ಬಾಂಗ್ಲಾದೇಶದ ನಿರಾಶ್ರಿತ ಹಿಂದೂಗಳ ಪುನರ್ವಸತಿಗೆ ಅಸ್ಸಾಂನಲ್ಲಿ ಭಾರೀ ವಿರೋಧ

Update: 2016-08-14 12:21 GMT

ಗುವಾಹಟಿ, ಆ.14: ಅಸ್ಸಾಂನಲ್ಲಿ ಬಾಂಗ್ಲಾದೇಶಿ ನಿರಾಶ್ರಿತ ಹಿಂದೂಗಳಿಗೆ ಪುನವರ್ಸತಿ ಮತ್ತು ಅವರಿಗೆ ದೇಶದ ಪೌರತ್ವವನ್ನು ನೀಡುವ ಸರಕಾರದ ನಿರ್ಧಾರವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದೆ ಎಂದು ವರದಿಯಾಗಿದೆ.

    ಅಸ್ಸಾಂ ಕೃಷಿ ಸಂಗ್ರಾಮ್ ಸಮಿತಿ ಕಾರ್ಯಕರ್ತರು, ಬಾಂಗ್ಲಾದೇಶಿ ಹಿಂದೂ ನಿರಾಶ್ರಿತರಿಗೆ ಪೌರತ್ವವನ್ನು ನೀಡಿ ಅಸ್ಸಾಂನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವ ರಾಜ್ಯ ಸರಕಾರದ ನಿರ್ಧಾರವನ್ನು ವಿರೋಧಿಸಿ ಅನ್ನಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ’ಪೌರತ್ವ ತಿದ್ದುಪಡಿ ವಿಧೇಯಕ 2016’ ಇದರ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿದೆ. ಅಸ್ಸಾಮ್‌ನ ಬಹುದೊಡ್ಡ ಸಾಹಿತ್ಯ ಸಂಘಟನೆಯಾದ ’ಅಸ್ಸಾಮ್ ಸಾಹಿತ್ಯ ಸಭಾ’ ಕೂಡಾ ಬಾಂಗ್ಲಾದೇಶದ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡದಂತೆ ವಿರೋಧ ವ್ಯಕ್ತಪಡಿಸುತ್ತಿದೆ ಎನ್ನಲಾಗಿದೆ. . ’ಹಿಂದೂ ಬಾಂಗ್ಲಾದೇಶೀಯರ ಹೊರೆಯನ್ನು ರಾಜ್ಯ ಹೊರಲಾರದು. 1971 ಮಾರ್ಚ್ 25ರ ನಂತರ ಅಸ್ಸಾಂಗೆ ಬಂದ ಎಲ್ಲ ಬಾಂಗ್ಲಾದೇಶಿ ನಾಗರಿಕರು ಅವರು ಹಿಂದೂಗಳಾಗಿದ್ದರೂ, ಮುಸ್ಲಿಮರಾಗಿದ್ದರೂ ಇಲ್ಲಿಂದ ಹೋಗಲೇ ಬೇಕು’ ಎಂದು ಅದು ಹೇಳುತ್ತಿದ್ದು,

 ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್‌ನ ಮುಖ್ಯ ಸಲಹಾಕಾರರಾದ ಸಮುಜ್ವಲ್ ಭಟ್ಟಾಚಾರ್ಯ "1971 ರನಂತರ ಬಂದ ಹಿಂದೂ ಮತ್ತು ಮುಸ್ಲಿಮ್ ಬಾಂಗ್ಲಾದೇಶೀಯರ ಭಾರವನ್ನು ಅಸ್ಸಾಂ ಸಹಿಸಿಕೊಳ್ಳಲಾರದು" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪೌರತ್ವ ತಿದ್ದುಪಡಿ ವಿಧೇಯಕ 2016 ಎಂದರೆ,ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದವರಿಗೆ ನಾಗರಿಕತೆ ನೀಡುವುದಕ್ಕೆ ಸಂಬಂಧಿಸಿದ ವಿದೇಯಕವಾಗಿದೆ. ಇದು ಈಗ ಸಂಸತ್ತಿನ ಜಂಟಿ ಸಮಿತಿಯ ಮುಂದೆ ಪರಿಶೀಲನೆಯಲ್ಲಿದೆ.

   ವಿಧೇಯಕವನ್ನು ವಿರೋಧಿಸುವ ಸಂಘಟನೆಗಳ ಪ್ರಕಾರ,ಸುಮಾರು ಎರಡೂ ಮುಕ್ಕಾಲು ಕೋಟಿಯಷ್ಟು ಬಾಂಗ್ಲಾದೇಶಿ ಹಿಂದೂಗಳು ಪೌರತ್ವ ತಿದ್ದುಪಡಿ ಅಧಿನಿಯಮವನ್ನು ಉಪಯೋಗಿಸಿ ಇಲ್ಲಿ ಪ್ರವೇಶಿಸಬಹುದು. ಅಸ್ಸಾಂ ಸೀಮಿತ ಭೌಗೋಳಿಕ ಪ್ರದೇಶವನ್ನು ಹೊಂದಿದ್ದರೂ 1951ರಿಂದ 1971ರವರೆಗೆ ಅಪಾರ ಸಂಖ್ಯೆಯ ಬಾಂಗ್ಲಾ ದೇಶೀಯರನ್ನು ಸ್ವೀಕರಿಸಲಾಗಿದೆ. ಇನ್ನು ಹೆಚ್ಚಿನ ಬಾಂಗ್ಲಾ ದೇಶೀಯರನ್ನು ಸ್ವೀಕರಿಸಲಾಗದು ಎಂದು ಈ ಸಂಘಟನೆಗಳು ಹೇಳುತ್ತಿವೆ.

   ಆದರೆ ಅಸ್ಸಾಂ ರಾಜ್ಯ ಸರಕಾರ ಇದಕ್ಕೆ ತದ್ವಿರುದ್ಧ ನಿಲುವನ್ನು ಹೊಂದಿದ್ದು, ಸಚಿವ ಪರಿಮಲ್ ಶುಕ್ಲ ವೈದ್ಯ " ನಾವು ದೇಶ ವಿಭಜನೆಯ ನಂತರ ಎಷ್ಟು ಮಂದಿ ಇಲ್ಲಿಗೆ ಬಂದಿದ್ದಾರೆ ಎಂದು ಮೊದಲು ನೋಡಬೇಕಾಗಿದೆ. ಹೀಗೆ ಬಂದವರಲ್ಲಿ ಕೆಲವರು ಹಿಂದೂಗಳಿರಬಹುದು,ಬಂಗಾಳಿಗಳಿರಬಹುದು. ಇದರಲ್ಲಿ ಅವರ ತಪ್ಪೇನಿಲ್ಲ. ಬಂಗಾಳಿ ಹಿಂದೂ ಆಗಿದ್ದರೂ ಕೂಡಾ ಅಸ್ಸಾಂನಲ್ಲಿ ವಾಸಿಸುವಂತಿಲ್ಲ ಎಂದರೆ ಅರ್ಥವೇನು?" ಎಂದು ಪ್ರಶ್ನಿಸುತ್ತಾರೆ. ಅಸ್ಸಾಂನಲ್ಲಿ ನಿರಂತರ ಮೂರು ಬಾರಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಕೂಡಾ ಬಾಂಗ್ಲಾ ನಿರಾಶ್ರಿತ ಹಿಂದೂಗಳಿಗೆ ಪೌರತ್ವವನ್ನು ನೀಡುವ ಪರವಾಗಿದೆ. ಆದರೆ ಅದು ಕೂಡಾ ವಿರೋಧಿ ಸಂಘಟನೆಗಳ ಧ್ವನಿಯಲ್ಲೇ ಮಾತಾಡುತ್ತಿವೆ.

    " ಸರಕಾರ ಎಲ್ಲರಿಗೂ ಒಪ್ಪಿಗೆಯಾಗುವ ಕಾನೂನು ವ್ಯವಸ್ಥೆಯನ್ನು ರೂಪಿಸಬೇಕು. ಅದು ಎಲ್ಲ ಭಾರತೀಯರಿಗೂ ತಮ್ಮ ಹಿತಕ್ಕಾಗಿದೆ ಎಂದು ಅನಿಸುವಂತಿರಬೇಕು. ಮತ್ತು ಅಸಾಂನಲ್ಲಿರುವ ನಮ್ಮ ಜನಜಾತಿ ಪಂಗಡಗಳಿಗೆ ಅದರಿಂದ ಯಾವುದೇ ತೊಂದರೆಯುಂಟಾಗಬಾರದು" ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ವಕ್ತಾರರಾದ ಅಪೂರ್ವ್ ಭಟ್ಟಾಚಾರ್ಯ ಹೇಳುತ್ತಾರೆ. ಪೌರತ್ವ ತಿದ್ದುಪಡಿ ವಿಧೇಯಕ 2016, ಒಂದು ವೇಳೆ ಜಾರಿಗೆ ಬಂದರೆ ಭಾರತಕ್ಕೆಬರುವ ನಿರಾಶ್ರಿತರಿಗೆ ಬಹುದೊಡ್ಡ ನೆರವು ಎನಿಸಿಕೊಳ್ಳುವುದು ನಿಜವಾಗಿದೆ. ಆದರೆ ಕೇವಲ ಅಸ್ಸಾಂ ಒಂದರ ಮೇಲೆಯೇ ಬಾಂಗ್ಲಾದೇಶಿ ಹಿಂದೂ ನಿರಾಶ್ರಿತರ ಭಾರವನ್ನು ಹೇರಿದರೆ ಮುಂಬರುವ ದಿನಗಳಲ್ಲಿ ಅದು ಸಮಸ್ಯೆಗೆ ಕಾರಣವೂ ಆಗಬಹುದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News