ಅಣ್ಣ ಅನಂತಮೂರ್ತಿ

Update: 2016-08-21 06:49 GMT

ಯು.ಆರ್.ಅನಂತಮೂರ್ತಿಯವರು ‘ಅನಂತ’ರಾಗಿ ನಾಳೆಗೆ ಎರಡು ವರ್ಷಗಳಾದವು. ಇಂಗ್ಲಿಷ್ ಪಂಚಾಂಗದ ಪ್ರಕಾರ ನಾಳೆ (ಆ.22)ಅವರ ಎರಡನೆಯ ವರ್ಷಾಬ್ದಿಕ.ಅನಂತಮೂರ್ತಿ ಇಲ್ಲದ ಎರಡು ವರ್ಷಗಳನ್ನು ನಾವು ಕಂಡಿದ್ದೇವೆ. ಮೋದಿಯವರು ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗ್ತೀನಿ...ನಾನು ಬದುಕಲಾರೆ ಎಂದ ಅವರು ನುಡಿದಂತೆ ‘ಅನಂತ’ದೆಡೆ ನಡೆದುಬಿಟ್ಟರು. ಅವರು ಪಟ್ಟ ಭಯ, ಆತಂಕಗಳು ನಿಜವಾಗುತ್ತಿರುವ ಈ ದಿನಗಳಲ್ಲಿ ಅವರು ತೋರುತ್ತಿದ್ದ ಪ್ರೀತಿ, ಕರುಣೆ, ಪ್ರಖರ ಮಾನವೀಯತೆ ಮತ್ತು ನೈತಿಕ ಧೈರ್ಯಸ್ಥೈರ್ಯಗಳು ಇಂದು ನಮಗೆ ಎಂದಿಗಿಂತ ಹೆಚ್ಚಿನ ಅಗತ್ಯವಾಗಿದೆ.

ನಮ್ಮ ನಡುವೆ ಭಾರತದ ಸಾಕ್ಷಿ ಪ್ರಜ್ಞೆಯಂತಿದ್ದ ಯು.ಆರ್. ಅನಂತಮೂರ್ತಿಯವರು ಬರವಣಿಗೆ ಮತ್ತು ಬೋಧಕ ವೃತ್ತಿ ಆರಂಭಿಸಿದ ದಿನದಿಂದ ಕೊನೆಯುಸಿರು ಇರುವವರೆಗೂ ಸದ್ವಿವೇಕದ ದನಿಯಾಗಿ ಮಾತುಕೃತಿಗಳೆರಡರಲ್ಲೂ ನೂರೆಂಟು ಹೊಸಹೊಸ ವಿಚಾರಗಳನ್ನು, ಹೊಸಹೊಸ ಚರ್ಚೆ, ಚಿಂತನೆಗಳನ್ನು ಹುಟ್ಟುಹಾಕುತ್ತಲೇ ಇದ್ದ ಧೀಮಂತರು. ಪ್ರಜ್ಞಾವಂತ ವ್ಯಕ್ತಿಯಾಗಿ, ಸೃಜನಶೀಲ ಲೇಖಕರಾಗಿ ಅವರದು ಆಧುನಿಕ ವಿಚಾರಗಳಂತೆಯೇ ಸುಧಾರಣೆಗೆ, ಮಾನವೀಯ ಕರುಣೆ, ಸಮಾನತೆಗಳಿಗೆ ಸದಾಕಾಲ ತುಡಿಯುತ್ತಿದ್ದ ಆರ್ದ್ರ ಮನಸ್ಸು. ‘ಸಂಸ್ಕಾರ’ದಿಂದ ‘ದಿವ್ಯ’ದವರೆಗೆ, ‘ಎಂದೆಂದೂ ಮುಗಿಯದ ಕಥೆ’,‘ಘಟಶ್ರಾದ್ಧ’ದಿಂದ ‘ಸೂರ್ಯನ ಕುದುರೆ’ವರೆಗೆ ನಾವು ಅನಂತ ಮೂರ್ತಿಯವರಲ್ಲಿ ಒಬ್ಬ ಕ್ರಾಂತಿಕಾರಿ ವಿಚಾರವಾದಿಯನ್ನು, ಒಬ್ಬ ಸುಧಾರಣಾ ವಾದಿಯನ್ನು, ಕರುಣೆ ಸೂಸುವ ಅಂತಃಕರಣವನ್ನು ಕಾಣುತ್ತೇವೆ. ಶೂದ್ರ ಶ್ರೀನಿವಾಸ ಹೇಳಿರುವಂತೆ-‘‘ಅನಂತಮೂರ್ತಿಯವರ ಸೃಜನಶೀಲ ಬರವವಣಿಗೆಯಲ್ಲಿ ದಟ್ಟವಾಗಿ ಮಡುಗಟ್ಟಿರುವುದು ಕರುಣೆ ಅರ್ಥಾತ್ ಮರುಕ. ಇದನ್ನು ಮುಂದುವರಿಸಿ ಹೇಳಬೇಕೆಂದರೆ ಅವರ ಸಾಮಾಜಿಕ ನ್ಯಾಯದ ಹಿಂದಿರುವ ತುಡಿತವೇ ಮರುಕ.’’

 ಆಧುನಿಕತೆಯ ಲಯವನ್ನು ನಮ್ಮ ಬದುಕಿಗೆ ಒಗ್ಗಿಸಿಕೊಳ್ಳಬೇಕು, ಸಮಾಜದಲ್ಲಿ ಸುಧಾರಣೆಗಳಾಗ ಬೇಕು, ಅಗ್ರಹಾರದ ಹುಳಿ ತೇಗಿನ ಬದುಕು ಆರೋಗ್ಯ ಪೂರ್ಣವಾಗಿ ನಳನಳಿಸಬೇಕು, ನಾರಣಪ್ಪನಂತೆ ಸನಾತನಿ ಅವಿಚಾರ-ಅತರ್ಕಗಳನ್ನು, ನಿರ್ಬಂಧಗಳನ್ನು ಮೀರಬೇಕು,‘ಭವ’ರೋಗಗಳ ದೌರ್ಬಲ್ಯಗಳಿಂದ ಮಾನವ ಸಮುದಾಯ ಮುಕ್ತವಾಗಬೇಕು, ಪಟ್ಟಭದ್ರ ರಾಜಕೀಯ ‘ಅವಸ್ಥೆ’ಗಳಿಂದ ಸಮಾನತೆಯ ಸ್ವಾತಂತ್ರ್ಯಕ್ಕೆ ಹೊರಳಬೇಕು, ‘ಸೂರ್ಯನ ಕುದುರೆ’ಯ ಹೆಡೆ ವೆಂಕಟನಂತೆ ಮುಗ್ಧನಾಗಿ ಪ್ರಪಂಚವನ್ನು ನೋಡಬೇಕು ಎಂಬೆಲ್ಲ ಹಂಬಲ, ತುಡಿತಗಳಿಂದ, ಅದಮ್ಯ ಜೀವನಪ್ರೀತಿಯಿಂದ ಬದುಕು ಬರಹಗಳೆರಡರಲ್ಲೂ ವಿಚ್ಛಿನ್ನರಾಗಿ ಕಾಣುವ ಅನಂತಮೂರ್ತಿಯವರು ಹಾಗೆಂದು ಆರ್ಷೇಯವಾದುದೆಲ್ಲವನ್ನೂ ತಿರಸ್ಕರಿಸುವ ಅಪ್ರಬುದ್ಧ ಬಂಡಾಯಗಾರರಲ್ಲ. ನಮ್ಮ ಧರ್ಮ, ಸಂಸ್ಕೃತಿಗಳ ಬಗ್ಗೆ ಅವರಿಗೆ ಪ್ರೀತಿ-ಗೌರವಗಳಿದ್ದವು. ಖಾಸಗಿ ಜೀವನದಲ್ಲಿ ಜಾತಿಧರ್ಮಗಳನ್ನು ಮೀರಿ ದ್ದರೂ ಅವರು ಧರ್ಮಲಂಡರಾಗಿರಲಿಲ್ಲ. ಸುಧಾರ ಣಾವಾದಿಯಾಗಿಯೂ ಅವರಲ್ಲಿ ಸುಧಾರಣಾ ಪೂರ್ವದ ಚಿಕಿತ್ಸಕ ದೃಷ್ಟಿಯಿತ್ತು. ಧರ್ಮಗಳ ಬಾಹ್ಯ ಕುರೂಪಗಳನ್ನು, ಸಂಕುಚಿತತೆಗಳನ್ನು ಮೀರುವ ಧಾವಂತದಲ್ಲೂ ಶೋಧನೆ, ಅನ್ವೇಷಣೆಗಳ ಲಾಲಸೆ ಇತ್ತು. ಸನಾತನ ಧರ್ಮ, ಸಂಪ್ರದಾಯ, ರೂಢಿ ಆಚರಣೆಗಳೆಲ್ಲವನ್ನೂ ಅವರು ಸಾರಾಸಗಟು ತಿರಸ್ಕರಿಸಿರಲಿಲ್ಲ. ಇವುಗಳಿಗೆ ಮೆತ್ತಿಕೊಂಡಿರುವ ಕೊಳೆ, ಬಗ್ಗಡಗಳನ್ನು ಬದಿಗೆ ಸರಿಸಿ ಅಂತರಂಗದಲ್ಲಿರಬಹುದಾದ ಶುಚಿರುಚಿಗಳನ್ನು ಶೋಧಿಸಿ ನೋಡುವುದರಲ್ಲಿ ಅವರು ನಿರಂತರವಾಗಿ ಪ್ರವೃತ್ತರಾಗಿದ್ದರು. ಪ್ರಯೋಗಶೀಲರಾಗಿದ್ದರು. ಈ ಮಾತು ಧರ್ಮ ಮಾತ್ರವಲ್ಲ ರಾಜಕೀಯ ವ್ಯವಸ್ಥೆ ಕುರಿತ ಅವರ ಚಿಂತನೆಗಳಿಗೂ ಒಪ್ಪುತ್ತದೆ. ಈ ಪ್ರವೃತ್ತಿ ಅವರ ಕೃತಿಗಳಲ್ಲಿ ಹಾಸಹೊಕ್ಕಾಗಿದೆ. ದೇವನೂರ ಮಹಾದೇವ ಅಭಿಪ್ರಾಯಪಟ್ಟಿರುವಂತೆ, ‘‘...ಯು.ಆರ್.ಅನಂತಮೂರ್ತಿಯವರು ಧರ್ಮದ ಕೊಳಕನ್ನು ಅಕ್ಕಪಕ್ಕ ಸರಿಸಿ ಅದರಲ್ಲಿರೋ ತಿಳಿಜಲವನ್ನು ಉಳಿಸಿಕೊಳ್ಳಬೇಕು ಎನ್ನುವ ಮನಸ್ಸಿನಿಂದ ಪ್ರಯತ್ನಪಡುತ್ತಾರೆ. ಅದಕ್ಕೇ ಅವರು ಆರೆಸ್ಸೆಸ್‌ನ ಶಿವಾಜಿಯ ಹಿಂದೂ ಧರ್ಮವನ್ನು ಇಷ್ಟಪಡಲಿಲ್ಲ.ಋಷಿಗಳ ಕಾಲದಲ್ಲಿ ಯಾವುದಿತ್ತೋ ಅದನ್ನು ಬಯಸೋದಕ್ಕೆ ಅವರ ಜೀವ ತುಡೀತಾ ಇರುತ್ತದೆ.’’

ಸಾಹಿತ್ಯ ಪಠ್ಯವನ್ನು ಕಾವ್ಯಮೀಮಾಂಸೆಯ ಮಾನದಂಡಗಳಿಂದ ವಿಮರ್ಶಿಸುವುದರ ಜೊತೆಗೆ ಅದನ್ನು ಒಂದು ಸಾಮಾಜಿಕ ದಾಖಲೆಯಾಗಿಯೂ ಓದುವ ಕ್ರಮವೊಂದಿದೆ. ಅನಂತ ಮೂರ್ತಿಯವರ ‘ಸಂಸ್ಕಾರ’, ‘ಅವಸ್ಥೆ’, ‘ಭಾರತೀಪುರ’, ‘ದಿವ್ಯ’ ಕಾದಂಬರಿಗಳನ್ನು ಓದಿದಾಗ, ನಮ್ಮ ಸಾಮಾಜಿಕ ವಾಸ್ತವಗಳ ಜೊತೆಗೆ ಹೊಸ ಜ್ಞಾನ ಲೋಕವೊಂದನ್ನು ಪ್ರವೇಶಿಸಿದಂತಾಗುತ್ತದೆ. ಹಾಗೂ ಇಲ್ಲೆಲ್ಲ ದಿಕ್ಕುತಪ್ಪದಂತೆ ಕೈಹಿಡಿದು ನಡೆಸುವ ಕಥಾನಾಯಕನಿದ್ದಾನೆ. ಇವನು ಲೇಖಕರು ಮಂಡಿಸುವ ವಿಚಾರಗಳ ಪ್ರತಿಪಾದಕನೂ ಹೌದು. ಭಾರತೀಪುರದ ಕಥಾನಾಯಕ ಯಾರು, ‘ಅವಸ್ಥೆ’ಯ ಕಥಾ ನಾಯಕ ಯಾರು ಎಂಬುದು ನಮಗೆಲ್ಲ ಗೊತ್ತಿರುವಂಥಾದ್ದೇ. ಒಂದು ಸಾಮಾಜಿಕ ದಾಖಲೆಯಾಗಿ ನೋಡಿದಾಗ ‘ಭಾರತೀಪುರ’ದ ಜಗನ್ನಾಥ, ವಿಮರ್ಶಕರು ಟೀಕಿಸಿರುವಂತೆ ಒಬ್ಬ ವಿಲಾಸಿ ಕ್ರಾಂತಿಕಾರಿಯಾಗಿಯಷ್ಟೇ ನಮಗೆ ಕಾಣಿಸುವುದಿಲ್ಲ. ಮಧ್ಯಯುಗದ ನಂಬಿಕೆ, ವಿಚಾರಗಳಲ್ಲಿ ಸ್ಥಗಿತಗೊಂಡ, ಜಮೀನ್ದಾರರು ಮತ್ತು ಶೋಷಿತ ಗೇಣಿದಾರರನ್ನೊಳಗೊಂಡ ಇಲ್ಲಿನ ಅಸಮತೆಯ ಸಮಾಜದಲ್ಲಿ ಸುಧಾರಣಾಪರ ಕ್ರಾಂತಿಕಾರಿಯಾಗಷ್ಟೇ ಅಲ್ಲದೆ, ತನ್ನವರ ಬದುಕಿನ ಪ್ರಗತಿಗೆ ಶ್ರಮಿಸುವ, ಮಾರ್ಗದರ್ಶನ ನೀಡುವ ಮನೆಯ ದೊಡ್ಡ ಮಗನಂತೆ, ಹಿರಿಯಣ್ಣನಂತೆಯೂ ಕಾಣಿಸುತ್ತಾನೆ. ಇಂಥ ಹಿರಿಯಣ್ಣನ ಕಾಳಜಿಯನ್ನು ಗೇಣಿದಾರರು, ಕೂಲಿಗಳು, ಊರಿನ ಹೊಲೆಯರು ಇವರುಗಳೊಂದಿಗಿನ ಜಗನ್ನಾಥನ ವರ್ತನೆಯಲ್ಲಿ ಕಾಣಬಹುದಾಗಿದೆ. ‘ಅವಸ್ಥೆ’ಯ ಕೃಷ್ಣಪ್ಪನದೂ ಮನುಷ್ಯತ್ವದ ಘನತೆಗಾಗಿ ಕಳಕಳಿಸುವ, ಮಾನವೀಯ ಮೌಲ್ಯಗಳಿಗೆ ಸದಾ ಸ್ಪಂದಿಸುವ ವ್ಯಕ್ತಿತ್ವವೇ. ಇಂಥ ಸೋದರತ್ವದ ಸ್ಪಂದನಗಳನ್ನು ‘ಭವ, ‘ದಿವ್ಯ’ಗಳಲ್ಲೂ ಅವರ ಬಹುತೇಕ ಸಣ್ಣಕಥೆಗಳಲ್ಲೂ ನಾವು ಗಮನಿಸಬಹುದಾಗಿದೆ. ಅನಂತಮೂರ್ತಿಯವರನ್ನು ಹತ್ತಿರದಿಂದ ಬಲ್ಲವರಿಗೆ ಅವರೊಳಗಣ ಈ ಭ್ರಾತೃತ್ವದ ಬೆಚ್ಚಗಿನ ಅನುಭವ ಆಗದೇ ಇಲ್ಲ. ತನ್ನ ಜನರಿಂದ ಹಾಗೂ ಈ ನೆಲದೊಂದಿಗಿನ ಆಪ್ತ ಸಂಬಂಧಗಳಿಂದ ಬಿಡಿಸಿಕೊಂಡು ಹೋಗುವುದು ಅವರಿಗೆ ಸಾಧ್ಯವಿರಲಿಲ್ಲ. ಅವರು ಆಡಿದ ದೇಶ ಬಿಟ್ಟು ಹೋಗುವ ಮಾತೂ, ‘ಯು. ಆರ್. ಎಂಬ ನೀವು’ ಪುಸ್ತಕದಲ್ಲಿ ಶೂದ್ರ ಶ್ರೀನಿವಾಸ ಹೇಳಿರುವಂತೆ, ‘‘ನನಗೆ ಈ ಮನೆ ಸಾಕಾಗಿದೆ. ಮನೆ ಬಿಟ್ಟು ಹೋಗುತ್ತೇನೆ ಎಂಬಂಥ ಮಾತು ಯಾರದೇ ಬದುಕಿನಲ್ಲಾದರೂ ಬರಬಹುದಾದಂಥ ಬೇಸರದ ಗಳಿಗೆಯ ಮಾತಷ್ಟೆ. ಇಂಥ ಒಂದು ಸಂದರ್ಭ ಈ ಅಂಕಣಕಾರನ ಬದುಕಿ ನಲ್ಲೂ ಒಮ್ಮೆ ಬಂದಿತ್ತು. ಒಂಬತ್ತು ಮಕ್ಕಳ ದೊಡ್ಡ ಕುಟುಂಬದ ಹಿರಿಯ ಮಗನಾದ ನನಗೆ, ಕಷ್ಟಗಳ ಮಳೆ ಸುರಿಯೆ ನನಗೊಬ್ಬ ಅಣ್ಣನಿದ್ದಿದ್ದರೆ ಎನಿಸಿದಾಗಲೆಲ್ಲ ಅನಂತಮೂರ್ತಿ ಮನಸ್ಸಿಗೆ ಬರುತ್ತಿದ್ದರು. ನನಗೆ ಈ ಮನೆ ಸಾಕಾಗಿದೆ. ಮನೆ ಬಿಟ್ಟು ಹೋಗುತ್ತೇನೆ. ನೀವು ನನಗೆ ಸಹಾಯ ಮಾಡಬೇಕು ಎಂದು ಒಮ್ಮೆ ಅನಂತ ಮೂರ್ತಿ ಯವರಿಗೆ ದುಂಬಾಲು ಬಿದ್ದಿದ್ದೆ. ಆ ಕ್ಷಣ ನಾನು ಅವರಿಂದಲೇ ನನ್ನ ಉದ್ಧಾರ ಎಂದು ನಂಬಿದ್ದೆ. ಅವರು ಹೈದರಾಬಾದಿನ ಕನ್ನಡ ಉಪಗ್ರಹ ದೂರದರ್ಶನಕ್ಕೆ ನನ್ನ ಹೆಸರು ಶಿಫಾರಸು ಮಾಡಿದರು. ಆ ಕೆಲಸವೂ ನನಗೆ ಸಿಕ್ಕಿತು. ಆದರೆ ನನ್ನಿಂದ ಮನೆಬಿಟ್ಟು ಹೋಗಲಾಗಲಿಲ್ಲ. ನಂತರ ಭೇಟಿಯಾದಾಗ ನನಗೆ ಗೊತ್ತಿತ್ತು, ನೀನು ಹೋಗೋಲ್ಲ ಎಂದು ನಗಾಡಿದ್ದರು.’’

ಅನಂತಮೂರ್ತಿ ಯಾರನ್ನೂ ದ್ವೇಷಿಸಿದವರಲ್ಲ. ಶತ್ರುಗಳೆನಿಸಿದವರನ್ನೂ ಸ್ನೇಹಿತರಾಗಿ ಕಂಡವರು. ಆದರೆ ಸಾಹಿತ್ಯ ಕಲೆಗಳಂತೆಯೇ ರಾಜಕೀಯ ವ್ಯವಸ್ಥೆ, ಜಾತಿ, ಧರ್ಮ ಮೊದಲಾದಂಥ ಸೂಕ್ಷ್ಮ ವಿಷಯಗಳಲ್ಲಿ ಅವರು ಬಹಳ ಜನರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. ಅವರು ಮೋದಿಯವರನ್ನು ದ್ವೇಷಿಸುತ್ತಿದ್ದರು ಎಂಬ ತಪ್ಪುಕಲ್ಪನೆ ಅನೇಕರಲ್ಲಿದೆ. ಹಾಗೆಯೇ ಅವರು ಹಿಂದೂ ಧರ್ಮ ವಿರೋಧಿ ಎಂದೂ. ಇದೂ ತಪ್ಪು. ಮೋದಿಯವರ ವಿಚಾರಗಳು, ಅವರ ಆರೆಸ್ಸೆಸ್ ನಿಷ್ಠೆ, ಗುಜರಾತ್ ಮುಖ್ಯ ಮಂತ್ರಿಯಾಗಿ ಅವರ ಆಡಳಿತ ವೈಖರಿ ಈ ಕೆಲವು ವಿಚಾರಗಳಲ್ಲಿ ಅನಂತಮೂರ್ತಿ ಮೋದಿಯವರನ್ನು ಒಪ್ಪುತ್ತಿರಲಿಲ್ಲ. 2002ರ ಗುಜರಾತ್ ಮುಸ್ಲಿಂ ಹತ್ಯಾಕಾಂಡ ನಡೆದಾಗ ಮೋದಿ ಅಲ್ಲಿ ಮುಖ್ಯಮಂತ್ರಿಯಾಗಿದ್ದರು. ‘ವಸುಧೈವ ಕುಟುಂಬಕಂ’ ಎಂಬ ನಮ್ಮ ನಾಣ್ನುಡಿ ದೇಶಕ್ಕೆ ಹೋಲುವಂಥ ಒಂದು ಅದ್ಭುತ ರೂಪಕ. ಮುಖ್ಯ ಮಂತ್ರಿ/ಪ್ರಧಾನ ಮಂತ್ರಿಯಾದವನು ಒಂದು ಅವಿಭಕ್ತ ಕುಟುಂಬದಂಥ ದೇಶದ ಯಜಮಾನನಿದ್ದಂತೆ.ಕುಟುಂಬದಲ್ಲಿ ಯಜಮಾನನ ಪ್ರತ್ಯಕ್ಷ/ಪರೋಕ್ಷ ಏನೇ ಪ್ರಮಾದ ಸಂಭವಿಸಿದರೂ ಅವನೇ ಹೊಣೆಗಾರ. ಅಂಥ ನೈತಿಕ ಹೊಣೆಯನ್ನು ಮೋದಿ ವಹಿಸಿಕೊಳ್ಳಲಿಲ್ಲ. ಕ್ಷಮೆ ಕೇಳುವುದಿರಲಿ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ. ಇಂಥ ವ್ಯಕ್ತಿ ಪ್ರಧಾನ ಮಂತ್ರಿಯಾಗಬಾರದು ಎಂಬುದು ಮೂರ್ತಿಯವರ ನಿಲುವಾಗಿತ್ತು. ಆದರೆ ಇದನ್ನು ಹಗೆತನ ಎಂದು ಅರ್ಥೈಸುವುದು ತಪ್ಪಾಗುತ್ತದೆ. ಭಾರತದಲ್ಲಿ ಅಸಂಖ್ಯಾತ ಜನರಿಗೆ ಹೀಗೆ ಅನಿಸಿದ್ದಿದೆ. ಈ ವಿರೋಧ ನಾನಾರೂಪಗಳಲ್ಲಿ ವ್ಯಕ್ತಗೊಂಡಿರುವುದೂ ಉಂಟು. ಅವರನ್ನು ಹಿಂದೂ ವಿರೋಧಿ, ಮೋದಿ ವಿರೋಧಿ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರಗಳೂ ನಡೆದಿದ್ದವು. ಸತತವಾಗಿ ಕಿರಿಕಿರಿ ಉಂಟುಮಾಡುವ ವ್ಯವಸ್ಥಿತ ಪಿತೂರಿ ನಡೆದಿತ್ತು.ಅವರು ಈ ಎಲ್ಲ ಕಿರಿಕಿರಿಯನ್ನೂ ಸಹಿಸಿಕೊಂಡರು, ಸಾಂತ್ವನದಿಂದ ತಮ್ಮ ನಿಲುವನ್ನು ಮನವರಿಕೆ ಮಾಡಿ ಕೊಟ್ಟು ಎಂಥ ಮುಜುಗರದ ಸಂದರ್ಭವನ್ನೂ ನಿಭಾಯಿಸುವ ಶಾಂತ ಮನಸ್ಸು ಅವರದಾಗಿತ್ತು. ತಾವು ಹಿಂದೂ ಧರ್ಮ ವಿರೋಧಿಯಲ್ಲ, ತಮ್ಮ ತಕರಾರು ಏನಿದ್ದರೂ ಸಾವರ್ಕರ್ ಪ್ರಣೀತ ಹಿಂದುತ್ವದ ವಿರುದ್ಧ, ತಾವು ಬಯಸುವುದು ಗಾಂಧಿ ಪ್ರಣೀತ ಹಿಂದ್ ಸ್ವರಾಜ್ ಎನ್ನುವುದನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಡಲು ಅವರು ತಮ್ಮ ಕೊನೆಯ ದಿನಗಳಲ್ಲಿ ‘ಹಿಂದುತ್ವ ಅಥವಾ ಹಿಂದ್‌ಸ್ವರಾಜ್’ ಗ್ರಂಥ ರಚಿಸಿದರು. ಇದರ ಮೂಲಕ ಆರೋಗ್ಯಪೂರ್ಣ ಚರ್ಚೆ ನಡೆಸುವುದು ಅವರ ಇರಾದೆಯಾಗಿತ್ತು. ಆದರೆ ಇಂಥ ಚರ್ಚೆಗಿಂತ ಹೇಡಿತನದ ಕೃತ್ಯಗಳೇ ಮೇಲುಗೈ ಪಡೆದವು. ಮೋದಿ ಸಂತಾಪ ಸೂಚಿಸಿರಬಹುದು, ಅದರೆ ವಿಕೃತ ಮನಸ್ಸುಗಳು ಅವರ ನಿಧನವನ್ನು ಸಂಭ್ರಮದಿಂದ ಆಚರಿಸಿದ್ದು ಹಿಂದೂ ಧರ್ಮದ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿರುವ ಮನಸ್ಸುಗಳ ಆರೋಗ್ಯ ಎಷ್ಟು ಹದಗೆಟ್ಟಡಿದೆ ಎನ್ನುವುದರ ಇಂಗಿತ. ಅನಂತ ಮೂರ್ತಿ ಹೀಗೆ ಹೇಳುತ್ತಾರೆ:

‘‘ಕನಸನ್ನು ಕಾಣಲಾರದವನು ಮನುಷ್ಯನೇ ಅಲ್ಲ. ಬಹುಜನಹಿತದ, ನೆಮ್ಮದಿಯ, ಹಸಿರಾದ ನೆಲದ, ತಿಳಿಯಾದ ಆಕಾಶದ ಒಂದು ಕನಸಿದೆ. ಅದು ಗಾಂಧಿಯ ಅಹಿಂಸೆಯ ಕನಸು. ಮನುಷ್ಯ ಕಾಯಕಜೀವಿಯಾಗಿ ಬದುಕುತ್ತಾ ವೈಜ್ಞಾನಿಕವಾಗಿ ಪಡೆದ ಸವಲತ್ತುಗಳನ್ನು ವಿವೇಕದಲ್ಲಿ ಬಳಸಿಕೊಳ್ಳುತ್ತಾ ವಾತಾವರಣದ ಹಿತವನ್ನು ಕೆಡಿಸದಂತೆ ಬಾಳುವ ಕನಸು. ಅಂತಹ ಕನಸಿಗೆ ಭಾರತ ಪರ್ಯಾಯವಾಗಬೇಕೆಂಬ ಗಾಂಧಿಯವರ ‘ಹಿಂದ್‌ಸ್ವರಾಜ್’ಗೆ ವಿರುದ್ಧವಾದ ವ್ಯಾಖ್ಯೆಯಂತೆ ಮೋದಿ ಗೆಲುವಿದೆ. ಈ ಗೆಲುವು ಸಾವರ್ಕರ್ ‘ಹಿಂದುತ್ವ’ ಕಲ್ಪನೆಗೆ ಹಾಗೆಂದು ಸಾರದೆಯೇ ಹತ್ತಿರವಾಗಿದೆ.’’

ಅನಂತಮೂರ್ತಿಯವರು ಹೇಳಿರುವಂತೆ ಮೋದಿ ಯವರ ಗೆಲುವು ಸಾವರ್ಕರ್ ‘ಹಿಂದುತ್ವ’ದ ಕಲ್ಪನೆಗೆ ಹತ್ತಿರದ ಗೆಲುವಾಗಿರುವುದು ಈಗ ನಮ್ಮ ಅನುಭವಕ್ಕೆ ಬರುತ್ತಿದೆ. ಧರ್ಮರಕ್ಷಣೆ, ಗೋರಕ್ಷಣೆ, ರಕ್ತ ಪಾವಿತ್ರ್ಯ ರಕ್ಷಣೆ ನೆಪಗಳಲ್ಲಿ ಜನ ಗುಂಪು ಕಟ್ಟಕೊಡು ಅರಣ್ಯ ನ್ಯಾಯ ಪಾಲಿಸುತ್ತಾ ಅವರ ದೃಷ್ಟಿಯಲ್ಲಿ ತಪ್ಪಿತಸ್ಥರೆಂದು ಕಂಡವರಿಗೆ ಮಧ್ಯಯುಗದ ಪಾಳೇಗಾರರ ರೀತಿ ಕ್ರೂರವಾಗಿ ಶಿಕ್ಷಿಸುವಂಥ ಪರಿಸ್ಥಿತಿ ದೇಶಾದ್ಯಂತ ನಿರ್ಮಾಣಗೊಂಡಿದ್ದು ನಾಗರಿಕ ಸಮಾಜ ಕಳವಳ ಪಡುವಂತಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಆಧಿಕಾರಕ್ಕೆ ಬಂದಿರುವುದು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ದೊರೆತಿರುವ ಪರವಾನಿಗೆ ಎಂದು ಗೋರಕ್ಷಕ ಸಂಘ, ಸೇನೆ, ದಳ ಮೊದಲಾದ ಪರಿವಾರದ ಪಟಾಲಂಗಳು ಭಾವಿಸಿದಂತಿದೆ. ಕಾನೂನು ಸುವ್ಯವಸ್ಥೆ ಪಾಲನೆ ರಾಜ್ಯ ಸರಕಾರದ ವಿಷಯ ಎಂದು ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದೆ. ಆರೆಸ್ಸೆಸ್ ಪ್ರಣೀತ ಕೇಂದ್ರ ಸರಕಾರದ ಕುಮ್ಮಕ್ಕಿಲ್ಲದೆ ಇದೆಲ್ಲ ಸಾಧ್ಯವಿಲ್ಲ ಎಂದು ತಿಳಿಯದಷ್ಟು ಮತದಾರರು ದಡ್ಡರಲ್ಲ. ಹದಿನೈದು ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ರಾಜಧರ್ಮ ಪಾಲಿಸಿ ಎಂದು ಕಟುವಾಗಿ ಆಜ್ಞಾಪಿಸುವಷ್ಟು ಅಧಿಕಾರ ಪ್ರಧಾನಿಗಿಲ್ಲವೇ? 2002ರಲ್ಲಿ ಆಗಿನ ಪ್ರಧಾನಿ ವಾಜಪೇಯಿಯವರು ರಾಜಧರ್ಮ ಪಾಲಿಸುವಂತೆ ಇದೇ ಮೋದಿಯವರಿಗೆ ತಾಕೀತು ನೀಡಿದ್ದು ಸಾರ್ವಜನಿಕರ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಅದನ್ನು ಸ್ವತ: ಪಾಲಿಸದವರಲ್ಲಿ ಮತ್ತೊಬ್ಬರಿಗೆ ಆಜ್ಞೆ ಮಾಡುವಷ್ಟು ನೈತಿಕಧೈರ್ಯವನ್ನು ನಿರೀಕ್ಷಿಸಲಾಗದು. ಸಂಸತ್ ಭವನ ಪ್ರಜಾಪ್ರಭುತ್ವದ ದೇಗುಲವಿದ್ದಂತೆ. ಮೋದಿಯವರು ಪ್ರಪ್ರಥಮವಾಗಿ ಈ ಭವನ ಪ್ರವೇಶಿ ಸುವ ಮುನ್ನ ಅದಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ್ದನ್ನು ಜನ ಮರೆತಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿನ ಅವರ ಭಕ್ತಿಗೌರವಗಳನ್ನು ಕಂಡು ಜನ ಪುಳಕಿತರಾಗಿದ್ದುಂಟು. ಆದರೆ ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಗೋರಕ್ಷಕರ ಉಪಟಳ, ಕಾಶ್ಮೀರದಲ್ಲಿ ಹದಗೆಟ್ಟ ಪರಿಸ್ಥಿತಿಯಂಥ ಮಹತ್ವದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡದೆ ಟ್ವಿಟರ್ ಅಡ್ಡದಾರಿ ಹಿಡಿಯುವ ಪರಿಯನ್ನು ಕಂಡಾಗ ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಗೆಗಿನ ಅವರ ಭಕ್ತಿಗೌರವಗಳನ್ನು ಶಂಕಿಸುವಂತಾಗುತ್ತದೆ.ಸಣ್ಣಪುಟ್ಟದೆಲ್ಲದಕ್ಕೂ ಪ್ರಧಾನಿಯಿಂದ ಉತ್ತರ ನಿರೀಕ್ಷಿಸಲಾಗದು ಎಂದು ಅಭಿಮಾನಿಗಳ ಅಂಬೋಣ. ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮತ್ತು ಜನರೇ ಬೀದಿಯಲ್ಲಿ ನ್ಯಾಯ ನಿರ್ಣಯಿಸುವಂಥ ಪರಿಸ್ಥಿತಿ ಸಣ್ಣಪುಟ್ಟ ಸಂಗತಿಯೇ?

ಪ್ರತಿಯೊಬ್ಬ ಪ್ರಜೆಯೂ ತನ್ನ ವೃತ್ತಿ ಮತ್ತು ಹೊಣೆಗಾರಿಕೆ ಗಳಿಗನುಗುಣವಾಗಿ ನೀತಿಧರ್ಮಗಳನ್ನು ಪಾಲಿಸಬೇಕೆಂದು ಅನಂತಮೂರ್ತಿ ಹೇಳುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದ ಕಾಲ. ರಾಜ್ಯಸಭೆಗೆ ನಾಮಕರಣ ಹೊಂದಲು ಅನಂತ ಮೂರ್ತಿ ದಿಲ್ಲಿಯಲ್ಲಿ ಲಾಬಿ ನಡೆಸಿದ್ದಾರೆಂದು ನಾನು ಸಂಪಾದಕನಾಗಿದ್ದ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಯಿತು. ಅನಂತ ಮೂರ್ತಿ ಫೋನ್ಮಾಡಿ, ‘‘ನಾನು ಈಗ ನಿನ್ನ ಸ್ನೇಹಿತನಾಗಿ ಮಾತಾಡುತ್ತಿಲ್ಲ. ನಿನ್ನ ಪತ್ರಿಕೆಯಲ್ಲಿ ಬಂದಿರುವ ವರದಿ ಸುಳ್ಳು. ನಾನು ಹಾಗೆ ಮಾಡಿಲ್ಲ. ನನಗೆ ಮಾನಹಾನಿ ಮಾಡಲೆಂದೇ ಹೀಗೆ ವರದಿ ಮಾಡಲಾಗಿದೆ.’’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಮಾಮೂಲಿ ನಂತೆ, ಒಂದು ನಿರಾಕರಣ ಹೇಳಿಕೆ ಕಳುಹಿಸಿ ಸಾರ್, ಪ್ರಕಟಮಾಡೋಣ ಎಂದೆ. ಅನಂತಮೂರ್ತಿ ತುಸು ವ್ಯಗ್ರರಾದರು. ಇಲ್ಲ ನಾನು ಕಳುಹಿಸುವುದಿಲ್ಲ. ನಿನ್ನ ಪತ್ರಿಕಾ ಧರ್ಮವನ್ನು ನೀನು ಪಾಲಿಸು ಎಂದರು ಖಡಾಖಂಡಿತವಾಗಿ. ಅದು ಇಂದಿಗೂ ನನ್ನ ಮನದಲ್ಲಿ ಅನುರಣಿಸುತ್ತಿದೆ. ಹೌದು, ಪತ್ರಿಕಾಧರ್ಮ ಪಾಲನೆ ಇಂದು ಹಿಂದೆಂದಿಗಿಂತ ಹೆಚ್ಚಿನ ಅಗತ್ಯವಾಗಿದೆ.

ಭರತ ವಾಕ್ಯ:

ನಿಜ, ಅನಂತಮೂರ್ತಿ ಹಿರಿಯಣ್ಣನಂತಿದ್ದರು.

ಆದರೆ ಅವರು ಎಂದೂ ಇಂಗ್ಲಿಷ್ ಭಾಷೆಯ ‘ಬಿಗ್‌ಬ್ರದರ್’ ಆಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News