ಶೋಷಿತರ ದನಿ-ಮಹಾಶ್ವೇತಾ ದೇವಿ

Update: 2016-08-06 17:10 GMT

‘‘ಒಂದೆಡೆ ಶ್ರೀಮಂತರು ಮತ್ತಷ್ಟು ಶ್ರೀಮಂತ ರಾಗುತ್ತಿದ್ದಾರೆ... ಇನ್ನೊಂದೆಡೆ ಅಷ್ಟೊ ಇಷ್ಟೊ ಇದ್ದ ಮಧ್ಯಮವರ್ಗದ ಜನರೂ ತಮ್ಮಲ್ಲಿ ಇದ್ದುದನ್ನು ಕಳೆದುಕೊಂಡು ಮತ್ತಷ್ಟು ಗರೀಬರಾಗುತ್ತಿದ್ದಾರೆ... ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಬೆಲೆಗಳು ಆಕಾಶ ಮುಟ್ಟುತ್ತಿವೆ. ಶಿಕ್ಷಣದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಇವೆಲ್ಲವುಗಳಿಂದ ಮಧ್ಯಮವರ್ಗ ತಮ್ಮ ಸಂತುಲನೆಯನ್ನು ಕಳೆದುಕೊಂಡು ಕೆಳವರ್ಗದೆಡೆಗೆ ಸರಿಯುತ್ತಿದ್ದಾರೆ. ವರ್ಗಸಂಘರ್ಷ ಹೆಚ್ಚುಹೆಚ್ಚು ಸ್ಪಷ್ಟವಾಗುತ್ತಿದೆ. ಇತಿಹಾಸದ ಈ ಸಂಧಿಕಾಲದಲ್ಲಿ ಒಬ್ಬ ಜವಾಬ್ದಾರಿಯುತ ಲೇಖಕ ಶೋಷಣೆಗೆ ಒಳಗಾಗುತ್ತಿರುವವರ ಪರವಾಗಿ ಲೇಖನಿ ಹಿಡಿಯಲೇ ಬೇಕಾಗುತ್ತದೆ. ಇಲ್ಲವಾದಲ್ಲಿ ಇತಿಹಾಸ ಎಂದಿಗೂ ಅವರನ್ನು ಕ್ಷಮಿಸದು.’’
-ಇದು ಜುಲೈ 28ರಂದು ಇಹಲೋಕ ತ್ಯಜಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತೆ ಬಂಗಾಳಿ ಕಾದಂಬರಿಕಾರ್ತಿ ಮಹಾಶ್ವೇತಾ ದೇವಿಯವರು ತಮ್ಮ ‘ಅಗ್ನಿಗರ್ಭ’ ಕಾದಂಬರಿಯ ಪ್ರಸ್ತಾವನೆಯಲ್ಲಿ ನಿವೇದಿಸಿರುವ ಲೇಖಕಿಯೊಬ್ಬಳ ಅಂತರಂಗದ ತಳಮಳ. ಬದುಕಿನುದ್ದಕ್ಕೂ ಶೋಷಿತರಪರ ಹೋರಾಟಗಾರ್ತಿಯಾಗಿ ದುಡಿದ, ದೀನದಲಿತರ ದನಿಯಾಗಿ ಬರೆದ ಮಹಾಶ್ವೇತಾದೇವಿಯವರ ಸಾಮಾಜಿಕ ಬದ್ಧತೆಗೆ ಇದಕ್ಕಿಂತ ಮಿಗಿಲಾದ ರುಜುವಾತು ಬೇಕಿಲ್ಲ.


    
  ಕಥೆ, ಕಾದಂಬರಿ, ನಾಟಕ ಮೊದಲಾಗಿ ಬಂಗಾಳಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಚಿಸಿರುವ ಮಹಾಶ್ವೇತಾ ದೇವಿ ಬಂಗಾಳಿ ಪ್ರಗತಿಶೀಲ ಸಾಹಿತ್ಯದ ಉದ್ದಾಮ ಲೇಖಕಿ. ಸಾಹಿತಿಯಾಗಿಯಷ್ಟೇ ಅಲ್ಲದೆ, ಸಾಮಾಜಿಕ ಮತ್ತು ರಾಜಕೀಯ ಸಕ್ರಿಯ ಕಾರ್ಯಕರ್ತೆಯಾಗಿಯೂ ಅವರದು ರಾಷ್ಟ್ರವ್ಯಾಪಿ ಕೀರ್ತಿ. ಸಮಾಜದ ಕೆಳವರ್ಗದ ಶೋಷಿತರ ಹೋರಾಟದ ಬದುಕು ಮತ್ತು ವರ್ಗ ಸಂಘರ್ಷ ಅವರ ಸಾಹಿತ್ಯ ಕೃತಿಗಳ ಮೂಲವಸ್ತು. ದೀನದಲಿತರ ಉದ್ಧಾರ ಮತ್ತು ಸಮಾಜ ಸುಧಾರಣೆ ಅವರ ಮುಖ್ಯ ಕಾಳಜಿಯಾಗಿತ್ತು. ಲೇಖಕಿಯಾಗಿ, ಸಾಮಾಜಿಕ/ರಾಜಕೀಯ ಕ್ರಿಯಾವಾದಿಯಾಗಿ ಅವರು ಸಮತಾ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಸಿದ್ದ ಕ್ರಾಂತಿಕಾರಿ. ಮಹಾಶ್ವೇತಾ ದೇವಿಯವರಲ್ಲಿನ ಕ್ರಾಂತಿಕಾರಿ ಮನೋಧರ್ಮ ಅವರಿಗೆ ರಕ್ತಗತವಾಗಿ ಬಂದದ್ದು. 1926ರ ಜನವರಿ 14ರಂದು ಢಾಕಾದಲ್ಲಿ ಜನಿಸಿದ ಮಹಾಶ್ವೇತಾ ದೇವಿಯವರದು ಕಲೆ, ಸಾಹಿತ್ಯಗಳಿಗೆ ಹೆಸರಾದ ಸುವಿಖ್ಯಾತ ಮನೆತನ. ತಂದೆ ಮನೀಶ್ ಘೋಷ್ ಬಂಗಾಳಿ ಸಾಹಿತ್ಯದಲ್ಲಿ ರವೀಂದ್ರನಾಥ ಠಾಗೂರರ ಮಾರ್ಗವನ್ನು ಧಿಕ್ಕರಿಸಿ ನವ್ಯಮಾರ್ಗದ ಅನ್ವೇಷಣೆಯಲ್ಲಿ ತೊಡಗಿದ್ದ ‘ಕಲ್ಲೋಲ’ ಚಳವಳಿಯ ಸುಪ್ರಸಿದ್ಧ ಸಾಹಿತಿ. ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಋತ್ವಿಕ್ ಘಟಕ್ ಅವರ ಚಿಕ್ಕಪ್ಪ. ಶಾಂತಿ ನಿಕೇತನದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದಾಗ ವಾಮಪಂಥೀಯ ನಾಟಕಕಾರ ಬಿಜೋನ್ ಭಟ್ಟಾಚಾರ್ಯರಲ್ಲಿ ಪ್ರೀತಿ ಅಂಕುರಿಸಿ ಅವರ ಬಾಳ ಸಂಗಾತಿಯಾದರು. ಬಿಜೋನ್ ಭಟ್ಟಾಚಾರ್ಯ ಭಾರತೀಯ ರಂಗಭೂಮಿಗೆ ಹೊಸ ದಿಕ್ಕುದಿಶೆ ತೋರಿದ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್ನಿನ ಸಂಸ್ಥಾಪಕರಲ್ಲೊಬ್ಬರು. ‘ಝಾನ್ಸಿ ರಾಣಿ’ ಮಹಾಶ್ವೇತಾ ದೇವಿಯವರ ಪ್ರಕಟಿತ ಪ್ರಥಮ ಕೃತಿ. ರಾಣಿಯ ಜೀವನ ಚರಿತ್ರೆ ಬರೆಯುವ ಸಲುವಾಗಿ ಸಂಶೋಧನೆ ನಡೆಸಲು ಅವರು ಇಪ್ಪತ್ತೆಂಟನೆಯ ವಯಸ್ಸಿನಲ್ಲೇ ಒಂಟಿಯಾಗಿ ರಾಜಾಸ್ಥಾನದ ಉದ್ದಗಲ ಪರ್ಯಟನ ನಡೆಸಿದರು.ವೃತ್ತಿಯಿಂದ ಇಂಗ್ಲಿಷ್ ಸಾಹಿತ್ಯದ ಪ್ರೊಫೆಸರಾಗಿದ್ದ ಮಹಾಶ್ವೇತಾ ದೇವಿಯವರಿಗೆ ಪರ್ಯಟನ ಒಂದು ಹವ್ಯಾಸವಾಗಿತ್ತು. ಈ ಪರ್ಯಟನ ಅವರಿಗೆ ಬದುಕಿನ ವಿರಾಡ್ರೂಪ, ವಿವಿಧ ವಿನ್ಯಾಸಗಳ ದರ್ಶನಮಾಡಿಸಿತು. ಆದಿವಾಸಿ ಜನರಿಗೆ ಹತ್ತಿರವಾಗಿಸಿತು. ಊರೂರು ಸುತ್ತುವಾಗ ಬಂಗಾಳದ ಪಲಮಾವು ಜೀತದಾಳುಗಳ ಶೋಷಿತ ಬದುಕನ್ನು ಸಮೀಪದಿಂದ ಕಂಡರು. ಮೇದಿನಿಪುರದ ಲೋಧ್, ಪುರ್ಲಿಯಾದ ಖೇಡಿಯಾ ಶೋಭೋರ್, ಬೀರ್‌ಭೂಮ್‌ನ ಧಕಾರೋ ಮೊದಲಾದ ಶೋಷಿತ ಬುಡಕಟ್ಟು ಜನಾಂಗಗಳ ಶೋಚನೀಯ ಬದುಕನ್ನು ಕಂಡು ಮಮ್ಮಲ ಮರುಗಿದರು. ಬುಡಕಟ್ಟು ಜನರ ಬದುಕೇ ಅವರ ಸಾಹಿತ್ಯದ ವಸ್ತುವಾಯಿತು, ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯಲು ಸ್ಫೂರ್ತಿ ನೀಡಿತು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿ ‘ಅರಣ್ಯೇರ್ ಅಧಿಕಾರ್’, ಹಜಾರ್ ಚೌರಾಶಿ ಮಾ’(1084ರ ತಾಯಿ), ‘ಸ್ತನ್ಯದಾಯಿನಿ’, ‘ಅಗ್ನಿಗರ್ಭ’, ‘ರುಡಾಲಿ’, ‘ದೌಪದಿ’, ‘ಶಿಶು’ ಮಹಾಶ್ವೇತಾ ದೇವಿಯವರ ಪ್ರಮುಖ ಕೃತಿಗಳು. ‘ಹಜಾರ್ ಚೌರಾಶಿ ಮಾ ಮತ್ತು ಅಗ್ನಿ ಗರ್ಭ’ ನಕ್ಸಲೀಯ ಆಂದೋಲನವನ್ನು ಕೇಂದ್ರವಾಗುಳ್ಳ ಕಾದಂಬರಿಗಳು. ಹತ್ತೊಂಬತ್ತನೆ ಶತಮಾನದಲ್ಲಿ ಜಾರ್ಖಂಡ್‌ನ ಅರಣ್ಯವನ್ನು ಒತ್ತುವರಿ ಮಾಡಿಕೊಂಡ ಬ್ರಿಟಿಷರ ವಿರುದ್ಧ ಆದಿವಾಸಿ ನಾಯಕ ಬಿರ್ಸಾಮುಂಡ ನಡೆಸಿದ ಹೋರಾಟದ ಚಿತ್ರಣವೇ ‘ಅರಣ್ಯೇರ್ ಅಧಿಕಾರ್’. ಬ್ರಿಟಿಷ್ ಸೇನೆ ಬಿರ್ಸಾಮುಂಡರನ್ನು ಬಂಧಿಸಿ ಜೈಲಿಗೆ ದೂಡುತ್ತಾರೆ. ರಾಂಚಿಯ ಹೃದಯ ಭಾಗದಲ್ಲಿ ಮೊನ್ನೆಮೊನ್ನೆಯವರೆಗೆ ಕೈಕೋಳತೊಡಿಸಿದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾಮುಂಡರ ಪ್ರತಿಮೆಯೊಂದಿತ್ತು. ಬ್ರಿಟಿಷ್ ಸೇನೆ ತೆಗೆದ ಶೃಂಖಲೆಗಳಿಂದ ಬಂಧಿತನಾದ ಬಿರ್ಸಾಮುಂಡರ ಛಾಯಾಚಿತ್ರವೇ ಈ ಶಿಲ್ಪಕ್ಕೆ ಆಕರವಾಗಿದ್ದಿರಬಹುದು. ಇದನ್ನು ಕಂಡು ಮಹಾಶ್ವೇತಾ ದೇವಿ ‘‘ಸ್ವಾತಂತ್ರ್ಯಾನಂತರವೂ ಅವರಿಗೇಕೆ ಕೈಕೋಳ ತೊಡಿಸಿದ್ದೀರಿ’’ ಎಂದು ಆಕ್ರೋಶ ವ್ಯಕ್ತಪಡಿಸಿದರಂತೆ. ಈಗ ಅದನ್ನು ತೆಗೆದು ಬಿರ್ಸಾಮುಂಡರ ಬಂಧಮುಕ್ತ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಪ.ಬಂಗಾಳದಲ್ಲಿ ನಕ್ಸಲೀಯ ಆಂದೋಲನ ಪರಾಕಾಷ್ಠೆಯಲ್ಲಿದ್ದಾಗ(1970ರ ದಶಕ) ರಚಿಸಲಾದ ‘ಹಜಾರ್ ಚೌರಾಶಿ ಮಾ’ ಮಗನನ್ನು ಬಲಿ ತೆಗೆದುಕೊಂಡ ಕ್ರಾಂತಿಕಾರಿ ಚಳವಳಿಯನ್ನು ಅರ್ಥಮಾಡಿಕೊಳ್ಳಲೆತ್ನಿಸುವ ತಾಯಿಯೊಬ್ಬಳ ಹೋರಾಟದ ಹೃದಯಸ್ಪರ್ಶಿ ಕಥಾನಕ. ನಾಟಕವಾಗಿ, ಚಲನಚಿತ್ರವಾಗಿಯೂ ಈ ಕಾದಂಬರಿ ಅಪಾರ ಜನಮನ್ನಣೆ ಗಳಿಸಿತು.
‘ಸ್ತನ್ಯದಾಯಿನಿ’ ಮತ್ತು ‘ದೌಪದಿ’ ಸಹೃದಯರ ಹೆಚ್ಚುಗಮನ ಸೆಳೆದಿರುವ ಕೃತಿಗಳು. ‘ಸ್ತನ್ಯದಾಯಿನಿ’ಯ ನಾಯಕಿ ಯಶೋದೆ ಅನ್ನ ಸಂಪಾದನೆಯ ಮಾರ್ಗ ವಾಗಿ ಜಮೀನ್ದಾರನ ಹಸುಗೂಸಿಗೆ ಮೊಲೆ ಉಣಿಸುವ ನೌಕರಳಾಗುತ್ತಾಳೆ. ಮಹಾಭಾರತದ ದ್ರೌಪದಿ ಮಹಾಶ್ವೇತಾ ದೇವಿಯವರ ಬುಡಕಟ್ಟಿನ ಪರಿಭಾಷೆಯಲ್ಲಿ ‘ದೌಪದಿ’. ಪೊಲೀಸರ ದಮನಕ್ಕೆ ಈಡಾದ ಈ ದೌಪದಿಯನ್ನು ರಕ್ಷಿಸಲು ಕಲಿಯುಗದ ಕೃಷ್ಣರು ಯಾರೂ ಮುಂದೆ ಬರುವುದಿಲ್ಲ. ತನ್ನನ್ನು ದುರಪಯೋಗಪಡಿಸಿಕೊಳ್ಳುತ್ತಿರುವ ಪೊಲೀಸರ ದೌರ್ಜನ್ಯದಿಂದ ಬೇಸತ್ತ ದೌಪದಿ ವಿಕಟ ಅಟ್ಟಹಾಸದ ನಗೆಯಿಂದ ಬೆತ್ತಲಾಗಿ ಪೊಲೀಸ್ ದುಷ್ಟಶಕ್ತಿಯನ್ನು ಮೀರಿ ನಿಲ್ಲುತ್ತಾಳೆ. ಇದು ಥಟ್ಟನೆ ನಮಗೆ 2004ರಲ್ಲಿ, ಇಂಫಾಲ್‌ನಲ್ಲಿ ಸಶಸ್ತ್ರ ಪಡೆಗಳ ದೌರ್ಜನ್ಯದ ವಿರುದ್ಧ ಮಹಿಳೆಯರು ನಡೆಸಿದ ನಗ್ನಪ್ರದರ್ಶನವನ್ನು ನೆನಪಿಗೆ ತರುವುದೇ ಅದರ ಪ್ರಸ್ತುತತೆಯನ್ನು ಸಾರಿ ಹೇಳುತ್ತದೆ.

ಮಹಾಶ್ವೇತಾ ದೇವಿಯವರ ಕಥೆ ಕಾದಂಬರಿಗಳ ಬೇರುಗಳು ಬಂಗಾಳ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡಗಳಲ್ಲಿನ ಆದಿವಾಸಿಗಳು ಮತ್ತು ಗುಡ್ಡಗಾಡು ಜನಜೀವನದಲ್ಲಿ ಆಳವಾಗಿ ಊರಿದ್ದು ಅವು ಆಡುವ ಭಾಷೆಯೂ ಈ ಜನರ ದೇಸಿಭಾಷೆಯೇ ಆಗಿದೆ.ಅವರ ಕೃತಿಗಳಲ್ಲಿ ಗುಡ್ಡಗಾಡು ಸಂಸ್ಕೃತಿ, ಜಾನಪದಗಳು ತನ್ನೆಲ್ಲ ಸಿರಿವಂತಿಕೆಯಿಂದ ಅಭಿವ್ಯಕ್ತಿ ಪಡೆದಿರುವುದನ್ನು ವಿಮರ್ಶಕರು ಗಮನಿಸಿದ್ದಾರೆ. ಕನಸು ಕಾಣುವ ಹಕ್ಕು ಮೂಲಭೂತ ಹಕ್ಕಾಗಬೇಕು ಎನ್ನುತ್ತಿದ್ದ ಮಹಾಶ್ವೇತಾ ದೇವಿಯವರು ಶಿಶು ಸಾಹಿತ್ಯದಲ್ಲೂ ಗಣನೀಯ ಸಾಧನೆ ಗೈದವರು. ಮಕ್ಕಳನ್ನು ರಂಜಿಸುವಂಥ ಹಲವಾರು ಅದ್ಭುತರಮ್ಯ ಕಥೆಗಳನ್ನು ರಚಿಸಿರುವುದು ಅವರ ವೈಶಿಷ್ಟ್ಯಗಳಲ್ಲೊಂದು. ಸೃಜನಶೀಲ ಪ್ರತಿಭೆ ಮತ್ತು ಕ್ರಿಯಾವಾದಗಳ ವಿಶಿಷ್ಟ ಸಂಯೋಗವಾದ ಮಹಾಶ್ವೇತಾ ದೇವಿಯವರ ಸಾಹಿತ್ಯ ಕೃತಿಗಳು ಬುಡಕಟ್ಟು ಜೀವನಕ್ರಮದ ಬಖೈರು ಇದ್ದಂತೆ ಎಂಬುದು ವಿಮರ್ಶಕರು ಮತ್ತು ಚರಿತ್ರೆಕಾರರ ಅಭಿಮತ. ಅಂತೆಯೇ ಕ್ರಿಯಾವಾದಿಯಾಗಿ ಅವರ ಹೋರಾಟಗಳು ಮತ್ತು ಕಾರ್ಯಯೋಜನೆಗಳು ಶೋಷಿತೋದ್ಧಾರದ ಸುಧಾರಣಾ ಕ್ರಮಗಳೇ ಆಗಿವೆ.ಬುಡಕಟ್ಟು ಜನರು, ಶೋಷಿತರು ಮತ್ತು ದೀನದಲಿತರ ಪರ ಹೋರಾಟದಲ್ಲಿ ಅವರು ಎಂದೂ ಎದೆಗುಂದಿರಲಿಲ್ಲ. ಅಧಿಕಾರ ವ್ಯವಸ್ಥೆಗಳಿಗೆ ಅಂಜಿದವರಲ್ಲ. ವಾಮಪಂಥೀಯ ಸಿದ್ಧಾಂತ, ಕಾರ್ಯಕ್ರಮಗಳಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದು ಪ.ಬಂಗಾಳದ ವಾಮರಂಗದ ಸರಕಾರದೊಂದಿಗೆ ಸ್ನೇಹಬಾಂಧವ್ಯ ಹೊಂದಿದ್ದರೂ ಸಿಂಗರೂರು-ನಂದಿ ಗ್ರಾಮಗಳ ರೈತರ ಭೂಸ್ವಾಧೀನ ವಿರೋಧಿ ಚಳವಳಿ ಕಾಲದಲ್ಲಿ ಸರಕಾರದ ವಿರುದ್ಧ ಸಿಡಿದು ನಿಂತದ್ದು ಅವರ ಬದ್ಧತೆಗೆ ಉಜ್ವಲ ಸಾಕ್ಷಿಯಾದೀತು. ನಂದಿ ಗ್ರಾಮದಲ್ಲಿ ಪೊಲೀಸ್ ಗೋಲಿಬಾರ್ ನಡೆದಾಗ ಅವರು ತಾಳಿದ ರೈತಪರ ನಿಲುವು ಮಮತಾ ಬ್ಯಾನರ್ಜಿಯವರಿಗೆ ‘ಪರಿವರ್ತನೆ’ ಉಂಟುಮಾಡಲು ಪ್ರೇರಣೆ ನೀಡಿತು. ಲಾಲ್‌ಗಢದಲ್ಲಿ ಮಾವೋವಾದಿಗಳ ವಿರುದ್ಧ ಸರಕಾರ ಕೈಗೊಂಡ ಕ್ರಮಗಳನ್ನು ವಿರೋಧಿಸಲು ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಗೆ ಅನುಮತಿ ನಿರಾಕರಿಸಿದಾಗ ಮಮತಾ ಬ್ಯಾನರ್ಜಿಯವರ ವಿರುದ್ಧವೂ ತಿರುಗಿಬಿದ್ದದ್ದು ಅವರ ಸಾಮಾಜಿಕ ಬದ್ಧತೆ ಮತ್ತು ಪ್ರಜಾಸತ್ತಾತ್ಮಕ ಕಾಳಜಿಗಳಿಗೆ ಮತ್ತೊಂದು ಉದಾಹರಣೆಯಾದೀತು.

ಸಾಹಿತ್ಯ ರಚನೆ ಮತ್ತು ಸಕ್ರಿಯ ಸಾಮಾಜಿಕ ಹೋರಾಟಗಳಿಗೆ ಮನ್ನಣೆಯಾಗಿ ಮಹಾಶ್ವೇತಾ ದೇವಿಯವರನ್ನು ಅರಸಿ ಬಂದಿರುವ ಪ್ರಶಸ್ತಿ ಪುರಸ್ಕಾರಗಳ ಯಾದಿ ದೊಡ್ಡದೇ ಇದೆ. ಪದ್ಮವಿಭೂಷಣ, ಸಾಹಿತ್ಯ ಅಕಾಡಮಿ, ಜ್ಞಾನಪೀಠ, ರೆಮೊನ್ ಮ್ಯಾಗ್ಸೆಸೆ ಇತ್ಯಾದಿ. ಭಾರತ ರಾಷ್ಟ್ರೀಯ ಜೀವನವಾಹಿಯಲ್ಲಿ ತಮಗೆ ನ್ಯಾಯೋಚಿತವಾದ ಹಾಗೂ ಗೌರವಯುತವಾದ ಬದುಕು ಸಾಧ್ಯವಾಗಬೇಕು ಎಂಬ ಗುಡ್ಡಗಾಡು ಜನರ ಬೇಡಿಕೆ ಬೆಂಬಲಿಸಿ ಕಲೆ ಮತ್ತು ಕ್ರಿಯಾವಾದಿ ಹೋರಾಟಗಳ ಮೂಲಕ ದಯಾರ್ದ್ರ ಸುಧಾರಣಾ ಆಂದೋಲನ ನಡೆಸಿದ್ದಕ್ಕಾಗಿ ರೆಮೊನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಫಲಕದಲ್ಲಿ ಒಕ್ಕಣಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಹಾಶ್ವೇತಾ ದೇವಿಯವರು ತೋರಿರುವ ಪ್ರತಿಕ್ರಿಯೆ ಹೀಗಿದೆ:
‘‘ನನ್ನ ಭಾರತ ಇನ್ನೂ ಕರಾಳ ಕತ್ತಲೆಯ ಕಪ್ಪುಪರದೆಯ ಹಿಂದೆಯೇ ಬದುಕನ್ನು ದೂಡುತ್ತಿದೆ. ಬಡಬಗ್ಗರನ್ನು ಮತ್ತು ವಂಚಿತರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಪರದೆ’’

ಆಡಳಿತ ಸೂತ್ರಹಿಡಿದಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದಂಥ ಪ್ರತಿಕ್ರಿಯೆ. ಮಹಾಶ್ವೇತಾ ದೇವಿಯವರಿಗಂತೂ ಕತ್ತಲೆಯ ಈ ಕಪ್ಪುಪರದೆಯನ್ನು ಬದಿಗೆ ಸರಿಸಿ ಕಟುವಾಸ್ತವವನ್ನು ಕಾಣುವ ಮೂಲಕ ನಮ್ಮ ಮುಖಗಳನ್ನು ನಾವೇ ನೋಡಿಕೊಳ್ಳುವುದು ಅಗತ್ಯವೆನಿಸಿತ್ತು. ಅದನ್ನು ಅವರು ತಮ್ಮ ಕಥೆ, ಕಾದಂಬರಿ ಮೊದಲಾದ ಬರಹಗಳಲ್ಲಿ ಮಾಡಿ ಭಾರತೀಯರಿಗೆ ಸತ್ಯದರ್ಶನ ಮಾಡಿಸಿದ್ದಾರೆ. ಆದರೆ ಆಳುವ ಮಂದಿ ಈ ಸತ್ಯದರ್ಶನದಿಂದ ಎಚ್ಚೆತ್ತು ಕೊಂಡು ಕಾರ್ಯಪ್ರವೃತ್ತರಾಗಿದ್ದಾರೆಯೆ? ಇಲ್ಲ ಎಂಬುದಕ್ಕೆ, ಮಹಾಶ್ವೇತಾ ದೇವಿಯವರು ತಮ್ಮ ಕಥಾನಕಗಳಲ್ಲಿ ಬಿಂಬಿಸಿರುವ ಶೋಷಿತರ ಬದುಕು ಇಂದಿಗೂ ಕಣ್ಣಿಗೆರಾಚುವ ಸತ್ಯವಾಗಿ ಮುಂದುವರಿದಿರುವುದಕ್ಕಿಂತ ಮಿಗಿಲಾದ ಸಾಕ್ಷ್ಯ ಬೇಕೆ?

ಕನ್ನಡದ ನಂಟು...
    ರವೀಂದ್ರನಾಥ ಠಾಗೂರರಿಂದ ನವ್ಯರವರೆಗೆ ಬಂಗಾಳಿ ಮತ್ತು ಕನ್ನಡದ ಮಧ್ಯೆ ಬೆಳೆದು ಬಂದಿರುವ ಸ್ನೇಹಬಾಂಧವ್ಯ ಮಹಾಶ್ವೇತಾ ದೇವಿಯವರಿಂದಲೂ ಮುಂದುವರಿದಿರುವುದು ಸಂತಸದ ಸಂಗತಿ.ಅವರ ‘ಸ್ತನ್ಯದಾಯಿನಿ’, ‘ಅರಣ್ಯೇರ್ ಅಧಿಕಾರ್’, ‘ರುಡಾಲಿ’, ‘ದೌಪದಿ’ ಮೊದಲಾದ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಹೃನ್ಮನಗಳನ್ನು ಗೆದ್ದಿವೆ. 1993ರಷ್ಟು ಹಿಂದೆಯೇ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು ಮಹಾಶ್ವೇತಾ ದೇವಿಯವರನ್ನು ಬೆಂಗಳೂರಿಗೆ ಕರೆಸಿಕೊಂಡು ಸತ್ಕರಿಸಿದ್ದರು. ಕನ್ನಡ ಲೇಖಕಿಯರ ಸಂಘವೂ ಅವರನ್ನು ಸನ್ಮಾನಿಸಿದ್ದಿದೆ. ಹೀಗೆ ಮಹಾಶ್ವೇತಾ ದೇವಿ ಕನ್ನಡಿಗರಿಗೆ ಸ್ಫೂರ್ತಿಯ ಹಿರಿಯಕ್ಕನೂ ಹೌದು.

ಭರತ ವಾಕ್ಯ:
‘‘ನಾನು ಸಾಯಲಿಚ್ಛಿಸುವುದಿಲ್ಲ. ಅಮರಳಾಗಿರುವುದು ನನ್ನಿಚ್ಛೆ’’ ಮಹಾಶ್ವೇತಾ ದೇವಿಯವರು ಒಮ್ಮೆ ವ್ಯಕ್ತಪಡಿಸಿರುವ ಅಪೇಕ್ಷೆ ಇದು. ಮಹಾಶ್ವೇತಾ ದೇವಿ ಇನ್ನಿಲ್ಲ ಎನ್ನಲುಂಟೆ? ಇಪ್ಪತ್ತನೆ ಶತಮಾನದ ಭಾರತೀಯ ಸಾಹಿತ್ಯ ಚರಿತ್ರೆಯ ಕ್ರಾಂತಿಕಾರಿ ಪುಟಗಳಲ್ಲಿ ಅವರ ಹೆಸರು ಚಿರಸ್ಥಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News