ಗಂಗಾ ಶುದ್ಧೀಕರಣ ಪ್ರಯತ್ನ ನಿಷ್ಫಲ

Update: 2016-08-19 18:47 GMT

ಹೊಸದಿಲ್ಲಿ, ಆ.19: ಗಂಗಾನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಹಾಗೂ ಉತ್ತರಪ್ರದೇಶಗಳು ನಡೆಸುತ್ತಿರುವ ಪ್ರಯತ್ನಗಳು ಈವರೆಗೆ ಶೂನ್ಯ ಫಲಿತಾಂಶವನ್ನು ನೀಡಿವೆಯೆಂದು ರಾಷ್ಟ್ರೀಯ ಹಸಿರು ಪ್ರಾಧಿಕಾರವು ಶುಕ್ರವಾರ ಚಾಟಿ ಬೀಸಿದೆ. ಹರಿದ್ವಾರ ಹಾಗೂ ಕಾನ್ಪುರಗಳ ನಡುವೆ ಗಂಗಾನದಿಯಲ್ಲಿ ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆಯಾಗುತ್ತಿರುವುದಕ್ಕೆ ಅದು ಉಭಯ ಸರಕಾರಗಳನ್ನೂ ತರಾಟೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ಗಂಗಾಶುದ್ಧೀಕರಣಕ್ಕೆ ಸಂಬಂಧಿಸಿ ಪರಿಸರ ಹಾಗೂ ಅರಣ್ಯ ಸಚಿವಾಲಯ, ಜಲಸಂಪನ್ಮೂಲ ಖಾತೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರ ಪ್ರಾಧಿಕಾರಗಳು ಯಾವುದೇ ಸ್ಪಷ್ಟ ನಿಲುವನ್ನು ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಕರಣವು, ಎರಡು ವಾರಗಳೊಳಗೆ ವರದಿಯನ್ನು ಸಲ್ಲಿಸುವಂತೆ ಗಡುವು ವಿಧಿಸಿದೆ.

 ‘‘ಗಂಗಾನದಿಯ ಶುದ್ಧೀಕರಣಕ್ಕೆ ಸಂಬಂಧಿಸಿ ಪ್ರತಿಯೊಬ್ಬರು ನಮ್ಮ ಮುಂದೆ ಬಂದು ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದು ಹೇಳುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಹರಿದ್ವಾರದಿಂದ ಕಾನ್ಪುರದವರೆಗೆ ಗಂಗಾನದಿಯನ್ನು ಹೇಗೆ ರಕ್ಷಿಸುವುದೆಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ’’ ಎಂದು ನ್ಯಾಯಾಧೀಕರಣ ಆತಂಕ ವ್ಯಕ್ತಪಡಿಸಿತು. ಈ ಬಗ್ಗೆ ಯೋಜನಾ ವರದಿಯನ್ನು ಸಲ್ಲಿಸುವಂತೆ ಅದು ಕೇಂದ್ರ ಹಾಗೂ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತು.

‘‘ದುರದೃಷ್ಟವಶಾತ್ ಹಲವು ಸಲ ಸೂಚನೆ ನೀಡಿದ ಹೊರತಾಗಿಯೂ ಯಾವುದೂ ಸಾಧ್ಯವಾಗಿಲ್ಲ. ಸರಕಾರಗಳಿಗೆ ಬೇರೆ ವಿಷಯಗಳ ಬಗ್ಗೆ ಆದ್ಯತೆಯಿರಬಹುದು. ಆದರೆ ನಮಗೆ ಗಂಗಾನದಿಯ ಶುದ್ಧೀಕರಣವೇ ಪ್ರಮುಖ ಆದ್ಯತೆಯಾಗಿದ್ದು, ನಾವದನ್ನು ಮಾಡಿಯೇ ತೀರುವೆವು’’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾ.ಮೂ. ಸ್ವತಂತ್ರ್ ಕುಮಾರ್ ತಿಳಿಸಿದ್ದಾರೆ.

ಮುಂದಿನ ಎರಡು ವಾರಗಳೊಳಗೆ ಉತ್ತರಪ್ರದೇಶ ಸರ ಕಾರದ ವಿವಿಧ ಸಚಿವಾಲಯಗಳು ಹಾಗೂ ಕೇಂದ್ರ ಸರಕಾರದ ಇಲಾಖೆಗಳು ಗಂಗಾನದಿಯ ಶುದ್ಧೀಕರಣಕ್ಕೆ ಸಂಬಂಧಿಸಿ ವರದಿಯನ್ನು ಸಲ್ಲಿಸದೆ ಇದ್ದಲ್ಲಿ, ಸಂಬಂಧಪಟ್ಟ ಪ್ರತಿಯೊಂದು ಇಲಾಖೆಗಳ ಕಾರ್ಯದರ್ಶಿಗೂ 25 ಸಾವಿರ ರೂ. ದಂಡ ವಿಧಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.

ಉತ್ತರಪ್ರದೇಶ ಸರಕಾರ ಹಾಗೂ ಅದರ ಇಲಾಖೆಗಳು, ಗಂಗಾನದಿಯ ದಡದಲ್ಲಿರುವ ಕೈಗಾರಿಕೆಗಳ ಕುರಿತ ಸ್ಪಷ್ಟ ದತ್ತಾಂಶಗಳನ್ನು ಸಲ್ಲಿಸುವಂತೆ ಕೋರಿ ನ್ಯಾಯವಾದಿ ಎಂ.ಸಿ. ಮೆಹ್ತಾ ಗಂಗಾನದಿಯ ಶುದ್ಧೀಕರಣ ಕೋರಿ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News