ಗೋರಕ್ಷಕರ ಹೆಸರಿನಲ್ಲಿ ಬಿ.ಟಿ.ಲಲಿತಾ ನಾಯಕ್ ರಿಗೆ ಕೊಲೆ ಬೆದರಿಕೆ ಪತ್ರ

Update: 2016-08-30 07:28 GMT

ತುಮಕೂರು, ಆ.30: ಗೋರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಮಾತನಾಡಿದ್ದಕ್ಕೆ ಮಾಜಿ ಸಚಿವೆ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ಸೋಮವಾರ ರಾಷ್ಟ್ರೀಯ ಸಮಾವೇಶದ ಜಾಥಾ ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಟಿ. ಲಲಿತಾ ನಾಯಕ್ ಈ ವಿಷಯ ತಿಳಿಸಿದರು. ಬೆದರಿಕೆ ಪತ್ರದ ಕುರಿತಂತೆ ಈ ಸಂಬಂಧ ಪೊಲೀಸರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ.
 ಜುಲೈ ಕೊನೆ ವಾರ ಚಿಕ್ಕಮಗಳೂರಿನ ಜಯಪುರದಲ್ಲಿ ಕೋಮುಸೌಹಾರ್ದ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣದಲ್ಲಿ ತಾಯಿಯ ಹಾಲಿಗೂ ಗೋವಿನ ಹಾಲಿಗೂ ವ್ಯತ್ಯಾಸವಿದೆ. ಗೋವಿನ ಹಾಲನ್ನು ಮಾರಬಹುದು ತಾಯಿಯ ಹಾಲು ಮಾರಲು ಸಾಧ್ಯವಿಲ್ಲ. ಆದ್ದರಿಂದ ಗೋವಿಗೆ ತಾಯಿಯ ಸ್ಥಾನ ನೀಡಲು ಬರುವುದಿಲ್ಲ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ನಗೆ ಕೊಲೆ ಬೆದರಿಕೆ ಪತ್ರ ಕಳುಹಿಸಿದ್ದಾರೆ ಎಂದು ಹೇಳಿದರು.
ನಾನು ಇದುವರೆಗೂ ಪತ್ರ ವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸ್ನೇಹಿತರೆಲ್ಲರ ಒತ್ತಾಯ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 
ಧಾರವಾಡದ ಕಾರ್ಯಕ್ರಮ ಮುಗಿಸಿ ನಂತರ ಪೊಲೀಸರಿಗೆ ದೂರು ನೀಡುತ್ತೇನೆ ಎಂದರು. ಬೆದರಿಕೆ ಪತ್ರಕ್ಕೂ ಮುನ್ನ ಅನೇಕ ಬಾರಿ ಹಲವರಿಂದ ಬೆದರಿಕೆ ಕರೆ ಗಳು ಬರುತ್ತಿದ್ದವು.ಆದರೆ ನಾನು ಬಹಿರಂಗ ಪಡಿಸಿರಲಿಲ್ಲ. ಈಗಲೂ ಅವರು ನನ್ನ ಕೊಲ್ಲುತ್ತಾರೆ ಎನ್ನುವ ಭಯವಿಲ್ಲ.
 ಆದರೆ ಮುಂದೆ ಅಪಾಯವಾದರೆ ಪತ್ರದ ವಿಚಾರವನ್ನು ನಮ್ಮ ಗಮನಕ್ಕೆ ತಂದಿರಲಿಲ್ಲ ಎಂದು ಸರಕಾರ ತನ್ನ ಜವಾ ಬ್ದಾರಿಯಿಂದ ನುಣುಚಿಕೊಳ್ಳ ಬಾರದು ಎಂಬ ಕಾರಣಕ್ಕೆ ಬಹಿರಂಗ ಪಡಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News