ಮಿಯಾ- ಬೀವಿ ವಿಚ್ಛೇದನಕ್ಕೆ ರಾಝಿ ತೊ ಕೋರ್ಟಿಗೆ ಕಾರಣದ ಉಸಾಬರಿ ಬೇಡ: ಮದ್ರಾಸ್ ಹೈಕೋರ್ಟ್

Update: 2016-08-11 04:07 GMT

ಚೆನ್ನೈ, ಆ.11: ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ವಿಚ್ಛೇದನಕ್ಕೆ ಕಾರಣ ನೀಡುವಂತೆ ಸೂಚಿಸಿ, ನ್ಯಾಯಾಂಗದ ಮೂಲಕ ವಿಚ್ಛೇದನ ನಿರಾಕರಿಸಲು ಅವಕಾಶ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯ ಇಲ್ಲಿ ಸತ್ಯಶೋಧನಾ ಸಂಸ್ಥೆಯಂತೆ ಕಾರ್ಯ ನಿರ್ವಹಿಸುವುದು ಬೇಕಿಲ್ಲ ಎಂದು ನ್ಯಾಯಮೂರ್ತಿ ಕೆ.ಕೆ.ಶಶಿಧರನ್ ಹಾಗೂ ನ್ಯಾಯಮೂರ್ತಿ ಎನ್.ಗೋಕುಲ್‌ದಾಸ್ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವೈವಾಹಿಕ ಸಂಬಂಧ ವಿಫಲವಾಗಿ ಈ ಸಂಬಂಧವನ್ನು ಅಂತ್ಯಗೊಳಿಸಿಕೊಳ್ಳಲು ದಂಪತಿ ನಿರ್ಧರಿಸಿದಾಗ, ಆ ಮನಸ್ಥಿತಿಯನ್ನು ನ್ಯಾಯಾಲಯ ಗೌರವಿಸಿ, ವಿಚ್ಛೇದನ ನೀಡಬೇಕು ಎಂದು ಸೂಚಿಸಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದ ದಂಪತಿಗೆ ವಿಚ್ಛೇದನ ನೀಡಲು ನಿರಾಕರಿಸಿದ ತಿರುನೆಲ್ವೇಲಿ ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಹೈಕೋರ್ಟ್ ಕಟುವಾಗಿ ಟೀಕಿಸಿದೆ. 2013ರಲ್ಲಿ ವಿವಾಹವಾದ ಈ ಜೋಡಿ, 2014ರ ಜುಲೈನಿಂದ ಪ್ರತ್ಯೇಕವಾಗಿ ವಾಸವಿತ್ತು. 2015ರಲ್ಲಿ ಜಂಟಿ ಅರ್ಜಿ ಸಲ್ಲಿಸಿ, ವಿವಾಹ ಸಂಬಂಧ ವಿಸರ್ಜಿಸಲು ಕುಟುಂಬ ನ್ಯಾಯಾಲಯವನ್ನು ಕೋರಿದರು. ಆದರೆ ವಿಚ್ಛೇದನಕ್ಕೆ ಕಾರಣ ನಮೂದಿಸಿಲ್ಲ ಎಂದು ಅಭಿಪ್ರಾಯಪಟ್ಟು ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಈ ತೀರ್ಪನ್ನು ವಜಾ ಮಾಡಿದ ಹೈಕೋರ್ಟ್, ದಂಪತಿಗೆ ವಿಚ್ಛೇದನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News