2020ರೊಳಗೆ ಎಲ್ಲಾ ಹೆದ್ದಾರಿಗಳು ಲೆವೆಲ್‌ಕ್ರಾಸಿಂಗ್‌ನಿಂದ ಮುಕ್ತ

Update: 2016-09-03 07:21 GMT

ಚೆನ್ನೈ, ಸೆ.3: ದೇಶಾದ್ಯಂತ ಯಾಂತ್ರಿಕವಾಗಿ ಸದೃಢವಾದ ರಸ್ತೆ ಮೂಲಸೌಕರ್ಯದ ಜಾಲದ ಸೃಷ್ಟಿ ಹಾಗೂ ನಿರ್ವಹಣೆಯೇ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಗುರಿಯಾಗಿದೆಯೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧ್ಯಕ್ಷ ರಾಘವ್ ಚಂದ್ರ ತಿಳಿಸಿದ್ದಾರೆ.

ಶುಕ್ರವಾರ ಚೆನ್ನೈನಲ್ಲಿ ಪ್ರಾದೇಶಿಕ ಸಂಪಾದಕರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು 2014-15 ಹಾಗೂ 2015-16ರಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಸಾಧನೆಗಳನ್ನು ಸಭೆಯ ಮುಂದಿಟ್ಟರು. ರಾಷ್ಟ್ರೀಯ ಹೆದ್ದಾರಿಗಳನ್ನು ಕರಾವಳಿ ಹಾಗೂ ಗಡಿ ಪ್ರದೇಶಗಳು, ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳ ಜೊತೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಭಾರತ್‌ಮಾಲಾ ಯೋಜನೆನ್ನು ವಿವರಿಸಿದರು.
ಸೇತು ಭಾರತಮ್ ಯೋಜನೆಯಡಿ ದೇಶದ ಎಲ್ಲಾ 208 ರೈಲ್ವೆ ಲೆವೆಲ್‌ಕ್ರಾಸಿಂಗ್‌ಗಳಲ್ಲಿ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಓವರ್‌ಬ್ರಿಡ್ಜ್‌ಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ 2019ರೊಳಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ರೈಲ್ವೆ ಕ್ರಾಸಿಂಗ್‌ನಿಂದ ಮುಕ್ತವಾಗಲಿವೆಯೆಂದರು. ವಡೋದರಾ-ಮುಂಬೈ ಕಾರಿಡಾರ್ ಹಾಗೂ ದಿಲ್ಲಿ-ಮೀರತ್ ಕಾರಿಡಾರ್‌ಗಳಂತಹ ಅಧಿಕ ವಾಹನಸಾಂಧ್ರತೆಯ ಕಾರಿಡಾರ್‌ಗಳಲ್ಲಿ 1,000 ಕಿ.ಮೀ. ವಿಸ್ತೀರ್ಣದ ಎಕ್ಸ್‌ಪ್ರೆಸ್ ವೇಗಗಳನ್ನು ಸ್ಥಾಪಿಸಲಾಗುವುದು ಎಂದು ರಾಘವ್‌ಚಂದ್ರ ಮಾಹಿತಿ ನೀಡಿದರು. 2015-16 ಸಾಲಿನಲ್ಲಿ 10 ಸಾವಿರ ಕಿ.ಮೀ. ವಿಸ್ತೀರ್ಣದ ಹೆದ್ದಾರಿ ನಿರ್ಮಾಣ ಗುರಿಯಿರಿಸಲಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 15 ಸಾವಿರ ಕಿ.ಮೀ.ಗಳ ಗುರಿ ನಿಗದಿಪಡಿಸಲಾಗಿದೆ ಎಂದವರು ತಿಳಿಸಿದರು.
 2020ರೊಳಗೆ ರಸ್ತೆ ಅಪಘಾತಗಳ ಪ್ರಮಾಣವನ್ನು ಶೇ.50ಕ್ಕೆ ಇಳಿಸಲು ಸರಕಾರದ ವಿವಿಧ ಯೋಜನೆಗಳನ್ನು ರಾಘವ್ ಚಂದ್ರ ಸಭೆಗೆ ವಿವರಿಸಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿಗೆ ಸರಕಾರವು ಈಗಾಗಲೇ ಅನುಮೋದನೆ ನೀಡಿದೆ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಕಾನೂನುಗಳನ್ನು ರೂಪಿಸಲು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯನ್ನು ರಚಿಸಲಾಗಿದೆ ಎಂದರು. 2016ನೆ ಸಾಲಿನ ರಸ್ತೆ ಸುರಕ್ಷತೆ (ತಿದ್ದುಪಡಿ)ವಿಧೇಯಕವನ್ನು ಈಗಾಗಲೇ ರಸ್ತೆ ಸಾರಿಗೆ ಸಚಿವಾಲಯ ಸಂಸತ್‌ನಲ್ಲಿ ಮಂಡಿಸಿರುವುದಾಗಿ ಅವರು ತಿಳಿಸಿದರು.
 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಪೀಡಿತ 723 ಕಪ್ಪು ಚುಕ್ಕೆ (ಸ್ಥಳ)ಗಳನ್ನು ಗುರುತಿಸಲಾಗಿದ್ದು,ಅಂತಹ ಸ್ಥಳಗಳಲ್ಲಿನ ಕಾಮಗಾರಿ ನ್ಯೂನತೆಗಳನ್ನು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸರಿಪಡಿಸಲಾಗುವುದೆಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News