ಭಾರತ ಬಂದ್: ಏನುಂಟು? ಏನಿಲ್ಲ?

Update: 2016-09-01 18:37 GMT

ಹೊಸದಿಲ್ಲಿ, ಸೆ.1: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಒಕ್ಕೂಟಗಳು ಸೆಪ್ಟಂಬರ್ 2ರಂದು ಭಾರತ ಬಂದ್‌ಗೆ ಕರೆ ನೀಡಿವೆ. ಈ ಕಾರ್ಮಿಕ ಒಕ್ಕೂಟಗಳ ಮುಷ್ಕರದಲ್ಲಿ ಸಾರ್ವಜನಿಕ ರಂಗದ 6 ಬ್ಯಾಂಕ್‌ಗಳ ನೌಕರರು ಕೈಜೋಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್‌ಗಳು, ಕಾರ್ಖಾನೆಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಯಾವುದೆಲ್ಲಾ ಬಂದ್: ಬ್ಯಾಂಕಿಂಗ್, ಸಾರ್ವಜನಿಕ ಸಾರಿಗೆ ಹಾಗೂ ಟೆಲಿಕಾಂ ಸೇವೆಗಳು ಬಂದ್‌ನಿಂದ ಬಾಧಿತವಾಗಲಿವೆ. ದಿಲ್ಲಿ,ಬೆಂಗಳೂರು, ಹೈದರಾಬಾದ್, ತಿರುವನಂತಪುರಂ ಸೇರಿದಂತೆ ಬಹುತೇಕ ನಗರಗಳಲ್ಲಿ ಅಟೊರಿಕ್ಷಾ,ಟ್ಯಾಕ್ಸಿಗಳು ರಸ್ತೆಗಿಳಿಯಲಾರವು.

ರೈಲ್ವೆ, ಶಾಲಾ,ಕಾಲೇಜ್‌ಗಳು ಬಂದ್‌ನಿಂದ ಮುಕ್ತ: ರೈಲ್ವೆ ಉದ್ಯೋಗಿಗಳು ಮುಷ್ಕರದಿಂದ ಹೊರಗುಳಿದಿರುವ ಕಾರಣ ದೇಶಾದ್ಯಂತ ರೈಲುಗಳು ಸಂಚಾರಕ್ಕೆ ಅಡ್ಡಿಯಾಗದು. ಶಾಲಾ,ಕಾಲೇಜುಗಳು ಕೂಡಾ ಅಧಿಕೃತವಾಗಿ ರಜೆ ಘೋಷಿಸಿಲ್ಲ. ಸಾರ್ವಜನಿಕರಂಗದ ಕೆಲವು ಬ್ಯಾಂಕ್‌ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆಯಾದರೂ, ಖಾಸಗಿ ಬ್ಯಾಂಕ್‌ಗಳು, ಎಟಿಎಂಗಳು ಕಾರ್ಯಾಚರಿಸಲಿವೆ.

ಕಾರ್ಮಿಕ ಒಕ್ಕೂಟಗಳ ಬೇಡಿಕೆಗಳು: 1ನೇ ಸ್ತರದ ನಗರಗಳಲ್ಲಿ ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.20ರಷ್ಟು ಅಂದರೆ ಮಾಸಿಕ 12 ಸಾವಿರ ರೂ.ಗೆ ಏರಿಕೆ ಮಾಡುವ ಸರಕಾರದ ಪ್ರಸ್ತಾಪವನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ 18 ಸಾವಿರ ರೂ.ಗೆ ಹೆಚ್ಚಿಸಬೇಕು ಹಾಗೂ ಅವರಿಗೆ ಸಾಮಾಜಿಕ ಭದ್ರತೆಯನ್ನು ನೀಡಬೇಕೆಂದು ಅವು ಆಗ್ರಹಿಸುತ್ತಿವೆ. ಅಸಂಘಟಿತ ವಲಯಗಳ ಕಾರ್ಮಿಕರು ಸೇರಿದಂತೆ ಎಲ್ಲಾ ವಲಯಗಳಲ್ಲಿ ಮಾಸಿಕ ಪಿಂಚಣಿಯು 3 ಸಾವಿರ ರೂ.ಗಿಂತ ಕಡಿಮೆಯಿರದಂತೆ ಖಾತರಿಪಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿವೆ. ರೈಲ್ವೆ, ರಕ್ಷಣೆ ಹಾಗೂ ಇತರ ಆಯಕಟ್ಟಿನ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ರದ್ದುಪಡಿಸಬೇಕೆಂದು ಅವು ಆಗ್ರಹಿಸಿವೆ.

ಮುಷ್ಕರದಲ್ಲಿ ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

ಈ ಸಲದ ಮುಷ್ಕರದಲ್ಲಿ ಸುಮಾರು 18 ಕೋಟಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆಂದು ಕಾರ್ಮಿಕ ಸಂಘಟನೆಗಳು ಘೋಷಿಸಿವೆ. ಕಳೆದ ವರ್ಷದ ಮುಷ್ಕರದಲ್ಲಿ 14 ಕೋಟಿ ಕಾರ್ಮಿಕರು ಪಾಲ್ಗೊಂಡಿದ್ದರು.ಕೋಲ್ ಇಂಡಿಯಾ, ಜಿಎಐಎಲ್, ಓಎನ್‌ಜಿಸಿ, ಎನ್‌ಟಿಪಿಸಿ,ಓಐಎಲ್, ಎಚ್‌ಎಎಲ್ ಹಾಗೂ ಬಿಎಚ್‌ಇಎಲ್‌ನಂತಹ ಸಾರ್ವಜನಿಕ ರಂಗದ ಸಂಸ್ಥೆಗಳ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಆದಾಗ್ಯೂ, ಭಾರತೀಯ ರೈಲ್ವೆ ಹಾಗೂ ಕೇಂದ್ರ ಸರಕಾರದ ಇತರ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ.ಏಳನೇ ವೇತನ ಆಯೋಗದ ಶಿಫಾರಸಿನಂತೆ ಕನಿಷ್ಠ ವೇತನವನ್ನು 18 ಸಾವಿರದಿಂದ 26 ಸಾವಿರಕ್ಕೆ ಏರಿಸಬೇಕೆಂಬ ಅವರ ಬೇಡಿಕೆಯನ್ನು ಪರಿಶೀಲಿಸಲು ಸರಕಾರವು ಈಗಾಗಲೇ ಸಮಿತಿಯೊಂದನ್ನು ರಚಿಸಿರುವ ಹಿನ್ನೆಲೆಯಲ್ಲಿ ಅವರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕೃಷಿಯೇತರ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು ಕೇಂದ್ರವು 246 ರೂ.ಗಳಿಂದ 350 ರೂ.ಗೆ ಏರಿಕೆ ಮಾಡಿರುವುದರಿಂದ, ಸಲಹಾ ಸಮಿತಿಯ ಶಿಫಾರಸುಗಳನ್ನು ಸರಕಾರವು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ ಬೆಂಬಲಿತ ಕಾರ್ಮಿಕ ಒಕ್ಕೂಟ ಬಿಎಂಎಸ್ ಮುಷ್ಕರದಿಂದ ಹಿಂದೆ ಸರಿದಿದೆ.

 ಸರಕಾರದ ನಿಲುವೇನು?

ಮುಷ್ಕರವನ್ನು ಕೈಬಿಡುವಂತೆ ಕಾರ್ಮಿಕ ಸಂಘಟನೆಗಳ ಮನವೊಲಿಸುವ ಪ್ರಯತ್ನವಾಗಿ ಸರಕಾರವು ವೇತನ ಏರಿಕೆ ಕುರಿತ ಸಲಹಾ ಮಂಡಳಿಯ ಶಿಫಾರಸುಗಳನ್ನು ಅಂಗೀಕರಿಸಿದೆ ಹಾಗೂ ಕೃಷಿಯೇತರ ಕಾರ್ಮಿಕರ ದಿನಗೂಲಿಯನ್ನು 246 ರೂ.ಗಳಿಂದ 350 ರೂ.ಗೆ ಏರಿಕೆ ಮಾಡಿದೆ. ಅಲ್ಲದೆ ವಿತ್ತ ಸಚಿವ ಅರುಣ್‌ಜೇಟ್ಲಿ ಕೇಂದ್ರ ಸರಕಾರದ ನೌಕರರಿಗೆ ಕಳೆದ ಎರಡು ವರ್ಷಗಳಿಂದ ಬಾಕಿಯಿರಿಸಲಾಗಿದ್ದ ಬೋನಸ್ ಕೂಡಾ ಘೋಷಿಸಿದ್ದಾರೆ. ಈ ಬೋನಸ್ ಬಿಡುಗಡೆಯಿಂದಾಗಿ ಬೊಕ್ಕಸಕ್ಕೆ ವಾರ್ಷಿಕವಾಗಿ 1,920 ಕೋಟಿ ರೂ. ಹೊರೆ ಬೀಳಲಿದೆ. ಗುತ್ತಿಗೆ ಕಾರ್ಮಿಕರ ಹಾಗೂ ಅವರನ್ನು ಒದಗಿಸುವ ಏಜೆನ್ಸಿಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News