ಪ್ರಧಾನಿ ಮೋದಿ ಕಚೇರಿಯಲ್ಲಿ ಯಾರಿಗೆ ಎಷ್ಟು ಸಂಬಳ ?

Update: 2016-08-08 10:05 GMT

ಹೊಸದಿಲ್ಲಿ, ಆ.8: ಮಾಹಿತಿ ಹಕ್ಕು ಕಾಯ್ದೆಯನ್ವಯ ಪ್ರಧಾನಮಂತ್ರಿ ಕಾರ್ಯಾಲಯ ತನ್ನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಾಸಿಕ ವೇತನಗಳ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸಿದೆ.

ಪ್ರಧಾನಿಯವರ ಕಾರ್ಯದರ್ಶಿಯಾಗಿರುವ 1983ನೆ ಬ್ಯಾಚಿನ ಹಿರಿಯ ಐಎಎಸ್ ಅಧಿಕಾರಿ ಭಾಸ್ಕರ್ ಖುಲ್ಬೆ ಅವರು ಪಿಎಂಒ ದಲ್ಲಿ ಅತ್ಯಧಿಕ ವೇತನ ಪಡೆಯುವ ಅಧಿಕಾರಿಯಾಗಿದ್ದು ಅವರಿಗೆ ಮಾಸಿಕ 2.01 ಲಕ್ಷ ರೂ. ವೇತನ ದೊರೆಯುತ್ತಿದೆಯೆಂದು ಪ್ರಧಾನಿ ಕಾರ್ಯಾಲಯ ಜೂನ್ 1 ರಂದು ಬಿಡುಗಡೆಗೊಳಿಸಿದ ಮಾಹಿತಿ ತಿಳಿಸುತ್ತದೆ.

ಇತ್ತೀಚಿನವರೆಗೂ ಪ್ರಧಾನಿಯವರ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಭಾಸ್ಕರ್ ಅವರನ್ನು ಕಳೆದ ವಾರವಷ್ಟೇ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿತ್ತು.

ಅಂತೆಯೇ ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಹಾಗೂ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ಮಾಸಿಕ 1,62,500 ರೂ. ವೇತನ ಪಡೆಯುತ್ತಾರೆ. ಮೂವರೂ ನಿವೃತ್ತ ಐಎಎಸ್ ಅಧಿಕಾರಿಗಳಾಗಿರುವುದರಿಂದ ತಮ್ಮ ಮಾಸಿಕ ವೇತನದ ಹೊರತಾಗಿ ಪಿಂಚಣಿಯನ್ನೂ ಪಡೆಯುತ್ತಿದ್ದಾರೆ.

ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಪ್ರಧಾನಿಯವರ ಹಳೆ ಸಹವರ್ತಿ ಜೆ.ಎಂ. ಠಕ್ಕರ್ ಅವರು ಪ್ರತಿ ತಿಂಗಳು 99,434 ರೂ. ಮತ್ತು ಪಿಂಚಣಿ ಪಡೆಯುತ್ತಾರೆ. ಕಾರ್ಯಾಲಯದ ಮಾಹಿತಿ ಅಧಿಕಾರಿ ಶರತ್ ಚಂದರ್ ಅವರ ವೇತನ 1.26 ಲಕ್ಷ ರೂ. ಆಗಿದೆ.

ಜಂಟಿ ಕಾರ್ಯದರ್ಶಿಗಳಲ್ಲಿ ತರುಣ್ ಬಜಾಜ್ ಅವರ ವೇತನ 1,77,750 ರೂ. ಆಗಿದ್ದರೆ,ಇತರ ಜಂಟಿ ಕಾರ್ಯದರ್ಶಿಗಳಾದ ಅನುರಾಗ್ ಜೈನ್ ಹಾಗೂ ಎ.ಕೆ. ಶರ್ಮಾ ಕ್ರಮವಾಗಿ 1,76,250 ರೂ. ಹಾಗೂ 1,73,250 ರೂ. ವೇತನ ಪಡೆಯುತ್ತಿದ್ದಾರೆ.

 ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳ ವೇತನವನ್ನು ಬಹಿರಂಗ ಪಡಿಸಲಾಗಿತ್ತು. 2012ರಲ್ಲಿ ಅಂದಿನ ಪ್ರಧಾನಿ ಸಿಂಗ್ ಅವರ ಸಲಹೆಗಾರ ಟಿ.ಕೆ.ಎ. ನಾಯರ್, ಆಗಿನ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಶಿವ್ ಶಂಕರ್ ಮೆನನ್, ವಿಶೇಷ ರಾಯಭಾರಿ ಎಸ್.ಕೆ. ಲಂಬಾ, ಆಗಿನ ಮುಖ್ಯ ಕಾರ್ಯರ್ಶಿ ಪುಲೋಕ್ ಚಟರ್ಜಿ ಇವರೆಲ್ಲ ಸಮಾನ ವೇತನ 1.61 ಲಕ್ಷ ರೂ. ಪಡೆಯುತ್ತಿದ್ದರು. ಇದರಲ್ಲಿ ಅವರ ವೇತನ 1.11 ಲಕ್ಷ ರೂ. ಆಗಿದ್ದರೆ ಅವರಿಗೆ ದೊರಕುತ್ತಿದ್ದ ಪಿಂಚಣಿ ಮೊತ್ತ 50,000 ರೂ. ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News