ಜಾತಿ ರಾಜಕಾರಣದ ಸಂಚು-ಒಳಸಂಚು

Update: 2016-09-18 18:37 GMT

ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು ಹೀಗೆ ದಿಢೀರನೇ ಉಲ್ಬಣಿಸಿದ್ದು ಅನೇಕ ಸಂದೇಹಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದು ಸಹಜವಾಗಿ ವರ್ಷಕ್ಕೊಮ್ಮೆ ಉಂಟಾಗುವ ಬಿಕ್ಕಟ್ಟು ಎಂಬುದೇನೋ ನಿಜ. ಆದರೆ ಹಲವು ಬಾರಿ ಕೇಂದ್ರ ಸರಕಾರ ಮಧ್ಯೆಪ್ರವೇಶಿಸಿ, ಬಿಕ್ಕಟ್ಟು ಉಲ್ಬಣಿಸದಂತೆ ನೋಡಿಕೊಂಡ ಉದಾಹರಣೆಗಳೂ ಇವೆ. ಆದರೆ ಈ ಬಾರಿ ಕೇಂದ್ರದ ನಿರಾಸಕ್ತಿಗೆ ಕಾರಣವೇನು? ಮುಖ್ಯಮಂತ್ರಿಗಳು ಎಂಟು ಪತ್ರಗಳನ್ನು ಬರೆದರೂ ಪ್ರಧಾನಿ ಮೋದಿ ಏಕೆ ಉತ್ತರಿಸಲಿಲ್ಲ? ಈ ಸಮಸ್ಯೆ ಪರಿಹರಿಸಲು ಮಧ್ಯೆಪ್ರವೇಶ ಮಾಡುವಂತೆ ರಾಜ್ಯದ 17 ಮಂದಿ ಬಿಜೆಪಿ ಸಂಸದರು ಕೇಂದ್ರದ ಮೇಲೆ ಯಾಕೆ ಒತ್ತಡ ತರಲಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟರೆ, ಕೇಂದ್ರದ ನಿರಾಸಕ್ತಿಯ ಮೂಲ ಪತ್ತೆಯಾಗುತ್ತದೆ. ಕಾಂಗ್ರೆಸ್ ಮುಕ್ತ ಭಾರತದ ಅಮಿತ್ ಶಾ ಕಾರ್ಯಸೂಚಿ ಭಾಗವಾಗಿ, ಕಾವೇರಿ ಬಿಕ್ಕಟ್ಟನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಹುನ್ನಾರ ನಡೆದಿದೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಸುಪ್ರೀಂ ಕೋರ್ಟ್ ಆದೇಶ ನೀಡಿದ ಮಾರನೆ ದಿನವೇ ಬೆಂಗಳೂರು ಮುಂತಾದ ಕಡೆ ಭುಗಿಲೆದ್ದ ಹಿಂಸಾಚಾರ ನೋಡಿದರೆ, ಅದು ಆಕಸ್ಮಿಕವಲ್ಲ. ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಸಂಚು ಎಂಬುದು ಸ್ಪಷ್ಟವಾಗುತ್ತದೆ.
ಈ ವಿವಾದ ಆರಂಭವಾದಾಗಿನಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಬಲಪಂಥೀಯ ಪ್ರತಿಪಕ್ಷಗಳು ಮಾತ್ರವಲ್ಲ, ಅವರದ್ದೇ ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳು ಮಸಲತ್ತು ನಡೆಸಿವೆ ಎಂಬ ಭಾವನೆ ಉಂಟಾಗುತ್ತದೆ. ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮ ಸರಕಾರದ ವಿರುದ್ಧ ಸಂಚಿನಲ್ಲಿ ಶಾಮೀಲಾಗಿದೆಯೇನೋ ಎಂಬ ಸಂದೇಹ ಬರುತ್ತದೆ. ತಮಿಳುನಾಡಿಗೆ ನೀರು ಬಿಡುವುದನ್ನು ತಡೆಯುವುದಕ್ಕಿಂತ, ಅದನ್ನೇ ನೆಪ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವ ಸಂಚು ನಡೆದಿದೆ ಎಂಬ ಭಾವನೆ ಉಂಟಾಗುತ್ತದೆ. ಟಿವಿ ಚಾನೆಲ್‌ವೊಂದು ಸಿದ್ದರಾಮಯ್ಯ ಪದತ್ಯಾಗ ಮಾಡಬೇಕೆ ಅಥವಾ ಬೇಡವೇ ಎಂಬ ಅಭಿಪ್ರಾಯ ಸಂಗ್ರಹಿಸಲು ಹೊರಟಿದ್ದು ನೋಡಿದರೆ, ಇಂತಹ ಸಂದೇಹಗಳು ಸಹಜವಾಗಿ ಬರುತ್ತವೆ.
ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನದಿಂದ, ಪಕ್ಷದ ಒಳಗೆ ಮತ್ತು ಹೊರಗೆ ಇಂತಹ ಸಂಚು ನಡೆಯುತ್ತಲೇ ಬಂದಿವೆ. ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಗುರುತರ ಆರೋಪವೂ ಈ ಸರಕಾರದ ಮೇಲೆ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಗಳ ಮೇಲೆ ಬಂದಿಲ್ಲ ಎಂಬುದು ಅವರ ವಿರೋಧಿಗಳನ್ನು ಇನ್ನಷ್ಟು ಹತಾಶೆಗೊಳಿಸಿದೆ. ಈ ಹಿಂದಿನಂತೆ ಗಣಿ ಹಗರಣ, ಸದನದಲ್ಲಿ ಬ್ಲ್ಯೂಫಿಲಂ ವೀಕ್ಷಣೆ, ಅತ್ಯಾಚಾರ ಆರೋಪ ಈ ರೀತಿ ಯಾವುದೇ ಕಳಂಕವನ್ನು ಸರಕಾರ ಅಂಟಿಸಿಕೊಂಡಿಲ್ಲ. ಹಿಂದಿನ ಮುಖ್ಯಮಂತ್ರಿಗಳು ಹಲವಾರು ಹಗರಣಗಳಲ್ಲಿ ಸಿಲುಕಿ ಸ್ವತಃ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದರು. ಆದರೆ ಈಗ ಅಂತಹ ಯಾವ ಆರೋಪಗಳೂ ಇಲ್ಲ. ಆದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಗಮನಿಸಿದರೆ, ಹಿಂದುಳಿದ ಸಮುದಾಯದ ರಾಜಕಾರಣಿಯೊಬ್ಬ ಅಧಿಕಾರದ ಉನ್ನತ ಸ್ಥಾನಕ್ಕೇರುವುದನ್ನು ಸಹಿಸುವುದಿಲ್ಲ. ನಮ್ಮ ಸಮಾಜ ಇನ್ನೂ ವಿಶಾಲವಾಗಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬರೀ ಸಿದ್ದರಾಮಯ್ಯ ಮಾತ್ರವಲ್ಲ, ಈ ಹಿಂದೆ ಅಧಿಕಾರದಲ್ಲಿದ್ದ ಹಿಂದುಳಿದ ಸಮುದಾಯದ ರಾಜಕಾರಣಿಗಳೂ ಇದೇ ರೀತಿ ತಾರತಮ್ಯಕ್ಕೆ ಒಳಗಾಗಿದ್ದರು.
ಕಳೆದ ನಾಲ್ಕು ದಶಕಗಳ ಕರ್ನಾಟಕದ ರಾಜಕಾರಣವನ್ನು ಅವಲೋಕಿಸಿದರೆ, ಹಿಂದುಳಿದ ಸಮುದಾಯದಿಂದ ಬಂದು ಮುಖ್ಯಮಂತ್ರಿಯಾದವರನ್ನು ನಮ್ಮ ವ್ಯವಸ್ಥೆ ಸಹಿಸಿಲ್ಲ. ಇನ್ನು ದಲಿತರು ಮತ್ತು ಅಲ್ಪಸಂಖ್ಯಾತರು ಅಧಿಕಾರದ ಉನ್ನತ ಸ್ಥಾನಕ್ಕೆ ಬರುವುದು ಕನಸಿನ ಮಾತು. ಶೇ.30ರಷ್ಟು ಇರುವ ರಾಜ್ಯದ ಎರಡು ಬಲಿಷ್ಠ ಜಾತಿಗಳು ಕರ್ನಾಟಕ ರಾಜ್ಯ ನಿರ್ಮಾಣವಾದಾಗಿನಿಂದ ಮುಖ್ಯಮಂತ್ರಿ ಹುದ್ದೆಯನ್ನು ಸರದಿಯಂತೆ ಹಂಚಿಕೊಳ್ಳುತ್ತಾ ಬಂದಿವೆ. ಆಸ್ತಿ, ಅಂತಸ್ತುಗಳಲ್ಲಿ ಪ್ರಬಲವಾಗಿರುವ ಈ ಜಾತಿಗಳ ಕೋಟೆಯನ್ನು ಭೇದಿಸಿ, 70ರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದರು. ಜಾತಿ, ಮತವನ್ನು ಮೀರಿದ ಅಂದಿನ ಇಂದಿರಾ ಗಾಂಧಿ ಗಾಳಿಯಲ್ಲಿ ಅಧಿಕಾರಕ್ಕೆ ಬಂದ ದೇವರಾಜ ಅರಸು ಅಂದಿನ ದಮನಿತ ಸಮುದಾಯಗಳನ್ನು ಸಂಘಟಿಸಿ, ಪ್ರಬಲ ಜಾತಿಗಳ ಸವಾಲಿಗೆ ಜವಾಬು ನೀಡಿದರು. ಕೆ.ಎಚ್.ರಂಗನಾಥ, ಮಲ್ಲಿಕಾರ್ಜುನ ಖರ್ಗೆ, ಸುಬ್ಬಯ್ಯಶೆಟ್ಟಿ, ಎಲ್.ಜಿ.ಹಾವನೂರುರಂತಹ ಹೊಸ ನಾಯಕರನ್ನು ರಾಜಕಾರಣಕ್ಕೆ ಕರೆ ತಂದರು. ಅನೇಕ ಅಡ್ಡಿ ಆತಂಕಗಳ ನಡುವೆ ದೇವರಾಜ ಅರಸು 7 ವರ್ಷಗಳ ಕಾಲ ಅಧಿಕಾರ ನಡೆಸಿದ ನಂತರ, ಹಿಂದುಳಿದ ಸಮುದಾಯದ ಬಂಗಾರಪ್ಪ ಅಧಿಕಾರಕ್ಕೆ ಬರಲು ಮತ್ತೆ ಒಂದೂವರೆ ವರ್ಷ ಕಾಯಬೇಕಾಯಿತು. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರರ್ಂಸಿಂಗ್ ಮುಖ್ಯಮಂತ್ರಿಗಳಾಗಿ ದಕ್ಷ ಆಡಳಿತ ನೀಡಿದರೂ ಈ ವ್ಯವಸ್ಥೆ ಅವರನ್ನು ಪೂರ್ಣಾವಧಿ ಅಧಿಕಾರದಲ್ಲಿ ಇರಲು ಬಿಡಲಿಲ್ಲ. ಪಕ್ಷದ ಒಳಗೆ ಮತ್ತು ಹೊರಗೆ ನಾನಾ ಕಿರಿಕಿರಿ ಅನುಭವಿಸಿ, ಒಂದೆರಡು ವರ್ಷಗಳಲ್ಲೇ ಅವರು ರಾಜೀನಾಮೆ ನೀಡಬೇಕಾಗಿ ಬಂತು.
 
ಬಂಗಾರಪ್ಪ ಅಧಿಕಾರದಲ್ಲಿದ್ದಾಗ, ಗ್ರಾಮೀಣ ಕೃಪಾಂಕ ಮುಂತಾದ ಜನಪರ ಯೋಜನೆಗಳನ್ನು ರೂಪಿಸಿದರು. ದಕ್ಷಿಣ ಕನ್ನಡದ ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ, ಡೊನೇಷನ್ ಮತ್ತು ಕ್ಯಾಪಿಟೇಷನ್ ಲೂಟಿ ಮಾಡುತ್ತಿದ್ದ ಖಾಸಗಿ ಸಂಸ್ಥೆಗಳನ್ನು ನಿಯಂತ್ರಿಸಲು ಯತ್ನಿಸಿ ತೊಂದರೆಗೊಳಗಾದರು. ಮೊಯ್ಲಿ ಕಾಲದಲ್ಲೇ ದೇಶದಲ್ಲಿ ಅಪರೂಪವಾದ ಸಿಇಟಿ ವ್ಯವಸ್ಥೆ ಜಾರಿಗೆ ಬಂತು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅತ್ಯಂತ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಧರಂಸಿಂಗ್ ಮೊದಲಿಗೆ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ ಜೊತೆ ಗುರುತಿಸಿಕೊಂಡವರು. ನಂತರ ಇಂದಿರಾಗಾಂಧಿಯವರ ‘ಗರೀಬಿ ಹಠಾವೋ’ ವೇಳೆ ಕಾಂಗ್ರೆಸ್ ಸೇರಿದ ಅವರು ಎಲ್ಲಾ ಜಾತಿ, ಧರ್ಮ, ಮತದವರ ಬೆಂಬಲದಿಂದ ವಿಧಾನಸಭೆ ಪ್ರವೇಶಿಸಿ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಾಬಾ ಬುಡನ್‌ಗಿರಿಯಲ್ಲಿ ಕೋಮುವಾದಿಗಳನ್ನು ನಿಯಂತ್ರಿಸಲು ದಿಟ್ಟ ಕ್ರಮ ಕೈಗೊಂಡರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬಜರಂಗದಳ ಹೇಳಿದಂತೆ ಕಾರ್ಯಕ್ರಮ ರೂಪಿಸುತ್ತಿದ್ದರು. ದತ್ತಾತ್ರೇಯನ ಪೂಜೆಯಲ್ಲಿ ಅಂದಿನ ಸಚಿವ ಚಂದ್ರೇಗೌಡರೇ ಸ್ವತಃ ಪುರೋಹಿತರ ಎದುರು ಕೂರುತ್ತಿದ್ದರು. ನಂತರ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕೋಮು ಸೌಹಾರ್ದ ವೇದಿಕೆ ಪರವಾಗಿ ಗೌರಿ ಲಂಕೇಶ್, ಕೆ.ಎಲ್.ಅಶೋಕ್ ಮತ್ತು ನಾನು ಈ ವಿಷಯದ ಬಗ್ಗೆ ಗಮನ ಸೆಳೆದಾಗ, ಈ ಬಾರಿ ಅಂತಹದ್ದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅದರಂತೆ ಗಲಭೆಕೋರರು ಚಿಕ್ಕಮಗಳೂರಿಗೆ ಬರದಂತೆ ದಿಗ್ಬಂಧನ ವಿಧಿಸಿದರು. ಆದರೂ ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಧರಂಸಿಂಗ್ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಹಿಂದುಳಿದ ಸಮುದಾಯದವರು ಮುಖ್ಯಮಂತ್ರಿಯಾದರೂ ಕೂಡ ಅವರು ನಿರಾತಂಕವಾಗಿ ಅಧಿಕಾರ ನಿರ್ವಹಿಸಲು ಈ ವ್ಯವಸ್ಥೆ ಬಿಟ್ಟಿಲ್ಲ. ಅವಧಿ ಮುಗಿಯುವ ಮುನ್ನವೇ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ದೇವರಾಜ ಅರಸರನ್ನು ಎಲ್ಲರೂ ಹೊಗಳುತ್ತಾರೆ. ಆದರೆ 70ರ ದಶಕದ ಆ ದಿನಗಳು ನೆನಪಿವೆ. ಆಗ ಮುದ್ರಣ ಮಾಧ್ಯಮ ಮಾತ್ರ ಇತ್ತು. ಅರಸು ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಸಾಹಿತ್ಯದಲ್ಲಿ ಬಹುತೇಕ ಶೋಷಕ ವರ್ಗಗಳ ಹಿತ ರಕ್ಷಿಸುವ ಸಾಹಿತ್ಯವಿದೆ ಎಂದು ಹೇಳಿದ ಮಾತು ವಿವಾದಕ್ಕೆ ಕಾರಣವಾಯಿತು. ಕೆಲ ಪತ್ರಿಕೆಗಳು ಅದನ್ನು ತಿರುಚಿ ವರದಿ ಮಾಡಿದವು. ಬಸವಲಿಂಗಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಲ್ಲಿ ದೊಡ್ಡ ಚಳವಳಿಯೇ ನಡೆಯಿತು. ದೇವರಾಜ ಅರಸು ಅಂತಹವರಿಗೂ ಅವರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಆಗ ಜನಸಂಘ (ಇಂದಿನ ಬಿಜೆಪಿ) ಇಷ್ಟು ಪ್ರಬಲವಾಗಿರಲಿಲ್ಲ. ಆದರೆ ಕಾಂಗ್ರೆಸ್‌ನ ಎದುರಾಳಿಯಾಗಿದ್ದ ಜನತಾ ದಳದ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ ಮತ್ತು ದೇವೇಗೌಡರು ದೇವರಾಜ ಅರಸು ಅವರನ್ನು ವಿರೋಧಿಸಿ ಕಿರಿಕಿರಿ ನೀಡುತ್ತಲೇ ಬಂದರು.
 ಈ ಹಿನ್ನೆಲೆಯಲ್ಲಿ ಈಗ ಸಿದ್ದರಾಮಯ್ಯ ಅವರು ಎದುರಿಸುತ್ತಿರುವ ವಿರೋಧ ಗಮನಿಸಿದರೆ, ಭಾರತೀಯ ಸಮಾಜ ಇನ್ನೂ ಬದಲಾಗಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಸಂಘ ಪರಿವಾರ ಪ್ರಬಲವಾದ ನಂತರವಂತೂ ಮೇಲ್ಜಾತಿಗಳ ರಾಜಕಾರಣಕ್ಕೆ ಹೊಸ ಬಲ ಬಂದಿದೆ. ಮಾಧ್ಯಮಗಳಲ್ಲಿ ಇರುವ ವಸಿಷ್ಠರು ಷಡ್ಯಂತ್ರದ ಸೂತ್ರರಾಗುತ್ತಿದ್ದಾರೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಮೇಲೆ ಯಾವ ಆರೋಪವಿಲ್ಲ ಎಂದು ಗೊತ್ತಿದ್ದರೂ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ, ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣ, ಗಣಪತಿ ಪ್ರಕರಣ ಹೀಗೆ ಯಾವುದರಲ್ಲಾದರೂ ಸಿಲುಕಿಸಿ, ರಾಜೀನಾಮೆ ಕೊಡಿಸಬೇಕೆಂದು ಹುನ್ನಾರ ನಡೆಸುತ್ತಲೇ ಬಂದವರಿಗೆ ಕಾವೇರಿ ವಿವಾದ ಈಗ ವರವಾಗಿ ಬಂದಿದೆ. ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವ ನರೇಂದ್ರ ಮೋದಿ, ಅಮಿತ್ ಶಾ ಷಡ್ಯಂತ್ರವೂ ಇದರಲ್ಲಿ ಸೇರಿದೆ. ಒಟ್ಟಾರೆ ಇದೆಲ್ಲದರ ಒಟ್ಟು ಪರಿಣಾಮವಾಗಿ ಬೆಂಗಳೂರಿನಲ್ಲಿ ನಡೆಯಬಾರದ ಘಟನೆಗಳು ನಡೆದು ಹೋದವು. ಮಧ್ಯೆ ಪ್ರವೇಶಿಸಬೇಕಿದ್ದ ಪ್ರಧಾನಿ ಬಾಯಿ ಮುಚ್ಚಿಕೊಂಡು ಕೂತರು.
ಇಂದಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡಬೇಕು ಎಂದು ಸಲಹೆ ನೀಡಿದರು. ನಂತರ ಹೊರಗಡೆ ತದ್ವಿರುದ್ಧ ಹೇಳಿಕೆ ನೀಡಿದರು. ಆದರೆ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡರು. ನ್ಯಾಯಾಲಯದ ಆದೇಶ ಉಲ್ಲಂಘಿಸಲು ಆಗುವುದಿಲ್ಲ ಎಂಬ ಸ್ಪಷ್ಟ ನಿಲುವು ತಳೆದರು.
ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಬೀಳಲಿದೆ. ಆ ನಂತರ ತಮಿಳುನಾಡಿಗೆ ನೀರು ಬಿಡುವ ಪ್ರಮೇಯ ಬರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಅದಕ್ಕೆ ಇನ್ನೂ ಕಾದು ನೋಡಬೇಕಿದೆ.
ಅದೇನಿದ್ದರೂ ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಅಡಿಪಾಯದಲ್ಲಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅರಳಿ ನಿಂತಿದ್ದರೂ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತಳ ಸಮುದಾಯದ ದಕ್ಷ, ಪ್ರಾಮಾಣಿಕ ವ್ಯಕ್ತಿಯೊಬ್ಬ ಅಧಿಕಾರಕ್ಕೇರಿದರೆ, ಎಂತಹ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಜನತಂತ್ರ ಮುಕ್ತ ಭಾರತವನ್ನು ನಿರ್ಮಿಸಲು ಹೊರಟ ಮನುವಾದಿ ಪ್ಯಾಶಿಸ್ಟ್ ಹುನ್ನಾರಗಳ ಬಗ್ಗೆ ಅವಕಾಶ ವಂಚಿತ ಸಮುದಾಯಗಳು ಎಚ್ಚರವಹಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News