ಚನ್ನರಾಯಪಟ್ಟಣ: ನ್ಯಾಯಾಲಯದ ವಿರುದ್ಧ ಪೊಲೀಸರ ದಂಗೆ?

Update: 2016-08-29 18:58 GMT

ಪೊಲೀಸರ ಕೆಲಸ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವುದೇ ಹೊರತು, ಆತನಿಗೆ ಶಿಕ್ಷೆ ವಿಧಿಸುವುದಲ್ಲ. ಪೊಲೀಸರು ಪ್ರಕರಣ ದಾಖಲಿಸಿದಾಕ್ಷಣ ಒಬ್ಬ ವ್ಯಕ್ತಿ ಅಪರಾಧಿಯಾಗಿರಬೇಕಾಗಿಲ್ಲ. ನ್ಯಾಯಾಲಯ ವಿಚಾರಣೆ ನಡೆಸಿ, ಪೊಲೀಸರ ಆರೋಪಗಳನ್ನು ಒಪ್ಪಿಕೊಂಡ ಬಳಿಕವೇ ಆರೋಪಿ ಅಪರಾಧಿಯಾಗುತ್ತಾನೆ. ಇದು ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯವ್ಯವಸ್ಥೆಯ ನಡುವಿರುವ ಪರಸ್ಪರ ಹೊಣೆಗಾರಿಕೆಗಳಾಗಿವೆ. ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ ಆರೋಪ ಪಟ್ಟಿ ನಿಜವೇ ಇರಬಹುದು. ಆದರೆ ಆ ನಿಜವನ್ನು ನ್ಯಾಯವ್ಯವಸ್ಥೆಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯೂ ಪೊಲೀಸರಿಗೆ ಸೇರಿದೆ. ನ್ಯಾಯಾಲಯ ಪೊಲೀಸ್ ಇಲಾಖೆಯ ಆರೋಪಗಳನ್ನು ಒಪ್ಪದೇ ಇದ್ದರೆ, ಪೊಲೀಸರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಮೇಲ್ಮನವಿಗೆ ಹೊರತಾಗಿ ಇನ್ನಾವ ದಾರಿಯೂ ಇಲ್ಲ. ಅಂದರೆ ಪೊಲೀಸರು ಸರ್ವಾಧಿಕಾರಿಗಳು ಅಲ್ಲ. ಅವರು ನ್ಯಾಯಾಲಯದ, ಸಂವಿಧಾನದ ಮಾರ್ಗದಲ್ಲೇ ಮುನ್ನಡೆಯಬೇಕು. ನಾಳೆ ಒಬ್ಬ ಪೊಲೀಸ್ ಅಧಿಕಾರಿಯೇ ಕಟಕಟೆಯಲ್ಲಿ ನಿಂತು, ಅವನ ವಿರುದ್ಧ ನ್ಯಾಯಾಲಯ ತೀರ್ಪನ್ನು ನೀಡಿದರೆ ಆತ ಅದರ ವಿರುದ್ಧ ಮಾತನಾಡುವಂತಿಲ್ಲ. ಮಾತನಾಡಿದ್ದೇ ಆದರೆ, ಅದು ಸಂವಿಧಾನ ವಿರುದ್ಧವಾಗುತ್ತದೆ.

ಆದರೆ ಹಾಸನ ಸಮೀಪದ ಚನ್ನರಾಯಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬ ನ್ಯಾಯಾಲಯ ನೀಡಿದ ತೀರ್ಪನ್ನೇ ಒಪ್ಪದೆ, ತನ್ನ ಸಿಬ್ಬಂದಿ ಮತ್ತು ಇತರ ದುಷ್ಕರ್ಮಿಗಳ ಜೊತೆಗೆ ದಾಂಧಲೆಗಿಳಿದ ಘಟನೆ ಇದೀಗ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬನ ವಿರುದ್ಧ ನ್ಯಾಯಾಧೀಶರು ತೀರ್ಪನ್ನು ನೀಡಿದರೆ, ಅದರ ವಿರುದ್ಧ ಪೊಲೀಸ್ ಸಿಬ್ಬಂದಿ ಸಹಿತ, ಕೆಲವು ದುಷ್ಕರ್ಮಿಗಳು ಪ್ರತಿಭಟನೆ ನಡೆಸುತ್ತಾರೆ. ನ್ಯಾಯಾಲಯದ ಆವರಣದಲ್ಲಿ ದಾಂಧಲೆ ಮಾಡುವುದಲ್ಲದೆ, ತೀರ್ಪು ನೀಡಿದ ನ್ಯಾಯಾಧೀಶರಿಗೇ ದಿಗ್ಬಂಧನ ಹಾಕುತ್ತಾರೆ. ಬಳಿಕ ಕೂಡಲೇ ಮೇಲ್ಮನವಿ ಸಲ್ಲಿಸಿ, ಮೇಲಿನ ನ್ಯಾಯಾಧೀಶರಿಂದ ಕೆಳ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆಯಾಜ್ಞೆ ತರುತ್ತಾರೆ. ಇಲ್ಲಿ ನಡೆದಿರುವ ಘಟನೆ, ದೇಶದ ಸಂವಿಧಾನಕ್ಕೇ ಹಾಕಿದ ಸವಾಲಾಗಿದ್ದರೂ, ಈ ಪ್ರಕರಣವನ್ನು ಕಾನೂನು ಸಚಿವರಾಗಲಿ, ಗೃಹ ಸಚಿವರಾಗಲಿ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಒಂದು ವೇಳೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಿದ್ದರೆ ಇಂದು ನ್ಯಾಯಾಧೀಶರ ತೀರ್ಪಿಗೆ ಪುಂಡಾಟಿಕೆ, ಬೆದರಿಕೆಯ ಮೂಲಕ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಮತ್ತು ಆತನನ್ನು ಬಂಧಿಸಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿ ಇಷ್ಟರಲ್ಲೇ ಕೆಲಸ ಕಳೆದುಕೊಳ್ಳುತ್ತಿದ್ದರು. ಹಾಗೆಯೇ ನ್ಯಾಯಾಲಯದ ವಿರುದ್ಧ ದಂಗೆಯೆದ್ದುದಕ್ಕಾಗಿ ಅವರು ಜೈಲಿನೊಳಗಿರುತ್ತಿದ್ದರು.

   ಇಲ್ಲಿನ ಸರ್ಕಲ್ ಇನ್‌ಸ್ಪೆಕ್ಟರ್ ಮಾರಪ್ಪ ಎಂಬವರು ತಾವು ತನಿಖೆ ನಡೆಸಿದ್ದ ಪ್ರಕರಣಗಳ ಬಗ್ಗೆ ಸಾಕ್ಷ ಹೇಳಲು ಕಳೆದ ಒಂದೂವರೆ ವರ್ಷಗಳಿಂದ ಗೈರು ಹಾಜರಾಗಿದ್ದರು. ಪದೇ ಪದೇ ನ್ಯಾಯಾಲಯ ಸೂಚನೆ ನೀಡಿದ್ದರೂ ಅದನ್ನು ಉಲ್ಲಂಘಿಸಿದ್ದರು. ಆಗಸ್ಟ್ 23ರಂದು ಈ ಪ್ರಕರಣದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಾರಪ್ಪ ಚನ್ನರಾಯಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಹಲವು ತಿಂಗಳುಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಅಗೌರವ ತೋರಿಸಿದ ಆರೋಪದಲ್ಲಿ ಮಾರಪ್ಪ ಅವರಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಲ್ಲದೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಆದರೆ ಮಾರಪ್ಪ, ಈ ತೀರ್ಪನ್ನೇ ಒಪ್ಪಿಕೊಳ್ಳದೆ ಸಾರ್ವಜನಿಕವಾಗಿ ನ್ಯಾಯಾಧೀಶೆಯನ್ನು ನಿಂದಿಸಿದರು. ವಿಶೇಷವೆಂದರೆ, ಅಧಿಕಾರಿಯನ್ನು ಬಂಧಿಸಲು ಪೊಲೀಸರಿಗೆ ನ್ಯಾಯಾಧೀಶೆ ಶಶಿಕಲಾ ಅವರು ಆದೇಶ ನೀಡಿದ್ದರೂ, ಅದನ್ನು ಪಾಲಿಸಲು ಸಿಬ್ಬಂದಿ ಹಿಂದೇಟು ಹಾಕಿದರು. ಜೊತೆಗೆ ಹೊರಗಿನ ಶಕ್ತಿಗಳನ್ನು ಜೊತೆಗೂಡಿಸಿ, ತೀರ್ಪಿನ ವಿರುದ್ಧ ದಾಂಧಲೆ ಎಬ್ಬಿಸಿದರು. ನ್ಯಾಯಾಧೀಶರ ಕಾರಿಗೆ ದುಷ್ಕರ್ಮಿಗಳು ಮುತ್ತಿಗೆ ಹಾಕಿದರು. ನ್ಯಾಯಾಧೀಶೆಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸರೇ ನ್ಯಾಯಾಧೀಶರ ವಿರುದ್ಧ ಒಂದಾದರು. ಪ್ರಕರಣ ಇಲ್ಲಿಗೇ ಮುಗಿಯುವುದಿಲ್ಲ.ಆಗಿಂದಾಗಲೇ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ. ಆದೇಶಕ್ಕೆ ತಕ್ಷಣ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್. ಜೆ. ಸತೀಶ್ ಸಿಂಗ್ ಅವರು ತಡೆಯಾಜ್ಞೆ ನೀಡುತ್ತಾರೆ. ಇಡೀ ನ್ಯಾಯವ್ಯವಸ್ಥೆಯೇ ಬೆಕ್ಕಸ ಬೆರಗಾಗುವಂತೆ, ನ್ಯಾಯಾಧೀಶರೇ ಸಂವಿಧಾನದ ವಿರುದ್ಧ ಹೀಗೊಂದು ತೀರ್ಪನ್ನು ಬರೆದು, ಪೊಲೀಸ್ ಅಧಿಕಾರಿಗಳ ಸರ್ವಾಧಿಕಾರಕ್ಕೆ ತಮ್ಮ ಸಮ್ಮತಿಯನ್ನು ನೀಡುತ್ತಾರೆ. ಇದೊಂದು ರೀತಿ, ಬೆದರಿಕೆ ಮತ್ತು ಒತ್ತಡಗಳ ಮೂಲಕ ನ್ಯಾಯಾಲಯ ತನ್ನ ಕರ್ತವ್ಯದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಗಂಭೀರ ಚರ್ಚೆಯಾಗಬೇಕಾಗಿದ್ದರೂ, ಘಟನೆ ಕೇವಲ ಚನ್ನರಾಯಪಟ್ಟಣಕ್ಕಷ್ಟೇ ಸೀಮಿತವಾಗಿ ಉಳಿದು ಬಿಟ್ಟಿದೆ. ಒಂದು ರೀತಿಯಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದಿರುವುದು ನ್ಯಾಯಾಲಯದ ವಿರುದ್ಧ ಪೊಲೀಸರ ದಂಗೆ. ಉನ್ನತ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕು ಇರದೇ ಇದ್ದರೆ, ಕೆಳಗಿನ ದರ್ಜೆಯ ಅಧಿಕಾರಿಗಳಿಗೆ ಈ ರೀತಿ ವರ್ತಿಸುವುದಕ್ಕೆ ಧೈರ್ಯ ಬರುತ್ತಿರಲಿಲ್ಲ.

ಇದೀಗ ಜನಸಾಮಾನ್ಯರಲ್ಲಿ ಹತ್ತು ಹಲವು ಪ್ರಶ್ನೆಗಳು ಎದ್ದಿವೆ. ಮುಖ್ಯವಾಗಿ, ಒಬ್ಬ ಶ್ರೀಸಾಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದರೆ, ವಾರಂಟ್ ಜಾರಿ ಮಾಡಿ ಅವನನ್ನು ಎಲ್ಲಿದ್ದರೂ ಬಂಧಿಸಿ ಜೈಲಿಗೆ ತಳ್ಳಲಾಗುತ್ತದೆ. ಆದರೆ ಇಲ್ಲಿ ಪೊಲೀಸ್ ಅಧಿಕಾರಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಅಗೌರವ ಸೂಚಿಸುತ್ತಾ ಬಂದಿದ್ದಾನೆ. ಅವನನ್ನು ಯಾವ ರೀತಿಯಲ್ಲಿಯೂ ಶಿಕ್ಷಿಸಲು ಅಧಿಕಾರವಿಲ್ಲ ಎಂದು ಪೊಲೀಸ್ ಅಧಿಕಾರಿಗಳೇ ತೀರ್ಮಾನ ಮಾಡುತ್ತಾರೆ. ಬೆದರಿಕೆಯೊಡ್ಡಿ, ತಮಗೆ ಬೇಕಾದ ತೀರ್ಪನ್ನು ನ್ಯಾಯಾಧೀಶರಿಂದ ಬರೆಸುತ್ತಾರೆ. ಇದು ಜನಸಾಮಾನ್ಯರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತದೆ? ಜನಸಾಮಾನ್ಯರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ನಿಜ. ಆದರೆ ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯೇ? ಪೊಲೀಸ್ ಅಧಿಕಾರಿಯೇ ಆಗಿದ್ದರೂ, ಕಟಕಟೆಯಲ್ಲಿ ನಿಂತಾಗ ನೆಲದ ಕಾನೂನಿಗೆ, ಸಂವಿಧಾನಕ್ಕೆ ಪೊಲೀಸ್ ಅಧಿಕಾರಿ ಬಾಧ್ಯಸ್ಥನಾಗಿರುತ್ತಾನೆ. ತೀರ್ಪನ್ನು ಪ್ರಶ್ನಿಸುವುದಿದ್ದರೂ, ಅದನ್ನು ಕಾನೂನಿನ ಮಾರ್ಗದಲ್ಲೇ ಪ್ರಶ್ನಿಸಬೇಕು. ಆದರೆ ಇಲ್ಲಿ, ತೀರ್ಪನ್ನು ಪ್ರಶ್ನಿಸಲಾಗಿಲ್ಲ. ಆತ ನ್ಯಾಯಾಲಯದ ಅಧಿಕಾರವನ್ನೇ ಪ್ರಶ್ನಿಸಿದ್ದಾನೆ. ಪೊಲೀಸರ ಈ ವರ್ತನೆಯನ್ನು ನಾಳೆ ಜನಸಾಮಾನ್ಯರೂ ಅನುಕರಿಸತೊಡಗಿದರೆ ಅದರ ಪರಿಣಾಮ ಏನಾಗಬಹುದು? ನ್ಯಾಯಾಲಯ ನೀಡುವ ಎಲ್ಲ ತೀರ್ಪುಗಳು ಸರಿಯಾಗಿಯೇ ಇರುತ್ತದೆ ಎನ್ನುವಂತಿಲ್ಲ. ಆದರೂ ಅದನ್ನು ಬಲ ಪ್ರಯೋಗಿಸಿ ಪ್ರಶ್ನಿಸುವ, ಬೆದರಿಸಿ, ತಮ್ಮ ಪರವಾಗಿ ತೀರ್ಪನ್ನು ಪಡೆದುಕೊಳ್ಳುವುದು ತಪ್ಪು. ಇಂದು ಪೊಲೀಸ್ ಅಧಿಕಾರಿಗಳು ತಮ್ಮ ಬಲವನ್ನು ಪ್ರಯೋಗಿಸಿ ನ್ಯಾಯಾಲಯಕ್ಕೆ ಅವಮಾನಗೈದಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದಲ್ಲಿ, ನಾಳೆ ಜನಸಾಮಾನ್ಯರೂ ಇದೇ ಮಾರ್ಗವನ್ನು ಅನುಸರಿಸುವ ದಿನ ದೂರವಿಲ್ಲ.

ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ನಡೆದಿರುವ ಘಟನೆ, ಪೊಲೀಸರು ತಮ್ಮ ಲಕ್ಷಣರೇಖೆಯನ್ನು ಹೇಗೆ ಮೀರುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ತಕ್ಷಣ ನ್ಯಾಯಾಲಯವನ್ನು ನಿಂದಿಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಿ ಅವರನ್ನು ಜೈಲು ಸೇರುವಂತೆ ಮಾಡಬೇಕು. ಹಾಗೆಯೇ, ನ್ಯಾಯವ್ಯವಸ್ಥೆಯ ವಿರುದ್ಧವೇ ಆತುರಾತುರವಾಗಿ ತೀರ್ಪು ನೀಡಿದ ಸೆಷನ್ಸ್ ನ್ಯಾಯಾಧೀಶರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮುಂದೊಂದು ದಿನ ನ್ಯಾಯಾಧೀಶರು ಯಾವುದೇ ತೀರ್ಪನ್ನು ನೀಡುವುದಕ್ಕೆ ಅಂಜುವಂತಹ ವಾತಾವರಣ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News