ದೇಶಕ್ಕೆ ಹೊಸ ಸಂಸತ್ ಭವನ!

Update: 2016-08-05 03:08 GMT

ಹೊಸದಿಲ್ಲಿ, ಆ.5: ರಾಜಪಥದ ವಾಯುಭವನದ ಹಿಂದೆ ಹೊಸ ಸಂಸತ್ ಭವನ ನಿರ್ಮಿಸುವ ಕುರಿತು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮುಂದಿಟ್ಟಿರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ. ಡಿಸೆಂಬರ್‌ನಲ್ಲಿ ಈ ಕುರಿತು ಮಹಾಜನ್ ಬರೆದ ಪತ್ರಕ್ಕೆ ನಗರಾಭಿವೃದ್ಧಿ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಾಲಿ ಇರುವ ಸಂಸತ್ ಭವನ ಮತ್ತು ನೂತನ ಭವನಕ್ಕೆ ರಾಜಪಥದ ಮೂಲಕ ಸುರಂಗ ಮಾರ್ಗವನ್ನು ನಿರ್ಮಿಸಿ, ಸಂಪರ್ಕ ಕಲ್ಪಿಸಬಹುದು ಎಂದು ಸಲಹೆ ಮಾಡಿದೆ.
"88 ವರ್ಷದ ಹಳೆಯ ಸಂಸತ್ ಭವನ, ಇದೀಗ ಹೆಚ್ಚುತ್ತಿರುವ ಸ್ಥಳಾವಕಾಶದ ಬೇಡಿಕೆ ಪೂರೈಸುವ ಸ್ಥಿತಿಯಲ್ಲಿಲ್ಲ" ಎಂದು ಸ್ಪೀಕರ್, ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಎರಡು ಪರ್ಯಾಯ ಸ್ಥಳಗಳನ್ನೂ ಮಹಾಜನ್ ಸಲಹೆ ಮಾಡಿದ್ದರು. ಒಂದು ಹಾಲಿ ಇರುವ ಸಂಕೀರ್ಣದಲ್ಲೇ ನಿರ್ಮಿಸುವುದು ಹಾಗೂ ಇನ್ನೊಂದು ರಾಜಪಥದಲ್ಲಿ ನಿರ್ಮಿಸುವುದು. ಎರಡನೇ ಆಯ್ಕೆಯಲ್ಲಿ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲು ಹಾಗೂ ಹೊಸ ಸಂಸತ್ ಭವನದ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದ್ದರು.
ಈ ಮಹತ್ವದ ಯೋಜನೆ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ಐದರಿಂದ ಆರು ವರ್ಷ ಬೇಕಾಗಬಹುದು ಎಂದು ಮೂಲಗಳು ಹೇಳಿವೆ. 2026ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ, ಲೋಕಸಭಾ ಸದಸ್ಯಬಲ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೊಸ ಭವನ ನಿರ್ಮಾಣ ಅಗತ್ಯವಾಗಬಹುದು ಎಂದು ಮಹಾಜನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News