ತಪ್ಪುಗಳನ್ನು ಹುಡುಕುವುದು ವಿಮರ್ಶಕನ ಕೆಲಸವಲ್ಲ

Update: 2016-09-04 18:09 GMT

‘ಕವಿ ದನಿ’ ಕಾರ್ಯಕ್ರಮವನು್ನ ಉದ್ಘಾಟಿಸಿ  ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಸೆ.4: ಸಾಹಿತ್ಯ ವಿಮರ್ಶಕರು ಕೃತಿಗಳಲ್ಲಿರುವ ತಪ್ಪುಗಳನ್ನು ಹುಡುಕುವುದಕ್ಕಿಂತ, ಕೃತಿಯಲ್ಲಿರುವ ಆಯಾ ಕಾಲಘಟ್ಟದ ಸಂದರ್ಭಗಳನ್ನು ವಿಮರ್ಶಿಸುವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಶಿಸಿದರು.
ರವಿವಾರ ಹೊಂಬಾಳೆ ಪ್ರತಿಭಾರಂಗ ನಗರದ ನಯನ ಸಭಾಂಗಣ ದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ ಕವಿತೆಗಳ ಓದು-ಗಮಕ- ಗಾಯನವನ್ನೊಳಗೊಂಡ ‘ಕವಿದನಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಮಹಾಕವಿಯಾಗಲು ಆರ್ಹರಲ್ಲ. ಅವರೇನ್ನಿದ್ದರೂ ಮಹಾ ಕಾದಂಬರಿಕಾರನ ಗುಂಪಿಗೆ ಸೇರಿದವರು ಎಂದು ಹಲವು ವಿಮರ್ಶಕರು ಅವರನ್ನು ಕಾಲೆಳೆಯುತ್ತಿದ್ದರು. ಈ ಸಂದರ್ಭದಲ್ಲಿ ನಾನು ಸಹ ಸುಮಾರು ಆರು ತಿಂಗಳಕಾಲ ಕುವೆಂಪು ಕಾವ್ಯಗಳಲ್ಲಿ ತಪ್ಪುಗಳು ಸಿಗುತ್ತವೆಯೇ ಎಂದು ಹುಡುಕಿದೆ. ಆದರೆ, ಇಂತಹ ದುರ್ಬುದ್ಧಿಯಿಂದ ಬಹುಬೇಗನೆ ಹೊರ ಬಂದೆ ಎಂದು ಅವರು ಆತ್ಮಾವಲೋಕನ ಮಾಡಿಕೊಂಡರು.

ಕುವೆಂಪು ಅವರ ‘ಶೂದ್ರ ತಪಸ್ವಿ’ಗಳು ಹೊರ ಬಂದಾಗ ಬ್ರಾಹ್ಮಣ ಸಮುದಾಯದ ಲೇಖಕರು ಕುವೆಂಪು ವಿರುದ್ಧ ಟೀಕೆಗಳ ಸುರಿ ಮಳೆಗೈದರು. ಈ ಕೃತಿ ಬ್ರಾಹ್ಮಣ ವಿರೋಧಿಯಾಗಿದೆ ಎಂದು ವಿಮರ್ಶೆ ಗಳನ್ನು ಬರೆದರು. ಇದಕ್ಕೆ ಪ್ರತಿಕ್ರಿಯಿಸಿದ ಕುವೆಂಪು ತಪಸ್ಸು ಮಾಡು ವುದಕ್ಕೆ ಹುಟ್ಟು ಕಾರಣವಾಗುವುದಿಲ್ಲ. ಯಾರು ಬೇಕಾದರು ತಪಸ್ಸು ಮಾಡ ಬಹುದೆಂಬ ಆಶಯದಿಂದ ಈ ಕೃತಿಯನ್ನು ರಚಿಸಲಾಗಿದೆ ಎಂದು ಸಮ ಜಾಯಿಸಿ ಕೊಡಬೇಕಾಯಿತು ಎಂದು ಬರಗೂರು ರಾಮಚಂದ್ರಪ್ಪ ನೆನಪು ಮಾಡಿಕೊಂಡರು.
ಪ್ರಾರಂಭಿಕ ಹಂತದಲ್ಲಿ ಕನ್ನಡ ಸಾಹಿತ್ಯ ವಿಮರ್ಶಕರು ಕುವೆಂಪು ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು. ಹೀಗಾಗಿ ಎಪ್ಪತ್ತರ ದಶಕದ ನಂತರ ಕುವೆಂಪು ಸಾಹಿತ್ಯದಲ್ಲಿದ್ದ ವೌಲ್ಯಗಳು ಬೆಳಕಿಗೆ ಬಂದವು. ಅದೇ ರೀತಿಯಲ್ಲಿ ಹಿರಿಯ ಸಾಹಿತಿ ನಿರಂಜನರ ‘ಚಿರಸ್ಮರಣೆ’ ಕೃತಿ ಬಿಡುಗಡೆಯಾಗಿ ಒಂದು ದಶಕದ ನಂತರ ಆ ಕೃತಿಯ ವೌಲ್ಯವನ್ನು ಗುರುತಿಸಲಾಯಿತು. ಹೀಗೆ ಕನ್ನಡ ವಿಮರ್ಶಕ ಲೋಕ ಹಲವು ಉತ್ಕೃಷ್ಟ ಕೃತಿಗಳನ್ನು ಗುರುತಿಸುವಲ್ಲ್ಲಿ ವಿಫಲರಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೈಸೂರು ಅರಸರ ಮಕ್ಕಳಿಗೆ ಮನೆಪಾಠ ಹೇಳಿಕೊಡಲು ಕುವೆಂಪು ರನ್ನು ಆಹ್ವಾನಿಸಲಾಗಿತ್ತು. ಇದನ್ನು ಕುವೆಂಪು ತಿರಸ್ಕರಿಸಿ, ಅಗತ್ಯವಿದ್ದರೆ ಅರಸರ ಮಕ್ಕಳೆ ನನ್ನ ಬಳಿ ಬರಲಿ ಎಂದು ಸವಾಲು ಹಾಕಿದ್ದರು. ಆ ದಿನಗಳಲ್ಲಿ ಮೈಸೂರು ಅರಸರ ವಿರುದ್ಧ ದಿಟ್ಟವಾಗಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೆ ಬದ್ಧರಾಗಿದ್ದರು ಎಂದು ಅವರು ಸ್ಮರಿಸಿದರು.
ಕುವೆಂಪು ತನ್ನ ಬರಹದ ಮೂಲಕ ಆಧ್ಯಾತ್ಮಕ್ಕೆ ಹೊಸ ಭಾಷ್ಯ ಬರೆದರು. ಅಲ್ಲಿಯವರೆಗೂ ದೇವರು ಹಾಗೂ ಧರ್ಮದ ಚೌಕಟ್ಟಿ ನಲ್ಲಿದ್ದ ಆಧ್ಯಾತ್ಮವನ್ನು ಸಾಮಾಜೀಕರಣಗೊಳಿಸಿದರು. ಆ ಮೂಲಕ ವಿವೇಕಾನಂದರ ಆಧ್ಯಾತ್ಮದ ಆಶಯವನ್ನು ಜನತೆಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೆ, ವಿವೇಕಾನಂದರನ್ನು ಗುತ್ತಿಗೆ ಪಡೆದವರು ಮಾತ್ರ ವಿವೇಕಾನಂದರನ್ನು ಅರ್ಥ ಮಾಡಿಕೊಂಡಿಲ್ಲ. ಎಂದು ಅವರು ಬೇಸರ ವ್ಯಕ್ತಪಡಿಸಿದರು.
    

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಕುವೆಂಪುರ ಪ್ರಮುಖ ಕಾದಂಬರಿಗಳಲ್ಲಿ ಹೆಣ್ಣನ್ನು ಪ್ರಧಾನ ನಾಯಕಿಯನ್ನಾಗಿ ಮಾಡಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಿಂಬಿಸಿದ್ದಾರೆ. ಅವರ ಬಹುಮುಖ್ಯ ಕಾದಂಬರಿಗಳಿಗೆ ‘ಮಲೆಗಳಲ್ಲಿ ಮದುಮಗಳು’ ಹಾಗೂ ‘ಕಾನೂನು ಹೆಗ್ಗಡತಿ’ ಹೆಣ್ಣಿನ ಹೆಸರನನೇ ಇಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ, ಹಿರಿಯ ಪತ್ರಕರ್ತ ಆರ್.ಜೆ.ಹಳ್ಳಿ ನಾಗರಾಜ್ ಮತ್ತಿತರರಿದ್ದರು.

ಕುವೆಂಪು ತನ್ನ ಬರಹದ ಮೂಲಕ ಆಧ್ಯಾತ್ಮಕ್ಕೆ ಹೊಸ ಭಾಷ್ಯ ಬರೆದರು. ಅಲ್ಲಿಯವರೆಗೂ ದೇವರು ಹಾಗೂ ಧರ್ಮದ ಚೌಕಟ್ಟಿನಲ್ಲಿದ್ದ ಆಧ್ಯಾತ್ಮವನ್ನು ಸಾಮಾಜೀಕರಣಗೊಳಿಸಿದರು. ಆ ಮೂಲಕ ವಿವೇಕಾನಂದರ ಆಧ್ಯಾತ್ಮದ ಆಶಯವನ್ನು ಜನತೆಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೆ, ವಿವೇಕಾನಂದರನ್ನು ಗುತ್ತಿಗೆ ಪಡೆದವರು ಮಾತ್ರ ವಿವೇಕಾನಂದರನ್ನು ಅರ್ಥ ಮಾಡಿಕೊಂಡಿಲ್ಲ.
- ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News