ಒಎನ್‌ಜಿಸಿಯ ಕೊಳ್ಳೆ ಹೊಡೆದ ರಿಲಯನ್ಸ್: 11,000 ಕೋಟಿ ರೂ.ಗೂ ಅಧಿಕ ಮೊತ್ತದ ಅನಿಲ ಕಳವು

Update: 2016-09-03 18:21 GMT

ಮುಂಬೈ, ಸೆ.3: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ಯಾಯದ ಹಾದಿಯ ಮೂಲಕ ಕೃಷ್ಣಾ-ಗೋದಾವರಿ ನದಿ ದಂಡೆ ಪ್ರದೇಶದ ಒಎನ್‌ಜಿಸಿ ತೈಲ ಬಾವಿಯಿಂದ ಅಕ್ರಮವಾಗಿ ಭಾರೀ ಲಾಭ ಪಡೆದುಕೊಂಡಿದೆ ಎಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎ.ಪಿ. ಶಾ ಅವರ ಏಕ ಸದಸ್ಯ ಆಯೋಗವು ಜಿಯೋ ಸೇವೆ ಚಾಲನೆಯ ಮುನ್ನಾ ದಿನ, ಅಂದರೆ ಆಗಸ್ಟ್ 31ರಂದು ದೋಷಾರೋಪಣೆ ಮಾಡಿದೆ.

ಒಎನ್‌ಜಿಸಿಯ ಗೋದಾವರಿ-ಪಿಎಂಎಲ್ ಹಾಗೂ ಕೆಜಿ-ಡಿ5ಗಳಿಂದ 11.122 ಬಿಲಿಯನ್ ಘನ ಮೀಟರ್‌ಗಳಷ್ಟು ಒಎನ್‌ಜಿಸಿ ಗ್ಯಾಸ್ ಆರ್‌ಐಎಲ್‌ನ ಕೆಜಿ-ಡಿ6ಕ್ಕೆ ವರ್ಗಾವಣೆಯಾಗಿದೆ. ಮಿಲಿಯನ್ ಥರ್ಮಲ್ ಯುನಿಟ್‌ಗೆ 4.2 ಡಾಲರ್‌ಗಳಂತೆ ಆರ್‌ಐಎಲ್ ಉತ್ಪಾದಿಸಿರುವ ಒಎನ್‌ಜಿಸಿಗೆ ಸೇರಿದ ಗ್ಯಾಸ್‌ನ ಬೆಲೆ 1.7 ಶತಕೋಟಿ ಡಾಲರ್ ಅಥವಾ ರೂ. 11,055 ಕೋಟಿಗಳಾಗಿವೆ ಎಂದು ಸ್ಕ್ರೋಲ್.ಇನ್ ವರದಿಯೊಂದು ತಿಳಿಸಿದೆ. ಗುರುವಾರದ ರಿಲಯನ್ಸ್ ಜಿಯೋ 4ಜಿ ಸೇವೆಗಳ ಚಾಲನೆಯೇ ಮಾಧ್ಯಮಗಳಿಗೆ ಬಹಳ ದೊಡ್ಡ ಸುದ್ದಿಯಾಗಿ ಬಿಟ್ಟಿತ್ತು. ಆದರೆ ಈ ಜಿಯೋ ಗದ್ದಲದಲ್ಲಿ ಒಂದು ಪ್ರಮುಖ ಹಾಗೂ ರಿಲಯನ್ಸ್‌ಗೆ ಸಂಬಂಧ ಪಟ್ಟ ಬಹುಮುಖ್ಯ ವಿಚಾರ ಸುದ್ದಿಯಾಗಲೇ ಇಲ್ಲ.

ಈ ಅಕ್ರಮ, ಭವಿಷ್ಯದಲ್ಲಿ ಕಂಪೆನಿಗೆ ಸಂಕಷ್ಟ ತಂದೊಡ್ಡಲಿದೆಯೆಂಬುದು ಸ್ಪಷ್ಟವಾಗಿದೆ.

ಆರ್‌ಐಎಲ್ ತನ್ನ ವಿದೇಶಿ ಪಾಲುದಾರರಾದ ಬಿಪಿ ಪಿಎಲ್‌ಸಿ ಹಾಗೂ ನೈಕೋ ರಿಸೋರ್ಸಸ್ ಜತೆ ಒಎನ್‌ಜಿಸಿ ತೈಲ ಬಾವಿಗಳಿಂದ ನೈಸರ್ಗಿಕ ಅನಿಲವನ್ನು ಅಕ್ರಮವಾಗಿ ತೆಗೆದಿದೆಯೆಂದು ಈ ಆಯೋಗ ಹೇಳಿದೆ.

ಕೃಷ್ಣಾ-ಗೋದಾವರಿ ನದಿ ದಂಡೆ ಪ್ರದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಡೆಸುತ್ತಿರುವ ಕೆಜಿ-ಡಿ6 ಗ್ಯಾಸ್ ಬ್ಲಾಕ್‌ನಿಂದ ಹೆಚ್ಚುವರಿ ವೆಚ್ಚ ವಸೂಲಿಯನ್ನು ರೂ. 9307.22 ಕೋಟಿಗೆ ನಿಗದಿಪಡಿಸಲಾಗಿದೆಯೆಂದು ಸಿಎಜಿ ವರದಿ ತಿಳಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

 ಶಾ ಸಮಿತಿಯ ವರದಿಯನ್ನು ಸಾರ್ವಜನಿಕರು ನೋಡಬಾರದೆಂಬುದು ರಿಲಯನ್ಸ್ ಕಂಪೆನಿಯ ಇಂಗಿತವಾಗಿತ್ತು ಹಾಗೂ ಈ ಬಗ್ಗೆ ಶಾ ಸಮಿತಿಯ ವರದಿಯ ಐದನೆ ಅಧ್ಯಾಯದಲ್ಲಿ ಹೀಗೆಂದು ಉಲ್ಲೇಖವಾಗಿದೆ - ‘‘ಸಮಿತಿ ಮಾಡುವ ಯಾವುದೇ ಶಿಫಾರಸು ಬಹಿರಂಗ ಪಡಿಸಲಾಗುವುದರಿಂದ, ಆರ್‌ಐಎಲ್‌ಗೆ ಹಾಗೂ ಅದರ ಗೌರವಕ್ಕೆ ಸರಿಪಡಿಸಲಾಗದ ಹಾನಿಯುಂಟಾಗಬಹುದು ಎಂದು ಆರ್‌ಐಎಲ್ ಹೇಳಿಕೊಂಡಿದೆ. ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸರಕಾರ ತನ್ನ ಕ್ರಮಗಳನ್ನು ನಿರ್ಧರಿಸಬಹುದು.’’

ಶಾ ಸಮಿತಿಯ ವರದಿಯ ಹಿನ್ನೆಲೆ

 ಜುಲೈ 2013ರಲ್ಲಿ ಒಎನ್‌ಜಿಸಿ ಹೈಡ್ರೋಕಾರ್ಬನ್ಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ತನ್ನ ತೈಲ ಬಾವಿಯ ಸಮೀಪವೇ ಇರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬ್ಲಾಕ್ ಬಗ್ಗೆ ಮಾಹಿತಿ ಕೇಳಿತ್ತು. ಈ ವಿಚಾರವನ್ನು ವಿಮರ್ಶಿಸಿ ಒಂದು ನಿರ್ಧಾರಕ್ಕೆ ಬರಲು ಒಎನ್‌ಜಿಸಿ, ಆರ್‌ಐಎಲ್ ಹಾಗೂ ಹೈಡ್ರೋಕಾರ್ಬನ್ಸ್ ಮಹಾನಿರ್ದೇಶಕರು ಸ್ವತಂತ್ರ ಕನ್ಸಲ್ಟಂಟ್ ಒಬ್ಬರನ್ನು ನೇಮಿಸಲು ನಿರ್ಧರಿಸಿದ್ದವು. ಆದರೆ ಈ ಕನ್ಸಲ್ಟಂಟ್‌ನ ವರದಿ ಬರುವ ಮುನ್ನವೇ ಒಎನ್‌ಜಿಸಿ ದಿಲ್ಲಿ ಹೈಕೋರ್ಟ್‌ನ ಮೊರೆ ಹೋಗಿತ್ತು. ‘‘ಆರ್‌ಐಎಲ್ ತನ್ನ ತೈಲಬಾವಿಗಳನ್ನು ಡ್ರಿಲ್ ಮಾಡಿದ ರೀತಿ ಅದೆಷ್ಟು ಪೂರ್ವನಿರ್ಧರಿತವಾಗಿತ್ತೆಂದರೆ ಅದು ಒಎನ್‌ಜಿಸಿ ತೈಲಬಾವಿಯತ್ತ ವಾಲಿತ್ತಲ್ಲದೆ ಅಲ್ಲಿಂದ ಸಂಪನ್ಮೂಲಗಳನ್ನು ತೆಗೆಯುವ ಉದ್ದೇಶ ಹೊಂದಿತ್ತು. ತನ್ನ ತೈಲಬಾವಿಯಿಂದ ರೂ. 30,000 ಕೋಟಿ ಬೆಲೆಯ ನೈಸರ್ಗಿಕ ಅನಿಲವನ್ನು ಆರ್‌ಐಎಲ್ ಕೊಳ್ಳೆ ಹೊಡೆದಿದೆ’’ ಎಂದೂ ಒಎನ್‌ಜಿಸಿ ಆರೋಪಿಸಿತ್ತು. ನಂತರ ಬಂದ ಕನ್ಸಲ್ಟಂಟ್ ವರದಿಯೂ ಇದನ್ನು ದೃಢೀಕರಿಸಿದ್ದರಿಂದ ಈ ವರದಿ ಬಂದ ಎರಡು ವಾರಗಳ ತರುವಾಯ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಜಸ್ಟಿಸ್ ಶಾ ಸಮಿತಿಯನ್ನು ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News