ಮೇ 3

Update: 2016-08-08 07:30 GMT

 ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನೂ ಹೇಳುವುದಿಲ್ಲ. ಸತ್ಯದ ಶತ್ರು ಸುಳ್ಳಲ್ಲ, ಸಿಟ್ಟು. ನಿನಗೆ ಸಿಟ್ಟು ಬಂದರೆ ನಾನು ಬರೆಯೋದು ಸತ್ಯ ಅಂತ ಆಯ್ತು. ಹಸ್ತಿನಾವತಿ ಎಂಬ ಪಟ್ಟಣಕ್ಕೆ ಮಂತ್ರಿಗಳುಂಟು, ರಾಜರಿಲ್ಲ. ಯಜ್ಞ ಯಾಗಾದಿಗಳು ಸಾಂಗವಾಗಿ ನಡೆಯುವುವು. ಸ್ಲಂಗಳು ಇರುವುವು, ಇದಲ್ಲದೆ ಒಂದು ಆಸ್ಪತ್ರೆ, ಒಂದು ಲೇಡೀಸ್ ಹಾಸ್ಟೆಲ್, ಸರಕಾರಿ ಹಾಲಿನ ಡೈರಿ, ಇವೆಲ್ಲವೂ ಹಸ್ತಿನಾವತಿ ಎಂಬ ಪಟ್ಟಣದಲ್ಲುಂಟು. ಒಂದನೆಯ ಘಟನೆ:

ಅಗ್ರಹಾರದ ನಾಡಹೆಂಚಿನ ಮನೆಯ ಜಗಲಿಯೊಂದರಲ್ಲಿ ಶಂಕರ ಭಟ್ಟರು ಕುಳಿತಿದ್ದಾರೆ. ಎದುರಿನ ಜಗಲಿಯಲ್ಲಿ ಮನೆಯಾಕೆ ಬತ್ತಿ ಹೊಸೆಯುತ್ತಾ ಕುಳಿತಿದ್ದಾರೆ. ಸಂಜೆ ನಾಲ್ಕರ ಸಮಯ. ಭಟ್ಟರು ಏನೋ ಗೊಣಗುತ್ತಿದ್ದಾರೆ. ಬಹುಶಃ ಮಂತ್ರವಿದ್ದಿರಬಹುದು. ಇತ್ತಿತ್ತಲಾಗಿ ಅವರು ಯಾವಾಗಲೂ ಮಂತ್ರ ಹೇಳುತ್ತಿರುತ್ತಾರೆ. ಒಂದು ಮಂತ್ರವನ್ನೂ ಪೂರ್ಣಗೊಳಿಸುವ ತಾಳ್ಮೆ ಕಳೆದು ಹೋಗಿದೆ. ಮಧ್ಯೆ ಮಧ್ಯೆ ಓಡಿಹೋದ ಮಗಳನ್ನು ‘ಮುಂಡೇದೇ’ ಅಂತ ಬಯ್ಯುತ್ತಾರೆ. ಹೀಗಾಗಿ ಮಂತ್ರಗಳ ನಡುವೆ ಮುಂಡೇದಕ್ಕೆ ಸ್ಥಾನ ಸಿಕ್ಕಿದೆ. ಎರಡೂ ಕೈಗಳ ಎರಡೂ ಹೆಬ್ಬೆರಳು, ತೋರು ಬೆರಳುಗಳ ನಡುವೆ ಸುರುಳಿ ಸುತ್ತಿಕೊಂಡ ಜನಿವಾರವನ್ನು ತೀಡುತ್ತಾ ಹುರಿಗೊಳಿಸುತ್ತಾ ಸಂಜೆ ನಾಲ್ಕಾದರೂ ಕಾಫಿ ತಯಾರಾಗದಿರುವುದಕ್ಕೆ ಅದಕ್ಕೆ ಮೂಲ ಕಾರಣವಾದ ಸರಕಾರಿ ಹಾಲಿನ ಸರಬರಾಜಿನಲ್ಲಾಗಿರುವ ವಿಳಂಬಕ್ಕೆ ಅಸಮಾಧಾನ ಪಡುತ್ತಿದ್ದಾರೆ. ‘ಕಾಲ ಕೆಟ್ಟೋಯ್ತು’ ಎನ್ನುತ್ತಾರೆ. ಸಂಜೆ ಐದರ ಹೊತ್ತಿಗೆ ಡೈರಿ ಹಾಲು ಬರುತ್ತದೆ. ಕಾಫಿ ತಯಾರಾಗುತ್ತದೆ. ಕಾಫಿ ಹೀರುತ್ತಾ ಭಾರೀ ಹೊಟ್ಟೆಯ ಮೇಲೆ ಕೈಯಾಡಿಸುತ್ತಾರೆ. ಸವರಿಕೊಳ್ಳುತ್ತಾರೆ. ‘‘ಇವತ್ತು ಎರಡು ಲೀಟರ್ ಹಾಲು ಹೆಚ್ಚಿಗೆ ತೆಗೊಳ್ಳೇ. ರಾಯರಿಗೆ ಪಂಚಾಮೃತ ಅಭಿಷೇಕ ಮಾಡಿಸ್ಬೇಕು.’’ ಕೂಗಿ ಹೇಳುತ್ತಾರೆ -ಮನೆಯಾಕೆಗೆ.

‘‘ಅಯ್ಯೋ-ಡೈರಿ ಹಾಲಿನಲ್ಲಿ ಅಭಿಷೇಕನಾ?’’ ಮನೆಯಾಕೆ ಶಂಕಿಸುತ್ತಾರೆ.

‘‘ಅಯ್ಯೋ ಮುಂಡೇದೇ-ಸುಮ್ನೆ ತಗೋ-ಬಾಹುಬಲಿಗೆ ಮಸ್ತಕಾಭಿಷೇಕಕ್ಕೇ ಡೈರಿ ಹಾಲು ಬಳಸಿದ್ದಾರೆ-ಇವಳದೊಂದು ಒಗ್ಗರಣೆ,’’

ಮನೆಯಾಕೆ ಸುಮ್ಮನಾಗುತ್ತಾಳೆ.

ಇದು ಮೇ 3, ಗುರುವಾರ ಸಂಜೆ ಐದರ ಸಮಯ.

ಎರಡನೆಯ ಘಟನೆ:

ಬೆತ್ತಲಾದ ಮಗು ಕಿಟಾರನೆ ಕಿರುಚುತ್ತದೆ; ತಾಯಿಯ ಮಡಿಲಲ್ಲಿ ಮಲಗಿಯೂ. ಯಾಕೆಂದರೆ ತಾಯಿ ಮೊಲೆಯಲ್ಲಿ ಹಾಲಿಲ್ಲ. ಈಜಿ ನಿರಾಶೆಗೊಂಡ ಮಗು ಅಳಲುಪಕ್ರಮಿಸಿದೆ. ಸ್ಲಂಗಳಲ್ಲಿ ನೀರಿಲ್ಲದಿರುವುದೇ ಆಶ್ಚರ್ಯವಾದ ಕಾರಣ ಹಾಲಿಲ್ಲದಿರುವುದು ಯೋಚಿಸಬೇಕಾದದ್ದೇ ಅಲ್ಲ. ಮಗು ಅಳುವುದು ಯಾರಿಗೂ ಕೇಳಿಸುತ್ತಿಲ್ಲ. ಹಾಲಿಲ್ಲದ ಮೊಲೆಗಳನ್ನು ಗಳಿಗೆಗೊಮ್ಮೆ ಬದಲಿಸುತ್ತಾ ಮಗುವಿನ ತುಟಿಗಳಿಗೆ ಕಟ್ಟಿಸಲು ತಾಯಿಯ ವ್ಯರ್ಥ ಹೆಣಗಾಟ. ಅತೃಪ್ತ ಮಗು ಕೈ ಕಾಲು ಝಾಡಿಸುತ್ತಾ ರಚ್ಚೆ ಹಿಡಿದಿದೆ. ಬಹು ಮಹಡಿ ಕಟ್ಟಡ ಕಟ್ಟಲು ಮಣ್ಣು ಹೊತ್ತು ಬಂದ ಕೂಲಿ ಅವಳ ಸೆರಗಿನ ತುದಿಯಲ್ಲಿ ಗಂಟು ಹಾಕಲ್ಪಟ್ಟಿದೆ. ಒಲ್ಲದ ಮನಸ್ಸಿನಲ್ಲಿ ಗಂಟು ಬಿಚ್ಚುತ್ತಾಳೆ. ಎರಡು ರೂಪಾಯಿಯ ನೋಟು ತೆಗೆಯುತ್ತಾಳೆ. ದೊಡ್ಡ ಹುಡುಗನನ್ನು ಕರೆದು ಹಣ ಕೊಟ್ಟು ಅರ್ಧ ಲೀಟರ್ ಡೈರಿ ಹಾಲು ತರಲು ಹೇಳುತ್ತಾಳೆ. ಹುಡುಗ ಓಡುತ್ತಾನೆ. ಅವನಿಗೆ ಖುಷಿ. ರೆಪ್ಪೆ ಮಿಟುಕಿಸುವುದರೊಳಗೆ ಬಿಳಿಯ ಪ್ಲಾಸ್ಟಿಕ್ ಚೀಲದಲ್ಲಿ ಹಾಲನ್ನು ಹಿಡಿದುಕೊಂಡು ಓಡಿ ಬರುತ್ತಾನೆ. ಸ್ಲಂನ ಗುಡಿಸಿಲಿನಲ್ಲಿ ಮೊದಲ ಬಾರಿಗೆ ಹಾಲು ಉಕ್ಕುತ್ತದೆ. ತಾಯಿ ಹಾಲನ್ನು ಆರಿಸಿ ಮಗುವಿಗೆ ನಿಧಾನವಾಗಿ ಕುಡಿಸುತ್ತಾಳೆ. ಮಗು ಕ್ರಮೇಣ ಅಳು ನಿಲ್ಲಿಸುತ್ತದೆ. ದೊಡ್ಡ ಹುಡುಗ ಮೀಗಬಹುದಾದ ಹಾಲಿನತ್ತ ಆಸೆಗಣ್ಣು ಬಿಟ್ಟುಕೊಂಡು ಕಾಯುತ್ತಿದ್ದಾನೆ. ಮಿಗಲೇ ಇಲ್ಲ. ಮಗು ಹಾಲೆಲ್ಲಾ ಕುಡಿದು ಬಿಟ್ಟಿತು. ದೊಡ್ಡ ಹುಡುಗನಿಗೆ ನಿರಾಶೆ. ಇಂದು ಮೇ 3, ಗುರುವಾರ ಸಂಜೆ ಐದರ ಸಮಯ.

ಮೂರನೆಯ ಘಟನೆ:

   ಹಸ್ತಿನಾವತಿಯಲ್ಲಿ ತುಂಬಾ ಟ್ರಾಫಿಕ್ ಇರುವ ಜಾಗದಲ್ಲಿಯೇ ಒಂದು ದೊಡ್ಡ ಸರಕಾರಿ ಆಸ್ಪತ್ರೆ ಇದೆ. ಅಪಘಾತಗಳಾದ ತಕ್ಷಣ ಅಡ್ಮಿಟ್ ಆಗಲು ಅನುಕೂಲವಾಗಲಿ ಎಂದೇ ಹಸ್ತಿನಾವತಿಯ ಜನನಿಬಿಡ ಪ್ರದೇಶಗಳಲ್ಲಿ ಬಹು ಹಿಂದೆ ಹಸ್ತಿನಾವತಿಯನ್ನು ಆಳುತ್ತಿದ್ದ ಪ್ರಭುಗಳು ಈ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಇಲ್ಲಿ ವೈದ್ಯರು ‘ಲಂಚ ಕಡಿಮೆಯಾಗಿದೆ’ ಎಂದು ಮುಷ್ಕರ ಹೂಡಿದರೆ, ನರ್ಸುಗಳು ರೋಗಿ ಬಂದಾಕ್ಷಣ ‘‘ಮಲಗಿ’’ ಎನ್ನುತ್ತಾರೆ. ಮಲಗಿದ ತಕ್ಷಣ ‘‘ಬಿಚ್ಚಿ’’ ಎನ್ನುತ್ತಾರೆ. ಬಿಚ್ಚಿದ ತಕ್ಷಣ ಇಂಜೆಕ್ಷನ್ ಚುಚ್ಚಿ ‘ನೆಕ್ಸ್ಟ್’ ಎನ್ನುತ್ತಾರೆ. ದಾಖಲಾಗಿರುವ ನೂರಾರು ರೋಗಿಗಳು ಹಾಲಿಗಾಗಿ ಕಾಯುತ್ತಿರುತ್ತಾರೆ. ನಿತ್ಯ ಮಧ್ಯಾಹ್ನ ಎರಡು ಗಂಟೆಗೇ ಹಾಲು ತರುತ್ತಿದ್ದ ಮಿಲ್ಕ್ ವ್ಯಾನ್ ಇನ್ನೂ ಬಂದಿಲ್ಲ. ಕೆಲವರು ಬ್ರೆಡ್ ತಿನ್ನಬೇಕು. ಕೆಲವರು ಮಾತ್ರೆ ನುಂಗಬೇಕು. ‘‘ಹಾಲು ಇನ್ನೂ ಬರ್ಲಿಲ್ವಾ?’’ ಅಂತ ಚಪಲದ ರೋಗಿಯೊಬ್ಬ ಆಯಾಳನ್ನು ಕೇಳುತ್ತಾನೆ. ‘‘ಬಿಟ್ಟಿ ಹಾಲಿಗೆ ಅದೇನು ಬಾಯಿ ಬಿಡ್ತೀರೋ, ಬರ್ತದೆ ಇರ್ರಿ’’ ಎಂದು ರೇಗುತ್ತಲೇ ಆಕೆ ನೆಲ ಒರೆಸುತ್ತಾಳೆ.

ಗುಂಯ್ ಗುಡುವ ನೊಣಗಳ ಹಿಂಡು. ಕಮಟು ವಾಸನೆ.

ಕಾಯುವಿಕೆಯ ಮಹತ್ವ ಬರೇ ಪ್ರೇಮದಲ್ಲಲ್ಲ. ಡೈರಿ ಹಾಲಿಗೆ ಒಂದು ದಿನ ಕಾಯ್ದು ನೋಡಿದರೆ ಕವಿಗಳು ಹಾಲಿನ ಬಗ್ಗೆಯೂ ವಿರಹದ ಪ್ರೇಮ ಕಾವ್ಯ ಬರೀತಾರೆ ಅಂತ ಆರನೆ ವಾರ್ಡಿನಲ್ಲಿ ಮೂರನೆ ಬೆಡ್ಡಿನಲ್ಲಿ, ಬೈಕ್ ಆಕ್ಸಿಡೆಂಟ್‌ನಲ್ಲಿ ಕಾಲುಮುರಿದುಕೊಂಡು ಮಲಗಿರುವ ಬುದ್ಧ್ದಿಜೀವಿಗಳು ವಿಮರ್ಶಿಸುತ್ತಿದ್ದಾರೆ.

ಕೊನೆಗೊಮ್ಮ ಹಾಲು ಬರುತ್ತದೆ. ಎಲ್ಲರೂ ತಂತಮ್ಮ ಫ್ಲಾಸ್ಕ್, ಟಿಫನ್ ಕ್ಯಾರಿಯರ್, ರೈಲುಚೆಂಬುಗಳನ್ನು ನೀಡಿ ಹಾಲನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಹಾಲಿನ ಕ್ಯಾನುಗಳನ್ನು ಹೊತ್ತು ಗಾಡಿ ಮುಂದೆ ಸಾಗುತ್ತದೆ. ಮಂಚದ ಮೇಲೆ ಮಲಗಿದ್ದ ರೋಗಿಗಳು ಸೊರ್ರನೆ ಹಾಲು ಹೀರತೊಡಗುತ್ತಾರೆ. ನುಖ ಪ್ರಸನ್ನವಾಗುತ್ತದೆ.

ಇಂದು ಮೇ 3, ಗುರುವಾರ ಸಂಜೆ ಐದರ ಸಮಯ.

ನಾಲ್ಕನೆ ಘಟನೆ:

ಹಸ್ತಿನಾವತಿಯ ಮುಖ್ಯರಸ್ತೆಯಲ್ಲಿ ಮದುವೆ ಛತ್ರವಿದೆ. ಇಂದು ಶಾಸಕ ಸೈಂಧವರ ಪುತ್ರ ಘಟೋದ್ಗಜನ ವಿವಾಹವಿದೆ. ಭಾರೀ ವಿವಾಹ. ಅಯೋಧ್ಯೆಯಿಂದ ಬೀಗರು ಚಪ್ಪರದ ದಿನವೇ ಎಕ್ಸ್‌ಪ್ರೆಸ್ ಬಸ್ಸುಗಳಲ್ಲಿ, ಮಾರ್ಕ್ ಫೋರ್ ಕಾರುಗಳಲ್ಲಿ ಬಂದಿಳಿದಿದ್ದಾರೆ. ಬೀಗರಿಗೆ ಕಾಫಿ ಮಾಡಿಸಬೇಕು. ಡೈರಿಯಿಂದ ಹಾಲು ಬಂದಿಲ್ಲ. ಸೈಂಧವರು ರೇಗಾಡುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ಹಸ್ತಿನಾವತಿ ಪಟ್ಟಣದಲ್ಲಿ ಹಾಲಿನ ವಿಳಂಬ ಕುರಿತು ಪ್ರಸ್ತಾಪ ಮಾಡಬೇಕೆಂದುಕೊಳ್ಳುತ್ತಾರೆ. ‘‘ಏನ್ರೀ ? ಐದು ಘಂಟೆ ಆಗ್ತಾ ಬಂತು, ಕಾಫಿ-ಗೀಫಿ ಏನೂ ಇಲ್ಲಾ?’’ ಅಂತ ಬೀಗರೇ ಲಜ್ಜೆ ಬಿಟ್ಟು ಕೇಳಿದಾಗ ಸೈಂಧವರ ಮುಖ ಚಿಕ್ಕದಾಗುತ್ತದೆ. ಘಟೋದ್ಗಜನಂತೂ ‘ಕಂದಪದ್ಯ’ ಹಾಡುತ್ತಾ ಕುದಿಯುತ್ತಿದ್ದಾನೆ. ರೊಯ್ಯನೆ ಡೈರಿಯ ವಾಹನ ಬರುತ್ತದೆ. ಕ್ಷಣಾರ್ಧದಲ್ಲಿ ಕಾಫಿ ತಯಾರಾಗುತ್ತದೆ. ಬೀಗರ ಮುಖ ಪ್ರಸನ್ನವಾಗುತ್ತದೆ. ಘಟೋದ್ಗಜ ಶಾಂತನಾಗುತ್ತಾನೆ. ‘‘ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು. ಏನು ಮಾಡೋಕಾಗುತ್ತೆ?’’ ಅಂತ ಬೇಸರ ಮರೆತು ಪರಸ್ಪರ ಕೈ ಕುಲುಕಿ ಕೊಳ್ಳುತ್ತಾರೆ. ಸೈಂಧವರು ಅಡಿಗೆ ಭಟ್ಟನಿಗೆ ಕೂಗಿ ಹೇಳುತ್ತಾರೆ. ‘‘ಐವತ್ತು ಲೀಟರು ಹಾಲಿಗೆ ಹೆಪ್ಪು ಹಾಕಿಬಿಡು, ಬೆಳಗ್ಗೆ ಮಜ್ಜಿಗೆ ಮಾಡಲಿಕ್ಕೆ.’’

ಎಲ್ಲರೂ ಸೊರ್ರನೆ ಕಾಫಿ ಹೀರುವಾಗ ಡೈರಿ ವಾಹನ ಹೊರಡುತ್ತದೆ. ಇಂದು ಮೇ 3, ಗುರುವಾರ ಸಂಜೆ ಐದರ ಸಮಯ.

ಐದನೆಯ ಘಟನೆ:

ಹಸ್ತಿನಾವತಿ ಪಟ್ಟಣದ ಹೊರ ವಲಯದಲ್ಲಿರುವ ಲೇಡೀಸ್ ಹಾಸ್ಟೆಲ್‌ನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಿಸಬೇಕೆಂದು ವಿಧಾನ ಸಭೆಯಲ್ಲಿ ಪ್ರಸ್ತಾಪ ಬಂದಿದೆ. ಹಸ್ತಿನಾವತಿಯ ನಾಗರಿಕರು ಲೇಡೀಸ್ ಹಾಸ್ಟೆಲ್‌ನ್ನು ಐದು ಕಿಲೋಮೀಟರುಗಳಿಗಿಂತ ಹೆಚ್ಚು ದೂರಕ್ಕೆ ವರ್ಗಾಯಿಸಬೇಕೆಂದೂ, ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ. ಹಸ್ತಿನಾವತಿ ಪಟ್ಟಣದ ನಾಗರಿಕರ ಪ್ರಮುಖ ಸಮಸ್ಯೆ ಹಾಸ್ಟೆಲ್ಲಿನ ಶಬ್ದದಿಂದ ತಮಗೆ ನಿದ್ರೆ ಬರುತ್ತಿಲ್ಲ ಎಂಬುದೇ ಆಗಿದೆ. ಯಾವುದೇ ಕಟ್ಟಡದ ದುರಂತದ ಹಿಂದೆ ಈ ಬಗೆಯ ಹಾಸ್ಟೆಲು ಹುಡುಗಿಯರ ಮಾತಿನ ಶಬ್ದದ ಪರಿಣಾಮ ಇರಬಹುದಾದದ್ದನ್ನು ನ್ಯಾಯಾಂಗ ತನಿಖೆ ಮಾಡುವವರು ಗಮನಿಸಲೇಬೇಕೆಂದು ಈಗಾಗಲೇ ಪೇಪರಿನಲ್ಲಿ ಪ್ರಕಟಿಸಿರುವುದರಿಂದ ಈ ಹಾಸ್ಟೆಲ್‌ನ್ನು ದೂರಕ್ಕೆ ಸ್ಥಳಾಂತರಿಸಿ ಎಂದು ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ಮಂದಿ ಕೇಳಿರುವುದು ನ್ಯಾಯವೇ ಆಗಿದೆ. ಕಷ್ಟಪಟ್ಟು ಓದುವ ಹುಡುಗಿಯರು ಇಲ್ಲಿದ್ದಾರೆ. ಓದದೆ ಓಡಾಡಿಕೊಂಡು ಇರುವವರೂ ಇದ್ದಾರೆ. ಮೇ ತಿಂಗಳಿಗಾಗಿ ’ಪ್ರಿಫೆಕ್ಟ್’ ಎಂದು ದಾಕ್ಷಾಯಿಣಿದೇವಿ ಎಂಬ ಜಗನ್ಮಾತಾ ಸ್ವರೂಪಿಣಿಯನ್ನು ನೇಮಕ ಮಾಡಿದ್ದಾರೆ. ಪ್ರತಿ ಗುರುವಾರ ಹಾಸ್ಟೆಲ್‌ನಲ್ಲಿ ಸ್ವೀಟ್ಸ್ ಮಾಡಿಸುವುದು ಸಂಪ್ರದಾಯವಾದ್ದರಿಂದ ಈ ವಾರ ಬೊಂಬಾಟ್ ಆದ ಹಾಲಿನ ಖೀರು ಮಾಡಿಸುವುದಾಗಿ ದಾಕ್ಷಾಯಿಣಿದೇವಿಯವರು ಘೋಷಿಸಿದ್ದಾರೆ. ಈ ಗುರುವಾರ ಸಂಜೆ ಹಾಲಿನ ಖೀರು ಕುಡಿಯಲು ತಂತಮ್ಮ ಲೋಟಗಳನ್ನು ವಿಮ್‌ನಿಂದ ತೊಳೆದು ಶುದ್ಧಮಾಡಿಕೊಂಡಿದ್ದಾರೆ. ದ್ರೌಪದಿ, ಸುಧೇಷ್ಣೆ, ಗಾಂಧಾರಿ, ಭಾನುಮತಿ, ಕುಂತಿ ಮುಂತಾದ ಎಂಎಸ್ಸಿ ಹುಡುಗಿಯರು ತಮಗೆ ಪ್ರಿಯವಾದ ಹಾಲಿನ ಖೀರನ್ನು ತಿಂಗಳ ಮೊದಲ ವಾರದಲ್ಲೇ ಮಾಡಿಸುತ್ತಿರುವ ದಕ್ಷಬ್ರಹ್ಮನ ಪುತ್ರಿ ದಾಕ್ಷಾಯಿಣಿದೇವಿಯನ್ನು ಜೂನ್ ತಿಂಗಳಿಗೂ ಪ್ರಿಫೆಕ್ಟ್ ಆಗಿ ಮುಂದುವರಿಸಲು ಯೋಚಿಸಿದ್ದಾರೆ.

ಇಂದು ಮೇ 3, ಗುರುವಾರ ಸಂಜೆ ಮೂರಾಯಿತು, ಹಾಲು ಬರಲಿಲ್ಲ. ಹಸ್ತಿನಾವತಿಯ ಯಾವ ಭಾಗಕ್ಕೆ ಹಾಲಿನ ಸರಬರಾಜು ನಿಂತರೂ ಲೇಡೀಸ್ ಹಾಸ್ಟೆಲಿಗೆ ಹಾಲು ಒಮ್ಮೆಯೂ ತಪ್ಪಿಲ್ಲ. ಡೈರಿಯ ಹುಡುಗರಿಗೆ ಹಾಸ್ಟೆಲ್‌ನ ಬಗ್ಗೆ ಪ್ರೇಮವೋ ಭಯವೋ ಅಂತೂ ನಿತ್ಯ ಮಧ್ಯಾಹ್ನ ಎರಡು ಗಂಟೆಗೇ ಹಾಲು ಬರುತ್ತಿತ್ತು ಇಂದು ನಾಲ್ಕಾದರೂ ಬರಲಿಲ್ಲ. ದಾಕ್ಷಾಯಿಣಿದೇವಿಯವರಿಗೆ ವಿಪರೀತ ಸಿಟ್ಟು ಬಂದಿದೆ. ಅಪರೂಪಕ್ಕೆ ಹಾಲಿನ ಖೀರು ಮಾಡಿಸುವಾಗಲೇ ಈ ಬಗೆಯ ಅವಮಾನವಾಗಬೇಕೇ ಎಂದು ಹಂಬಲಿಸಿ ಹಸ್ತಿನಾವತಿಯ ಹಾಲಿನ ಡೈರಿಗೆ ಫೋನಿಸಿದ್ದಾರೆ.

‘ಅಲ್ರೀ ನಿಮಗೆ ಬುದ್ಧಿ ಇದೆಯಾ? ಇಲ್ಲಿ ಹೆಣ್ಣುಮಕ್ಕಳು ಸಾಯ್ತಿದ್ದೀವಿ. ನಿಮ್ಮ ಡೈರಿಯಿಂದ ಹಾಲು ಬಂದಿಲ್ಲ. ಇದು ಸ್ತ್ರೀ ಶೋಷಣೆ. ನಾನು ದಾಕ್ಷಾಯಿಣಿದೇವಿ ಮಾತಾಡ್ತಿದೀನಿ. ಇನ್ನರ್ಧ ಗಂಟೇಲಿ ನಮ್ಮ ಹಾಸ್ಟೆಲ್‌ಗೆ ಹಾಲು ಬರದಿದ್ದರೆ ನಾವು ಇನ್ನೂರೈವತ್ತು ಜನ ಹುಡುಗಿಯರು ಡೈರಿಗೆ ಬಂದು ಘೇರಾವ್ ಮಾಡ್ತೇವೆ’’.

 ‘‘ಸ್ವಲ್ಪ ಇರಿ ಮಹಾತಾಯಿ ಏನೋ ತೊಂದರೆಯಾಗಿತ್ತು. ಈಗ ಬಂದು ಬಿಡುತ್ತೆ ಲಾರಿ ಹೊರಟಿದೆ’’ ಡೈರಿಯಿಂದ ಉತ್ತರ.

‘‘ಏನ್ರೀ ಅದು ತೊಂದರೆ? ಇವತ್ತು ನಾವಿಲ್ಲಿ ಹಾಲಿನ ಖೀರು ಮಾಡಿಸ್ತಿದ್ದೀವಿ ಗೊತ್ತಾ? ಹ್ಞಾಂ! ಐವತ್ತು ಲೀಟರು ಕಳಿಸಿ’’.

ಹಾಲು ಬಂತು. ಧನ್ಯತಾಭಾವ ದಾಕ್ಷಾಯಿಣೀಯದೇವಿಯ ಮುಖದಲ್ಲಿ, ಖೀರು ತಯಾರಾಯಿತು. ಹುಡುಗಿಯರು ಲೋಟಗಳಿಗೆ, ತಟ್ಟೆಗಳಿಗೆ ಖೀರು ತುಂಬಿಸಿಕೊಂಡು ಕುಡಿಯುತ್ತಾ ಡಿಸ್ಕೊ ಮಾಡಿದರು. ಇಷ್ಟು ರಸಪೂರ್ಣವಾದ ಹಾಲಿನ ಖೀರನ್ನು ಮಾಡಿಸಿದ ಪ್ರಿಫೆಕ್ಟ್ ದಾಕ್ಷಾಯಿಣಿದೇವಿಯನ್ನು ಮನಸಾರೆ ಅಭಿನಂದಿಸಿ, ‘‘ನೀನು ಎಂ.ಎ. ಓದೋದು ಬಿಟ್ಟು ಪ್ರಿಫೆಕ್ಟ್ ಆಗಿಯೇ ಉಳಿದುಬಿಡೆ’ ಅಂತಲೂ ಕೆಲವರು ಕೇಳಿಕೊಂಡರು. ನಿಮಿಷಾರ್ಧದಲ್ಲಿ ಖೀರಿನ ಪಾತ್ರೆ ಬರಿದಾಯ್ತು. ಢರ್ರನೆ ತೇಗು.

ಇಂದು ಮೇ 3 ಗುರುವಾರ, ಸಮಯ-ಗೊತ್ತಲ್ಲ, ಬಿಡಿ.

ಆರನೆಯ ಮತ್ತು ಕೊನೆಯ ಘಟನೆ:

 ಹಸ್ತಿನಾವತಿಯ ಹಾಲಿನ ಡೈರಿ. ಮುಖ್ಯದ್ವಾರದಿಂದ ಕೀಚಕ ಮತ್ತು ವಿದುರ ಎಂಬ ಇಬ್ಬರು ನೌಕರರು ಹೊರಬರುತ್ತಿದ್ದಾರೆ. ಮುಖದಲ್ಲಿ ಏನೋ ಚಿಂತೆ. ಸಂಬಳ ಸಾಲುವುದಿಲ್ಲ. ಓಸಿ ಕಟ್ಟಬೇಕು ಇತ್ಯಾದಿ ಯೋಚನೆಗಳು. ರೇಸ್ ಕೋರ್ಸ್‌ಗೆ ಹೋಗೋಣ ಅಂತ ವಿದುರ ಕರೆದಾಗ ಕೀಚಕ ‘ಹೋಗಲೋ ನಿನಗಂತು ಹೆಂಡ್ರು ಮಕ್ಳಿಲ್ಲ’ ಅಂತ ಬಲವಾಗಿ ವಿರೋಧಿಸಿ ‘‘ಬೇಕಾದ್ರೆ ಬಾ ಓಸಿ ಕಟ್ಟೋಣ’’ ಎಂದು ಮುಖ್ಯದ್ವಾರ ದಾಟಿದರು. ಹಸ್ತಿನಾವತಿಯ ರಾಜಬೀದಿಯಲ್ಲಿ ವಿದುರ ಮತ್ತು ಕೀಚಕರ ಸಂಭಾಷಣೆ:

ಕೀ-‘‘ಹೋದ ತಕ್ಷಣ ಸ್ನಾನ ಮಾಡಬೇಕೂ ಗುರೂ-’’

ವಿ-‘‘ಯಾಕೆ ಗುರೂ?’’

ಕೀ-‘‘ಕಣಿ ಕೇಳು, ಯಾಕಂತೆ! ಕಜ್ಜಿನಾಯನ್ನು ಕೈನಿಂದ ಹಿಡಿದು ಎಳೆದಾಕಿದ್ದೀನಿ ಈವತ್ತು ಗೊತ್ತಾ?’’

ವಿ-‘‘ಎಲ್ಲಿಂದ?’’

ಕೀ-‘‘ಹಾಲಿನ ಟ್ಯಾಂಕಿಯಿಂದ! ನನ್ಮಗನದು ಹಾಲನ್ನು ನೆಕ್ತಿತ್ತು. ನೆಕ್ಕೊಂಡು ಹಾಳಾಗಿ ಹೋಗ್ಲೀ ಅಂತ ನಾನು ಸುಮ್ಕಿದ್ರೆ ಜಾರಿ ಟ್ಯಾಂಕಿಗೆ ಬಿದ್ಬಿಡ್ತು ಗುರೂ-ನಾಕು ಸಾವಿರ ಲೀಟರು ಹಾಲಿನ ಟ್ಯಾಂಕಲ್ಲಿ ಈಜು ಹೊಡೀತೈತೆ ನನ್ಮಗನದು’’.

ವಿ-‘‘ಎಷ್ಟೊತ್ತಿನಲ್ಲಿ?’’

ಕೀ-‘‘ಈವತ್ತು ಬೆಳಗ್ಗೇನೇ ಗುರೂ-ಧರ್ಮರಾಯ ಸೂಪರ್‌ವೈಸರ್ ಇದ್ದರು. ‘ಕೀಚ್ಕಾ ಎಳೆದುಹಾಕೋ. ಹಾಲಿನ ಟ್ಯಾಂಕಿಗೆ ನಾಯಿ ಬಿದ್ ಐತೆ ಅಂದರು’’.

ವಿ-‘‘ಆಗಾಕಿಲ್ಲ ಅನ್ನಬೇಕಾಗಿತ್ತು. ನಾವಿರೋದು ಕ್ಯಾನು ತೊಳೆಯೋಕೆ. ನಾಯಿ ಎಳೆಯೋಕಾ? ಅಂತ ನೀನು ಕೇಳಬೇಕಿತ್ತು ಗುರೂ.’’

ಕೀ-‘‘ಏನು ಮಾಡೋದು ಗುರು-ನಾಕು ಸಾವಿರ ಲೀಟರ್ ಹಾಲು! ಹೊಟ್ಟೆ ಉರೀತು. ನಾನೂ ಟ್ಯಾಂಕಿನೊಳಕ್ಕೆ ಇಳಿದು ಆಚೆಗೆ ಎಳೆದು ಹಾಕ್ಬೆ. ಅದು ಕಜ್ಜಿ ನಾಯಿ ಗುರೂ-’’

ವಿ-‘‘ಆ ಕಜ್ಜಿ ನಾಯಿಗಿಂತ ನೀನೇ ಗಲೀಜಾಗಿದ್ದಿ. ಅದಿರ್ಲಿ ಆಮೇಲೆ ಹಾಲು ಏನು ಮಾಡಿದ್ರು?’’

ಕೀ-‘‘ಇನ್ನೇನು ಮಾಡ್ತಾರೆ ಗುರು? ಅದನ್ನೇ ಸಿಟೀಗೆ ಸಪ್‌ಲೈ ಮಾಡಿದ್ರು, ಅದ್ಕೇ ಈವತ್ತು ಹಸ್ತಿನಾವತಿಗೆ ಹಾಲಿನ ಸಪ್‌ಲೈ ಲೇಟಾಯ್ತು’’

ವಿ-‘‘ನಾಯಿ ಸತ್ತಿರಲಿಲ್ಲ ಅಂದ್ಮೇಲೆ ತಪ್ಪಿಲ್ಲ ಬುಡು ಗುರು. ಜೀವದ ನಾಯಿ ತಾನೆ’’

ಕೀ-‘‘ಅದೆಲ್ಲ ಏನು ಮಾಡಕ್ಕಾಗಾಕಿಲ್ಲ ಗುರು. ಮನೇಲಿ ಹಾಲು ಕಾಯಿಸುವಾಗಲೇ ಸೊಳ್ಳೆ ನೊಣ ಬೀಳ್ತವೆ. ಸಾವಿರಾರು ಲೀಟರು ಇರೋ ಡೈರೀಲಿ ಒಂದು ಜುಜುಬಿ ನಾಯಿ ಬೀಳೋದೇನು ಮಹಾ? ಏನಂತಿ ಗುರೂ?’’

ವಿ-‘‘ನೀನೇನೇ ಹೇಳು ಗುರೂ, ಈವತ್ತು ಮಾತ್ರ ನಾನು ಡೈರಿ ‘ಹಾಲು ಕುಡಿಯಾಕಿಲ್ಲ’’.

ಕೀ-‘‘ಥೂ ನಿನ್ನ? ಏನು ಗುರು. ನಾನೇನೋ ಈವತ್ತು ನಾಯಿ ಬಿತ್ತು ಅಂತ ಹೇಳ್ದೆ ಅದ್ಕೆ ಈಗಂತಿ. ಮೊನ್ನೆ ಇಲಿ ಬಿದ್ದಿತ್ತು! ಸುಮ್ನೆ ಕುಡ್ದೆ? ಅದೆಲ್ಲ ಮನಸ್ನಾಗೆ ಇಟ್ಕಬಾರ್ದು. ಹಾಲು ಅಂದರೆ ಅಮೃತ ಇದ್ದಂಗೆ ಗುರು, ಅದಿರ್ಲಿ ಗುರು. ಈ ಸಾರಿ ಬೋನಸ್ ಬಂದ್ರೆ ರೇಸ್ ಕೋರ್ಸ್‌ಗೆ ಹೋಗಿಬಿಡಾಣ ಗುರೂ-’’

ಇಂದು ಮೇ 3 ಗುರುವಾರ. ಬೆಳಗಿನ ಸಮಯ ಸತ್ಯವನ್ನೇ ಹೇಳಿದ್ದೇನೆ.

ಸತ್ಯವನ್ನಲ್ಲದೆ ಬೇರೇನನ್ನೂ ಹೇಳಿಲ್ಲ.

ಅಗ್ರಹಾರದ ಶಂಕರಭಟ್ಟರು; ಮನೆಯಾಕೆ; ಸ್ಲಂನ ತಾಯಿ-ಮಗು; ಹಸ್ತಿನಾವತಿಯ ಆಸ್ಪತ್ರೆಯ ಹತ್ತಾರು ವೈದ್ಯರು, ಬಿಳಿ ನರ್ಸುಗಳು, ನೂರಾರು ರೋಗಿಗಳು; ಶಾಸಕ ಸೈಂಥವರು, ಪುತ್ರ ಘಟೋದ್ಗಜ, ತತ್ಸಂಬಂಧವಾದ ಮದುವೆಯಲ್ಲಿ ಕಾಫಿ ಹೀರಿದರು; ದಾಕ್ಷಾಯಿಣಿ ದೇವಿಯವರು, ಅವರ ಇನ್ನೂರೈವತ್ತು ಅನುಯಾಯಿಗಳು; ಕಜ್ಜಿ ನಾಯಿ ಈಜು ಹೊಡೆದ ಹಾಲನ್ನು ಕುಡಿದ ಬಗ್ಗೆ ಬೇಸರ ಮಾಡಿಕೋಬಾರದು. ಹಸ್ತಿನಾವತಿಯ ಹಾಲಿನ ಡೈರಿಯ ದೇವರಂಥ ಅಧಿಕಾರಿಗಳು ಬೇಸರ ಮಾಡಿಕೋಬಾರದು. ಈವತ್ತು ಸಮಾಜದಲ್ಲಿ ಹೆಚ್ತಿರೋ ಕಜ್ಜಿನಾಯಿಗಳ ಹಾಗೆ. ಭಗವಂತನ ಸೃಷ್ಟಿಯಲ್ಲಿ ಎಲ್ಲಾ ಜೀವಗಳೂ ಒಂದೇ. ನಾಯಿ ಬಿದ್ದ ಕಾರಣಕ್ಕೇ ನಾಲ್ಕು ಸಾವಿರ ಲೀಟರು ಹಾಲನ್ನು ಚರಂಡಿಗೆ ಸುರಿಯುವುದು ಮೂರ್ಖತನ. ಪ್ರಾಣಿಗಳಲ್ಲಿ ದಯೆ ಇಡಿ ಎಂದು ಬುದ್ಧನೂ, ಏಸುವೂ, ಭಗವದ್ಗೀತೆಯೂ ಸಾರಿ ಹೇಳಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸುವುದು ಲೇಸು. ಲೇಸು. ಲೇಸು.

Writer - ನಾಗತಿಹಳ್ಳಿ ಚಂದ್ರಶೇಖರ್

contributor

Editor - ನಾಗತಿಹಳ್ಳಿ ಚಂದ್ರಶೇಖರ್

contributor

Similar News

ಸಲ್ಮಾತು