ಸಮಯ ಪ್ರಜ್ಞೆಯ ಮೂಲಕ ಸೈನಿಕರ ಪ್ರಾಣ ಉಳಿಸಿದ ಗೃಹಿಣಿ

Update: 2016-09-01 03:13 GMT

ಶಿಮ್ಲಾ, ಸೆ.1: ಗೃಹಿಣಿಯೊಬ್ಬರ ಸಮಯಪ್ರಜ್ಞೆಯಿಂದಾಗಿ ಗಾಯಾಳು ಸೈನಿಕನ ಜೀವ ಉಳಿದ ಅಪರೂಪದ ಘಟನೆ ಇಲ್ಲಿನ ಕೋತ್‌ಖಾಯ್ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್ 20ರಂದು ಜುತೋಹ್ ಕ್ಯಾಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಅಸ್ಸಾಂ ರೈಫಲ್ಸ್ನ ಸೈನಿಕರಿಗೆ ಶಿಮ್ಲಾದಿಂದ 12 ಕಿಲೋಮೀಟರ್ ದೂರದ ಬನೂತಿ ಪ್ರದೇಶದಲ್ಲಿ ಶ್ವಾನಪಡೆ ಎದುರಾಯಿತು. ಬೀದಿನಾಯಿಗಳ ಹಿಂಡು ಸನಿಹವಾದಾಗ ಗಾಬರಿಗೊಂಡ ಮುಕೇಶ್ ಕುಮಾರ್ ಸೈನಿಕ ಆಯ ತಪ್ಪಿ 50 ಅಡಿಯ ರಸ್ತೆ ಬದಿ ಕಂದಕಕ್ಕೆ ಬಿದ್ದರು. ಹಣೆಗೆ ಕಲ್ಲು ಬಡಿದು ಆ ಸೈನಿಕ ಪ್ರಜ್ಞೆ ಕಳೆದುಕೊಂಡರು. ಆತನ ಸ್ಥಿತಿ ಕಂಡು ಇತರ ಸೈನಿಕರು ನೆರವಿಗಾಗಿ ಕೂಗಿಕೊಂಡರು.

ಆಕ್ರಂದನ ಕೇಳಿ 42 ವರ್ಷದ ವೀಣಾ ಶರ್ಮಾ ಎಂಬ ಮಹಿಳೆ ಧಾವಿಸಿದರು. ಸೈನಿಕ ಮೃತಪಟ್ಟಿರಬೇಕು ಎಂದು ಭಾವಿಸಿ, ಸೈನಿಕರು ಅಸಹಾಯಕರಾಗಿ ನೋಡುತ್ತಿದ್ದಾಗ, ಆತನ ಬಾಯಿಗೆ ತನ್ನ ಬಾಯಿಯಿಂದ ಗಾಳಿ ಹಾಕುವ ಮೂಲಕ ಉಸಿರಾಟ ಮರು ಆರಂಭಿಸಲು ಪ್ರಯತ್ನಿಸಿದಳು.

"ಗಾಯಾಳುವನ್ನು ಸಾಗಿಸಲು ಅವಕಾಶ ಇಲ್ಲದ ಕಾರಣ, ನಾನು 72 ವರ್ಷದ ನನ್ನ ತಂದೆ (ರಮೇಶ್ ಶರ್ಮಾ) ಯನ್ನು ಕರೆದೆ. ಇತ್ತೀಚಿನ ದಿನದಲ್ಲಿ ಅವರು ವಾಹನ ಚಲಾಯಿಸುತ್ತಿರಲಿಲ್ಲ. ಯಾವ ಸೈನಿಕರಿಗೂ ಚಾಲನೆ ಬಾರದ ಕಾರಣ ಅವರಲ್ಲೇ ವಾಹನ ಚಾಲನೆ ಮಾಡುವಂತೆ ಕೇಳಿಕೊಂಡೆ. ಜತೋಹ್ ಮಿಲಿಟರಿ ಆಸ್ಪತ್ರೆಗೆ ಗಾಯಾಳುವನ್ನು ಅವರು ಕರೆದೊಯ್ದರು" ಎಂದು ವೀಣಾ ವಿವರಿಸಿದ್ದಾರೆ.

ಬಳಿಕ ಗಾಯಾಳುವನ್ನು ಶಿಮ್ಲಾಧಲ್ಲಿರುವ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಲಾಯಿತು. ಗೃಹಿಣಿಯ ಸಮಯ ಪ್ರಜ್ಞೆಯಿಂದ ಸೈನಿಕನ ಜೀವ ಉಳಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News