳಿಂದ ಮಾತ್ರ ವಲ್ಲದೆ, ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೃತರ ಅಂತಿಮ ದರ್ಶನ ಪಡೆದರು.

ರಾಜ್ಯಪಾಲ ವಜುಭಾಯಿ ವಾಲಾ, ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ, ಎಂ.ವೀರಪ್ಪಮೊಯ್ಲಿ, ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಸಿದ್ದರಾಮಯ್ಯ ಸಚಿವ ಸಂಪುಟದ ಎಲ್ಲ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಮಿಸಿದ್ದರು. ಪುತ್ರನ ಶವದ ಮುಂದೆ ನಿಂತು ಕಣ್ಣೀರಿಟ್ಟ ಸಿದ್ದ ರಾಮಯ್ಯನವರಿಗೆ ಆಗಮಿಸಿದ ಗಣ್ಯರು ಸಾಂತ್ವನ ಹೇಳಿದರು. ಪಕ್ಷ-ಪ್ರತಿಷ್ಠೆಗಳನ್ನು ಬಿಟ್ಟು ಎಲ್ಲ ಪಕ್ಷಗಳ ನಾಯಕರು ಸಿದ್ದರಾಮಯ್ಯನವರನ್ನು ಅಪ್ಪಿ ಸಮಾ ಧಾನದ ಮಾತುಗಳನ್ನಾಡಿದರು.

ಸಿನಿಮಾ ನಟ ದರ್ಶನ್, ಶಶಿಕುಮಾರ್ ಹಾಗೂ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಈ ಮೊದಲು ಬೆಳಗ್ಗೆ 11ಕ್ಕೆ ರಾಕೇಶ್ ಪಾರ್ಥಿವ ಶರೀರವನ್ನು ದಸರಾ ವಸ್ತು ಪ್ರದರ್ಶನಕ್ಕೆ ತರಲು ನಿರ್ಧರಿಸಲಾಗಿತ್ತಾದರೂ 1 ಗಂಟೆ, 45 ನಿಮಿಷ ತಡವಾಗಿ ಪಾರ್ಥಿವ ಶರೀರವನ್ನು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಸ್ತು ಪ್ರದರ್ಶನ ಆವರಣಕ್ಕೆ ಗಾಜಿನ ತೆರೆದ ವಾಹನದಲ್ಲಿ ತರಲಾಯಿತು. ಇದಕ್ಕೂ ಮೊದಲು ರಾಕೇಶ್‌ಗೆ ಸೂಟು ಮತ್ತು ಮೈಸೂರು ಸಿಲ್ಕ್ ವಸ್ತ್ರ ಧಾರಣೆ ಮಾಡಲಾಯಿತು.

ಬೆಳಗ್ಗಿನಿಂದಲೇ ಕ್ಯೂನಲ್ಲಿ ನಿಂತಿದ್ದ ಸಹಸ್ರಾರು ಮಂದಿ ನೂಕುನುಗ್ಗಲಿನಲ್ಲಿಯೇ ರಾಕೇಶ್ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 2:30ಕ್ಕೆ ರಾಕೇಶ್ ಅವರ ಪಾರ್ಥಿವ ಶರೀರವನ್ನು ತೆರೆದ ಗಾಜಿನ ವಾಹನದಲ್ಲಿ ಮೈಸೂರು ನಗರದಿಂದ 15 ಕಿ.ಮೀ. ದೂರದಲ್ಲಿರುವ ಟಿ.ಕಾಟೂರು ಗ್ರಾಮದ ತೋಟಕ್ಕೆ ಎಚ್.ಡಿ.ಕೋಟೆ ರಸ್ತೆ ಮೂಲಕ ಕೊಂಡೊಯ್ಯಲಾಯಿತು. ರಸ್ತೆಯ ಉದ್ದಕ್ಕೂ ಜನಸ್ತೋಮ ನೆರೆದು ಭವಿಷ್ಯದ ನಾಯಕನಾಗಲಿದ್ದ ಯುವ ಚೇತನದ ಅಂತಿಮ ಯಾತ್ರೆಯನ್ನು ವೀಕ್ಷಿಸಿ ಕಣ್ಣೀರು ಮಿಡಿದರು.

ದೂರದೂರುಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿಗೆ ದರ್ಶನದ ಭಾಗ್ಯ ಸಿಗದೆ ನಿರಾಸೆಯಿಂದ ಹಿಂದಿರುಗಬೇಕಾಯಿತು. ಟಿ.ಕಾಟೂರು ಗ್ರಾಮದ ತೋಟದಲ್ಲಿ ನೆರವೇರಿದ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರು ಮತ್ತು ಗಣ್ಯಾತಿಗಣ್ಯರನ್ನು ಹೊರತುಪಡಿಸಿ ಬೇರೆಯವರಿಗೆ ನಿಷೇಧ ಹೇರಲಾಗಿತ್ತು. ಮಾಧ್ಯಮಗಳನ್ನೂ ಸಹ ದೂರವಿಟ್ಟು ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್ ಅಂತ್ಯಸಂಸ್ಕಾರ ನೆರವೇರಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಬೋವಿ ಜನಾಂಗದ ಮಠಾಧಿಪತಿ, ನಾಯಕ, ಕುಂಚಿಟಿಗ, ಯಾದವ ಸಮುದಾಯದ ಮಠಾಧಿಪತಿಗಳು ಉಪಸ್ಥಿತರಿದ್ದರು.

ಕುರುಬ ಸಮುದಾಯದ ಹಾಲುಮತ ಸಂಪ್ರದಾಯದಂತೆ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರಕ್ಕೆ ವಿಭೂತಿ, ಬಿಲ್ವಪತ್ರೆಗಳ ಧಾರಣೆ ಮಾಡಿ ಹೂಳಲಾಯಿತು. ಅಕಾಲಿಕ ಮರಣವಾದ್ದರಿಂದ ಅಷ್ಟದಿಕ್ಕುಗಳಿಗೂ ದಿಗ್ಬಂಧನ ವಿಧಿಸುವ ಕಾರ್ಯವೂ ನೆರವೇರಿದೆ. ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಪುತ್ರ ಡಾ.ಯತೀಂದ್ರ, ರಾಕೇಶ್‌ರ ಪತ್ನಿ ಸ್ಮಿತಾ, ಸಿದ್ದರಾಮಯ್ಯ ಅವರ ಸಹೋದರರು, ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News