ಮೂತ್ರಪಿಂಡ, ಮೇದೋಜಿರಕ ಗ್ರಂಥಿ ಯಶಸ್ವಿ ಕಸಿ

Update: 2016-09-03 18:21 GMT

ಬೆಂಗಳೂರು, ಸೆ.3: ಅಂಗಾಂಗ ಕಸಿಯಲ್ಲಿ ಪರಿಣಿತಿ ಹೊಂದಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ತಂಡ ಮೂತ್ರಪಿಂಡ ಮತ್ತು ಮೇದೋಜಿರಕ (ಪ್ಯಾಂಕ್ರಿಯಾಟಿಕ್) ಗ್ರಂಥಿ ಕಸಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಪುಣೆಯ 22 ವರ್ಷದ ಯುವಕನನ್ನು ರಕ್ಷಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಬಹು ಅಂಗಾಂಗ ಕಸಿ ತಜ್ಞ ಡಾ.ಸುರೇಶ್ ರಾಘವಯ್ಯ ಮಾತನಾಡಿ, ಪುಣೆಯ ಶೇಖರ್ ಮಿಲಾನಿ 5 ವರ್ಷದವನಿದ್ದಾಗಲೇ ಮಧುಮೇಹಕ್ಕೆ ತುತ್ತಾಗಿದ್ದ ಮತ್ತು ಈ ರೋಗದಿಂದಾಗಿ ತನ್ನ ಎರಡೂ ಮೂತ್ರಪಿಂಡ ಕಳೆದುಕೊಂಡಿದ್ದ. ಪ್ರತಿದಿನ ಮೂರು ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದುದಲ್ಲದೆ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಮೂಲಕ ಬದುಕುಳಿದಿದ್ದ ಎಂದರು.
ಇದೀಗ ಎರಡೂ ಕಿಡ್ನಿಗಳನ್ನು ಜೋಡಿಸಿರುವುದರಿಂದ ಮೊದಲಿನಂತೆ ಆತನ ಅಂಗಾಂಗಗಳೆಲ್ಲಾ ಕಾರ್ಯನಿರ್ವ ಹಿಸುತ್ತಿದ್ದು, ಇನ್‌ಸುಲಿನ್ ಮತ್ತು ಡಯಾಲಿಸಿಸ್‌ನಿಂದ ಸಂಪೂರ್ಣ ಮುಕ್ತಗೊಂಡಿದ್ದಾನೆ ಎಂದು ವಿವರಿಸಿದರು.
ಆಸ್ಪತ್ರೆ ಉಪಾಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ಮಾತನಾಡಿ, ‘ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆ. ಈ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ನಾವು ವಿಶ್ವಮಟ್ಟದ ಚಿಕಿತ್ಸೆಗಳಿಗೆ ಪೂರಕವಾಗಿ ಆಸ್ಪತ್ರೆ ಮೂಲಸೌಕರ್ಯ ಮತ್ತು ಇತರೆ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುತ್ತಲೆ ಇರುತ್ತೇವೆ’ ಎಂದರು.
ಅಂಗಾಂಗ ಕಸಿ ಮಾಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಭಾರತದಲ್ಲಿ ಅತ್ಯಂತ ಹೆಚ್ಚು ಬಹುಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆ ಎಂದೆನಿಸಿದೆ. ಪ್ಯಾಂಕ್ರಿಯಾಟಿಕ್ ಮತ್ತು ಕಿಡ್ನಿಯನ್ನು ಏಕಕಾಲದಲ್ಲಿ ಕಸಿ ಮಾಡಿರುವ ದೇಶದ ಏಕೈಕ ಆಸ್ಪತ್ರೆ ಇದಾಗಿದ್ದು, 2ವರ್ಷಗಳಲ್ಲಿ ಎರಡನೆ ಯಶಸ್ವಿ ಎಸ್‌ಪಿಕೆ ಕಸಿ ಇದಾಗಿದೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಶೇಖರ್ ಮಿಲಾನಿ ಮಾತನಾಡಿ, ನನಗೆ ಪುನರ್ಜನ್ಮ ನೀಡಿದ ವೈದ್ಯರು ಮತ್ತು ಆಸ್ಪತ್ರೆಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಮಧುಮೇಹದಿಂದ ಮುಕ್ತವಾಗಿ ಜೀವನ ಸಾಗಿಸುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ಆದರೆ, ಇಂದು ಯಶಸ್ವಿಯಾದ ಕಸಿ ಶಸ್ತ್ರಚಿಕಿತ್ರೆಯಿಂದಾಗಿ ನಾನು ಇನ್‌ಸುಲಿನ್ ಮತ್ತು ಡಯಾಲಿಸಿಸ್‌ನಿಂದ ಸಂಪೂರ್ಣ ಹೊರಬಂದಿದ್ದೇನೆ ಎಂದರು.
ಪ್ಯಾಂಕ್ರಿಯಾಟಿಕ್-ಕಿಡ್ನಿ ಕಸಿ ಕೇವಲ ಕಿಡ್ನಿ ವೈಫಲ್ಯವನ್ನು ತಡೆಯುವುದಲ್ಲದೆ, ಮಧು ಮೇಹ ಹೋಗಲಾಡಿಸಿ ರೋಗಿಯನ್ನು ಇನ್‌ಸುಲಿನ್‌ನಿಂದ ಮುಕ್ತಗೊಳಿಸುತ್ತದೆ. ಪ್ಯಾಂಕ್ರಿಯಾಟಿಕ್ ಕಸಿಯಿಂದ ನರಗಳ ಹಾನಿ, ಕಣ್ಣಿನ ಹಾನಿ ಮತ್ತು ರಕ್ತನಾಳಗಳಿಗೆ ಆಗುವ ಹಾನಿಯನ್ನು ತಪ್ಪಿಸಬಹುದು. ದೇಹದಲ್ಲಿನ ಸಕ್ಕರೆ ಅಂಶ ಸಾಮಾನ್ಯ ಸ್ಥಿತಿಗೆ ಬರುವುದರಿಂದ ಕಸಿ ಮಾಡಿದ ಮೂತ್ರಪಿಂಡ ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ವೈದ್ಯರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News