ಕಾಶ್ಮೀರದಲ್ಲಿ ಸರಕಾರದ ಮಾನವೀಯ ಸ್ಪರ್ಶ ಕಾಣೆಯಾಗಿದೆ: ಸುಪ್ರೀಂಕೋರ್ಟ್ ಕಳವಳ

Update: 2016-08-10 03:00 GMT

ಹೊಸದಿಲ್ಲಿ, ಆ.10: ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯಾಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನತೆಗೆ ಭರವಸೆ ನೀಡಿದ ಬೆನ್ನಲ್ಲೇ, ತಿಂಗಳಿನಿಂದ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿರುವ ಕಣಿವೆ ರಾಜ್ಯದಲ್ಲಿ ಮಾನವೀಯ ದೃಷ್ಟಿಕೋನ ಮಾಯವಾಗಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ತಿಂಗಳ ಬಳಿಕವೂ ಮುಂದುವರಿದಿದೆ. ಜುಲೈ 8ರಂದು ಭದ್ರತಾಪಡೆ ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 55 ಮಂದಿ ಬಲಿಯಾಗಿ ನೂರಾರು ಮಂದಿ ಗಾಯಗೊಂಡಿದ್ದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಹಾಗೂ ಅಮಿತವ್ ರಾಯ್ ಅವರನ್ನೊಳಗೊಂಡ ಪೀಠ ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಕಾಶ್ಮೀರದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಮಾನವೀಯ ಸ್ಪರ್ಶದ ಪರಿಹಾರ ಬೇಕಿದೆ. ಆದರೆ ಇದು ಈಗ ಮಾಯವಾಗಿದೆ. ಜನರನ್ನು ಪ್ರೀತಿ ಹಾಗೂ ಅನುಕಂಪದಿಂದ ನೋಡಬೇಕು. ಮಾಯವಾಗಿರುವ ಈ ಅಂಶವನ್ನು ನೀಡಲು ಸರಕಾರ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಶ್ರೀನಗರದಲ್ಲಿ 22 ವರ್ಷದ ಯುವಕ ಶಬೀರ್ ಅಹ್ಮದ್ ಮಿರ್ ಎಂಬಾತನನ್ನು ಜುಲೈ 10ರಂದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದ ಡಿವೈಎಸ್ಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಎಸ್ಪಿ ನಿರಾಕರಿಸಿದ ಕ್ರಮದ ವಿರುದ್ಧ ಶ್ರೀನಗರ ನ್ಯಾಯಾಲಯ ಆರಂಭಿಸಿರುವ ನ್ಯಾಯಾಲಯ ನಿಂದನೆ ಅರ್ಜಿಯ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ರಾಜ್ಯ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News