ಶೌಚಾಲಯ ನಿರ್ಮಾಣ: ಸರಕಾರದ ಹೇಳಿಕೆ ಹಾಗೂ ವಾಸ್ತವದ ನಡುವೆ ಭಾರೀ ವ್ಯತ್ಯಾಸ

Update: 2016-08-19 03:00 GMT

ಹೊಸದಿಲ್ಲಿ, ಆ.19: ಅರುಣಾಚಲ ಪ್ರದೇಶ, ಮಣಿಪುರ, ಗುಜರಾತ್, ಕರ್ನಾಟಕ, ಜಾರ್ಖಂಡ್ ಹಾಗೂ ರಾಜಸ್ಥಾನಗಳಲ್ಲಿ ವಾಸ್ತವವಾಗಿ ನಿರ್ಮಾಣವಾಗಿರುವ ಶೌಚಾಲಯಗಳ ಸಂಖ್ಯೆಗೂ, ಸಚಿವಾಲಯದ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಸಂಖ್ಯೆಗೂ ಭಾರಿ ವ್ಯತ್ಯಾಸ ಇರುವುದನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ನಡೆಸಿದ ಸಮೀಕ್ಷಾ ವರದಿಯೊಂದು ಬಹಿರಂಗಪಡಿಸಿದೆ.

ರಾಷ್ಟ್ರಮಟ್ಟದ ಮೇಲ್ವಿಚಾರಣಾ ಸಿಬ್ಬಂದಿಯ ವರದಿಯಂತೆ ಅರುಣಾಚಲ ಪ್ರದೇಶ ಹಾಗೂ ಮಣಿಪುರದಲ್ಲಿ ಈ ಅಂತರ ಶೇ. 41ರಷ್ಟಿದ್ದು, ಜಾರ್ಖಂಡ್, ಗುಜರಾತ್, ಕರ್ನಾಟಕ ಹಾಗೂ ರಾಜಸ್ಥಾನದಲ್ಲೂ ಆತಂಕಕಾರಿ ಸನ್ನಿವೇಶ ಇದ್ದು, ಈ ಅಂತರ ಅನುಕ್ರಮವಾಗಿ ಶೇಕಡ 19, 23, 27 ಹಾಗೂ 28ರಷ್ಟಿದೆ.

ಆಂಧ್ರ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮೇಘಾಲಯ, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಶೌಚಾಲಯ ನಿರ್ಮಾಣವಾಗಿದೆ. ಇತರ ರಾಜ್ಯಗಳಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ಸಿಕ್ಕಿಂ ಮಾತ್ರ ಬಯಲು ಶೌಚದಿಂದ ಮುಕ್ತವಾಗಿರುವ ರಾಜ್ಯ. ಈ ರಾಜ್ಯದ ವಿಚಾರದಲ್ಲಿ ಮೇಲ್ವಿಚಾರಣೆ ಅಧಿಕಾರಿಗಳು ಹಾಗೂ ಸ್ವಚ್ಛಭಾರತ ಮಿಷನ್ ಸಚಿವಾಲಯದ ಅಂಕಿ ಸಂಖ್ಯೆಗಳು ತಾಳೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಸರಿಪಡಿಸಿಕೊಳ್ಳುವ ಅಗತ್ಯವಿದ್ದು, ಯೋಜನೆಯ ವಿನ್ಯಾಸವನ್ನು ಸಮಗ್ರವಾಗಿ ಬದಲಿಸಿ, ಮಹತ್ವಾಕಾಂಕ್ಷಿ ಸ್ವಚ್ಛಭಾರತ ಯೋಜನೆಯ ಸ್ವರೂಪವನ್ನು ಬದಲಿಸುವ ಅಗತ್ಯವಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿವೃತ್ತ ನಾಗರಿಕ ಹಾಗೂ ರಕ್ಷಣಾ ಸೇವಾ ಅಧಿಕಾರಿಗಳನ್ನು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಿಬ್ಬಂದಿಯನ್ನು ನಿಯೋಜಿಸಿಕೊಂಡು, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ವೈಯಕ್ತಿಕ ಹಾಗೂ ಸಾಂಸ್ಥಿಕ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಿಕೊಂಡಿದೆ. ಈ ಮೇಲ್ವಿಚಾರಕರು 24.22 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿದಾಗ ಈ ಅಂಶ ಬಹಿರಂಗವಾಗಿದೆ. ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇಕಡ 51.46ರಷ್ಟು ಮಂದಿ ಮಾತ್ರ ಶೌಚಾಲಯಗಳನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News