ಇದು ಪೊಸೊಳಿಗೆಯ ಜುಮಾ ಮಸೀದಿ..!

Update: 2016-09-25 15:50 GMT

ನಾವು ಕಾಣುವ ಮಸೀದಿಗಳು ಸುಂದರ ಭವನವಾಗಿರುತ್ತದೆ. ನೆಲಕ್ಕೆ ಟೈಲ್ಸ್, ಮಾರ್ಬಲ್, ಕಾರ್ಪೆಟ್ ಹಾಸಿರುತ್ತದೆ. ಸಕಲ ಸೌಕರ್ಯವನ್ನೂ ಒಳಗೊಂಡಿರುತ್ತದೆ. ಅಲ್ಲಾಹನ ಭವನದೊಳಗೆ ಹೊಕ್ಕರೆ ಮನಸ್ಸಿನೊಂದಿಗೆ ದೇಹ ಕೂಡಾ ತಂಪಾಗಿರಲೆಂದು ಏಸಿಯನ್ನೂ ಹಾಕುವವರಿದ್ದಾರೆ. ಮಸೀದಿ ಸರ್ವಾಂಗ ಸುಂದರವಾಗಿರಲೆಂದು ಆಶಿಸುವವರೇ ಹೆಚ್ಚು. ಮಸೀದಿ ಸ್ವಲ್ಪ ಹಳತಾದರೆ ಸಾಕು ಅದನ್ನು ಒಡೆದು ಹೊಸತು ಕಟ್ಟಿಸಿ ಕೊಡುವವರೂ ಇದ್ದಾರೆ. 100 ಮಂದಿ ನಿರಂತರ ನಮಾಝ್ ಮಾಡುವಲ್ಲಿ ಸಾವಿರ ಸಾವಿರ ಮಂದಿಗೆ ನಮಾಝ್ ಮಾಡುವ ಬೃಹತ್ ಮಸೀದಿ ಸ್ಥಾಪಿಸುವ ಪ್ರಾಯೋಜಕರೂ ಇದ್ದಾರೆ.

ಆದರೆ ಇಲ್ಲಿ ಫೋಟೋದಲ್ಲಿ ಕಾಣುವ ಜುಮಾ ಮಸೀದಿ ಇವೆಲ್ಲಕ್ಕಿಂತಲೂ ಭಿನ್ನ. ಕಳೆದ ಶುಕ್ರವಾರ ಇದೇ ಮಸೀದಿಯಲ್ಲಿ ನಾವು ಜುಮಾ ನಮಾಝ್ ಮಾಡಿದೆವು. ಸಂಪೂರ್ಣ ಹಸಿರು ಪ್ಲಾಸ್ಟಿಕ್ ಹೊದಿಕೆಯಿಂದ ಹೊದ್ದ ಆವರಣ ಗೋಡೆ. ಮರದ ತುಂಡುಗಳ ಆಧಾರ ಸ್ಥಂಭ. ಆಕಾಶ ಕಾಣದಹಾಗೆ ಹಾಸಿದ ಬಿದಿರಿನ ಸಲಾಕೆಗಳ ಆಧಾರದಲ್ಲಿ ನಿಂತ ಹೆಂಚುಗಳು. ಮಳೆನೀರು ಸೋರದಂತೆ ಹಾಕಿದ ಟರ್ಪಾಲು. ಈ ಮಸೀದಿಯಲ್ಲಿ ನಡೆಯುತ್ತಿದೆ ದಿನನಿತ್ಯದ 5 ಹೊತ್ತಿನ ಹಾಗೂ ಶುಕ್ರವಾರದ ಜುಮಾ ನಮಾಜು. ಊರಿನ 45 ಮನೆಯ ಸುಮಾರು 75 ಮಂದಿ ನಮಾಜಿಗೆ ಇರುತ್ತಾರೆ. ಖುತುಬಾ ಓದಲು ಖತೀಬರಿಗೆ ಕಲ್ಲಮೇಲೆ ನಿಲ್ಲಿಸಿರುವ ಹಳೆಯ ಫೈಬರ್ ಕುರ್ಚಿ. ಇದುವೇ ಮಿಂಬರ್. ಖುತುಬಾಗೆ ಹಾಗೂ ಆಝಾನ್ ಗೆ ಮುಕ್ರಿ ಅಥವಾ ಮುಅಝ್ಝಿನ್ ಇಲ್ಲ. ಊರ ಬಡಕೃಷಿಕನೇ ಈ ಕಾರ್ಯಕ್ಕೆಲ್ಲ. ಇದು ಎಲ್ಲೋ ಹಿಂದುಳಿದ ಉತ್ತರಕರ್ನಾಟಕ ಜಿಲ್ಲೆಯ ಕಥೆಯಲ್ಲ. ನಮ್ಮ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದ ಒಂದು ಮಸೀದಿಯ ವ್ಯಥೆ.

ಪೆರಿಯಶಾಂತಿ ಮಾರ್ಗವಾಗಿ ಸುಬ್ರಹ್ಮಣ್ಯ ಕಡೆ ಹಾದು ಹೋಗುವಾಗ ಪೊಸೊಳಿಗೆ ಎಂಬ ಹಳ್ಳಿ ನಾಡಿನ ದರ್ಶನವಾಗುತ್ತದೆ. ಡಾಮರು ರಸ್ತೆಯಿಂದ ಎರಡು ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ಚಲಿಸಬೇಕು. ಆಗ ಸಿಗುವುದೇ ಈ ಪೊಸೊಳಿಗೆ ಮಸೀದಿ. ಇಲ್ಲೊಂದು ಹಳೆಕಾಲದ ಮಸೀದಿಯಿತ್ತು. ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನೀಗ ಕೆಡವಲಾಗಿದೆ. ಈ ಮಸೀದಿಯ ಅಧೀನದಲ್ಲಿ 45 ಜಮಾಅತ್ ಮನೆಗಳಿವೆ. ಕೆಲ ಬೆರಳೆಣಿಕೆಯ ಮಧ್ಯಮ ವರ್ಗದ ಮನೆ ಬಿಟ್ಟರೆ ಹೆಚ್ಚಿನೆಲ್ಲರೂ ಬಡ/ಅಶಕ್ತರೇ. ತುತ್ತು ಅನ್ನಕ್ಕಾಗಿ ಹಾತೊರೆಯುವ ಕುಟುಂಬವೇ. ತನ್ನ ಹೊಟ್ಟೆಗೇ ಸರಿಯಾಗಿ ಇಲ್ಲದವರು ಮಸೀದಿ ಕಟ್ಟಲಾಗುತ್ತದೆಯೇ. ಸಂಬಳಕ್ಕೆ ಉಸ್ತಾದ್, ಮುಕ್ರಿಯನ್ನು ನೇಮಿಸುತ್ತಾರೆಯೇ. ಇಲ್ಲಿನ ಸುಮಾರು 50-60 ಮಕ್ಕಳ ಅರಬಿಕ್ ವಿಧ್ಯಾಭ್ಯಾಸಕ್ಕೆ ಸರಿಯಾದ ಮದ್ರಸ ಕಟ್ಟಡವೂ ಇಲ್ಲ. ಇಲ್ಲಿರುವ ಏಕೈಕ ಮೌಲವಿಯೇ ಮಸೀದಿಯಲ್ಲಿ ಇಮಾಮ್, ಖತೀಬ್ ಹಾಗೂ ಮದ್ರಸದ ಅಧ್ಯಾಪಕರು. ಇಲ್ಲಿರುವ ಮನೆಯ ಗಂಡಸರು ಹೆಚ್ಚಾಗಿ ಕೂಲಿ ಕೆಲಸಕ್ಕೆ ಹೋಗೋರೇ. ಬಹುತೇಕ ಮನೆಗಳಲ್ಲಿ ಗಂಡಸರೇ ಇಲ್ಲ. ಇಂತಹ ಊರಿನ ಮಸೀದಿಯನ್ನು ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡುವುದು ತಪ್ಪು ಅಲ್ವೇ.

ಪೊಸೊಳಿಗೆ ಜುಮಾ ಮಸೀದಿಯನ್ನು ಕಂಡು ಅಲ್ಲಿನ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡ ವಿದೇಶದ ಸಹೃದಯರೊಬ್ಬರು ಮಸೀದಿ ಕಟ್ಟಿಸಲು ಮುಂದೆ ಬಂದಿರುವುದು ಸಂತಸದ ವಿಚಾರ. ಈ ಮಸೀದಿಗೆ ಸ್ವಂತದ್ದಾದ ನೀರು ಇರಲಿಲ್ಲ. ಮನೆಯೊಂದರಿಂದ ತರಲಾಗುತ್ತಿತ್ತು. ಇದನ್ನರಿತ ಮತ್ತೊಬ್ಬ ಮಂಗಳೂರಿನ ದಾನಿ ತನ್ನ ಮೃತ ಮಗನ ಹೆಸರಿನಲ್ಲಿ ಕೊಳವೆ ಬಾವಿ ತೋಡಿ ಕೊಟ್ಟಿದ್ದು, ನಿರೀಕ್ಷೆಗೂ ಮೀರಿ 5 ಇಂಚು ನೀರು ಸಿಕ್ಕಿದೆ. ಮಸೀದಿ ಮತ್ತು ಕೊಳವೆಬಾವಿಯ ಜೊತೆಗೆ ಅಲ್ಲಿಗೆ ಅತಿ ಅಗತ್ಯವಾಗಿ ಬೇಕಾದ ಮಕ್ಕಳ ವಿದ್ಯಾಭ್ಯಾಸದ ಮದ್ರಸ ಕಟ್ಟಡ, ಮಸೀದಿ-ಮದ್ರಸಕ್ಕೆ ಬರುವವರಿಗೆ ಬೇಕಾದ ಶೌಚಾಲಯದ ವ್ಯವಸ್ಥೆಗೆ ಪ್ರಾಯೋಜಕರಿಲ್ಲ. ದಾನಿಗಳು ಸಿಕ್ಕಿಲ್ಲ. ಅಲ್ಲಿರುವರಲ್ಲಿ ಆರ್ಥಿಕ ವ್ಯವಸ್ಥೆಯಿಲ್ಲ. ಅಲ್ಲಿನವರಿಗೆ ಆ ಊರೇ ಪ್ರಪಂಚ. ಹೊರಗಿನ ಪ್ರಪಂಚದ ಜ್ಞಾನ ಕಡಿಮೆ. ಆದ್ದರಿಂದ ಮದ್ರಸ ಮತ್ತು ಶೌಚಾಲಯ ಕಟ್ಟಿಸುವುದು ಅವರಿಂದ ಆಗದ ಮಾತು.

ನಮ್ಮ ನಾಡಿನಲ್ಲಿ ಎಷ್ಟೋ ದಾನಿಗಳಿದ್ದಾರೆ. ಉಮರಾಗಳಿದ್ದಾರೆ. ಅವರು ಪೊಸೊಳಿಗೆಯ ಮದ್ರಸ ಮತ್ತು ಶೌಚಾಲಯ ನಿರ್ಮಾಣದ ಬಗ್ಗೆ ಸಣ್ಣ ಮನಸ್ಸು ಮಾಡಿದರೆ ಸಾಕು. ಪೊಸೊಳಿಗೆಯ ಜನತೆ/ಮಕ್ಕಳು ಧಾರ್ಮಿಕ ವಿಚಾರದಲ್ಲಿ ನೆಮ್ಮದಿ ಕಂಡಾರು. ಪೊಸೊಳಿಗೆಯ ಈ ಮಸೀದಿಯ ಅಧೀನದ ಮದ್ರಸ ಅಥವಾ ಶೌಚಾಲಯದ ಬಗ್ಗೆ ನಿಮಗೇನಾದರೂ ಮಾಡಲು ಸಾಧ್ಯ ಎಂದಾದರೆ ಅಥವಾ ಹೆಚ್ಚಿನ ಮಾಹಿತಿಗೆ ಎಂ.ಫ್ರೆಂಡ್ಸ್ ಮಂಗಳೂರು ತಂಡದ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಅವರನ್ನು +91 9980880860 ಅಥವಾ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು +91 9741993313 ನಂಬ್ರದಲ್ಲಿ ಸಂಪರ್ಕಿಸಬಹುದು. ಪೊಸೊಳಿಗೆಯ ಜಮಾಅತ್ ನ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡೋಣ.

-ರಶೀದ್ ವಿಟ್ಲ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News