ಸಮಾನ ಶಿಕ್ಷಣ ನೀತಿ ಜಾರಿಗೆ ಚಿಂತನೆ: ಸಚಿವ ತನ್ವೀರ್ ಸೇಠ್

Update: 2016-09-15 16:48 GMT

ತರೀಕೆರೆ, ಸೆ.15: ಶಿಕ್ಷಣದಲ್ಲಿ ತಾರತಮ್ಯ ಹೋಗಲಾ ಡಿಸುವ ದೃಷ್ಟಿಯಿಂದ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

 ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಗುಂಪು ಆಟಗಳ ಕ್ರೀಡಾಕೂಟ 2016, ಸರಕಾರಿ ಪ್ರೌಢಶಾಲಾ ನೂತನ ಕಟ್ಟಡ ಉದ್ಘಾಟನೆ, ಬಾಗಲಕೋಟೆ ಬಿಳಿಗಿರಿ ರಂಗನಬೆಟ್ಟ ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ಧಿಯ ಬಿಆರ್‌ಪಿ ತರೀಕೆರೆ ಸಂತವೇರಿ ಮಾರ್ಗ ರಸ್ತೆ ಅಭಿವೃದ್ಧಿ ಕೆಲಸಗಳ ಭೂಮಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳ ಉಳಿವಿಗೆ ಸರಕಾರ ಮುಂದಾಗಿದ್ದು, ರಾಜ್ಯದಲ್ಲಿ 4,164 ಶಾಲೆಗಳಲ್ಲಿ 1ರಿಂದ 7ನೆ ತರಗತಿವರೆಗೆ 10 ಮಕ್ಕಳಿಗಿಂತ ಕಡಿಮೆ, 362 ಶಾಲೆಗಳಲ್ಲಿ ಕೇವಲ ಒಂದು ಮಗುವಿದ್ದರೂ ಶಾಲೆಗಳನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಈಗಾಗಲೇ ಮಕ್ಕಳ ಕೊರತೆಯಿಂದ ಬೀಗ ಹಾಕಿದ್ದ 728 ಶಾಲೆಗಳನ್ನು ಪುನರಾರಂಭಗೊಳಿಸಲಾಗಿದೆ. ಶಿಕ್ಷಣ, ಆರೋಗ್ಯ, ಆಹಾರ ಪ್ರತಿಯೊಬ್ಬರಿಗೂ ಸಿಗಬೇಕು ಎನ್ನುವುದು ಸರಕಾರದ ಮಹತ್ವಾಕಾಂಕ್ಷೆಯಾಗಿದೆ. ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುವ ಯಾವುದೇ ಪ್ರಸಂಗವನ್ನು ಸಹಿಸುವುದಿಲ್ಲ. ಅತ್ಯಂತ ಕಡು ಬಡವರಿಗೂ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣ ದೊರಕಬೇಕು ಎಂದರು.

ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ವಿಷ ಾಧಾರಿತ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಪಿಯುಸಿ ವರೆಗೆ ನಾಲ್ಕು ಹಂತದ ಪರೀಕ್ಷೆಗಳನ್ನು ನಡೆಸಲು ಚಿಂತಿಸಲಾಗಿದೆ. ಮುಂದಿನ 5 ವರ್ಷ ಹೊಸದಾಗಿ ಖಾಸಗಿ ಶಾಲೆಗಳನ್ನು ತೆರೆಯಲು ಪರವಾನಿಗೆ ನೀಡುವುದಿಲ್ಲ. ಈಗಿರುವ ಶಾಲೆಗಳನ್ನು ಉನ್ನತೀಕರಿಸಿಕೊಳ್ಳಲು ಮಾತ್ರ ಅವ ಕಾಶ ನೀಡ ಲಾಗುವುದು ಎಂದರು.

ತಾಲೂಕಿನ ರಂಗೇನಹಳ್ಳಿ ಮತ್ತು ಕುಂಟಿನಮಡು ಗ್ರಾಮ ಗಳಿಗೆ ನೂತನ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.

ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದರು. ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಪ್ರಚಾರದ ಕೊರತೆಯಿಂದಾಗಿ ಅಪಪ್ರಚಾರ ಹೆಚ್ಚಾಗುತ್ತಿದೆ ಎಂದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಠ್ಯೇತರ ಚಟುವಟಿಕೆಗಳಿಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಪೋಷಕರು ಕೇವಲ ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮಕ್ಕಳ ಓದಿನ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ತಾಲೂಕಿನಲ್ಲಿ ಆಟದ ಮೈದಾನ ನಿರ್ಮಿಸಲು 11 ಎಕರೆ ಸ್ಥಳ ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನದ ಒದಗಿದ್ದು, ಶೀಘ್ರ ಕಾಮಾರಿ ಪ್ರಾರಂಭವಾಗಲಿದೆ ಎಂದರು.

 ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಚೈತ್ರಾ ಶ್ರೀ, ಮಾಲತೇಶ್, ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್, ತಾಪಂ ಸದಸ್ಯ ರಾಮಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾ, ಉಪ ನಿರ್ದೇಶಕರಾದ ಜಿ.ಬಿ.ರಾಜಪ್ಪ, ನಾಗೇಶ್, ತಹಶೀಲ್ದಾರ್ ತನುಜಾ, ಸಿ.ಆರ್.ಪರಮೇಶ್ವರಪ್ಪ, ಬಿಇಒ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News